Udupi: ಉತ್ತರ ಭಾರತ ದಿಗ್ವಿಜಯಕ್ಕೆ ಹೊರಟ ಯಕ್ಷಗಾನ

By Govindaraj SFirst Published Apr 10, 2022, 4:47 PM IST
Highlights

ಕರ್ನಾಟಕದ ಹೆಮ್ಮೆಯ ಕಲೆ ಯಕ್ಷಗಾನ ಉತ್ತರಭಾರತದಲ್ಲೂ ದಿಗ್ವಿಜಯಕ್ಕೆ ಹೊರಟಿದೆ. ಉತ್ತರ ಪ್ರದೇಶದ ವಾರಣಾಸಿಯ ಎನ್‌ಎಸ್‌ಡಿ ವಿದ್ಯಾರ್ಥಿಗಳು, ಯಕ್ಷಗಾನದ ಹಾಡಿಗೆ ಹೆಜ್ಜೆ ಹಾಕಲು ಕಲಿತಿದ್ದಾರೆ. 

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್ 

ಉಡುಪಿ (ಏ.10): ಕರ್ನಾಟಕದ (Karnataka) ಹೆಮ್ಮೆಯ ಕಲೆ ಯಕ್ಷಗಾನ (Yakshagana) ಉತ್ತರ ಭಾರತದಲ್ಲೂ ದಿಗ್ವಿಜಯಕ್ಕೆ ಹೊರಟಿದೆ. ಉತ್ತರ ಪ್ರದೇಶದ (Uttar Pradesh) ವಾರಣಾಸಿಯ (Varanasi) ಎನ್‌ಎಸ್‌ಡಿ ವಿದ್ಯಾರ್ಥಿಗಳು (NSD Students), ಯಕ್ಷಗಾನದ ಹಾಡಿಗೆ ಹೆಜ್ಜೆ ಹಾಕಲು ಕಲಿತಿದ್ದಾರೆ. ಈ ದೇಶದ ಭವಿಷ್ಯದ ತಾರೆಯರು, ಯಕ್ಷಲೋಕದಲ್ಲಿ ಮಿಂಚಿದ್ದಾರೆ.

Latest Videos

ಅನುಪಮ್ ಖೇರ್, ಶಾರುಖ್ ಖಾನ್, ನವಾಜುದ್ದೀನ್ ಸಿದ್ದಿಕಿ, ಇರ್ಫಾನ್ ಖಾನ್.. ಬಾಲಿವುಡ್ ನಲ್ಲಿ ನಟನೆಯಿಂದಲೇ ಹೆಸರು ಮಾಡಿದ ಇವರೆಲ್ಲಾ ಎನ್ ಎಸ್ ಡಿ ಯಿಂದ ಹೊರ ಬಂದ ದೈತ್ಯ ಪ್ರತಿಭೆಗಳು. ರಾಷ್ಟ್ರೀಯ ನಾಟಕ ಶಾಲೆ ಈ ದೇಶದಲ್ಲಿ ನಟನಾ ಕ್ಷೇತ್ರಕ್ಕೆ ಅತಿ ದೊಡ್ಡ ಕೊಡುಗೆಗಳನ್ನೇ ನೀಡಿದೆ. ಇದೀಗ ಎಎನ್‌ಎಸ್‌ಡಿಯ ವಾರಣಸಿ ಶಾಖೆಯ 20 ಮಂದಿ ವಿದ್ಯಾರ್ಥಿಗಳು ಉಡುಪಿಗೆ ಬಂದು ಯಕ್ಷಗಾನ ಕಲಿತಿದ್ದಾರೆ. ಕರ್ನಾಟಕದ ಹೆಮ್ಮೆಯ ಕಲೆಯಾಗಿ ಹೆಸರು ಮಾಡಿರುವ ಯಕ್ಷಗಾನ ಇದೀಗ ಉತ್ತರ ಭಾರತಕ್ಕೂ ಮುಖಮಾಡಿದೆ. ಶುದ್ಧ ಹಿಂದಿ ಭಾಷೆಯಲ್ಲಿ, ಅಪ್ಪಟ ಯಕ್ಷಗಾನ ಶೈಲಿಯಲ್ಲಿ ಕಲಾವಿದರು ಚಿತ್ರಪಟ ರಾಮಾಯಣ ಎಂಬ ಸುಂದರ ಪ್ರಸಂಗವನ್ನು ಪ್ರಸ್ತುತಪಡಿಸಲು ಕಲಿತಿದ್ದಾರೆ. 

