ಹಣ ದುರ್ಬಳಕೆ: 6 ಅಧಿಕಾರಿಗಳ ಮೇಲೆ ತೂಗುಕತ್ತಿ..!

By Kannadaprabha News  |  First Published Jul 23, 2023, 9:45 PM IST

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರಿಂದ ಷೋಕಾಸ್‌ ನೊಟೀಸ್‌, ಹಾಲಿ ಡಿಡಿ, ಹಿಂದಿನ ಡಿಡಿ, ಸಿಡಿಪಿಒ ನಾಗೇಶ್‌ಗೆ ನೋಟೀಸ್‌


ಎನ್‌. ನಾಗೇಂದ್ರಸ್ವಾಮಿ

ಕೊಳ್ಳೇಗಾಲ(ಜು.23): ಜಿಲ್ಲೆಯ 50ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ನಿವೃತ್ತಿ ನಂತರ ಪಡೆಯಬೇಕಿರುವ ಎನ್‌ಪಿಎಸ್‌ ಸ್ಕೀಂ ಯೋಜನೆಯ 66ಲಕ್ಷಕ್ಕೂ ಅ​ಧಿಕ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿ​ಸಿದಂತೆ ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತಾಳಿರುವ ಹಿರಿಯ ಹಾಗೂ ಕಿರಿಯ ಅ​ಧಿಕಾರಿಗಳ ಬೇಜವಾಬ್ದಾರಿತನಕ್ಕೆ ಚಾಟಿ ಬೀಸುವ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರು ಷೋಕಾಸ್‌ ನೋಟಿಸ್‌ ಜಾರಿಗೊಳಿಸಿ, ಈ ಪ್ರಕರಣದಲ್ಲಿ ಮೂರು ದಿನದೊಳಗೆ ಸಮಜಾಯಿಸಿ ನೀಡದಿದ್ದಲ್ಲಿ ಕರ್ತವ್ಯ ಲೋಪದಡಿ ನಿಮ್ಮನ್ನೇ ಹೊಣೆಗಾರರನ್ನಾಗಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Tap to resize

Latest Videos

undefined

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಚಾ.ನಗರ ಉಪನಿರ್ದೇಶಕಿ ಗೀತಾಲಕ್ಷ್ಮಿ, ಕೊಳ್ಳೇಗಾಲದ ಹಿಂದಿನ ಸಿಡಿಪಿಒ ನಾಗೇಶ್‌, ಹಿಂದಿನ ಉಪನಿರ್ದೇಶಕ ಬಸವರಾಜು, ಚಾ.ನಗರದ ಹಿಂದಿನ ಸಿಡಿಪಿಒ ಮುಕ್ತರ್‌, ಗುಂಡ್ಲುಪೇಟೆ ಸಿಡಿಪಿಒ ಹೇಮಾವತಿ, ಯಳಂದೂರು ಸಿಡಿಪಿಒ ಜಯಶೀಲ ಒಳಗೊಂಡಂತೆ ಆರು ಮಂದಿಗೆ ನೋಟಿಸ್‌ ಜಾರಿಗೊಳಿಸಿರುವ ನಿರ್ದೇಶಕರು ಮೂರು ದಿನಗಳೊಳಗೆ ಸಮಜಾಯಿಸಿ ನೀಡದಿದ್ದಲ್ಲಿ ಕರ್ತವ್ಯ ಲೋಪ ಪ್ರಶ್ನಿಸಿ ಈ ಪ್ರಕರಣದಲ್ಲಿ ನಿಮ್ಮನ್ನೆ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಮೊರಾರ್ಜಿ ಶಾಲೆಗೆ ಶಾಸಕ ಗಣೇಶ್‌ಪ್ರಸಾದ್‌ ಭೇಟಿ: ವಿದ್ಯಾರ್ಥಿಗಳಿಂದ ದೂರಿನ ಸುರಿಮಳೆ

