karnataka Council Election: ಅಭ್ಯರ್ಥಿಯಾದ್ರೂ ಕೋಟ ಸೇರಿ 6 ಶಾಸಕ, ಓರ್ವ ಸಂಸದಗೆ ಮತದಾನಕ್ಕಿಲ್ಲ ಅವಕಾಶ

By Kannadaprabha NewsFirst Published Nov 25, 2021, 3:21 PM IST
Highlights
  • ಈ ಬಾರಿಯ ದ.ಕ. ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಸ್ಪರ್ಧೆ
  • ಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಸಹಿತ ಅವಿಭಜಿತ ದ.ಕ. ಜಿಲ್ಲೆಯ ಒಟ್ಟು ಆರು ಮಂದಿ ಶಾಸಕರು ಹಾಗೂ ಓರ್ವ ಸಂಸದರಿಗೆ ಮತದಾನ ಮಾಡುವ ಅವಕಾಶ ಇಲ್ಲ

ವರದಿ :  ಆತ್ಮಭೂಷಣ್‌

  ಮಂಗಳೂರು (ನ.25):  ಈ ಬಾರಿಯ ದ.ಕ. ಪರಿಷತ್‌ ಚುನಾವಣೆಯಲ್ಲಿ (MLC Election) ಬಿಜೆಪಿ  (BJP) ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ (Kota Shrinivas Poojary) ಸಹಿತ ಅವಿಭಜಿತ ದ.ಕ. ಜಿಲ್ಲೆಯ ಒಟ್ಟು ಆರು ಮಂದಿ ಶಾಸಕರು ಹಾಗೂ ಓರ್ವ ಸಂಸದರಿಗೆ ಮತದಾನ ಮಾಡುವ ಅವಕಾಶ ಇಲ್ಲ!  ಉಡುಪಿ ಜಿಲ್ಲೆಯವರಾದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ಬೈಂದೂರು ಶಾಸಕ ಸುಕುಮಾರ್‌ ಶೆಟ್ಟಿ, ಕಾಪು ಶಾಸಕ ಲಾಲಾಜಿ ಮೆಂಡನ್‌, ದ.ಕ.ದಲ್ಲಿ ವಿಧಾನ ಪರಿಷತ್‌ ಸದಸ್ಯರಾದ ಹರೀಶ್‌ ಕುಮಾರ್‌ ಮತ್ತು ಪ್ರತಾಪ್‌ಸಿಂಹ ನಾಯಕ್‌ ಅಲ್ಲದೆ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರೂ ಈ ಬಾರಿ ವಿಧಾನ ಪರಿಷತ್‌ ಚುನಾವಣೆಯಲ್ಲಿ ಮತದಾನ ಅವಕಾಶ ವಂಚಿತರು.

ಪರಿಷತ್‌ ಚುನಾವಣೆಯಲ್ಲಿ ಸಂಸದರು (MP), ಶಾಸಕರಿಗೆ ಮತದಾನಕ್ಕೆ ಅವಕಾಶ ಇದೆ. ಆದರೆ ಅವರು ತಮ್ಮ ವ್ಯಾಪ್ತಿಯ ಯಾವುದೇ ಒಂದು ಸ್ಥಳೀಯಾಡಳಿತ ಸಂಸ್ಥೆಯನ್ನು ಪ್ರತಿನಿಧಿಸಬೇಕಾಗುತ್ತದೆ. ಈ ಬಾರಿ ತಾಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಅಧಿಕಾರಾವಧಿ ಮುಕ್ತಾಯಗೊಂಡಿದ್ದು, ಚುನಾವಣೆ (Election) ನಡೆದಿಲ್ಲ. ಹಾಗಾಗಿ ಗ್ರಾ.ಪಂ. ವ್ಯಾಪ್ತಿಯ ಮತಗಟ್ಟೆಯಲ್ಲಿ ಹೆಸರಿದ್ದರೆ ಮತದಾನ ಸಾಧ್ಯವಾಗುವುದಿಲ್ಲ.