ಗುರುಕುಲ ಪದ್ಧತಿಯಲ್ಲಿ ಯಕ್ಷಗಾನವನ್ನು ಕಲಿಸುವ ಈ ದೇಶದ ಖ್ಯಾತ ಸಂಸ್ಥೆಗಳಲ್ಲಿ ಒಂದಾದ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಒಂದು ತಿಂಗಳ ಕಾಲ ನಿರಂತರ ತರಬೇತಿ ಪಡೆದಿದ್ದಾರೆ. ದಿನವೊಂದಕ್ಕೆ 15 ಗಂಟೆಗಳ ಕಾಲ ಅಭ್ಯಾಸ ಮಾಡಿ ಯಕ್ಷಗಾನ ಕಲೆಯನ್ನು ಕರತಲಾಮಲಕ ಮಾಡಿಕೊಂಡಿದ್ದಾರೆ. ರಾಮನವಮಿಯ ಸಂದರ್ಭದಲ್ಲಿ, ಚಿತ್ರಪಟ ರಾಮಾಯಣದ ಪ್ರದರ್ಶನ ನಡೆಸಿದ್ದಾರೆ. ತಮ್ಮ ಭಾವಪೂರ್ಣ ಅಭಿನಯದ ಮೂಲಕ, ಯಕ್ಷಗಾನಕ್ಕೆ ಹೊಸ ರೂಪ ನೀಡಿದ್ದಾರೆ. ಇದೇ ಮೊದಲ ಬಾರಿಗೆ, ಯಕ್ಷಗಾನದ ಉಡುಗೆ-ತೊಡುಗೆಗಳನ್ನು ತೊಟ್ಟು ಅಭಿನಯಿಸಿ ರೋಮಾಂಚನ ಗೊಂಡಿದ್ದಾರೆ.

Costal Fishing Boats ಡೀಸೆಲ್ ದರ ಏರಿಕೆ , ಮೀನೂಟ ಪ್ರಿಯರ ಕಣ್ಣೀರು!

ಹಾಡು-ನೃತ್ಯ ವೇಷಭೂಷಣ ಸಂಭಾಷಣೆ, ಸಾಹಿತ್ಯ ಎಲ್ಲಾ ಆಯಾಮಗಳಲ್ಲೂ ಯಕ್ಷಗಾನ ಒಂದು ಪರಿಪೂರ್ಣ ಕಲೆ. ಆಧುನಿಕವಾದ ಯಾವುದೇ ಪ್ರಭಾವ ಇಲ್ಲದೆ ಮೂಲ ಸ್ವರೂಪದಲ್ಲಿ ಯಕ್ಷಗಾನ ಕಲಿಸುವುದು ಯಕ್ಷಗಾನ ಕೇಂದ್ರದ ಹೆಗ್ಗಳಿಕೆ. ರಂಗತಜ್ಞರು ಕಲಿತು ಪ್ರಸ್ತುತಪಡಿಸಿದ ಈ ಪ್ರದರ್ಶನ, ಯಕ್ಷಗಾನದ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಕಳೆದ ಐದು ದಶಕಗಳಿಂದ ಯಕ್ಷಗಾನವನ್ನು ಶ್ರದ್ಧೆಯಿಂದ ಸಾವಿರಾರು ಮಂದಿಗೆ ಕಲಿಸಿರುವ ಕೇಂದ್ರದ ಪ್ರಾಂಶುಪಾಲರಾದ ಬನ್ನಂಜೆ ಸಂಜೀವ ಸುವರ್ಣ, ಅದ್ಭುತ ಪ್ರದರ್ಶನದ ಹಿಂದೆ ಬೆವರು ಹರಿಸಿದ್ದಾರೆ. 

