ಶ್ರೀಕಂಠೇಶ್ವರ ದೇವಸ್ಥಾನದಿಂದಾಗಿ ಪ್ರಮುಖ ಧಾರ್ಮಿಕ ಕೇಂದ್ರ, ದಕ್ಷಿಣ ಕಾಶಿ ಎಂದೇ ಹೆಸರಾದ ನಂಜನಗೂಡು ಕ್ಷೇತ್ರ ಕಪಿಲಾ ನದಿಯ ಅಸುಪಾಸು ವ್ಯಾಪಿಸಿಕೊಂಡಿದೆ. ಈ ಕ್ಷೇತ್ರ ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಅಸ್ತಿತ್ವದಲ್ಲಿದೆ. ಮೊದಲ ಬಾರಿ ದ್ವಿಸದಸ್ಯ, ನಂತರ ಏಕ ಸದಸ್ಯತ್ವ ಸಾಮಾನ್ಯ, 2008 ರಿಂದ ಪರಿಶಿಷ್ಟಜಾತಿ ಮೀಸಲು ಕ್ಷೇತ್ರವಾಗಿದೆ.
ಅಂಶಿ ಪ್ರಸನ್ನಕುಮಾರ್
ಮೈಸೂರು : ಶ್ರೀಕಂಠೇಶ್ವರ ದೇವಸ್ಥಾನದಿಂದಾಗಿ ಪ್ರಮುಖ ಧಾರ್ಮಿಕ ಕೇಂದ್ರ, ದಕ್ಷಿಣ ಕಾಶಿ ಎಂದೇ ಹೆಸರಾದ ನಂಜನಗೂಡು ಕ್ಷೇತ್ರ ಕಪಿಲಾ ನದಿಯ ಅಸುಪಾಸು ವ್ಯಾಪಿಸಿಕೊಂಡಿದೆ. ಈ ಕ್ಷೇತ್ರ ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಅಸ್ತಿತ್ವದಲ್ಲಿದೆ. ಮೊದಲ ಬಾರಿ ದ್ವಿಸದಸ್ಯ, ನಂತರ ಏಕ ಸದಸ್ಯತ್ವ ಸಾಮಾನ್ಯ, 2008 ರಿಂದ ಪರಿಶಿಷ್ಟಜಾತಿ ಮೀಸಲು ಕ್ಷೇತ್ರವಾಗಿದೆ.
undefined
ಬಿಜೆಪಿಯಿಂದ ಹಾಲಿ ಶಾಸಕ ಬಿ. ಹರ್ಷವರ್ಧನ್ ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ. ಇವರು ಚಾಮರಾಜನಗರ ಸಂಸದ ವಿ. ಶ್ರೀನಿವಾಸಪ್ರಸಾದ್ ಅವರ ಅಳಿಯ ಹಾಗೂ ಮಾಜಿ ಸಚಿವ ದಿವಂಗತ ಬಿ. ಬಸವಲಿಂಗಪ್ಪ ಅವರ ಮೊಮ್ಮಗ. ಅವರಿಗೆ ಮಾವನ ಹೆಸರೇ ಶ್ರೀರಕ್ಷೆ. ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮತಕೊಡಿ ಎಂದು ಕೇಳುತ್ತಿದ್ದಾರೆ.
