ಕಾಳುಮೆಣಸಿನಿಂದ ರೈತರಿಗೆ ಬಂಪರ್ ಲಾಭ

By Kannadaprabha NewsFirst Published Sep 13, 2020, 3:55 PM IST
Highlights

ಕಾಳು ಮೆಣಸು ಅತ್ಯಂತ ಲಾಭದಾಯಕ ಬೆಳೆಯಾಗಿದೆ. ಇದರಿಂದ ರೈತರು ಬಂಪರ್ ಲಾಭ ಪಡೆದುಕೊಳ್ಳಬಹುದಾಗಿದೆ. 

 ಶೃಂಗೇರಿ (ಸೆ.13):  ಸಾಂಬಾರು ಬೆಳೆಗಳಲ್ಲಿ ಪ್ರಮುಖ ಬೆಳೆಯಾಗಿರುವ ಕಾಳುಮೆಣಸು ಉತ್ತಮ ಲಾಭದಾಯಕ ಬೆಳೆಯಾಗಿದೆ ಎಂದು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಡಾ.ಗಿರೀಶ್‌ ಹೇಳಿದರು.

ತಾಲೂಕಿನ ನೆಮ್ಮಾರು ಪಂಚಾಯಿತಿ ಮಲ್ನಾಡ್‌ ಗ್ರಾಮದ ನಾಯಿನಾಡುವಿನಲ್ಲಿ ತಾಲೂಕು ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಾಳುಮೆಣಸು ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಕಾಳುಮೆಣಸು ಬೆಳೆ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಕಾಳು ಮೆಣಸು ಬೆಳೆಗೆ ನೂರಾರು ವರ್ಷಗಳ ಹಿನ್ನೆಲೆಯಿದೆ. ಇದು ಯೂರೋಪಿಯನ್ನರ ಕಾಲದಿಂದಲೂ ಪ್ರಚಲಿತವಾಗಿದೆ. 15ನೇ ಶತಮಾನದಲ್ಲಿ ಭಾರತ ಸಾಂಬಾರು ಪದಾರ್ಥಗಳನ್ನು ವಿದೇಶಕ್ಕೆ ಯೂರೋಪಿಯನ್ನರು ಕೊಂಡೊಯ್ಯುತ್ತಿದ್ದರು. ಅವುಗಳಲ್ಲಿ ಕಾಳು ಮೆಣಸು ಇತ್ತು ಎಂದರು.

ಟೊಮೆಟೋಗೆ ಈಗ ಭಾರೀ ಬಂಪರ್ : ರೈತನಿಗೆ ಫುಲ್ ಖುಷ್ ...

