ಕಲಬುರಗಿ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರ ಮೆರವಣಿಗೆ ದಾರಿ ಯಾವುದಯ್ಯ?

By Kannadaprabha News  |  First Published Jan 30, 2020, 12:16 PM IST

ಎಚ್‌ಎಸ್‌ವಿ ಮೆರವಣಿಗೆ ಮಾಡುವ ದಾರಿ ಇನ್ನೂ ನಿಗದಿ ಇಲ್ಲ | ಸಮ್ಮೇಳನ ದಾರಿ 3 ಕಿ.ಮೀ. ಮಿತಿ ಮೀರದಂತೆ ಡಿಸಿಎಂ ಗೋವಿಂದ ಕಾರಜೋಳ್ ತಾಕೀತು | ಜನಾಗ್ರಹದ ಸಂಗತಿ ಸ್ವಾಗತ ಸಮಿತಿ ಗಮನಕ್ಕೆ ತರುವೆ: ಜಿಲ್ಲಾಧಿಕಾರಿ ಶರತ್ ಬಿ|


ಶೇಷಮೂರ್ತಿ ಅವಧಾನಿ 

ಕಲಬುರಗಿ(ಜ.30): ಕಲಬುರಗಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನೇನು ಆರೇ ದಿನ, ಆದರೆ ಸಮ್ಮೇಳನದ ಮುಖ್ಯ ಘಟ್ಟ ಎಂದೇ ಬಣ್ಣಿಸಲಾಗುವ ಸರ್ವಾಧ್ಯಕ್ಷ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಕುಳ್ಳಿರಿಸಿ ನಡೆಸುವ ಮೆರವಣಿಗೆ ದಾರಿಯೇ ಇನ್ನೂ ನಿಗದಿಯಾಗಿಲ್ಲ. 

Tap to resize

Latest Videos

undefined

ಕಲಬುರಗಿ ಮಟ್ಟಿಗೆ ಗಂಜ್ ಪ್ರದೇಶದಲ್ಲಿರುವ ನಗರೇಶ್ವರ ಶಾಲೆ ಆವರಣವೇ ಎಲ್ಲ ಪ್ರಮುಖ ಮೆರವಣಿಗೆಗೆ ಆರಂಭದ ಸ್ಥಳ. ಕನ್ನಡ ರಾಜ್ಯೋತ್ಸವ ಮೆರವಣಿಗೆ ಶುರುವಾಗೋದು ಇಲ್ಲಿಂದಲೇ. ಕಲಬುರಗಿ ಕಂಡ 1987 ರ 58ನೇ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷ ಸಿದ್ದಯ್ಯ ಪುರಾಣಿಕರನ್ನು ಹೊತ್ತ ಅದ್ಧೂರಿ ಮೆರವಣಿಗೆ ಶುರುವಾಗಿದ್ದು ಇಲ್ಲಿಂದಲೆ. ಆದರೆ 85ನೇ ಸಾಹಿತ್ಯ ಸಮ್ಮೇಳನದ ಮೆರವಣಿಗೆಗೆ ಮಾತ್ರ ಐತಿಹಾಸಿಕ ನಗರೇಶ್ವರ ಶಾಲಾ ಆವರಣ ಬೇಡದ ಕೂಸು ಎಂಬಂತಾಗಿದೆ. 

ಸಾಹಿತ್ಯ ಸಮ್ಮೇಳನಕ್ಕೆ ದಾಖಲೆ 20 ಸಾವಿರ ನೋಂದಣಿ!

