ಗದಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಆಗಸ್ಟ್ 31 ರಂದೇ ನೊಟೀಸ್| ಶಿರಹಟ್ಟಿ, ಮುಂಡರಗಿ ತಾಲೂಕು ವ್ಯಾಪ್ತಿಯ 14 ಕಲ್ಲು ಗಣಿಗಾರಿಕೆ ಸ್ಥಗಿತಕ್ಕೆ ನೊಟೀಸ್| ಹೆಸರಲ್ಲಿ ಕೆಲ ಕ್ವಾರಿಗಳು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿ ಲೂಟಿ ನಡೆಸಿವೆ|
ಶಿವಕುಮಾರ ಕುಷ್ಟಗಿ
ಗದಗ(ಅ.01): ವನ್ಯಜೀವಿಧಾಮ ಎಂದು ಘೋಷಿಸಲ್ಪಟ್ಟ ಗದಗ ಜಿಲ್ಲೆಯ ಕಪ್ಪತಗುಡ್ಡ ಪ್ರದೇಶದ 1 ಕಿ.ಮೀ. ವ್ಯಾಪ್ತಿಯಲ್ಲಿರುವ 14 ಕಲ್ಲು ಕ್ವಾರಿಗಳನ್ನು ಕೂಡಲೇ ಸ್ಥಗಿತಗೊಳಿಸುವಂತೆ ಗದಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ನೊಟೀಸ್ ನೀಡಲಾಗಿದೆ.
ಜಿಲ್ಲೆಯ ಶಿರಹಟ್ಟಿ ಹಾಗೂ ತಾಲೂಕಿನ ವರವಿ, ಛಬ್ಬಿ, ಮಾಗಡಿ, ಅಕ್ಕಿಗುಂದಿ, ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ, ಸಿಂಗಟಾಲೂರು ವ್ಯಾಪ್ತಿಯ ವನ್ಯಜೀವಿಧಾಮದ 1 ಕಿ.ಮೀ. ವ್ಯಾಪ್ತಿಗೆ ಬರುವ 14 ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಕಳೆದ ಆಗಸ್ಟ್ 31 ರಂದೇ ನೊಟೀಸ್ ನೀಡಲಾಗಿದ್ದು, ಇದರಿಂದ ಎಗ್ಗಿಲ್ಲದೇ ಗುಡ್ಡ, ಭೂಮಿಗಳು ಬಗೆದು ಲೂಟಿ ಮಾಡಿದ ಪ್ರಭಾವಿ ಗಣಿ ಕುಳಗಳ ಎದೆ ಬಡಿತ ಹೆಚ್ಚಾಗಿದೆ.
ಉತ್ತರ ಕರ್ನಾಟಕದ ಸಹ್ಯಾದ್ರಿಯಲ್ಲಿ ಸಾಕಷ್ಟು ಕಲ್ಲು ಗಣಿಗಾರಿಕೆ ಕ್ವಾರಿಗಳು ಇವೆ. ಇದರಲ್ಲಿ ಸಕ್ರಮವೂ ಇವೆ ಹಾಗೂ ಅಕ್ರಮ ಕ್ವಾರಿಗಳೂ ಇವೆ. ಆದರೆ, ಕಪ್ಪತ್ತಗುಡ್ಡ ವನ್ಯಜೀವಿಧಾಮವಾಗಿ ಘೋಷಣೆ ಆಗಿರುವುದರಿಂದ ಗಣಿ ಇಲಾಖೆಯಿಂದ ಅನುಮತಿ ಪಡೆದ ಕಲ್ಲು ಗಣಿಗಾರಿಕೆ ಕ್ವಾರಿಗಳಿಗೂ ಕಂಟಕ ಎದುರಾಗಿದ್ದು, ಕ್ವಾರಿಗಳನ್ನು ನಂಬಿಯೇ ಕೋಟಿ ಕೋಟಿ ಹಣ ಹೂಡಿಕೆ ಮಾಡಿ ಕ್ರಷರ್ ಘಟಕಗಳನ್ನು ಹಾಕಿರುವ ಗುತ್ತಿಗೆದಾರರಿಗೆ ಕಂಟಕ ಎದುರಾಗಿದೆ.
