ಪೇಸ್‌ಬುಕ್‌ನಲ್ಲಿ ಪ್ರಚಾರ: ಬಿಜೆಪಿ ಶಾಸಕ ಬೋಪಯ್ಯ ನೋಟಿಸ್‌

By Kannadaprabha News  |  First Published Apr 2, 2023, 7:59 AM IST

ಕೆ.ಜಿ.ಬೋಪಯ್ಯ ಯಾವುದೇ ಅನುಮತಿ ಪಡೆಯದೆ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪಕ್ಷದ ಚಿಹ್ನೆ ಬಳಸಿ ಪರೀಕ್ಷೆಗೆ ಶುಭಾಶಯ ಕೋರಿದ್ದರು. ಈ ಸಂಭಂದ ಬೋಪಯ್ಯಗೆ ನೋಟಿಸ್‌ ನೀಡಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ. 


ಮಡಿಕೇರಿ(ಏ.02): ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ನೀತಿ ಸಂಹಿತೆ ಉಲ್ಲಂಘನೆಯಡಿ ಕಾರಣ ಕೇಳಿ ಚುನಾವಣಾಧಿಕಾರಿಗಳು ನೋಟಿಸ್‌ ನೀಡಿದ್ದಾರೆ.

ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭ ಪತ್ರಿಕೆ, ಮಾಧ್ಯಮ, ಸಾಮಾಜಿಕ ಜಾಲತಾಣ ಹಾಗೂ ಇನ್ನಿತರೆ ಮೂಲಗಳಿಂದ ಯಾವುದೇ ರಾಜಕೀಯ ಪ್ರಚಾರ ಮತ್ತು ರಾಜಕೀಯ ಪ್ರೇರಿತ ಹೇಳಿಕೆ ನೀಡಬೇಕಾದಲ್ಲಿ ಜಿಲ್ಲಾ ಮೀಡಿಯಾ ಮಾನಿಟರಿಂಗ್‌ ಸಮಿತಿಯಿಂದ ಪೂರ್ವಾನುಮತಿ ಪಡೆಯಬೇಕು. ಆದರೆ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಯಾವುದೇ ಅನುಮತಿ ಪಡೆಯದೆ, ಶುಕ್ರವಾರ ಆರಂಭವಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪಕ್ಷದ ಚಿಹ್ನೆ ಬಳಸಿ ಪರೀಕ್ಷೆಗೆ ಶುಭಾಶಯ ಕೋರಿದ್ದರು. ಈ ಸಂಭಂದ ಬೋಪಯ್ಯ ಅವರಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ನೋಟಿಸ್‌ ನೀಡಿದ್ದಾರೆ.

Tap to resize

Latest Videos

undefined

ವಾಟ್ಸಪ್‌ನಲ್ಲಿ ಚುನಾವಣಾ ಪ್ರಚಾರ ಮಾಡಿದ್ರೆ ನೋಟಿಸ್‌ ಬರುತ್ತೆ ಹುಷಾರ್‌..!

ನೋಟಿಸ್‌ನಲ್ಲಿ ಏನಿದೆ?: 

ಸಾಮಾಜಿಕ ಜಾಲತಾಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಶುಭಾಶಯವನ್ನು ತಿಳಿಸುವ ಮೂಲಕ ಯಾವುದೇ ಪೂರ್ವಾನುಮತಿ ಪಡೆಯದೆ ರಾಜಕೀಯ ಪ್ರೇರಿತ ಚಿತ್ರವನ್ನು ಹಂಚಿಕೊಂಡಿರುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿರುತ್ತದೆ. ಆದ್ದರಿಂದ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ರೀತ್ಯ ನಿಮ್ಮ ಮೇಲೆ ಏಕೆ ಕಾನೂನು ಕ್ರಮ ಜರುಗಿಸಬಾರದು ಎಂದು ಪ್ರಶ್ನಿಸಿರುವ ಚುನಾವಣಾಧಿಕಾರಿ, ಈ ಸಂಬಂಧ 24 ಗಂಟೆಯೊಳಗೆ ಖುದ್ದು ಲಿಖಿತ ಸಮಜಾಯಿಷಿಕೆಯನ್ನು ನೀಡಬೇಕು. ತಪ್ಪಿದ್ದಲ್ಲಿ ನಿಮ್ಮ ಸಮಜಾಯಿಷಿಕೆ ಏನೂ ಇಲ್ಲವೆಂದು ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಮತ್ತೊಬ್ಬರಿಗೂ ನೋಟಿಸ್‌: 

ಜನರಲ್‌ ಕೆ.ಎಸ್‌. ತಿಮ್ಮಯ್ಯ ಅವರ ಜನ್ಮದಿನದ ಸಂದರ್ಭ ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿದ ಹಿನ್ನೆಲೆ ಶ್ರೀಮಂಗಲದ ನಾರಿ ಗ್ರಾಮದ ಸಚಿನ್‌ ಚೆರಿಯಮನೆ ಎಂಬುವವರಿಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ನೋಟಿಸ್‌ ನೀಡಲಾಗಿದೆ. ರಾಜಕೀಯ ಪ್ರೇರಿತ ಚಿತ್ರವನ್ನು ಬಳಸಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!