ಬಸ್‌ ದರ ಏರಿಕೆ ಮಾಡೋದಲ್ಲ, ಇರೋ ಬಸ್‌ ಸರಿ ಮಾಡಿ: ಮತ್ತೊಮ್ಮೆ ಟಾರ್ಚ್‌ ಬೆಳಕಲ್ಲಿ ಓಡಿದ ಸರ್ಕಾರಿ ಬಸ್‌

Published : Sep 06, 2026, 08:47 AM IST
ksrtc bus

ಸಾರಾಂಶ

ಹುಬ್ಬಳ್ಳಿಯಿಂದ ಅತ್ತಿಗೇರಿಗೆ ತೆರಳುತ್ತಿದ್ದ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸಿನ ಹೆಡ್‌ಲೈಟ್‌ ಕೈಕೊಟ್ಟ ಪರಿಣಾಮ, ಚಾಲಕನು ಪ್ರಯಾಣಿಕರ ಮೊಬೈಲ್‌ ಟಾರ್ಚ್‌ ಬೆಳಕಿನಲ್ಲೇ ಬಸ್ಸನ್ನು ಗುಡಗೇರಿ ಮತ್ತು ಅತ್ತಿಗೇರಿಗೆ ಸುರಕ್ಷಿತವಾಗಿ ತಲುಪಿಸಿದ್ದಾನೆ.

ಕನ್ನಡಪ್ರಭ ವಾರ್ತೆ ಕುಂದಗೋಳ (ಧಾರವಾಡ)

ಜುಲೈನಲ್ಲಿ ಕಲಬುರಗಿಯಿಂದ ಚಿಂಚೋಳಿವರೆಗೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸು ಹೆಡ್‌ಲೈಟ್‌ ಕೆಟ್ಟು ಮೊಬೈಲ್‌ ಟಾರ್ಚ್‌ನಲ್ಲಿ ಚಲಿಸಿದ ಘಟನೆ ಮಾಸುವ ಮುನ್ನವೇ ಧಾರವಾಡ ಜಿಲ್ಲೆಯಲ್ಲಿಯೂ ಅಂಥದ್ದೇ ಘಟನೆ ಮರುಕಳಿಸಿದೆ. ಈ ಬಾರಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸಿನ ಹೆಡ್‌ಲೈಟ್‌ ಕೆಟ್ಟುನಿಂತ ಪರಿಣಾಮ ಮೊಬೈಲ್‌ ಟಾರ್ಚ್‌ನಲ್ಲಿ ಬಸ್ಸು ಸಂಚರಿಸಿದೆ. ಇದು ಸಾರ್ವಜನಿಕ ಸಾರಿಗೆಯ ಸುರಕ್ಷತೆ ವಿಚಾರವಾಗಿ ಸಾಕಷ್ಟು ಪ್ರಶ್ನೆಗಳಿಗೆ ಕಾರಣವಾಗಿದೆ.

ಶುಕ್ರವಾರ ಸಂಜೆ ಹುಬ್ಬಳ್ಳಿಯಿಂದ ಅತ್ತಿಗೇರಿಗೆ ತೆರಳುತ್ತಿದ್ದ ಬಸ್‌ ರಾತ್ರಿ 8.05ಕ್ಕೆ ಹೊರಟಿತ್ತು. ರಾತ್ರಿ 9.20ಕ್ಕೆ ಗುಡಗೇರಿ ತಲುಪಬೇಕಿದ್ದ ಬಸ್‌ ಸಂಶಿ ನಿಲ್ದಾಣ ಸಮೀಪ ಬರುತ್ತಿದ್ದಂತೆ ಹೆಡ್‌ಲೈಟ್‌ ಕೈಕೊಟ್ಟಿದೆ. ಇದರಿಂದಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಆತಂಕಕ್ಕೆ ಒಳಗಾದರು. ಚಾಲಕ ಅದನ್ನು ಸರಿಪಡಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಪರ್ಯಾಯವಾಗಿ ಏನು ಮಾಡಬೇಕೆಂಬ ಗೊಂದಲ ಉಂಟಾಯಿತು. ಬಸ್ಸಿನಲ್ಲಿದ್ದ ಜನರು ಇದು ಕೊನೆಯ ಬಸ್‌ ಆಗಿದ್ದರಿಂದ ಹೇಗಾದರೂ ತಮ್ಮ ಗ್ರಾಮ ತಲುಪಿಸಬೇಕೆಂದು ಕೋರಿದರು.