ಹಾಲಿ ಪರಿಷತ್‌ ಸದಸ್ಯ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ (Shrinivas Poojary) ಅವರ ಹೆಸರು ಕೋಟ ಗ್ರಾಮದಲ್ಲಿ ಮತಗಟ್ಟೆಯಲ್ಲಿದೆ. ಅದೇ ರೀತಿ ಪ್ರತಾಪ್‌ ಚಂದ್ರ ಶೆಟ್ಟಿಅವರ ಹೆಸರು ಕೂಡ ಕುಂದಾಪುರ ಗ್ರಾಮೀಣ ಭಾಗದಲ್ಲಿ ಮತಗಟ್ಟೆಯಲ್ಲಿದೆ. ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಹೆಸರು ಚಿಕ್ಕಮಗಳೂರಿನ ಗ್ರಾಮೀಣ ಮತಗಟ್ಟೆಯಲ್ಲಿದೆ. ಹಾಗಾಗಿ ಅವರಿಗೂ ಪರಿಷತ್‌ ಚುನಾವಣೆಯಲ್ಲಿ ಮತದಾನ ಮಾಡುವಂತಿಲ್ಲ.

ಬೈಂದೂರು ಕ್ಷೇತ್ರದಲ್ಲಿ ಬೈಂದೂರು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದ್ದರೂ ಅಲ್ಲಿ ಚುನಾವಣೆ ನಡೆದಿಲ್ಲ. ಹಾಗಾಗಿ ಶಾಸಕ ಸುಕುಮಾರ್‌ ಶೆಟ್ಟಿಅವರು ಸದ್ಯ ಸ್ಥಳೀಯಾಡಳಿತ ಸಂಸ್ಥೆಯನ್ನು ಪ್ರತಿನಿಧಿಸುತ್ತಿಲ್ಲ. ಆದ್ದರಿಂದ ಅವರಿಗೆ ಮತದಾನಕ್ಕೆ ಅವಕಾಶ ಇಲ್ಲವಾಗಿದೆ. ಕಾಪುವಿನಲ್ಲಿ ಕೂಡ ಪುರಸಭೆಗೆ ಚುನಾವಣೆ ನಡೆದಿಲ್ಲ. ಈ ಕಾರಣಕ್ಕೆ ಅಲ್ಲಿನ ಶಾಸಕ ಲಾಲಜಿ ಮೆಂಡನ್‌ರಿಗೆ ಮತದಾನಕ್ಕೆ ಅವಕಾಶ ಇಲ್ಲ. ಬೆಳ್ತಂಗಡಿ ಮೂಲದ ವಿಧಾನ ಪರಿಷತ್‌ ಸದಸ್ಯರಾದ ಹರೀಶ್‌ ಕುಮಾರ್‌ ಹಾಗೂ ಪ್ರತಾಪ್‌ ಸಿಂಹ ನಾಯಕ್‌ ಅವರ ಮತಗಟ್ಟೆ ನಗರ ಸ್ಥಳೀಯಾಡಳಿತ ವ್ಯಾಪ್ತಿಯಲ್ಲಿ ಇಲ್ಲ, ಬೆಳ್ತಂಗಡಿ (Belthangady) ಗ್ರಾಮಾಂತರದಲ್ಲಿ ಇರುವ ಕಾರಣ ಇವರಿಗೂ ಮತದಾನಕ್ಕೆ ಅವಕಾಶ ಇಲ್ಲ ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳ ಮೂಲ ತಿಳಿಸಿದೆ.

ದ.ಕ.ಜಿಲ್ಲೆಯಲ್ಲಿ 23 ಸದಸ್ಯ ಬಲದ ಸೋಮೇಶ್ವರ ಪುರಸಭೆ ಮತ್ತು 18 ಸದಸ್ಯರಿರುವ ವಿಟ್ಲ ಪಟ್ಟಣ ಪಂಚಾಯಿತಿಯ ಅವಧಿ ಪೂರ್ಣಗೊಂಡಿದೆ. 17 ಸದಸ್ಯರ ಕೋಟೆಕಾರ್‌ ಪಟ್ಟಣ ಪಂಚಾಯ್ತಿಗೆ ಚುನಾವಣೆ (Election) ನಡೆದಿಲ್ಲ. ಕುಂದಾಪುರ ತಾಲೂಕಿನಲ್ಲಿ 16 ಗ್ರಾ.ಪಂ. ಸ್ಥಾನಗಳು ಚುನಾವಣೆಗೆ ಬಾಕಿ ಇದೆ. 23 ಸದಸ್ಯರುಳ್ಳ ಕಾಪು ಪುರಸಭೆಯ ಅವಧಿ ಪೂರ್ಣಗೊಂಡಿರುವ ಕಾರಣ ಮತದಾನಕ್ಕೆ ಅವಕಾಶವಿಲ್ಲ .