66ಲಕ್ಷ ದುರ್ಬಳಕೆ ಗಮನಕ್ಕೆ ಬಂದಿದೆ

ಕಚೇರಿಯ ನಿವೃತ್ತ ಅಧೀಕ್ಷಕ ಗಿರೀಶ್‌ ಎನ್‌ಪಿಎಸ್‌ ಹಣ ತಮ್ಮ ಖಾತೆಗೆ ಇಲಾಖೆ ಪಾಸ್‌ವರ್ಡ್‌ ಬಳಸಿ ದುರ್ಬಳಕೆ ಮಾಡಿಕೊಂಡಿರುವುದು, ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಕೆಲವು ಅಂಗನವಾಡಿ ಕಾರ್ಯಕರ್ತೆಯರ ಹಣ ಬೇರೆಯವರ ಖಾತೆಗೆ ವರ್ಗಾವಣೆ ಮಾಡಲಾಗಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ವಿಚಾರದಲ್ಲಿ ಹಣ ದುರ್ಬಳಕೆಗೆ ಕಾರಣಗಳೇನು, ಇದರಲ್ಲಿ ನಿಮ್ಮ ಜವಾಬ್ದಾರಿ ಏನು ಎಂದು ಪ್ರಶ್ನಿಸಿರುವ ನಿರ್ದೇಶಕರು, ಈ ಪ್ರಕರಣದಲ್ಲಿ ಸರಿಯಾದ ರೀತಿ ಕ್ರಮ ಕೈಗೊಳ್ಳಬೇಕಾದ ನೀವು ಕೇವಲ ಮಾರ್ಗದರ್ಶನ ಮಾಡಿ ನುಣುಚಿಕೊಳ್ಳುತ್ತಿದ್ದೀರಿ, ಇದು ಸರಿಯಾದ ಕ್ರಮವಲ್ಲ ಎಂದು ನೋಟಿಸ್‌ನಲ್ಲಿ ಚಾಟಿ ಬೀಸಿದ್ದಾರೆ.

ಪಾಸ್‌ವರ್ಡ್‌ ಬಳಸಲು ಹೇಗೆ ಸಾಧ್ಯವಾಯಿತು?

ಗಿರೀಶ್‌ ಎಂಬ ನೌಕರ ನಿವೃತ್ತಿ ನಂತರವೂ ಉಪನಿರ್ದೇಶಕರಿಗೆ ಮಾತ್ರ ಮೀಸಲಾಗಿರುವ ಎನ್‌ಪಿಎಸ್‌ ಪಾಸ್‌ವರ್ಡ್‌ ಬಳಸಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿರುವ ನಿರ್ದೇಶಕರು, ಈ ವಿಚಾರದಲ್ಲಿ ಸಮಂಜಸ ಮಾಹಿತಿ ನೀಡಿಲ್ಲ, ಹಣ ಬೇರೆ ಬೇರೆಯವರ ಖಾತೆಗೆ ವರ್ಗವಾದರೂ ಕ್ರಮಕೈಗೊಳ್ಳದೆ ಗಮನಿಸದೆ ನಿರ್ಲಕ್ಷ್ಯ ಪ್ರದರ್ಶಿಸಿರುವುದು ಖಂಡನೀಯ.

ಜಿಲ್ಲಾ ಹಂತದಲ್ಲಿ ಈ ರೀತಿ ಹಣ ದುರ್ಬಳಕೆಯಾಗಲು ಕಾರಣಗಳೇನು, ಈ ಕುರಿತು ನೀವು ಕೈಗೊಂಡ ಕ್ರಮಗಳೇನು? ಈ ಕುರಿತು ವರದಿ ನೀಡಬೇಕಾದ ನೀವು ಇಲಾಖೆಗೆ ಕೇವಲ ಮಾರ್ಗದರ್ಶಕರಾಗಿರುವುದು, ಅದೇ ರೀತಿ ಪ್ರಸ್ತಾವನೆ ಸಲ್ಲಿಸಿರುವುದು ಆಕ್ಷೇಪಾರ್ಹ ಎಂದು ನೋಟಿಸ್‌ನಲ್ಲಿ ಚಾಟಿ ಬೀಸಿದ್ದಾರೆ.

ಒಂದೇ ಹೆಸರಿನ 2 ಗ್ರಾಮ: ‘ಗೃಹಲಕ್ಷ್ಮಿ’ಗೆ ಸಂಕಟ..!