ಸಂಶಿಯಿಂದ ಗುಡಗೇರಿಗೆ ಸಾಮಾನ್ಯವಾಗಿ 20 ನಿಮಿಷಗಳ ಪ್ರಯಾಣವಿದೆ. ಆದರೆ, ಹೆಡ್‌ಲೈಟ್‌ ಇಲ್ಲದೆ ಕತ್ತಲಲ್ಲಿ ಸಂಚರಿಸುವುದು ಅಪಾಯಕಾರಿ ಆಗಿದ್ದರಿಂದ ಪ್ರಯಾಣಿಕರು ತಮ್ಮ ಮೊಬೈಲ್‌ ಫೋನ್‌ ಟಾರ್ಚ್‌ ಬೆಳಕು ಆನ್‌ ಮಾಡಿ ಚಾಲಕನಿಗೆ ನೆರವಾದರು. ಮೊಬೈಲ್‌ ಬೆಳಕಿನ ಆಸರೆಯಲ್ಲೇ ಚಾಲಕ ನಿಧಾನವಾಗಿ ಹಾಗೂ ಎಚ್ಚರಿಕೆಯಿಂದ ಬಸ್‌ ಚಲಾಯಿಸಿ, ಸುಮಾರು ಒಂದು ಗಂಟೆ ಪ್ರಯಾಸಪಟ್ಟು ಪ್ರಯಾಣಿಕರನ್ನು ಸುರಕ್ಷಿತವಾಗಿ ಗುಡಗೇರಿ ತಲುಪಿಸಿದರು.

ಬಳಿಕ ಗುಡಗೇರಿಯಿಂದ ಅತ್ತಿಗೇರಿಗೂ ಇದೇ ರೀತಿಯಲ್ಲಿ ಮೊಬೈಲ್‌ ಬೆಳಕಿನ ನೆರವಿನಿಂದ ಸಂಚರಿಸಬೇಕಾದ ಅನಿವಾರ್ಯತೆ ಎದುರಾಯಿತು ಎಂದು ಚಾಲಕ ತಿಳಿಸಿದ್ದಾರೆ.

ರಾತ್ರಿ ವೇಳೆ ಗ್ರಾಮೀಣ ಮಾರ್ಗಗಳಿಗೆ ಬಸ್‌ಗಳನ್ನು ನಿಯೋಜಿಸುವ ಮುನ್ನ ಡಿಪೋದಲ್ಲಿ ಸಮರ್ಪಕ ತಾಂತ್ರಿಕ ತಪಾಸಣೆ ನಡೆಸಬೇಕು. ಸುಸ್ಥಿತಿಯಲ್ಲಿರುವ ಬಸ್‌ಗಳನ್ನು ಮಾತ್ರ ಸಂಚಾರಕ್ಕೆ ಬಿಡಬೇಕು ಎಂದು ಸ್ಥಳೀಯ ನಿವಾಸಿ ಮೋಹನ್‌ ಬೂದಿಹಾಳ ಒತ್ತಾಯಿಸಿದ್ದಾರೆ.

ಇಕ್ಕಟ್ಟಿನ ಪರಿಸ್ಥಿತಿಯಲ್ಲೂ ಸಂಯಮದಿಂದ ಬಸ್‌ ಚಲಾಯಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸಿದ ಚಾಲಕನ ಕಾರ್ಯಕ್ಕೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

PREV
Read more Articles on
click me!

Recommended Stories

ಕಲ್ಯಾಣನಗರದಲ್ಲಿ ರಸ್ತೆ ಬದಿಯ ದೊಡ್ಡ ಆಲದ ಮರಕ್ಕೆ ರಾತ್ರೋರಾತ್ರಿ ಕೊಡಲಿ
ಹುಬ್ಬಳ್ಳಿ ಗಣೇಶೋತ್ಸವ: ಫ್ಲೈಓವರ್ ದಾಟಲಿವೆಯೇ ಬೃಹತ್ ಗಣಪತಿಗಳು? ಪರ‍್ಯಾಯ ಮಾರ್ಗ