ನಾಮ ನಿರ್ದೇಶಿತರಿಗೆ ಮತದಾನ: ಪರಿಷತ್‌ ಚುನಾವಣೆಯಲ್ಲಿ (MLC Election) ನಾಮ ನಿರ್ದೇಶನ ಸದಸ್ಯರಿಗೂ ಮತದಾನಕ್ಕೆ ಅವಕಾಶವಿದೆ. ಮಂಗಳೂರು ಮಹಾ ನಗರ ಪಾಲಿಕೆಗೆ ಐದು ಮಂದಿಯನ್ನು ನೇಮಿಸಲು ಅವಕಾಶ ಇದ್ದರೂ, ನಾಲ್ಕು ಮಂದಿಯನ್ನು ಮಾತ್ರ ನೇಮಿಸಲಾಗಿದೆ. ಉಡುಪಿ ಜಿಲ್ಲೆಯ ಉಡುಪಿ (Udupi) ನಗರ ಸಭೆ, ಕುಂದಾಪುರ ಮತ್ತು ಕಾರ್ಕಳ ಪುರಸಭೆಗೆ ತಲಾ ಐದು, ಸಾಲಿಗ್ರಾಮ ಪಟ್ಟಣ ಪಂಚಾಯ್ತಿಗೆ ಮೂವರು ಸದಸ್ಯರನ್ನು ಸರ್ಕಾರ ನೇಮಿಸಿದೆ. ದ.ಕ. ಜಿಲ್ಲೆಯ ಪುತ್ತೂರು, ಉಳ್ಳಾಲ, ಸುಳ್ಯ, ಬೆಳ್ತಂಗಡಿ, ಮೂಲ್ಕಿ ನಗರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸರ್ಕಾರ ಇನ್ನೂ ನಾಮ ನಿರ್ದೇಶನ ಮಾಡಿಲ್ಲ.

ಅವಿಭಜಿತ ದ.ಕ.ದಲ್ಲಿ ಶಾಸಕ, ಸಂಸದ ಸೇರಿ 20 ಮಂದಿ

ಉಡುಪಿಯಲ್ಲಿ ಐವರು ಶಾಸಕರು, ಇಬ್ಬರು ಪರಿಷತ್‌ ಸದಸ್ಯರು, ಒಬ್ಬರು ಸಂಸದರು ಸೇರಿ ಒಟ್ಟು ಎಂಟು ಮಂದಿ ಮತ್ತು ದ.ಕ.ದಲ್ಲಿ ಎಂಟು ಶಾಸಕರು, ಮೂವರು ಪರಿಷತ್‌ ಸದಸ್ಯರು ಹಾಗೂ ಓರ್ವ ಸಂಸದ ಸೇರಿ 12 ಮಂದಿ ಇದ್ದಾರೆ. ಹೀಗೆ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಒಟ್ಟು ಶಾಸಕ, ಸಂಸದರ ಸಂಖ್ಯೆ 20 ಇದ್ದರೂ ಈ ಪರಿಷತ್‌ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಲಭಿಸಿರುವುದು 12 ಶಾಸಕರು ಹಾಗೂ ಓರ್ವ ಸಂಸದ ಸೇರಿ 13 ಮಂದಿಗೆ ಮಾತ್ರ. ಉಳಿದ ಏಳು ಮಂದಿ ಮತದಾನದಿಂದ ವಂಚಿತಗೊಂಡಿದ್ದಾರೆ. ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ಗೆ ಮೂಲ್ಕಿ ಹಾಗೂ ಮೂಡುಬಿದಿರೆ ಎರಡು ಸ್ಥಳೀಯ ಸಂಸ್ಥೆಗಳಲ್ಲಿ ಮತದಾನಕ್ಕೆ ಅವಕಾಶ ಇದ್ದರೂ ಒಂದೇ ಕಡೆ ಮತದಾನ ಮಾಡಬೇಕಾಗುತ್ತದೆ.

click me!