ಗದಗ: ಕಪ್ಪತಗುಡ್ಡದಿಂದ ಅಕ್ರಮ ಅದಿರು ಸಾಗಾಟ?
ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡ ಪ್ರದೇಶದಲ್ಲಿ ಅಮೂಲ್ಯ ಪಂಚ ಖನಿಜಗಳು ಇವೆ. ಈ ಹಿನ್ನೆಲೆಯಲ್ಲಿ ಪ್ರಭಾವಿ ಗಣಿ ಕುಳಗಳ ಕೆಂಗಣ್ಣಿಗೆ ಗುರಿಯಾಗಿದೆ. ಅದಕ್ಕಾಗಿ ಮಠಾಧೀಶರು, ಪರಿಸರವಾದಿಗಳು ನಿರಂತರ ಹೋರಾಟ ಮಾಡಿ ಕಪ್ಪತ್ತಗುಡ್ಡ ವನ್ಯಜೀವಿ ಧಾಮವಾಗಿ ಘೋಷಣೆಯಾಗಿದೆ. ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯ ವರ್ಷದ ಹಿಂದೆಯೇ ಈ ಕ್ರಮ ಕೈಗೊಳ್ಳಲು ಆದೇಶ ಮಾಡಿತ್ತು. ಆದರೆ, ಜಿಲ್ಲೆಯಲ್ಲಿ ಈಗ 1 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಎಲ್ಲ ಗಣಿಗಾರಿಕೆ ಸ್ಥಗಿತಗೊಳಿಸಲು ಜಿಲ್ಲಾ ಟಾಸ್ಕ್ ಫೋರ್ಸ್ ಗಣಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದೆ. ಹೀಗಾಗಿ ಸಭೆಯ ನಿರ್ಧಾರದಂತೆ ಗಣಿ ಇಲಾಖೆ ನೋಟಿಸ್ ನೀಡಿದೆ.
ಸಕ್ರಮ ಕ್ವಾರಿಗಳು ಇದ್ದರೂ ಸಾಕಷ್ಟುಕಾನೂನಿನ ಮಿತಿ ಮೀರಿ ಕಲ್ಲು ಲೂಟಿ ಮಾಡಿ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿರುವ ಆರೋಪವೂ ಇದೆ. ಈ ಮಧ್ಯೆಯೇ ಒತ್ತಡ, ಪ್ರಭಾವದ ನಡುವೆ ಕಪ್ಪತ್ತಗುಡ್ಡದ ಪರಿಸರಕ್ಕೆ ಹಾನಿ ಮಾಡುವ ಕಲ್ಲಿನ ಕ್ವಾರಿಗಳ ಸ್ಥಗಿತಕ್ಕೆ ನೊಟೀಸ್ ನೀಡಿರುವುದು ಕಪ್ಪತಗುಡ್ಡ ಉಳಿವಿಗೆ ಹೋರಾಟ ನಡೆಸಿರುವ ಹೋರಾಟಗಾರರಿಗೆ ಸಂತಸ ತಂದಿದೆ.
ನೋಟೀಸ್‌ನಲ್ಲೇನಿದೆ?
ಸರ್ಕಾರದ ಆದೇಶದಂತೆ ಕಪ್ಪತಗುಡ್ಡವನ್ನು ವನ್ಯ ಜೀವಿಧಾಮ ಎಂದು ಘೋಷಿಸಲಾಗಿದೆ. ಕೇಂದ್ರ ಸರ್ಕಾರದ ಪರಿಸರ ಇಲಾಖೆಯ ಆಗಸ್ಟ್ 8, 2019ರ ವಿಜ್ಞಾಪನಾ ಪತ್ರದನ್ವಯ ಕಪ್ಪತಗುಡ್ಡ ವನ್ಯಜೀವಿಧಾಮದ ಗಡಿಯಿಂದ 1 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಮಾಡಲು ನಿರ್ಬಂಧವಿರುತ್ತದೆ. ಈ ಹಿನ್ನೆಲೆಯಲ್ಲಿ ಗಣಿಯನ್ನು ಸ್ಥಗಿತಗೊಳಿಸಲು ಅವಧಿ ನೀಡಿ ಗಣಿ ಗುತ್ತಿಗೆದಾರರಿಗೆ ನೊಟೀಸ್ ನೀಡಲಾಗಿದೆ. 14 ಘಟಕಗಳು ಪ್ರಭಾವಿ ಶಾಸಕರ ಸಂಬಂಧಿಕರು, ಪ್ರಭಾವಿ ವ್ಯಕ್ತಿಗಳಿಗೆ ಸೇರಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಮೇಲೆ ಒತ್ತಡ ಹಾಕಿ ಇಲ್ಲಿಯವರೆಗೆ ನಡೆಯುತ್ತಿವೆ. ಇವರು ಮುಂದೇನು ಮಾಡುತ್ತಾರೆ ಎಂಬುದೇ ಪ್ರಶ್ನೆಯಾಗಿದೆ.
