Covid-19 Vaccine Certificate: 2 ಡೋಸ್‌ ಪಡೆದಿದ್ರೂ ಸಿಗ್ತಿಲ್ಲ ಪ್ರಮಾಣಪತ್ರ..!

By Kannadaprabha News  |  First Published Dec 9, 2021, 6:14 AM IST

*    ಮೊದಲ, 2ನೇ ಡೋಸ್‌ ಪಡೆಯುವಾಗ ಜನರು ಭಿನ್ನ ಮೊಬೈಲ್‌ ಸಂಖ್ಯೆ, ವಿಳಾಸವನ್ನು ನೀಡಿದ್ದರಿಂದ ಸಮಸ್ಯೆ
*    ಮನೆ ಮನೆ ಲಸಿಕೆ ಅಭಿಯಾನ ವೇಳೆಯೂ ಗೊಂದಲ
*    ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಜನರಿಂದ ದುಂಬಾಲು
 


ರಾಕೇಶ್‌ ಎನ್‌.ಎಸ್‌.

ಬೆಂಗಳೂರು(ಡಿ.09):  ಕೋವಿಡ್‌-19(Covid19) ಲಸಿಕೆಯ ಮೊದಲ ಹಾಗೂ ಎರಡನೇ ಡೋಸ್‌ ಪಡೆಯುವ ವೇಳೆ ಭಿನ್ನ ವಿಳಾಸ ಮತ್ತು ದೂರವಾಣಿ ಸಂಖ್ಯೆ ನೀಡಿದ ಪರಿಣಾಮ ಈಗ ಲಸಿಕಾ ಪ್ರಮಾಣ(Certificate) ಪತ್ರ ಪಡೆಯಲು ಸಾಧ್ಯವಾಗದೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆರೋಗ್ಯ ಇಲಾಖೆ(Department of Health) ನಡೆಸುತ್ತಿರುವ ಮನೆ ಮನೆ ಲಸಿಕಾ ಅಭಿಯಾನ ವೇಳೆಯೂ ಇದು ಗೊಂದಲಕ್ಕೆ ಕಾರಣವಾಗಿದ್ದು, ಎರಡೂ ಡೋಸ್‌ ಪಡೆದವರ ಲೆಕ್ಕಾಚಾರದಲ್ಲಿ ಏರುಪೇರು ಉಂಟಾಗುತ್ತಿದೆ.

Tap to resize

Latest Videos

undefined

ಕೋವಿಡ್‌-19 ಮೊದಲ ಡೋಸ್‌ ಪಡೆಯುವಾಗ ನೀಡಿದ ಮಾಹಿತಿಗೂ ಎರಡನೇ ಡೋಸ್‌ ಪಡೆಯುವಾಗ ನೀಡಿದ ಮಾಹಿತಿಗೂ ತಾಳೆ ಆಗದ ಪ್ರಕರಣಗಳು ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿವೆ. ಇದರಿಂದಾಗಿ ಎರಡೂ ಡೋಸ್‌ ಪಡೆದಿದ್ದರೂ ಅದರ ಮಾಹಿತಿ ಕೋವಿನ್‌ ಪೋರ್ಟಲ್‌ನಲ್ಲಿ(CoWIN Portal) ದಾಖಲಾಗುತ್ತಿಲ್ಲ. ರಾಜ್ಯದಲ್ಲಿ ಸದ್ಯ 45 ಲಕ್ಷಕ್ಕೂ ಹೆಚ್ಚು ಮಂದಿ ಎರಡನೇ ಡೋಸ್‌ ಪಡೆಯಲು ಬಾಕಿ ಇದ್ದು, ಈ ಪೈಕಿ ಶೇ.10 ಮಂದಿ ಭಿನ್ನ ವಿಳಾಸ, ಫೋನ್‌ ನಂಬರ್‌ ನೀಡಿ ಲಸಿಕೆ ಪಡೆದಿರಬಹುದು ಎಂದು ಆರೋಗ್ಯ ಇಲಾಖೆ ಅಂದಾಜಿಸಿದೆ.