ಈ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ಗೆ ಮಾಜಿ ಸಂಸದ, ಕಾರ್ಯಾಧ್ಯಕ್ಷರಾಗಿದ್ದ ಆರ್. ಧ್ರುವನಾರಾಯಣ ಹಾಗೂ ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ನಡುವೆ ತೀವ್ರ ಪೈಪೋಟಿ ಇತ್ತು. ಆದರೆ ಧ್ರುವನಾರಾಯಣ ಅವರು ತೀವ್ರ ಹೃದಯಾಘಾತದಿಂದ ಹಠಾತ್ ನಿಧನರಾದರು. ಹೀಗಾಗಿ ಮಹದೇವಪ್ಪ ಅವರಿಗೆ ಹಾದಿ ಸುಗಮ ಎನ್ನುವಾಗಲೇ ದರ್ಶನ್ ಪರ ಕೂಗು ಕೇಳಿ ಬಂದವು. ಇದರಿಂದ ಮಹದೇವಪ್ಪ ಅವರೇ ಹಿಂದೆ ಸರಿದು, ಗೆ ಬೆಂಬಲ ನೀಡಿದರು. ಧ್ರುವನಾರಾಯಣ ಅವರ ಸಾವಿನ ಅನುಕಂಪದ ಲಾಭ ಪಡೆಯಲು ಕಾಂಗ್ರೆಸ್ ದರ್ಶನ್‌ಗೆ ಟಿಕೆಟ್ ನೀಡಿದೆ. ಮಹದೇವಪ್ಪ ಅವರು ತಮ್ಮ ಹಳೆಯ ಕ್ಷೇತ್ರ ಟಿ. ನರಸೀಪುರದಿಂದ ಕಣಕ್ಕಿಳಿಯುತ್ತಿದ್ದಾರೆ.
ಜೆಡಿಎಸ್‌ನಿಂದ ಆರ್. ಮಾದೇಶ್ ಹಾಗೂ ಬೆಳವಾಡಿ ಶಿವಕುಮಾರ್ ಅವರ ಹೆಸರುಗಳಿವೆ. ಮಾದೇಶ್ ಕ್ಷೇತ್ರಾದ್ಯಂತ ತಮಗೆ ಟಿಕೆಟ್ ಎಂದು ಪ್ರಚಾರ ಮಾಡುತ್ತಿದ್ದಾರೆ.
ಕ್ಷೇತ್ರದ ಇತಿಹಾಸ
1952 ರಲ್ಲಿ ಪಕ್ಷೇತರರಾದ ಹೆಜ್ಜಿಗೆ ಎಂ. ಲಿಂಗಣ್ಣ ಹಾಗೂ ಕಾಂಗ್ರೆಸ್‌ನ ಎಂ. ಮಾದಯ್ಯ ಆಯ್ಕೆಯಾದರು. ಬಿಎನ್‌ಎಸ್ ಆರಾಧ್ಯ, ಡಿ.ಎಂ. ಸಿದ್ದಯ್ಯ, ಎಂ.ಸಿ. ಬಿಳಿಗಿರಿರಂಗಯ್ಯ, ಎನ್.ಎಸ್. ಲಿಂಗಪ್ಪ, ಬಿ. ಬಸವಯ್ಯ ಪೈಪೋಟಿ ನೀಡಿದ್ದರು. 1957 ರಲ್ಲಿ ಕಾಂಗ್ರೆಸ್‌ನ ಪಿ. ಮಹದೇವಯ್ಯ ಅವರು ಪಿಎಸ್ಪಿಯ ಬಿಎನ್‌ಎಸ್ ಆರಾಧ್ಯ ಅವರನ್ನು ನೇರ ಸ್ಪರ್ಧೆಯಲ್ಲಿ ಸೋಲಿಸಿ, ಆಯ್ಕೆಯಾದರು. ಅವರ ನಿಧನದಿಂದ ನಡೆದ ಉಪ ಚುನಾವಣೆಯಲ್ಲಿ ಪಿಎಸ್ಪಿಯ ಜೆ.ಬಿ. ಮಲ್ಲಾರಾಧ್ಯರು ಕಾಂಗ್ರೆಸ್‌ನ ಎನ್. ರಾಚಯ್ಯ ಅವರನ್ನು ಸೋಲಿಸಿ, ಆಯ್ಕೆಯಾದರು. 1962 ರಲ್ಲಿ ಕಾಂಗ್ರೆಸ್‌ನ ಎನ್. ರಾಚಯ್ಯ ಅವರು ಪಕ್ಷೇತರರಾದ ಎಲ್. ಶ್ರೀಕಂಠಯ್ಯ ಅವರನ್ನು ಸೋಲಿಸಿ, ಆಯ್ಕೆಯಾದರು. 1967 ರಲ್ಲಿ ಪಕ್ಷೇತರರಾದ ಎಲ್. ಶ್ರೀಕಂಠಯ್ಯ ಅವರು ಕಾಂಗ್ರೆಸ್‌ನ ಎನ್. ರಾಚಯ್ಯ ಅವರನ್ನು ಸೋಲಿಸಿ, ಸೇಡು ತೀರಿಸಿಕೊಂಡರು. 