ಶಿರಹಟ್ಟಿ: ಕಪ್ಪತ್ತಗುಡ್ಡ ವನ್ಯ ಜೀವಿಧಾಮ ಹಿಂಪಡೆದರೆ ಉಗ್ರ ಹೋರಾಟ
ಸರ್ಕಾರದ ಮಟ್ಟದಲ್ಲಿ ಲಾಬಿ?:
ಹಿಂದಿನಿಂದಲೂ ಕಪ್ಪತಗುಡ್ಡ ಉಳಿಸಲು ಅನೇಕ ಹೋರಾಟಗಾರರು ಹೋರಾಟ ಮಾಡುತ್ತಿದ್ದರೂ ಕಲ್ಲು ಗಣಿಗಾರಿಕೆ ಕ್ವಾರಿಗಳು ನಾಯಿ ಕೊಡೆಯಂತೆ ತಲೆ ಎತ್ತಿದ್ದು, ಸಕ್ರಮದ ಹೆಸರಲ್ಲಿ ಕೆಲ ಕ್ವಾರಿಗಳು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿ ಲೂಟಿ ನಡೆಸಿದ್ದಾರೆ. ಆದರೆ ಈಗ ಜಿಲ್ಲಾಡಳಿತ ಕಲ್ಲು ಗಣಿ ಕುಳಗಳಿಗೆ ಗಣಿಗಾರಿಗೆ ನಿಲ್ಲಿಸುವಂತೆ ನೋಟಿಸ್ ನೀಡಿದ್ದು, ಇದರಿಂದ ಗಣಿ ಗುತ್ತಿಗೆ ಪಡೆದವರು ಶತಾಯಗತಾಯ ಕಲ್ಲು ಕ್ವಾರಿ ಉಳಿಸಿಕೊಳ್ಳಲು ಸರ್ಕಾರದ ಮಟ್ಟದಲ್ಲಿ ಭಾರಿ ಲಾಬಿ ನಡೆಸಿದ್ದು, ಇದಕ್ಕೆ ಅವಕಾಶ ಕೊಡಬಾರದು ಎಂದು ಕಪ್ಪತಗುಡ್ಡ ಹೋರಾಟಗಾರರು ಎಚ್ಚರಿಸಿದ್ದಾರೆ.
ಆಗಸ್ಟ್ 10, 2020ರಂದು ನಡೆದ ಗದಗ ಜಿಲ್ಲಾ ಟಾಸ್ಕ್‌ಫೋರ್ಸ್ (ಗಣಿ) ಸಮಿತಿ ಸಭೆಯಲ್ಲಿ ನಿರ್ಧರಿಸಿದಂತೆ ಸರ್ಕಾರದ ಜ್ಞಾಪನಾ ಪತ್ರದನ್ವಯ ಕಪ್ಪತಗುಡ್ಡ ವನ್ಯಜೀವಿಧಾಮದ 1 ಕಿ.ಮೀ. ವ್ಯಾಪ್ತಿಯಲ್ಲಿ ಇರುವ ಕಲ್ಲು ಗಣಿಗಾರಿಕೆಗಳನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಬೇಕಾಗಿರುವುದರಿಂದ 14 ಗಣಿ ಗುತ್ತಿಗೆದಾರರಿಗೆ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ನೊಟೀಸ್ ನೀಡಲಾಗಿದೆ ಎಂದು ಗದಗದ ಗಣಿ ಇಲಾಖೆಯ ಹಿರಿಯ ಭೂ ವಿಜ್ಞಾನಿ ರಾಜೇಶ ಅವರು ತಿಳಿಸಿದ್ದಾರೆ.