ನಗರೇಶ್ವರ ಶಾಲೆಯಿಂದ ಸಮ್ಮೇಳನ ನಡೆಯುವ ಗುವಿವಿ ಜ್ಞಾನಗಂಗೆ ವರೆಗೆ ಮೆರವಣಿಗೆ ದಾರಿ 8.50 ಕಿ.ಮೀ. ದೂರವಾಗುತ್ತದೆ. ಅದಕ್ಕೆ ನಗರೇಶ್ವರ ಶಾಲೆ ಆವರಣ ಬೇಡವೇ ಬೇಡ ಎಂಬುದು ಇದಕ್ಕೆ ಜಿಲ್ಲಾಡಳಿತ ನೀಡುವ ಕಾರಣ. ಪೊಲೀಸರು ಸಹ ಈ ಮೆರವಣಿಗೆ ದಾರಿಯುದ್ದಕ್ಕೂ ಮಾರ್ಕೆಟ್, ಮುಖ್ಯರಸ್ತೆ ಇದ್ದು, ಸಂಚಾರ ತೊಂದರೆ ನಿಭಾಯಿಸೋದು ಕಷ್ಟ, ಅದಕ್ಕೇ ಈ ದಾರಿ ಬೇಡವೇ ಬೇಡ ಎಂದು ಐತಿಹಾಸಿಕ ಮೆರವಣಿಗೆ ದಾರಿಯನ್ನೇ ಅಲಕ್ಷಿಸಿರೋದು ಕನ್ನಡಾಭಿಮಾನಿಗಳಿಗೆ ಬೇಸರ ತರಿಸಿದೆ. 

ಇನ್ನೂ ಜಿಲ್ಲಾಡಳಿತ ಮುಂಚೆ ಎಸ್.ಎಂ. ಪಂಡಿತ ರಂಗ ಮಂದಿರದಿಂದ ಆರಂಭಿಸಿ ಖರ್ಗೆ ಪೆಟ್ರೋಲ್ ಬಂಕ್‌ನಿಂದ ಹೊರಳಿ ರಿಂಗ್ ರಸ್ತೆಗುಂಟ ಸಾಗಿ ಮುಂದೆ ಕುಸನೂರ್ ರಸ್ತೆ ಮೂಲಕ ಸಾಗುತ್ತ ವಿವಿ ಆವರಣದವರೆಗೂ ಮೆರವಣಿಗೆ ನಡೆಸೋದು. ಈ ದಾರಿ 6 ಕಿ.ಮೀ. ಉದ್ದವಾಗಲಿದೆ ಎಂದು ನಿರ್ಣಯಿಸಿತ್ತು. ಆದರೆ ಈ ದಾರಿಯೂ ಬೇಡ, ತುಂಬ ಉದ್ದವಾಗಲಿದೆ. ಮೆರವಣಿಗೆ ದಾರಿಯ ದೂರ ಯಾವುದೇ ಕಾರಣಕ್ಕೂ 3 ಕಿ.ಮೀ. ಮೀರೋದು ಬೇಡವೇ ಬೇಡ ಎಂದು ಡಿಸಿಎಂ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಗೋವಿಂದ ಕಾರಜೋಳ ತಾಕೀತು ಮಾಡಿದ್ದರಿಂದ ಮೆರವಣಿಗೆ ಆಕರ್ಷಣೆ ಮಂಕಾದಂತಾಗಿದೆ. 

ರಿಂಗ್ ರಸ್ತಾದಾಗ ಮೆರವಣಿಗೆ ಮಾಡಿದ್ರ ಯಾನ್ ಫಾಯ್ದಾ?:

1987 ರಲ್ಲಿ ಸಿದ್ದಯ್ಯ ಪುರಾಣಿಕರ ಮೆರವಣಿಗೆ ನಗರೇಶ್ವರ ಶಾಲೆಯಿಂದ ಸೂಪರ್ ಮಾರ್ಕೆಟ್‌ಗೆ ಬಂದಾಗ ವರ್ತಕರು, ಜನ ಸಾಮಾನ್ಯರು ಪುಳಕಿತರಾಗಿ ಸಾಹಿತಿಗಳನ್ನು ಸ್ವಾಗತಿಸಿದ್ದರು, ರಥಕ್ಕೆ ನೀರು ಹಾಕಿ ಆರತಿ ಬೆಳಗಿದ್ದರು. ಈ ನೋಟ ಕಂಡವರು ನಾವು. ಅದೇ ದಾರಿಯಲ್ಲೇ ಈ ಮೆರವಣೆಗೆ ಯಾಕೆ ಬರಬಾರದು? ದಾರಿ ದೂರವಾದರೆ ನಗರೇಶ್ವರ ಶಾಲೆಯಿಂದಲೇ ಮೆರವಣಿಗೆ ಆರಂಭಿಸಿ ಜಗತ್ ವರೆಗೂ ಹಾಗೇ ಬಂದು ನಂತರ ವಾಹನಗಳಲ್ಲಿ ತೆರಳಲಿ ಎನ್ನುತ್ತಾರೆ ಕನ್ನಡಭಿಮಾನಿ ಶಿವಶರಣಪ್ಪ ಮಾಸ್ಟರ್ ಗೋಗಿ. 