1972 ರಲ್ಲಿ ಕಾಂಗ್ರೆಸ್‌ನ ಕೆ.ಬಿ. ಶಿವಯ್ಯ ಅವರು ಪಕ್ಷೇತರರಾದ ಎಲ್. ಶ್ರೀಕಂಠಯ್ಯ ಅವರನ್ನು ಸೋಲಿಸಿದರು. ಸಂಸ್ಥಾ ಕಾಂಗ್ರೆಸ್‌ನಿಂದ ಜವರಯ್ಯ ಸೋಸಲೆ ಸ್ಪರ್ಧಿಸಿದ್ದರು. 1978 ರಲ್ಲಿ ಶಿವಯ್ಯ ಇಂದಿರಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಜನತಾಪಕ್ಷದ ಪುಟ್ಟವೀರ ತಾರಕ ಅವರನ್ನು ಸೋಲಿಸಿದರು. ಕಾಂಗ್ರೆಸ್‌ನಿಂದ ಡಿ.ಟಿ. ಜಯಕುಮಾರ್ ಸ್ಪರ್ಧಿಸಿದ್ದರು.
1983 ರಲ್ಲಿ ಕಾಂಗ್ರೆಸ್‌ನ ಎಂ. ಮಹದೇವ್ ಅವರು ಜನತಾಪಕ್ಷದ ಕೆ. ನರಸೇಗೌಡರನ್ನು ಸೋಲಿಸಿ, ಆಯ್ಕೆಯಾದರು. ಬಿಜೆಪಿಯಿಂದ ಎಚ್. ಲಿಂಗಪ್ಪ ಕಣದಲ್ಲಿದ್ದರು. 1985 ರಲ್ಲಿ ಜನತಾಪಕ್ಷದ ಡಿ.ಟಿ. ಜಯಕುಮಾರ್ ಅವರು ಕಾಂಗ್ರೆಸ್ ಹೆಜ್ಜಿಗೆ ಎಂ. ಲಿಂಗಣ್ಣ ಅವರನ್ನು ಸೋಲಿಸಿದರು. ಬಿಜೆಪಿಯಿಂದ ಎನ್.ಸಿ. ಸಿದ್ದಪ್ಪಗೌಡ ಸ್ಪರ್ಧಿಸಿದ್ದರು. 1989 ರಲ್ಲಿ ಕಾಂಗ್ರೆಸ್‌ನ ಎಂ. ಮಹದೇವ್ ಜನತಾದಳದ ಡಿ.ಟಿ. ಜಯಕುಮಾರ್ ಅವರನ್ನು ಸೋಲಿಸಿ, ಆಯ್ಕೆಯಾದರು. ಸಜಪದಿಂದ ಎಂ.ವೈ. ಪುಟ್ಟಣ್ಣ, ಬಿಜೆಪಿಯಿಂದ ಬಿ. ಯೋಗೀಶ್ ಅಭ್ಯರ್ಥಿಗಳಾಗಿದ್ದರು. 1994 ರಲ್ಲಿ ಜನತಾದಳದ ಡಿ.ಟಿ. ಜಯಕುಮಾರ್ ಕಾಂಗ್ರೆಸ್‌ನ ಎಂ. ಮಹದೇವ್ ಅವರನ್ನು ಸೋಲಿಸಿದರು. ಬಿಜೆಪಿಯಿಂದ ಬಿ. ಯೋಗೀಶ್, ಕೆಸಿಪಿಯಿಂದ ಎನ್. ನರಸಿಂಹಸ್ವಾಮಿ, ಜನತಾಪಕ್ಷದಿಂದ ಕೆ.ಪಿ. ಶಾಂತಮೂರ್ತಿ ಕಣದಲ್ಲಿದ್ದರು. 1999 ರಲ್ಲಿ ಕಾಂಗ್ರೆಸ್‌ನ ಎಂ. ಮಹದೇವ್ ಜೆಡಿಎಸ್‌ನ ಡಿ.ಟಿ. ಜಯಕುಮಾರ್ ಅವರನ್ನು ಸೋಲಿಸಿದರು. ಜೆಡಿಯುನಿಂದ ಎಲ್.ಎನ್. ಶಿವಯೋಗಿ, ಬಿಜೆಪಿಯಿಂದ ಡಾ.ಸಿ.ಎನ್. ಮೃತ್ಯುಂಜಯಪ್ಪ ಸ್ಪರ್ಧಿಸಿದ್ದರು. 2004 ರಲ್ಲಿ ಜೆಡಿಎಸ್‌ನ ಡಿ.ಟಿ. ಜಯಕುಮಾರ್ ಅವರು ಕಾಂಗ್ರೆಸ್‌ನ ಎಂ. ಮಹದೇವ್ ಅವರನ್ನು ಸೋಲಿಸಿ, ಆಯ್ಕೆಯಾದರು. ಬಿಜೆಪಿಯಿಂದ ಹುಲ್ಲಹಳ್ಳಿ ಸೋಮಶೇಖರ್ ಕಣದಲ್ಲಿದ್ದರು.