ವಾರಣಾಸಿಯ ಸಂಪೂರ್ಣ ಎನ್‌ಎಸ್‌ಡಿ ತಂಡ ಒಂದು ತಿಂಗಳ ಕಾಲ ಕೇಂದ್ರದಲ್ಲೇ ಬೀಡುಬಿಟ್ಟು, ಗುರುಕುಲದ ಮೂಲ ಪದ್ಧತಿಯಲ್ಲಿ ಯಕ್ಷಗಾನವನ್ನು ಕಲಿತು ಇದೀಗ ಉತ್ತರ ಭಾರತದಲ್ಲೂ ಪ್ರದರ್ಶನ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇಲ್ಲಿ ವೇಷತೊಟ್ಟು ಕುಣಿಯುತ್ತಿರುವ ಪ್ರತಿಯೊಬ್ಬ ಕಲಾವಿದರು ಭವಿಷ್ಯದ ತಾರೆಯರಂದೇ ಹೇಳಬೇಕು. ಮುಂದಿನ ದಿನಗಳಲ್ಲಿ ಬಾಲಿವುಡ್, ಒಟಿಟಿ, ಕಿರುತೆರೆಯಲ್ಲಿ‌ ಮಿಂಚಲು ಸಿದ್ಧರಾಗಿರುವ ಇವರು, ತಮ್ಮ ಕಲಿಕೆಯಲ್ಲಿ ಯಕ್ಷಗಾನ ಅಭ್ಯಾಸ ಒಂದು ಟರ್ನಿಂಗ್ ಪಾಯಿಂಟ್ ಎಂದು ಬಣ್ಣಿಸುತ್ತಾರೆ. ಮೊದಲ ಬಾರಿಗೆ ಯಕ್ಷಗಾನದ ವೇಷಭೂಷಣ ತೊಟ್ಟ ರೋಮಾಂಚನ ಕಲಾವಿದರಲ್ಲಿ ಕಂಡುಬಂತು. 

ಸೆಲ್ಫಿ ತೆಗೆಯಲು ಹೋಗಿ ಸಮುದ್ರದ ಸುಳಿಗೆ ಸಿಕ್ಕ ಯುವಕರು!

ಮತ್ತೊಂದೆಡೆ ಯಕ್ಷಗಾನ ಕಲೆ ಹಿಂದಿಯಲ್ಲೂ ಅಷ್ಟೇ ಸಾಂಪ್ರದಾಯಿಕವಾಗಿ ಪ್ರಸ್ತುತಪಡಿಸಬಹುದು ಎನ್ನುವುದನ್ನು ಇವರು ತೋರಿಸಿಕೊಟ್ಟಿದ್ದಾರೆ. ಕರ್ನಾಟಕದ ಹೆಮ್ಮೆಯ ಕಲೆಯಾದ ರೂ ಕರಾವಳಿಗರಿಗೆ ಮಾತ್ರ ಸೀಮಿತವಾಗಿದ್ದ ಯಕ್ಷಗಾನ, ಇದೀಗ ಹೊಸ ಕನಸುಗಳೊಂದಿಗೆ ಉತ್ತರಭಾರತ ದತ್ತ ಪ್ರಯಾಣ ಬೆಳೆಸಿದೆ. ಕರಾವಳಿ ಭಾಗದಲ್ಲಿ ಯಕ್ಷಗಾನ ಸಾಕಷ್ಟು ಆಧುನಿಕ ಸ್ಪರ್ಶದೊಂದಿಗೆ ಪ್ರದರ್ಶನಗೊಳ್ಳುತ್ತಿದೆ. ಮೂಲ ಸರೂಪ ಕಣ್ಮರೆಯಾಗಿ ಜನಪ್ರಿಯತೆಗೆ ಕಲಾವಿದರು ಮಾರುಹೋಗುತ್ತಿದ್ದಾರೆ. ಈ ನಡುವೆ ಮೂಲಸ್ವರೂಪದ ಯಕ್ಷಗಾನ ಕಲಿತು ಅದನ್ನು ದೇಶದ ಉದ್ದಗಲಕ್ಕೆ ಪಸರಿಸಲು ಹೊರಟ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳಿಗೆ, ಕನ್ನಡನಾಡಿನ ಕೃತಜ್ಞತೆ ಯಾವತ್ತೂ ಇರಬೇಕು.

click me!