ರಾಜ್ಯದಲ್ಲಿ ಮಹಿಳೆಯರ ಉಚಿತ ಪ್ರಯಾಣದ ‘ಶಕ್ತಿ ಯೋಜನೆ’ ಜಾರಿಗೊಳಿಸಿರುವುದನ್ನು ವಿರೋಧಿಸಿ ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದಿಂದ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಹುಬ್ಬಳ್ಳಿ (ಜೂ.12) : ರಾಜ್ಯದಲ್ಲಿ ಮಹಿಳೆಯರ ಉಚಿತ ಪ್ರಯಾಣದ ‘ಶಕ್ತಿ ಯೋಜನೆ’ ಜಾರಿಗೊಳಿಸಿರುವುದನ್ನು ವಿರೋಧಿಸಿ ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದಿಂದ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಮಿನಿವಿಧಾನಸೌಧದ ವರೆಗೆ ಜರುಗಿತು. ಈ ವೇಳೆ ಆಟೋ ಚಾಲಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಮಗಳೂರಿನಲ್ಲಿ ಉಚಿತ ಬಸ್ ಸೇವೆಗೆ ಭರ್ಜರಿ ರೆಸ್ಪಾನ್ಸ್, 10ಸಾವಿರಕ್ಕೂ ಅಧಿಕ ಮಹಿಳೆಯರ ಪ್ರಯಾಣ
ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಮಾತನಾಡಿ, ಕಳೆದ 2-3 ವರ್ಷಗಳ ವರೆಗೆ ಕೊರೋನಾ ಹಾವಳಿಯಿಂದಾಗಿ ಆಟೋ ಚಾಲಕರು ತೀವ್ರ ಸಂಕಷ್ಟಅನುಭವಿಸಿದ್ದಾರೆ. ಈಗತಾನೇ ಅಲ್ಪ ದುಡಿಮೆಯಿಂದಾಗಿ ಒಂದು ಹೊತ್ತಿನ ಊಟ ಮಾಡುವಂತಾಗಿದೆ. ಈಗ ಶಕ್ತಿ ಯೋಜನೆಯಿಂದಾಗಿ ಈ ಎಲ್ಲ ಕುಟುಂಬಗಳು ಬೀದಿಗೆ ಬೀಳುವ ಆತಂಕವಿದೆ ಎಂದರು.
ಸರ್ಕಾರ ಮಹಿಳೆಯರಿಗೆ ನಗರ ಸಾರಿಗೆ ಹೊರತುಪಡಿಸಿ ಬೇರೆ ಎಲ್ಲಾದರೂ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು. ನಗರದಿಂದ 25 ಕಿಮೀ ಹೊರತುಪಡಿಸಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು. ಆಟೋ ರಿಕ್ಷಾ ಚಾಲಕರ ಲೈಸನ್ಸ್ ಆಧರಿಸಿ ಚಾಲಕರಿಗೆ ಪ್ರತಿ ತಿಂಗಳು .10 ಸಾವಿರ ನೀಡಬೇಕು. ಆಟೋ ಚಾಲಕರ ನಿಗಮ ಮಂಡಳಿ ರಚಿಸಬೇಕು. ಆಟೋ ಚಾಲಕರಿಗಾಗಿಯೇ ಪ್ರತ್ಯೇಕ ಆಟೋ ಕಾಲನಿ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಆಟೋ ರಿಕ್ಷಾ ಚಾಲಕರ ಮಕ್ಕಳಿಗೆ ಸರ್ಕಾರ ಉಚಿತ ಉನ್ನತ ಶಿಕ್ಷಣ ನೀಡಬೇಕು. 60 ವರ್ಷ ಮೀರಿದ ಆಟೋ ಚಾಲಕರಿಗೆ ಪಿಂಚಣಿ ನೀಡಬೇಕು. 2 ಮತ್ತು 3 ಚಕ್ರದ ಇಲೆಕ್ಟ್ರಿಕಲ್ ವಾಹನಗಳಿಗೆ ಗುತ್ತಿಗೆ ಆಧಾರದ ಮೇಲೆ ಬಾಡಿಗೆ ರೂಪದಲ್ಲಿ ಅನುಮತಿ ನೀಡಬಾರದು. ಆಟೋ ಚಾಲಕರು ಅಪಘಾತದಲ್ಲಿ ಮೃತಪಟ್ಟಲ್ಲಿ ಎಫ್‌ಐಆರ್ ದಾಖಲೆ ಮೇಲೆ . 5ಲಕ್ಷ ಪರಿಹಾರ ನೀಡಬೇಕು. ನಮ್ಮ ಎಲ್ಲ ಬೇಡಿಕೆಗಳು ಈಡೇರದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಂಘಟನೆಯ ನೇತೃತ್ವದಲ್ಲಿ ರಾಜ್ಯಾದ್ಯಂತ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ರಫೀಕ ಕುಂದಗೋಳ, ರಾಜೇಶ ಬಿಜವಾಡ, ಜಾಫರ ಕೆರೂರ, ದಾವೂದ ಅಲಿಶೇಖ, ಮಹಾವೀರ ಬಿಲಾನ, ಮಲ್ಲಿಕಾರ್ಜುನ ನಂದಿಹಾಳ, ಗುರು ಬೆಟಗೇರಿ, ಮುರಳಿ ಇಂಗಳಳ್ಳಿ, ಕಲ್ಲಪ್ಪ ಅಣ್ಣಿಗೇರಿ, ಬಾಬರ ಜಮಖಾನೆ, ಆರೀಫ್, ಶ್ರೀಕಾಂತ ದಾಸರ, ರಾಕೇಶ ಚವ್ಹಾಣ, ಚಂದ್ರಗೌಡ ಪಾಟೀಲ. ಶಂಕರ ಆಚಾರ್ಯ, ವೆಂಕಟೇಶ ಹೆಬಸೂರ, ಮಂಜು ಕೋಳಿಕಾಲ, ಮಾರುತಿ ಅಂಚಟಗೇರಿ, ಸಂಜು ಪವಾರ, ಶಬ್ಬೀರ ಜಮೀನ್ದಾರ್ ಸೇರಿದಂತೆ ನೂರಾರು ಆಟೋ ಚಾಲಕರು ಪಾಲ್ಗೊಂಡಿದ್ದರು.