2008 ರ ವೇಳೆಗೆ ಪ.ಜಾತಿ ಮೀಸಲು ಕ್ಷೇತ್ರವಾಯಿತು. ಮೊದಲ ಬಾರಿಗೆ ಕಾಂಗ್ರೆಸ್‌ನ ವಿ. ಶ್ರೀನಿವಾಸಪ್ರಸಾದ್ ಬಿಜೆಪಿಯ ಎಸ್. ಮಹದೇವಯ್ಯ ಅವರನ್ನು ಸೋಲಿಸಿ, ಆಯ್ಕೆಯಾದರು. ಜೆಡಿಎಸ್‌ನಿಂದ ಕಳಲೆ ಕೇಶವಮೂರ್ತಿ ಸ್ಪರ್ಧಿಸಿದ್ದರು. 2013 ರಲ್ಲಿ ಕಾಂಗ್ರೆಸ್‌ನ ವಿ. ಶ್ರೀನಿವಾಸಪ್ರಸಾದ್ ಪುನಾರಾಯ್ಕೆಯಾದರು. ಜೆಡಿಎಸ್‌ನಿಂದ ಕಳಲೆ ಕೇಶವಮೂರ್ತಿ, ಕೆಜೆಪಿಯಿಂದ ಎಸ್. ಮಹದೇವಯ್ಯ, ಬಿಜೆಪಿಯಿಂದ ಡಾ.ಶಿವರಾಂ ಸ್ಪರ್ಧಿಸಿದ್ದರು.
ಶ್ರೀನಿವಾಸಪ್ರಸಾದ್ ಅವರ ರಾಜೀನಾಮೆಯಿಂದ 2017 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕಳಲೆ ಕೇಶವಮೂರ್ತಿ ಆಯ್ಕೆಯಾದರು. ಬಿಜೆಪಿಯಿಂದ ಶ್ರೀನಿವಾಸಪ್ರಸಾದ್ ಅಭ್ಯರ್ಥಿಯಾಗಿದ್ದರು.
2018 ರಲ್ಲಿ ಬಿಜೆಪಿಯ ಎಲ್. ಹರ್ಷವರ್ಧನ್ ಅವರು ಕಾಂಗ್ರೆಸ್‌ನ ಕಳಲೆ ಕೇಶವಮೂರ್ತಿ ಅವರನ್ನು ಸೋಲಿಸಿದರು. ಜೆಡಿಎಸ್‌ನಿಂದ ಮಾಜಿ ಶಾಸಕ ಹೆಜ್ಜಿಗೆ ಎಂ. ಶ್ರೀನಿವಾಸಯ್ಯ ಅವರ ಪುತ್ರ ಎಚ್.ಎಸ್. ದಯಾನಂದಮೂರ್ತಿ ಅಭ್ಯರ್ಥಿಯಾಗಿದ್ದರು. ಹರ್ಷವರ್ಧನ್ ಅವರು ವಿ. ಶ್ರೀನಿವಾಸಪ್ರಸಾದ್ ಅವರ ಅಳಿಯ ಹಾಗೂ ಮಾಜಿ ಸಚಿವ ಬಿ. ಬಸವಲಿಂಗಪ್ಪ ಅವರ ಮೊಮ್ಮಗ.