Covid Crisis In Karnataka: ಮತ್ತೊಮ್ಮೆ ಲಾಕ್ ಆಗುತ್ತಾ ರಾಜ್ಯ : ಸಿಎಂ ಶೀಘ್ರ ನಿರ್ಧಾರ

ರಾಜ್ಯದಲ್ಲಿ(Karnataka) ಆರೋಗ್ಯ ಇಲಾಖೆ ಹಾಗೂ ಕೋವಿನ್‌ ಪೋರ್ಟಲ್‌ನಲ್ಲಿ ನಮೂದಾಗಿರುವುದಕ್ಕಿಂತ ಹೆಚ್ಚು ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ. ಆದರೆ ಅವರ ಮಾಹಿತಿಯನ್ನು ತಾಂತ್ರಿಕ ಕಾರಣದಿಂದ ಪರಿಗಣಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಕೋವಿನ್‌ನಲ್ಲಿ ದಾಖಲಾಗುತ್ತಿರುವ ಎರಡನೇ ಡೋಸ್‌ ಪಡೆದವರ ಪ್ರಮಾಣಕ್ಕೂ ನೈಜವಾಗಿ ಲಸಿಕೆ ಪಡೆದವರ ಸಂಖ್ಯೆಗೂ ವ್ಯತ್ಯಾಸ ಕಂಡು ಬರುತ್ತಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ಎರಡನೇ ಡೋಸ್‌ ಲಸಿಕೆ ಪಡೆದಿದ್ದರೂ ಲಸಿಕೆ(Vaccine) ಪಡೆಯುವಂತೆ ಸರ್ಕಾರದಿಂದ ಫೋನ್‌ ಕರೆ, ಎಸ್‌ಎಂಎಸ್‌(SMS) ಸಂದೇಶ ರವಾನೆಯಾಗುತ್ತಲೇ ಇವೆ. ಹಾಗೆಯೇ ಲಸಿಕೆ ಅಭಿಯಾನದ ಕಾರ್ಯಕರ್ತರು ಮನೆಮನೆ ಭೇಟಿ ನೀಡುವ ಸಂದರ್ಭದಲ್ಲಿ ಇಂತಹ ಪ್ರಕರಣಗಳು ಗೊಂದಲಕ್ಕೆ ಕಾರಣವಾಗುತ್ತಿವೆ. ಇದರ ಜೊತೆಗೆ ಇದೀಗ ಸರ್ಕಾರ ಕೆಲ ಜಾಗಗಳಿಗೆ ಪೂರ್ಣ ಲಸಿಕೆಯ ಪ್ರಮಾಣ ಪತ್ರ ಹೊಂದಿಲ್ಲದವರ ಪ್ರವೇಶವನ್ನು ನಿಷೇಧಿಸಿರುವುದು ಇವರಲ್ಲಿ ಆತಂಕ ಮೂಡಿಸಿದೆ. ಹೀಗಾಗಿ ಈ ಸಮಸ್ಯೆಯನ್ನು ಪರಿಹರಿಸುವಂತೆ ಆರೋಗ್ಯ ಇಲಾಖೆಗೆ ಜನರು ದುಂಬಾಲು ಬೀಳುತ್ತಿದ್ದಾರೆ.

Covid 19 Vaccine: ರಾಜ್ಯದ ಪಾಸಿಟಿವಿಟಿ ದರ ದಕ್ಷಿಣ ಭಾರತದಲ್ಲೇ ಕಮ್ಮಿ..!

ರಾಷ್ಟ್ರೀಯ ಲಸಿಕಾ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್‌ ಅವರು, ಇಂತಹ ಅನೇಕ ದೂರುಗಳು ನಮ್ಮ ಗಮನಕ್ಕೆ ಬಂದಿವೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರವೇ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳುತ್ತಾರೆ.
ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಇಂತಹ ಶೇ.10 ಪ್ರಕರಣಗಳಿರಬಹುದು ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ. ಆದರೆ ಇಂತಹ ಪ್ರಕರಣಗಳ ನಿಖರ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದೇವೆ. ಭಿನ್ನ ವಿಳಾಸ, ಫೋನ್‌ ನಂಬರ್‌ ನೀಡಿದ ಕಾರಣಕ್ಕೆ ಪೂರ್ಣ ಲಸಿಕಾಕರಣದ ಪ್ರಮಾಣ ಪತ್ರದಿಂದ ವಂಚಿತರಾಗಿರುವ ಜನರ ಮಾಹಿತಿ ಸಂಗ್ರಹಿಸುವಂತೆ ಸೂಚನೆ ನೀಡಿದ್ದೇವೆ. ಇನ್ನು ಹತ್ತು ಹದಿನೈದು ದಿನದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

2ನೇ ಡೋಸ್‌ ಪಡೆಯದಿದ್ದರೂ ಸಂದೇಶ!

ಇನ್ನೂ ಎರಡನೇ ಡೋಸ್‌ ಪಡೆಯದಿದ್ದ ಅನೇಕರಿಗೆ ಕಳೆದ ಕೆಲ ದಿನಗಳಿಂದ ಎರಡನೇ ಡೋಸ್‌ ಪಡೆದಿದ್ದೀರಿ ಎಂಬ ಎಸ್‌ಎಂಎಸ್‌ ಸಂದೇಶ ಬರುತ್ತಿದೆ. ಹಾಗೆಯೇ ಅವರ ಲಸಿಕಾ ಪ್ರಮಾಣ ಪತ್ರ ಕೂಡ ಲಭ್ಯವಾಗುತ್ತಿರುವ ಪ್ರಕರಣ ರಾಜ್ಯಾದ್ಯಂತ ವರದಿಯಾಗುತ್ತಿದೆ. ಈ ಬಗ್ಗೆ ಆರೋಗ್ಯ ಇಲಾಖೆಗೆ ದೂರುಗಳು ಬಂದಿವೆ. ಆರೋಗ್ಯ ಇಲಾಖೆಯ ಲಸಿಕಾ ಅಭಿಯಾನವನ್ನು ನಿರ್ವಹಿಸುತ್ತಿರುವ ಗಣಕ ವಿಭಾಗ ಈ ಬಗ್ಗೆ ಇನ್ನೆರಡು ದಿನದಲ್ಲಿ ಪರಿಶೀಲನೆ ನಡೆಸಲಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
 

click me!