ಮುಂದುವರಿದ ಮೆರವಣಿಗೆ ದಾರಿ ಗೊಂದಲ: 

ಏತನ್ಮಧ್ಯೆ ಸಮ್ಮಳನದ ಸ್ವಾಗತ ಸಮಿತಿ ಸಂಚಾಲಕರು, ಡಿಸಿ ಶರತ್ ಒಂದು ಹೇಳಿಕೆ ನೀಡುವ ಮೂಲಕ ಅಧ್ಯಕ್ಷರ ಮೆರವಣಿಗೆ ಬಸವೇಶ್ವರ ಆಸ್ಪತ್ರೆ ಪಕ್ಕದಲ್ಲಿರುವ ಚಂದ್ರಕಾಂತ ಪಾಟೀಲ್ ಶಾಲೆ ಅಂಗಳದಿಂದ ಆರಂಭವಾಗಿ ಅಲ್ಲಿಂದಲೇ ಸಂದಿಯಲ್ಲಿ ಸಾಗುತ್ತ ಕುಸನೂರ್ ರಸ್ತೆ ತಲುಪುತ್ತದೆ ಎಂದಿದ್ದಾರೆ. 

ಕಲಬುರಗಿ ಕನ್ನಡ ಸಾಹಿತ್ಯ ಸಮ್ಮೇಳನ: 85ನೇ ನುಡಿಜಾತ್ರೆಗೆ ಕಾಣದ 58ರ ಸಂಭ್ರಮ

ಈ ಹೇಳಿಕೆ ಸಾಹಿತ್ಯಾಸಕ್ತರಲ್ಲಿ ಬೇಸರ ಮೂಡಿಸಿದೆ. ಯಾಕೆ ಕನ್ನಡ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ದಾರಿ ಬಗ್ಗೆ ಈ ಪರಿ ಗೊಂದಲ. ಕನ್ನಡಕ್ಕಾಗಿ ಜನ ನಾಲ್ಕೈದು ಕಿ.ಮೀ. ನಡೆಯೋದಿಲ್ಲವೆ? ನಡೆಯದವರು ವಾಹನ ಬಳಸಲಿ. ಸಾಂಸ್ಕೃತಿಕ ತಂಡ, ಕಲಾ ವೈಭವ, ಮಕ್ಕಳ ಸಂತಸ, ಹರುಷ ಎಲ್ಲವೂ ಇರುವಾಗ ಇದನ್ನೆಲ್ಲ ಕಣ್ತುಂಬಿಕೊಳ್ಳುವ ಅವಕಾಶ ಬಿಸಿಲೂರು ಮಂದಿಗೆ ನೀಡದಂತೆ ಸಂದುಗೊಂದಲ್ಲಿ ಯಾಕೆ ಮೆರವಣಿಗೆ ಸಾಗಬೇಕು? ಎಂದು ಜನ ಪ್ರಶ್ನಿಸುತ್ತಿದ್ದಾರೆ. ನಗರೇಶ್ವರ ಶಾಲೆಯಿಂದಲೇ ಸಮ್ಮಳನಾಧ್ಯಕ್ಷರ ಮೆರವಣಿಗೆ ಶುರುವಾಗಬೇಕು. ಅಲ್ಲಿಂದ ಜಗತ್ ವರೆಗೂ ಹಾಗೇ ಸಾಗಿ ಬರಬೇಕು. ಸಾಂಸ್ಕೃತಿಕ ತಂಡಗಳು, ಮಕ್ಕಳು ಒಳಗೊಂಡಂತೆ ಮೆರವಣಿಗೆ ಜ್ಞಾನಗಂಗೆ ಮುಖ್ಯ ಬೀದಿಯಿಂದಲೇ ಸಾಗಲಿ ಎಂಬುದು ಜನರ ಆಗ್ರಹ.

85ನೇ ಸಾಹಿತ್ಯ ಸಮ್ಮೇಳನ: ಬಹುಲಕ್ಷ ಕೊಟೇಶನ್‌ಗೆ ದಂಗಾದ ಸಚಿವ ಕಾರಜೋಳ!