ನಾಲ್ವರು ಮಂತ್ರಿಗಳು
ನಂಜನಗೂಡಿನಿಂದ ತಲಾ ಮೂರು ಬಾರಿ ಆಯ್ಕೆಯಾಗಿರುವ ಡಿ.ಟಿ. ಜಯಕುಮಾರ್, ಎಂ. ಮಹದೇವ್, ತಲಾ ಎರಡು ಬಾರಿ ಆಯ್ಕೆಯಾಗಿರುವ ಕೆ.ಬಿ. ಶಿವಯ್ಯ, ವಿ.ಶ್ರೀನಿವಾಸಪ್ರಸಾದ್ ಸಚಿವರಾಗಿ ಕೆಲಸ ಮಾಡಿದ್ದಾರೆ. ಶ್ರೀನಿವಾಸಪ್ರಸಾದ್ ಅವರು ಚಾಮರಾಜನಗರದಿಂದ ಆರು ಬಾರಿ ಸಂಸದರಾಗಿ ಕೇಂದ್ರದಲ್ಲಿಯೂ ಸಚಿವರಾಗಿದ್ದರು.
ಮತದಾರರ ವಿವರ
ಒಟ್ಟು ಮತದಾರರು- 2,13,065
ಪುರುಷರು- 1,06,411
ಮಹಿಳೆಯರು- 1,06,645
ಇತರರು- 9
ಮತಗಟ್ಟೆಗಳು-249
2018ರ ಫಲಿತಾಂಶ
ಬಿ. ಹರ್ಷವರ್ಧನ, ಬಿಜೆಪಿ- 78,030, ಗೆಲವು
ಕಳಲೆ ಎನ್. ಕೇಶವಮೂರ್ತಿ- ಕಾಂಗ್ರೆಸ್- 65,551
ದಯಾನಂದಮೂರ್ತಿ ಎಚ್.ಎಸ್.- ಜೆಡಿಎಸ್- 13,679
(ಇದಲ್ಲದೇ ಇನ್ನೂ ಏಳು ಮಂದಿ ಕಣದಲ್ಲಿದ್ದರು)
ಸ್ವಾರಸ್ಯಗಳು
- 1952ರ ಮೊದಲ ಚುನಾವಣೆಯಿಂದಲೂ ಅಸ್ತಿತ್ವದಲ್ಲಿರುವ ಕ್ಷೇತ್ರ. ದ್ವಿಸದಸ್ಯ ಕ್ಷೇತ್ರವಾಗಿದ್ದ ಮೊದಲ ಬಾರಿ ಪಕ್ಷೇತರರಾದ ಹೆಜ್ಜಿಗೆ ಎಂ. ಲಿಂಗಣ್ಣ, ಕಾಂಗ್ರೆಸ್‌ನ ಎಂ. ಮಾದಯ್ಯಆಯ್ಕೆಯಾಗಿದ್ದರು.
- 1957 ರಲ್ಲಿ ಏಕಸದಸ್ಯ ಕ್ಷೇತ್ರವಾಯಿತು.
-1962 ರಲ್ಲಿ ಕಾಂಗ್ರೆಸ್‌ನ ಎನ್. ರಾಚಯ್ಯ ಅವರು ಪಕ್ಷೇತರರಾದ ಎಲ್. ಶ್ರೀಕಂಠಯ್ಯ ಅವರನ್ನು ಸೋಲಿಸಿದರು. 1967 ರಲ್ಲಿ ಪಕ್ಷೇತರರಾದ ಎಲ್.ಶ್ರೀಕಂಠಯ್ಯ ಅವರು ಕಾಂಗ್ರೆಸ್‌ನ ರಾಚಯ್ಯ ಹಾಗೂ ಸ್ವತಂತ್ರ ಪಾರ್ಟಿಯ ಬಿ.ಎನ್.ಎಸ್. ಆರಾಧ್ಯರನ್ನು ಸೋಲಿಸಿದರು.
