
ಬೆಂಗಳೂರು(ನ.24): ಬಿಡಿಎಗೆ ಸೇರಿದ ಸುಮಾರು 400 ಕೋಟಿ ರು. ಮೌಲ್ಯದ ಭೂ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಚಾಣಾಕ್ಷತನದಿಂದ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸೇರಿದ ಈ ಸ್ವತ್ತನ್ನು ಅನ್ಯರ ಪಾಲಾಗುವಂತೆ ಮಾಡಿದ್ದಾರೆ. ಈ ಅಕ್ರಮದಲ್ಲಿ ಹಲವು ಅಧಿಕಾರಿಗಳೂ ಭಾಗಿಯಾಗಿದ್ದಾರೆ. ಹೀಗಾಗಿ ಸರ್ಕಾರ ಈ ಬೃಹತ್ ಭೂ ಹಗರಣವನ್ನು ಸಿಬಿಐ ಅಥವಾ ಸಿಐಡಿ ತನಿಖೆಗೆ ವಹಿಸಬೇಕು ಎಂದು ರಮೇಶ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೂ ಒತ್ತಾಯಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡಿಎ 1984ರಲ್ಲಿ ಆರ್‌ಎಂವಿ 2ನೇ ಹಂತದ ಬಡಾವಣೆ ನಿರ್ಮಾಣದ ಉದ್ದೇಶದಿಂದ ಭೂಪಸಂದ್ರ ಗ್ರಾಮದ ಪ್ರದೇಶಗಳನ್ನು ಭೂಸ್ವಾಧೀನಪಡಿಸಿಕೊಂಡಿತ್ತು. ಬೆಂಗಳೂರು ಉತ್ತರ ತಾಲೂಕು ಕಸಬಾ ಹೋಬಳಿ ಭೂಪಸಂದ್ರ ಗ್ರಾಮದ ಸರ್ವೆ ನಂಬರ್ 20ರಲ್ಲಿನ 3 ಎಕರೆ 34 ಗುಂಟೆ ಮತ್ತು ಸರ್ವೆ 21ರಲಲಿ 2 ಎಕರೆ 32 ಗುಂಟೆ ಸೇರಿದಂತೆ ಒಟ್ಟು 6 ಎಕರೆ 26 ಗಂಟೆ ಜಮೀನಿನ ಸ್ವಾಧೀನ ಪ್ರಕ್ರಿಯೆ ಮುಗಿಸಿದ್ದ ಬಿಡಿಎ, ಸಂಬಂಧಪಟ್ಟಭೂ ಮಾಲೀಕರಿಗೆ ನೀಡಬೇಕಾದ ಪರಿಹಾರದ ಮೊತ್ತವನ್ನು ನಗರದ ಸಿವಿಲ್ ನ್ಯಾಯಾಲಯದಲ್ಲಿ ಠೇವಣಿ ಇರಿಸಿತ್ತು. ಬಳಿಕ ಈ ಸ್ವತ್ತುಗಳು ಸ್ವಾಧೀನಾನುಭವ ಮತ್ತು ಮಾಲೀಕತ್ವವು ಬಿಡಿಎ ಹೆಸರಿನಲ್ಲಿ ಇರುವ ದಾಖಲೆಗಳು ಹಾಗೂ ಕಂದಾಯ ಇಲಾಖೆಯ ದಾಖಲೆಗಳಲ್ಲಿ ನಮೂದಾಗಿದೆ ಎಂದು ವಿವರಿಸಿದರು.
ಬೆಂಗಳೂರು: ಕೆಂಪೇಗೌಡ ಬಡಾವಣೆಗೆ ಬಿಡಿಎ ಅನ್ಯಾಯ..!
