
ಸಿದ್ದಲಿಂಗ ಕಿಣಗಿ
ಸಿಂದಗಿ(ನ.20): ಸರ್ಕಾರಿ ಆಸ್ಪತ್ರೆಯೆಂದರೆ ಬಡವರ ಪಾಲಿನ ಸಂಜೀವಿನಿ. ಆದರೆ, ಬಡವರಿಗೆ ವರದಾನವಾಗಬೇಕಾದ ಆಸ್ಪತ್ರೆ ಅವ್ಯವಸ್ಥೆಯ ಆಗರವಾದರೇ ಬಡವರು ಎಲ್ಲಿ ಹೋಗಬೇಕು? ಎಂಬ ಪ್ರಶ್ನೆ ಸಹಜವಾಗಿಯೇ ಜನರನ್ನು ಕಾಡುತ್ತದೆ. ಇದೀಗ ಸಿಂದಗಿ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಯಿಂದ ರೋಗಿಗಳು ರೋಸಿ ಹೋಗಿದ್ದಾರೆ.
ಹೌದು, ಸಿಂದಗಿ ತಾಲೂಕಾಸ್ಪತ್ರೆ ಒಟ್ಟು 100 ಬೆಡ್‌ಗಳನ್ನು ಒಳಗೊಂಡಿರುವ ಆಸ್ಪತ್ರೆ. 10 ಆಕ್ಸಿಜನ್ ಬೆಡ್ ಒಳಗೊಂಡಿರುವ ಹಾಗೆ ಅನೇಕ ಸೌಲಭ್ಯಗಳುಳ್ಳ ಆಸ್ಪತ್ರೆ. ಆದರೆ, ಅವುಗಳ ಸರಿಯಾದ ಬಳಕೆ ಆಗುತ್ತಿಲ್ಲ. ಸುಮಾರು 8ಕ್ಕೂ ಹೆಚ್ಚು ವಿವಿಧ ರೋಗಗಳ ತತ್ಞರಿದ್ದರು ಅವರು ಸರಿಯಾಗಿ ಆಸ್ಪತ್ರೆಗೆ ಬರುವುದಿಲ್ಲ ಅವರಿಂದ ರೋಗಿಗಳಿಗೆ ಚಿಕಿತ್ಸೆಯ ಸೇವೆ ಸಿಗುತ್ತಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಲಿವೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಕ್ರಾಸ್ ಮಾಡಲ್ಲ: ಶ್ರೀರಾಮುಲು
ವೈದ್ಯರಿದ್ದರೂ ಸಿಗಲ್ಲ:
ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ತತ್ಞರು 1, ಆರ್ಥೋಪೆಡಿಕ್ ತತ್ಞರು 1, ಚಿಕ್ಕಮಕ್ಕಳ ತತ್ಞರು 1, ನೇತ್ರ ತತ್ಞರು 1, ಕಿವಿ-ಮೂಗು ತತ್ಞರು 1, ಅರವಳಿಕೆ ತತ್ಞರು 1, ದಂತ ವೈದ್ಯರು 1, ಆಯುಷ್ಯ ವೈದ್ಯರು 1, ವೈದ್ಯಾಧಿಕಾರಿಗಳು 2 ಇದ್ದಾರೆ. ಆದರೆ, ಇಷ್ಟೆಲ್ಲ ತತ್ಞರಿದ್ದರು ಜನರಿಗೆ ಇವರು ಸಿಗುವುದೇ ಪುಣ್ಯವಾಗಿದೆ. ಇಲ್ಲಿ ಸ್ತ್ರೀರೋಗ ತತ್ಞರಿಲ್ಲ. ಇದರಿಂದ ಹೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಹೆರಿಗೆ ಶಸ್ತ್ರ ಚಿಕಿತ್ಸೆಗೆ ದೂರದ ವಿಜಯಪುರದ ಆಸ್ಪತ್ರೆಗಳೇ ಗತಿಯಾಗಿವೆ.
ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ:
ಆಸ್ಪತ್ರೆಗೆ ನಿತ್ಯ ನೂರಾರು ರೋಗಿಗಳು ಬರುತ್ತಾರೆ. ಆದರೆ ಅವರಿಗೆ ಕುಡಿಯಲು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲವಾಗಿದೆ. ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದೆ. ಆದರೆ ಅದು ಸಿಬ್ಬಂದಿಯ ನಿರ್ಲಕ್ಷ್ಯದಿಂದ ನೀರಿನ ಘಟಕ ಸ್ಥಗಿತಗೊಂಡಿರುವುದರಿಂದ ರೋಗಿಗಳು ಕುಡಿಯುವ ಶುದ್ಧ ನೀರಿಗಾಗಿ ಹೋಟಲ್‌ಗಳಿಗೆ ಹೋಗಿ ಹಣ ನೀಡಿ ನೀರು ಪಡೆಯುವಂತಹ ಸ್ಥಿತಿ ನಿರ್ಮಾಣವಾಗಿದೆ.