- 1978 ರ ಚುನಾವಣೆಯಲ್ಲಿ ಡಿ.ಟಿ. ಜಯಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಆಗ ಗೆದ್ದ ಕೆ.ಬಿ. ಶಿವಯ್ಯ ಅರಸು ಅವರ ಸಂಪುಟದಲ್ಲಿ ರೇಷ್ಮೆ ಖಾತೆ ಸಚಿವರಾಗಿದ್ದರು.
- 1983 ರಲ್ಲಿ ಕಾಂಗ್ರೆಸ್‌ನ ಎಂ. ಮಹದೇವ್ ಅವರು ಜನತಾಪಕ್ಷದ ಕೆ. ನರಸೇಗೌಡರನ್ನು ಕೇವಲ 45 ಮತಗಳಿಂದ ಸೋಲಿಸಿದರು. 1985 ರಲ್ಲಿ ಮಹದೇವ್‌ಗೆ ಟಿಕೆಟ್ ಸಿಗಲಿಲ್ಲ. ಕಾಂಗ್ರೆಸ್ ಅಭ್ಯರ್ಥಿಯಾದ ಹೆಜ್ಜಿಗೆ ಲಿಂಗಣ್ಣ ಅವರು ಜನತಾಪಕ್ಷದ ಡಿ.ಟಿ. ಜಯಕುಮಾರ್ ಎದುರು ಸೋತರು. 1999 ರಲ್ಲಿ ಹೆಜ್ಜಿಗೆ ಲಿಂಗಣ್ಣ ಅವರ ಪುತ್ರ ಶಿವಯೋಗಿ ಜೆಡಿಯು ಅಭ್ಯರ್ಥಿಯಾಗಿ ಸೋತರು.
- 1989 ರಲ್ಲಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿದ ಎಂ. ಮಹದೇವ್ ಜನತಾದಳದ ಡಿ.ಟಿ. ಜಯಕುಮಾರ್ ಅವರನ್ನು ಸೋಲಿಸಿ, ಎರಡನೇ ಬಾರಿಗೆ ಆಯ್ಕೆಯಾದರು. 1994 ರಲ್ಲಿ ಜಯಕುಮಾರ್ ಅವರು ಮಹದೇವ್ ಅವರನ್ನು ಸೋಲಿಸಿ, ಎರಡನೇ ಬಾರಿಗೆ ಆಯ್ಕೆಯಾದರು. 1999 ರಲ್ಲಿ ಮಹದೇವ್ ಅವರು ಮೂರನೇ ಬಾರಿಗೆ ಜಯಕುಮಾರ್ ಅವರನ್ನು ಸೋಲಿಸಿದರು. 2004 ರಲ್ಲಿ ಜಯಕುಮಾರ್ ಅವರು ಮಹದೇವರನ್ನು ಮೂರನೇ ಬಾರಿಗೆ ಸೋಲಿಸಿದರು. ಈ ಇಬ್ಬರೂ ಮಂತ್ರಿಗಳಾಗಿ ಕೆಲಸ ಮಾಡಿದ್ದಾರೆ.
- 2008 ರಲ್ಲಿ ಕ್ಷೇತರದ ಮೀಸಲಾತಿ ಸಾಮಾನ್ಯ ವರ್ಗದಿಂದ ಪ.ಜಾತಿಗೆ ಬದಲಾಯಿತು. 2008 ಹಾಗೂ 2013 ರಲ್ಲಿ ವಿ. ಶ್ರೀನಿವಾಸಪ್ರಸಾದ್ ಗೆದ್ದರು. ಮೊದಲ ಬಾರಿ ಬಿಜೆಪಿಯ ಎಸ್. ಮಹದೇವಯ್ಯ ವಿರುದ್ಧ 700 ಪ್ಲಸ್ ಮತಗಳಿಂದ ಗೆದ್ದರು. ಎರಡನೇ ಬಾರಿ ಜೆಡಿಎಸ್‌ನ ಕಳಲೆ ಕೇಶವಮೂರ್ತಿ ವಿರುದ್ಧ ಗೆಲವು ಸಾಧಿಸಿ, ಸಿದ್ದರಾಮಯ್ಯ ಸಂಪುಟದಲ್ಲಿ ಕಂದಾಯ ಮಂತ್ರಿಯಾದರು.