ಕಾನೂನಿನ ಅನ್ವಯ ಭೂಸ್ವಾಧೀನಪಡಿಸಿಕೊಂಡ ಸ್ವತ್ತುಗಳನ್ನು ಬಿಡಿಎ ಕೋಟ್ಯಂತರ ರು. ವೆಚ್ಚದಲ್ಲಿ ಬಡಾವಣೆ ನಿರ್ಮಾಣಕ್ಕೆ ಅಗತ್ಯ ಮೂಲಸೌಕರ್ಯ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿತ್ತು. ಅಂತೆಯೆ 42 ಮಂದಿ ಅರ್ಜಿದಾರರಿಗೆ ಹಂಚಿಕೆ ಮಾಡಿ ಸ್ವಾಧೀನ ಪತ್ರವನ್ನೂ ಸಹ ನೀಡಿದೆ. ಹಂಚಿಕೆಯಾದ ನಿವೇಶನಗಳನ್ನು ಅರ್ಜಿದಾರರ ಸುಪರ್ದಿಗೆ ನೀಡಿದೆ. ಈ ಎಲ್ಲ ಪ್ರಕ್ರಿಯೆಗಳು ಮುಗಿದ ಬಳಿಕ ಈ ಹಿಂದೆ ಕಾನೂನು ರೀತಿ ಪರಿಹಾರದ ಹಣವನ್ನು ಪಡೆದಿದ್ದ ಜಮೀನು ಮಾಲೀಕರು ದುರಾಸೆಗೆ ಬಿದ್ದು ಈ ಸ್ವತ್ತುಗಳನ್ನು ಡಿ-ನೋಟಿಫಿಕೇಶನ್ ಮಾಡಲು ಬಿಡಿಎಗೆ ನಿರ್ದೇಶನ ನೀಡುವಂತೆ ಹೈಕೋರ್ಚ್ ಮತ್ತು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣಗಳ ವಿಚಾರಣೆ ಮಾಡಿದ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಬಿಡಿಎ ಪರ ತೀರ್ಪು ನೀಡಿತ್ತು.
ಬಿಡಿಎ ಪರ ತೀರ್ಪು ಬಂದ ಬಳಿಕವೂ ಈ ಸ್ವತ್ತುಗಳಿಗೆ ಯಾವುದೇ ಸಂಬಂಧ ರಾಜಕೀಯ ಮತ್ತು ಆರ್ಥಿಕವಾಗಿ ಪ್ರಭಾವಶಾಲಿಗಳಾದ ಕೆ.ವಿ.ಜಯಮ್ಮ, ಎಸ್.ಎನ್.ವಿಜಯಲಕ್ಷ್ಮೇ ಮತ್ತು ಕೆ.ವಿ.ಪ್ರಭಾಕರ್, ಕೀರ್ತಿ ರಾಜ್ ಶೆಟ್ಟಿಅವರು ಹೈಕೋರ್ಚ್‌ನಲ್ಲಿ ದಾವೆ ಹೂಡಿದ್ದರು. ಈ ವೇಳೆ ಬಿಡಿಎ ಸದರಿ ಸ್ವತ್ತುಗಳಿಗೆ ಸಂಬಂಧಿಸಿದಂತೆ ನಿಜವಾದ ಭೂಮಾಲೀಕರು ಹೂಡಿದ್ದ ದಾವೆಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿರುವ ಬಗ್ಗೆ ಹೈಕೋರ್ಚ್ ಗಮನಕ್ಕೆ ತಂದಿತ್ತು. ಆದರೆ, ನಗರಾಭಿವೃದ್ಧಿ ಇಲಾಖೆಯ ಸಂಶಯಾಸ್ಪದ ನಡೆಯಿಂದ ಹೈಕೋರ್ಚ್ ಕೆ.ವಿ.ಜಯಲಕ್ಷ್ಮಮ್ಮ ಹಾಗೂ ಇತರರು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದೆ. ಇದನ್ನು ಪ್ರಶ್ನಿಸಿ ಬಿಡಿಎ ಹೈಕೋರ್ಚ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಆದರೆ, ಆಶ್ಚರ್ಯಕರ ಸಂಗತಿ ಎಂದರೆ, ನಗರಾಭಿವೃದ್ಧಿ ಇಲಾಖೆಯು ಹೈಕೋರ್ಚ್‌ನ ಆದೇಶವನ್ನು ಪ್ರಶ್ನಿಸಿ ಯಾವುದೇ ಮೇಲ್ಮನವಿ ಸಲ್ಲಿಸಿಲ್ಲ ಎಂದು ರಮೇಶ್ ವಿವರಿಸಿದರು.
Bengaluru: ಕೆಂಪೇಗೌಡ ಲೇಔಟ್ ಸೈಟ್ ಉಳಿಸಿಕೊಳ್ಳಲು ಮತ್ತೆ ಚಾನ್ಸ್?