ಕಾಳುಮೆಣಸು ಬೆಳೆಗೆ ಕೇವಲ ಭಾರತದ ಮಾರುಕಟ್ಟೆಯಲ್ಲ, ವಿದೇಶಿ ಮಾರುಕಟ್ಟೆಗಳಲ್ಲಿ ಕೂಡ ಉತ್ತಮ ಬೇಡಿಕೆ ಇದೆ. ಇದು ಬಹುಪಯೋಗಿ ವಸ್ತುವಾಗಿದ್ದು, ಕೇವಲ ಸಾಂಬಾರು ಅಲ್ಲದೇ ಔಷಧಿ ಗುಣವುಳ್ಳ ಪದಾರ್ಥವಾಗಿದೆ. ಕಡಿಮೆ ಬಂಡವಾಳ, ವೆಚ್ಚದಲ್ಲಿ ಹೆಚ್ಚಿನ ಲಾಭ, ಆದಾಯವನ್ನು ತಂದುಕೊಂಡುತ್ತದೆ. ಆರ್ಥಿಕವಾಗಿ ರೈತರಿಗೆ ಲಾಭ ನೀಡುವ ಬೆಳೆಯಾಗಿದೆ. ಮಲೆನಾಡು ಪ್ರದೇಶದ ವಾತಾವರಣಕ್ಕೆ ಕಾಳುಮೆಣಸು ಸೂಕ್ತ ಬೆಳೆಯಾಗಿದೆ. ಹವಾಮಾನಕ್ಕೆ ತಕ್ಕಂತೆ ಕಾಳುಮೆಣಸು ಬಳ್ಳಿಯ ನಾಟಿ, ಅಭಿವೃದ್ಧಿ, ಕಟಾವು ಮಾಡಬೇಕು. ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಕೀಟಬಾಧೆ, ರೋಗದಿಂದ ತಡೆಗಟ್ಟಲು ಔಷಧಿ ಸಿಂಪಡಣೆ ಮಾಡಬೇಕು. ಕೀಟ ಹಾಗೂ ರೋಗಗಳ ಕುರಿತು ಅಗತ್ಯ ಮಾಹಿತಿಯೊಂದಿಗೆ ಕಾಲಕಾಲಕ್ಕೆ ನಿರ್ವಹಣೆ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಸಹಕಾರಿ ಬ್ಯಾಂಕ್‌ ಉಪಾಧ್ಯಕ್ಷ ಎಚ್‌.ಕೆ. ದಿನೇಶ್‌ ಹೆಗ್ಡೆ ಮಾತನಾಡಿ, ರೈತರು ಕಾಳುಮೆಣಸು ಬೆಳೆಯತ್ತ ಹೆಚ್ಚಿನ ಆಸಕ್ತಿ ವಹಿಸಬೇಕು. ಈ ಭಾಗದಲ್ಲಿ ಅಡಕೆ ಹಳದಿ ಎಲೆರೋಗ ವ್ಯಾಪಿಸಿದೆ. ಇದರಿಂದ ಅಡಕೆ ಫಸಲು ನಾಶವಾಗುತ್ತಿದೆ. ರೈತರು ಪರ್ಯಾಯ ಬೆಳೆಯಾಗಿ ಕಾಳುಮೆಣಸು ಕೃಷಿಗೆ ಆದ್ಯತೆ ನೀಡಬೇಕು. ಕಾಳುಮೆಣಸು ಕೃಷಿಯಿಂದ ಹೆಚ್ಚಿನ ಲಾಭಗಳಿಸಬಹುದಾಗಿದೆ. ಹಾಗೇಯೇ ಉತ್ತಮ ಕೃಷಿ, ನಿರ್ವಹಣೆ ಮಾಡಬೇಕು. ಒಳನಾಡು ಪ್ರದೇಶವಾದ ನಾಯಿನಾಡು ಸೇರಿದಂತೆ ಹಲವು ಗ್ರಾಮಗಳ ಕೃಷಿಕರಿಗೆ ಸೂಕ್ತ ತರಬೇತಿ ನೀಡಬೇಕು ಎಂದರು.

ತೋಟಗಾರಿಕೆ ಇಲಾಖೆ ಸಹಾಯ ನಿರ್ದೇಶಕ ಶ್ರೀಕೃಷ್ಣ ಮಾತನಾಡಿ, ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಿಗುವ ಎಲ್ಲ ಸೌಲಭ್ಯ, ಮಾಹಿತಿಗಳನ್ನು ನೀಡಲಾಗುತ್ತಿದೆ. ತೆಂಗಿನಸಸಿ, ಗೊಬ್ಬರ, ತರಕಾರಿ ಬೀಜ ಸೇರಿದಂತೆ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ರೈತರಿಗೆ ತಲುಪಿಸಲಾಗುತ್ತಿದೆ. ಹಾಗೆಯೇ ಮಾಹಿತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ತಾಲೂಕು ಪಂಚಾಯಿತಿ ಸದಸ್ಯ ಕೆ.ಆರ್‌. ವೆಂಕಟೇಶ್‌ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಗತಿಪರ ಕೃಷಿಕರಾದ ಮಹಾಬಲ, ರತ್ನಾಕರ ಮತ್ತಿತರರು ಇದ್ದರು.

click me!