ಬೇಜವಾಬ್ದಾರಿತನ, ಸರ್ಕಾರದ ಬೊಕ್ಕಸಕ್ಕೆ ನಷ್ಟ

ಎನ್‌ಪಿಎಸ್‌ ಹಣ ದುರ್ಬಳಕೆ ವಿಚಾರದಲ್ಲಿ ಬೇಜವಾಬ್ದಾರಿ ವರ್ತನೆ ಹಾಗೂ ನಿರ್ಲಕ್ಷ್ಯದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ವುಂಟಾಗಿದೆ. ಇದರಿಂದ 50ಕ್ಕೂ ಹೆಚ್ಚು ಮಂದಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸಂಕಷ್ಟ ಅನುಭವಿಸುವಂತಾಗಿದೆ. ನಿಮ್ಮ ನಡವಳಿಕೆಯನ್ನು ಇಲಾಖೆ ತೀವ್ರತರದ ಕರ್ತವ್ಯಲೋಪವೆಂದು ಪರಿಗಣಿಸಿ ತಮ್ಮ ವಿರುದ್ಧ ಏಕೆ ಶಿಸ್ತು ಕ್ರಮಕೈಗೊಳ್ಳಬಾರದು ಎಂದು ಷೋಕಾಸ್‌ ನೋಟಿಸ್‌ನಲ್ಲಿ ಉಲ್ಲೇಖಿಸಿರುವ ನಿರ್ದೇಶಕರು, ಮೂರು ದಿನದೊಳಗೆ ಎನ್‌ಪಿಎಸ್‌ ಹಣ ದುರ್ಬಳಕೆಗೆ ಕಾರಣಗಳೇನು? ಹಾಗೂ ದುರ್ಬಳಕೆ ಹಣ ಹಿಂಪಡೆಯಲು ಕೈಗೊಂಡ ಕ್ರಮಗಳೇನು ಎಂಬ ಸೂಕ್ತ ಸಮಜಾಯಿಸಿ ಒದಗಿಸಬೇಕು. ಇಲ್ಲದಿದ್ದಲ್ಲಿ ನಿಮ್ಮ ಬಳಿ ಯಾವುದೆ ವಿವರಣೆ ಇಲ್ಲವೆಂದು ಪರಿಗಣಿಸಿ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಹಗರಣ 1 ಕೋಟಿ ದಾಟುವ ಸಾಧ್ಯತೆ

ಎನ್‌ಪಿಎಸ್‌ ಹಗರಣ ಸಮರ್ಪಕ ತನಿಖೆಯಾದಲ್ಲಿ 1 ಕೋಟಿ ದಾಟುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ನಿವೃತ್ತ ನೌಕರ ಗಿರೀಶ್‌ ಎಂಬುವರನ್ನು ಈ ಪ್ರಕರಣದಲ್ಲಿ ಬಂಧಿ​ಸಲಾಗಿದೆ. ಆದರೆ, ಉಪನಿರ್ದೇಶಕರ ಅ​ಧೀನದಲ್ಲಿರಬೇಕಾದ ಪಾಸ್‌ವರ್ಡ್‌ ನಿವೃತ್ತಿ ನಂತರ ಆತ ಬಳಸುತ್ತಿದ್ದರೂ ಹಿರಿಯ ಅ​ಧಿಕಾರಿಗಳು ಗಮನಹರಿಸದಿದ್ದುದೇ ಪ್ರಮುಖ ಕಾರಣ. ಈಗಾಗಲೇ ಅವ್ಯವಹಾರದ ಪ್ರಮಾಣದ 66ಲಕ್ಷ ಮೀರಿದ್ದು, ಹೆಚ್ಚಿನ ತನಿಖೆ ನಡೆದಲ್ಲಿ 1 ಕೋಟಿ ಮೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈಗಾಗಲೇ ನೊಂದ ಕಾರ್ಯಕರ್ತೆ ಸುಂದ್ರಮ್ಮ ಈ ಸಂಬಂಧ 50 ಮಂದಿ ಕಾರ್ಯಕರ್ತೆಯರ ಸ್ಥಿತಿ ಚಿಂತಾಜನಕವಾಗಿದ್ದು ನನ್ನ ಮೊತ್ತ 1ಲಕ್ಷ ದುರ್ಬಳಕೆಯಾಗಿದೆ. ಬದುಕಿರುವ ನನ್ನನ್ನು ಮರಣಹೊಂದಿದಂತೆ ತೋರಿಸಿ ದುರ್ಬಳಕೆ ಮಾಡಿಕೊಡಲಾಗಿದೆ, ನ್ಯಾಯ ಒದಗಿಸಿ ಎಂದು ಲಿಖಿತ ದೂರು ನೀಡಿರುವುದು ನಾನಾ ಚರ್ಚೆಗೆ ಗ್ರಾಸವಾಗಿದೆ. ಹಿರಿಯ ಅ​ಧಿಕಾರಿಗಳು, ಕಾರ್ಯಕರ್ತೆಯರೇ ಹೇಳುವ ಪ್ರಕಾರ ಸಮರ್ಪಕ ತನಿಖೆಯಾದಲ್ಲಿ ಈ ದುರ್ಬಳಕೆ ಹಣದ ಪ್ರಮಾಣ ಕೋಟಿ ಮೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

click me!