ಸಿದ್ದರಾಮಯ್ಯ ಪ್ರಭಾವದಿಂದ ಅನ್ಯರಿಗೆ ಸ್ವತ್ತು ಆರೋಪ
ಪ್ರಭಾವಿ ವಂಚಕರಾದ ಅರ್ಜಿದಾರರಿಗೆ ಎಲ್ಲಾ ರೀತಿಯ ಸಹಾಯ ಮಾಡುವ ಉದ್ದೇಶದಿಂದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಂದಿನ ಹಿರಿಯ ಅಧಿಕಾರಿಗಳ ಮೇಲೆ ತಮ್ಮ ಪ್ರಭಾವ ಬಳಸಿ ನಗರಾಭಿವೃದ್ಧಿ ಇಲಾಖೆ ಹೈಕೋರ್ಚ್ ಆದೇಶ ಪ್ರಶ್ನಿಸಿ ಯಾವುದೇ ಮೇಲ್ಮನವಿ ಸಲ್ಲಿಸದಂತೆ ಕೆಲಸ ಮಾಡಿರುವುದು ಸ್ಪಷ್ಟವಾಗಿದೆ. ಸಿದ್ದರಾಮಯ್ಯ ಹಾಗೂ ಹಿರಿಯ ಭಷ್ಟಅಧಿಕಾರಿಗಳ ಒತ್ತಡಕ್ಕೆ ಒಳಗಾಗಿ ನಗರಾಭಿವೃದ್ಧಿ ಇಲಾಖೆಯ ಅಂದಿನ ಕಾನೂನು ಕೋಶದ ಅಧಿಕಾರಿಯಾಗಿದ್ದ ಎರಮಲ್ ಕಲ್ಪನಾ ಕಾನೂನಿಗೆ ವಿರುದ್ಧವಾಗಿ ಅಭಿಪ್ರಾಯ ನೀಡಿರುವುದು ಕಂಡು ಬಂದಿದೆ. ಇವರ ಅಭಿಪ್ರಾಯದ ಮೇರೆಗೆ ನಗರಾಭಿವೃದ್ಧಿ ಇಲಾಖೆಯು ಬಿಡಿಎಗೆ ಆಯುಕ್ತರಿಗೆ ಪತ್ರ ಬರೆದು ‘ನಗರಾಭಿವೃದ್ಧಿ ಇಲಾಖೆಯ ಕಾನೂನು ಶಾಖೆ ನೀಡಿದ್ದ ಅಭಿಪ್ರಾಯ’ಕ್ಕೆ ಅನುಗುಣವಾಗಿ ಮುಂದಿನ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ ಎಂದು ತಿಳಿಸಿದರು.
ಬಿಡಿಎಗೆ ಸೇರಿದ ಸುಮಾರು 400 ಕೋಟಿ ರು. ಮೌಲ್ಯದ ಸ್ವತ್ತು ಅನ್ಯರ ಪಾಲಾಗಲು ಕಾರಣರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಂದಿನ ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳಾದ ಮಹೇಂದ್ರ ಜೈನ್, ಎನ್.ನರಸಿಂಹಮೂರ್ತಿ, ಎರವಲ್ ಕಲ್ಪನಾ, ಶ್ಯಾಂಭಟ್, ಅಂದಿನ ಬೆಂಗಳೂರು ಉತ್ತರ ತಾಲೂಕಿನ ವಿಶೇಷ ತಹಶೀಲ್ದಾರ್, ಅರ್ಜಿದಾರರಾದ ಕೆ.ವಿ.ಜಯಲಕ್ಷ್ಮಮ್ಮ, ಎಸ್.ಎನ್.ಜಯಲಕ್ಷ್ಮೇ, ಕೆ.ವಿ.ಪ್ರಭಾಕರ್ ಹಾಗೂ ಇವರಿಂದ ಜಿಪಿಎ ಪಡೆದಿರುವ ಕೀರ್ತಿ ರಾಜ್ ಶೆಟ್ಟಿಇವರುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈ ಬೃಹತ್ ಭೂ ಹಗರಣದ ತನಿಖೆಯನ್ನು ಉನ್ನತಮಟ್ಟದ ತನಿಖೆ ಅಥವಾ ಸಿಬಿಐ ಅಥವಾ ಸಿಐಡಿಗೆ ವಹಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.