- ಸಚಿವ ಸಂಪುಟದಿಂದ ಕೈಬಿಟ್ಟಿದ್ದನ್ನು ವಿರೋಧಿಸಿ, ಕಾಂಗ್ರೆಸ್ ಹಾಗೂ ಶಾಸಕ ಸ್ಥಾನಕ್ಕೆ ಶ್ರೀನಿವಾಸಪ್ರಸಾದ್ ರಾಜೀನಾಮೆ ನೀಡಿ, ಬಿಜೆಪಿ ಸೇರಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕಳಲೆ ಕೇಶವಮೂರ್ತಿ ಎದುರು ಸೋತರು.
ಈವರೆಗೆ ಗೆದ್ದವರು
ಹೆಜ್ಜಿಗೆ ಎಂ. ಲಿಂಗಣ್ಣ, ಎನ್. ರಾಚಯ್ಯ, ಎಂ. ಮಹದೇವ್, ಡಿ.ಟಿ. ಜಯಕುಮಾರ್, ವಿ. ಶ್ರೀನಿವಾಸಪ್ರಸಾದ್, ಕಳಲೆ ಕೇಶವಮೂರ್ತಿ, ಬಿ. ಹರ್ಷವರ್ಧನ
ಸಾಮಾನ್ಯ ಕ್ಷೇತ್ರವಾಗಿದ್ದಾಗ...
1952- ದ್ವಿಸದಸ್ಯ ಕ್ಷೇತ್ರ- ಹೆಜ್ಜಿಗೆ ಲಿಂಗಣ್ಣ (ಪಕ್ಷೇತರ), ಎಂ. ಮಾದಯ್ಯ (ಕಾಂಗ್ರೆಸ್)
1957- ಪಿ. ಮಹದೇವಯ್ಯ (ಕಾಂಗ್ರೆಸ್)
1957- (ಉಪ ಚುನಾವಣೆ)- ಜೆ.ಬಿ. ಮಲ್ಲಾರಾಧ್ಯ (ಪಿಎಸ್ಪಿ)
1962- ಎನ್. ರಾಚಯ್ಯ (ಕಾಂಗ್ರೆಸ್)
1967- ಎಲ್. ಶ್ರೀಕಂಠಯ್ಯ (ಪಕ್ಷೇತರ)
1972- ಕೆ.ಬಿ. ಶಿವಯ್ಯ (ಕಾಂಗ್ರೆಸ್)
1978- ಕೆ.ಬಿ. ಶಿವಯ್ಯ (ಇಂದಿರಾ ಕಾಂಗ್ರೆಸ್)
1983- ಎಂ. ಮಹದೇವ್ (ಕಾಂಗ್ರೆಸ್)
1985- ಡಿ.ಟಿ. ಜಯಕುಮಾರ್ (ಜನತಾಪಕ್ಷ)
1989- ಎಂ. ಮಹದೇವ್ (ಕಾಂಗ್ರೆಸ್)
1994- ಡಿ.ಟಿ. ಜಯಕುಮಾರ್ (ಜನತಾದಳ)
1999- ಎಂ. ಮಹದೇವ್ (ಕಾಂಗ್ರೆಸ್)
2004- ಡಿ.ಟಿ. ಜಯಕುಮಾರ್ (ಜೆಡಿಎಸ್)
ಪ.ಜಾತಿ ಮೀಸಲು ಕ್ಷೇತ್ರವಾದ ನಂತರ
2008- ವಿ. ಶ್ರೀನಿವಾಸಪ್ರಸಾದ್ (ಕಾಂಗ್ರೆಸ್)
2013- ವಿ. ಶ್ರೀನಿವಾಸಪ್ರಸಾದ್ (ಕಾಂಗ್ರೆಸ್)
2017- (ಉಪ ಚುನಾವಣೆ)- ಕಳಲೆ ಎನ್. ಕೇಶವಮೂರ್ತಿ (ಕಾಂಗ್ರೆಸ್)
2018- ಬಿ. ಹರ್ಷವರ್ಧನ (ಬಿಜೆಪಿ)