ಬಸವೇಶ್ವರ ಆಸ್ಪತ್ರೆ ಮತ್ತು ಚಂದ್ರಕಾಂತ ಪಾಟೀಲ್ ಆಂಗ್ಲ ಮಾಧ್ಯಮ ಶಾಲೆಯ ಮಧ್ಯ ಸ್ಥಳದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಡಿಸಿಎಂ ಸಚಿವ ಗೋವಿಂದ ಕಾರಜೋಳ ಸಲಹೆಯಂತೆ ನಡೆಸಲಾಗುತ್ತಿದೆ. ಈ ಹಿಂದೆ ಡಾ. ಎಸ್. ಪಂಡಿತ್ ರಂಗಮಂದಿರ ಬದಲಾಗಿ ಬಸವೇಶ್ವರ ಅಸ್ಪತ್ರೆ ಮತ್ತು ಚಂದ್ರಕಾಂತ್ ಪಾಟೀಲ್ ಆಂಗ್ಲ ಮಾಧ್ಯಮ ಶಾಲೆಯ ಮಧ್ಯದ ಸ್ಥಳದಿಂದ ಹೊರಡಲು ನಿರ್ಧರಿಸಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ. ಶರತ್ ಅವರು ಹೇಳಿದ್ದಾರೆ. 

ಸಮ್ಮೇಳನಾಧ್ಯ ಕ್ಷರ ಮೆರವಣಿಗೆ ನಗರೇಶ್ವರ ಶಾಲೆ ಆವರಣ ಅಥವಾ ಪಂಡಿತ ರಂಗ ಮಂದಿರದಿಂದ ಆರಂಭವಾಗೋದು ಹೆಚ್ಚು ಸೂಕ್ತ. ಕಸಾಪದ ವರು ಕನ್ನಡ ಭವನದಿಂದ ಮೆರವಣಿಗೆ ಬಂದು ಮುಖ್ಯ ಮೆರವಣಿಗೆಗೆ ಸೇರುವ ವಿಚಾರವಿದೆ. ಆದರೆ ಈಗ ದಾರಿ ದೂರವಾಗೋದು ಬೇಡವೆಂದು ಮೆರವಣಿಗೆ ದಾರಿ ಬದಲಿಸುವ ಚಿಂತನೆ ಸಾಗಿದೆ. ಇದರಿಂದ ಸಾಮಾನ್ಯ ಜನರ ಆಶೆಗೆ ನೀರು ಹಾಕಿದಂತಾಗುತ್ತದೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ವೀರಭದ್ರ ಸಿಂಪಿ ಹೇಳಿದ್ದಾರೆ. 

ಸಾಹಿತ್ಯ ಕಲಬುರಗಿ ಸಮ್ಮೇಳನಾಧ್ಯಕ್ಷ ವೆಂಕಟೇಶ ಮೂರ್ತಿ ಮೆರವಣಿಗೆ ದಾರಿ ನಗರೇಶ್ವರ ಶಾಲೆಯೇ ಆಗಿರಬೇಕು. ಇದರಿಂದ ಕನ್ನಡ ಜನರ ಹತ್ತಿರ ಹೋಗುತ್ತದೆ. ಸಮ್ಮೇಳನದ ಬಗ್ಗೆ ನಗರವೇ ಕಂಡು ಕುಣಿದಾಡುತ್ತದೆ. ಸಮ್ಮೇಳನದ ಮುಖ್ಯ ಘಟ್ಟವೇ ಅಧ್ಯಕ್ಷರ ಮೆರವಣಿಗೆ, ಆ ವೈಭವ ಕಣ್ಣು ತುಬಿಕೊಳ್ಳುವ ಭಾಗ್ಯ ನಗರವಾಸಿಗಳಿಗೆ ಕಸಾಪ ನೀಡುವಂತಾಗಲಿ. ಸಂದು ಗೊಂದು ಬಿಟ್ಟು ಮುಖ್ಯ ಬೀದಿಯಲ್ಲೇ ಸಾಗಲಿ ಎಂದು ಕಲಬುರಗಿ ನಿವೃತ್ತ ಶಿಕ್ಷಕರು ಮಾಸ್ಟರ್ ಶಿವಶರಣಪ್ಪ ಗೋಗಿ ಅವರು ಹೇಳಿದ್ದಾರೆ. 
 

click me!