ಆಕ್ಸಿಜನ್ ಬೆಡ್ ಇದ್ದು ಇಲ್ಲದಂತೆ:
ಇಲ್ಲಿನ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್‌ಗಳು ಸುಮಾರು 8ಕ್ಕೂ ಹೆಚ್ಚಿವೆ. ಒಂದು ಬೆಡ್ ನಿರ್ಮಾಣಕ್ಕೆ ಅಂದಾಜು ₹90 ಸಾವಿರಕ್ಕೂ ಅಧಿಕ ಹಣ ಬೇಕು. ವೈದ್ಯರೇ ಬರುವುದಿಲ್ಲ ಎಂಬ ಕಾರಣ ಇಲೇಲ್ಲವೂ ಖಾಲಿ ಖಾಲಿಯಾಗಿವೆ. ಬೆಂಗಳೂರಿನ ಸಂಸ್ಥೆಯೊಂದು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಅಂದಾಜು 10 ಲಕ್ಷಕ್ಕೂ ಹೆಚ್ಚು ಹಣದಲ್ಲಿ ಇಲ್ಲಿ ಲಿಕ್ವೀಡ್ ಆಕ್ಸಿಜನ್ ಘಟಕವನ್ನು ನಿರ್ಮಾಣ ಮಾಡಿದೆ. ಅದರ ಉದ್ಘಾಟನೆಯೂ ಆಗಿದೆ. ಇಲ್ಲಿಯವರೆಗೂ ಅದರ ಬಳಕೆ ಆಗಿಲ್ಲ. ಒಂದು ರೋಗಿಯೂ ಇದರ ಸೌಲಭ್ಯ ಪಡೆದುಕೊಂಡಿಲ್ಲ.
ಚರಂಡಿ ನೀರು ರಸ್ತಗೆ:
ಆಸ್ಪತ್ರೆಯೆಂದರೆ ಸ್ವಚ್ಛ ಮತ್ತು ಶುಚಿಯಾಗಿರಬೇಕು. ಚರಂಡಿ ನೀರು ರಸ್ತೆ ತುಂಬೇಲ್ಲ ಹರಿದು ಬರುತ್ತಿದ್ದರೂ ಸಿಬ್ಬಂದಿಗಳು ಅದರ ಕಡೆ ಖ್ಯಾರೆ ಎನ್ನುತ್ತಿಲ್ಲ. ರೋಗಿಗಳು ಮೂಗು ಮುಚ್ಚಿಕೊಂಡು ತಿರುಗಾಡುವ ಸ್ಥಿತಿ ನಿರ್ಮಾಣವಾಗಿದೆ. ಸ್ವಚ್ಛತೆ ಇಲ್ಲವಾದಲ್ಲಿ ಆರೋಗ್ಯ ಹೇಗೆ ಸುಧಾರಿಸಿತು ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ಆಸ್ಪತ್ರೆಯ ಸುಧಾರಣೆಗೆ ಕ್ರಮಕೈಗೊಳ್ಳಬೇಕು.
ಆಸ್ಪತ್ರೆಗೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಂಡಿದ್ದೇನೆ. ರೋಗಿಗಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಇದೊಂದು ಮಾದರಿ ಮತ್ತು ಹೈಟೆಕ್ ಆಸ್ಪತ್ರೆ ಆಗಬೇಕು ಎಂದು ಖಡಕ್ ಆದೇಶ ಮಾಡಿದ್ದೇನೆ. ರೋಗಿಗಳಿಗೆ ಏನಾದರೂ ತೊಂದರೆ ಆದರೆ ಅದಕ್ಕೆ ಸಿಬ್ಬಂದಿಯೆ ನೇರ ಹೊಣೆ ಮಾಡಬೇಕಾಗುತ್ತದೆ ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ ತಿಳಿಸಿದ್ದಾರೆ.
ಸೋಲಾಪುರ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಸಿಕ್ಸ್ ವೇ ಯಾಗಿ ಮೇಲ್ದರ್ಜೆಗೆರಿಸಲು ಕ್ರಮ: ಸಂಸದ ಜಿಗಜಿಣಗಿ
ಆಸ್ಪತ್ರೆಯಲ್ಲಿ ಸ್ವಲ್ಪ ತೊಂದರೆಗಳಿರುವುದು ನಿಜ. ಆದರೆ ಅವುಗಳನ್ನು ಕೂಡಲೇ ಪರಿಹರಿಸಿ ರೋಗಿಗಳಿಗೆ ಯಾವುದೆ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಸಿಂದಗಿ ತಾಲೂಕು ವೈದ್ಯಾಧಿಕಾರಿ ಡಾ.ಎ.ಎ.ಮಾಗಿ ಹೇಳಿದ್ದಾರೆ.
ಸಿಂದಗಿ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳಿದ್ದರೂ ವೈದ್ಯರೆ ಇರುವುದಿಲ್ಲ. ಇದರಿಂದ ನಮ್ಮ ಮತ್ತು ರೋಗಿಗಳ ಪಾಡು ನಾಯಿ ಪಾಡಾಗಿದೆ. ಸಂಬಳಕ್ಕೆ ಮಾತ್ರ ವೈದ್ಯರಾದರೇ ಬಡವರ ಸೇವೆ ಮಾಡುವವರಾರು? ಮುಂಬರುವ ದಿನಗಳಲ್ಲಿ ವೈದ್ಯರ ವಿರುದ್ಧವೇ ಪ್ರತಿಭಟಿಸುತ್ತೇವೆ ಎಂದು ವಿದ್ಯಾರ್ಥಿ ಮುಖಂಡ ಹರ್ಷವರ್ಧನ ಪೂಜಾರಿ ತಿಳಿಸಿದ್ದಾರೆ.