ದಕ್ಷಿಣ ಕನ್ನಡದಲ್ಲಿ ಕೊರೋನಾ ಅಟ್ಟಹಾಸ : ಹೆಚ್ಚು ಸಂಖ್ಯೆಯಲ್ಲಿ ಪಾಸಿಟಿವ್

By Kannadaprabha News  |  First Published Sep 13, 2020, 4:04 PM IST

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿನಕ್ಕೂ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ನಿತ್ಯವೂ ಪಾಸಿಟಿವ್ ಪ್ರಕರಣಗಳು ಅಧಿಕವಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. 


 ಮಂಗಳೂರು/ಉಡುಪಿ (ಸೆ.13):  ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಏರಿಕೆ ಹಾದಿಯಲ್ಲಿದ್ದು, ಶನಿವಾರ 401 ಮಂದಿಗೆ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 17 ಸಾವಿರದ ಗಡಿಗೆ ಬಂದು ತಲುಪಿದೆ. ಕೋವಿಡ್‌ಗೆ ಶನಿವಾರ ಮತ್ತೆ ಐವರು ಮೃತಪಟ್ಟಿದ್ದಾರೆ. 204 ಮಂದಿ ಗುಣಮುಖರಾಗಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಶನಿವಾರ 169 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.

Latest Videos

undefined

ದ.ಕ. ಜಿಲ್ಲೆಯಲ್ಲಿ ಮೃತರಲ್ಲಿ ಮಂಗಳೂರು ತಾಲೂಕಿನ ಮೂವರು, ಸುಳ್ಯ ತಾಲೂಕು ಹಾಗೂ ಹೊರಜಿಲ್ಲೆಯ ತಲಾ ಒಬ್ಬರು ಇದ್ದಾರೆ. ಮೃತರೆಲ್ಲ ಕೋವಿಡ್‌ ಸೋಂಕಿತರಾಗಿದ್ದು, ಒಂದಲ್ಲ ಒಂದು ರೋಗದಿಂದ ಬಳಲುತ್ತಿದ್ದರು. ಇದರೊಂದಿಗೆ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 439ಕ್ಕೆ ಏರಿಕೆಯಾಗಿದೆ.

401 ಮಂದಿಗೆ ಸೋಂಕು: ಹೊಸದಾಗಿ ಸೋಂಕಿತರಾದ 401 ಮಂದಿಯಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಸಾಮಾನ್ಯ ಶೀತ ಲಕ್ಷಣ (210) ಹೊಂದಿದವರಿದ್ದಾರೆ. ಐಎಲ್‌ಐ ಪ್ರಕರಣದಲ್ಲಿ ಇದು ಒಂದು ದಿನದಲ್ಲಿ ದಾಖಲಾದ ಅತಿಹೆಚ್ಚು ಸಂಖ್ಯೆಯಾಗಿದೆ. ಇನ್ನು ಸೋಂಕಿತರ ಸಂಪರ್ಕದಲ್ಲಿದ್ದ 97, ತೀವ್ರ ಉಸಿರಾಟ ತೊಂದರೆಯ 18 ಮಂದಿ ಇದ್ದರೆ, 76 ಮಂದಿಗೆ ಸೋಂಕು ಎಲ್ಲಿಂದ ಹರಡಿದೆ ಎನ್ನುವುದನ್ನು ಪತ್ತೆಹಚ್ಚಲಾಗುತ್ತಿದೆ. ಮಂಗಳೂರು ತಾಲೂಕಿನಲ್ಲಿ 227 ಮಂದಿ ಪಾಸಿಟಿವ್‌ ಆಗಿದ್ದರೆ, ಬಂಟ್ವಾಳ-47, ಪುತ್ತೂರು-52, ಸುಳ್ಯ-30, ಬೆಳ್ತಂಗಡಿ-24, ಹೊರಜಿಲ್ಲೆಯ 21 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 16,959ಕ್ಕೆ ಏರಿಕೆಯಾಗಿದೆ.

ಚೆಕಪ್‌ಗೆ ಬಂದವನು ಕೊರೋನಾಗೆ ಬಲಿ ...

204 ಗುಣಮುಖ: ಶನಿವಾರವೂ 204 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಿಂದ 157, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 47 ಮಂದಿ ಗುಣಮುಖರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ 12,813 ಮಂದಿ ಕೊರೋನಮುಕ್ತರಾಗಿ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ 3,707 ಸಕ್ರಿಯ ಪ್ರಕರಣಗಳಿವೆ ಎಂದು ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 13,905 ಮಂದಿಗೆ ಸೋಂಕು ತಗಲಿದ್ದು, ಅವರಲ್ಲಿ 12,022 (ಶೇ 86.45) ಮಂದಿಗೆ ಸೋಂಕು ಗುಣವಾಗಿದೆ. ಶುಕ್ರವಾರವೂ 238 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 1760 (ಶೇ. 12.65) ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಳಿ ಬಗ್ಗೆ ಸ್ವಲ್ಪ ಎಚ್ಚರ ತಪ್ಪಿದ್ರೂ ಕೊರೋನಾ ತೆಕ್ಕೆಗೆ ಫಿಕ್ಸ್‌! .

ಶುಕ್ರವಾರ ಲಭಿಸಿದ 1,084 ವರದಿಗಳಲ್ಲಿ 169 (ಶೇ. 15.59) ಪಾಸಿಟಿವ್‌ ಮತ್ತು 915 (ಶೇ 84.40) ನೆಗೆಟಿವ್‌ ಆಗಿದ್ದವು, ಇನ್ನೂ 451 ವರದಿಗಳು ಲಭಿಸಬೇಕಾಗಿವೆ.

ಮತ್ತೇ 1,125 ಮಂದಿಯ ಗಂಟಲದ್ರವವನ್ನು ಸಂಗ್ರಹಿಸಲಾಗಿದ್ದು, ಅವರಲ್ಲಿ 848 ಸೋಂಕು ಶಂಕಿತರಾಗಿದ್ದರೆ, 170 ಮಂದಿ ಪ್ರಾಥಮಿಕ ಸಂಪರ್ಕಿತರಾಗಿದ್ದಾರೆ. 63 ಮಂದಿ ಹಾಟ್‌ ಸ್ಪಾಟ್‌ನಿಂದ ಬಂದವರು ಮತ್ತು 44 ಮಂದಿ ಸೋಂಕಿನ ಲಕ್ಷಣ ಉಳ್ಳವರಾಗಿದ್ದಾರೆ.

ಇಬ್ಬರು ಮಹಿಳೆಯರು ಬಲಿ: ಇಬ್ಬರು ಮೃತರಾಗುವದರೊಂದಿಗೆ ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ ಮೃತರಾದವರ ಸಂಖ್ಯೆ 130 (ಶೇ 0.93) ಆಗಿದೆ.

ಮೃತರು ಉಡುಪಿ ತಾಲೂಕಿನ 89 ವರ್ಷದ ಮಹಿಳೆ, ಅವರು ತೀವ್ರ ಅಸ್ತಮಾ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದರು, ಇನ್ನೊಬ್ಬರು 70 ವರ್ಷದ ಮಹಿಳೆ ಮಧುಮೇಹ ಮತ್ತು ರಕ್ತದೊತ್ತಡದಿಂದ ಬಳಲುತಿದ್ದರು. ಇಬ್ಬರಿಗೂ ಕೊರೋನಾದಿಂದ ಉಸಿರಾಟದ ಸಮಸ್ಯೆಯಾಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

click me!