ಬೆಳಗಾವಿ (ಮೇ.10): ಸಾಂಗ್ಲಿ, ಕೊಲ್ಲಾಪುರ ಗಡಿಯ ರಾಜ್ಯದ ಬೆಳಗಾವಿ ಹಾಗೂ ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಗೆ ನಿಲ್ಲಿಸಲಾಗಿದ್ದ ಆಕ್ಸಿಜನ್ ಪೂರೈಕೆ ಮತ್ತೆ ಆರಂಭಿಸಲು ಒಪ್ಪಿಗೆ ದೊರೆತಿದೆ.
ಪ್ರತಿದಿನ ಮಹಾರಾಷ್ಟ್ರದಿಂದ ಪೂರೈಕೆ ಮಾಡಲಾಗುತ್ತಿದ್ದ ಖಾಸಗಿ ಆಕ್ಸಿಜನ್ ಸಿಲೆಂಡರ್ ಏಕಾಏಕಿ ಬಂದ್ ಆಗಿದ್ದು, ಇದರಿಂದ ಸಮಸ್ಯೆ ಎದುರಿಸುವಂತಾಗಿತ್ತು. ಕೊಲ್ಲಾಪುರ ಜಿಲ್ಲಾಧಿಕಾರಿ ದೌಲತ್ ದೇಸಾಯಿ ಆದೇಶದ ಮೇರೆ ನಿನ್ನೆಯಿಂದ (ಮೇ.09) ರಾಜ್ಯಕ್ಕೆ ಬರುವ ಸಿಲೆಂಡರ್ ಪೂರೈಕೆ ಬಂದ್ ಮಾಡಲಾಗಿತ್ತು. ಇಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಆದೇಶದ ಮೇರೆ ಮತ್ತೆ ಪೂರೈಕೆ ಮಾಡಲು ಒಪ್ಪಿಗೆ ದೊರೆತಿದೆ.
undefined
ಸೋಂಕಿತರ ಮನೆ ಬಾಗಿಲಲ್ಲೇ ಆಕ್ಸಿಜನ್ ಸಿಲಿಂಡರ್ ರೀಫಿಲ್! .
ರಾಜ್ಯಕ್ಕೆ ಬರುವ ಸಿಲೆಂಡರ್ ಬಂದ್ ಮಾಡಿದ್ದರಿಂದ ರಾಜ್ಯದ ಗಡಿಯಲ್ಲಿರುವ ಅನೇಕ ಆಸ್ಪತ್ರೆಗಳು ಆಕ್ಸಿಜನ್ ಕೊರತೆ ಎದುರಿಸುವಂತಾಗಿತ್ತು. ಇದರಿಂದ ರೋಗಿಗಳ ಜೀವದ ಪ್ರಶ್ನೆಯಾಗಿದ್ದು, ಆತಂಕಕ್ಕೆ ಕಾರಣವಾಗಿತ್ತು.
ಈ ನಿಟ್ಟಿನಲ್ಲಿ ಮಹಾರಾಷ್ಟ್ರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ವಿಶ್ವಜೀತ್ ಕದಮ್ ಜೊತೆ ದೂರವಾಣಿ ಮೂಲಕ ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಂದಿನಂತೆ ಆಕ್ಸಿಜನ್ ಗಡಿ ಜಿಲ್ಲೆಗಳಿಗೆ ಪೂರೈಕೆ ಆಗುವುದನ್ನು ಮುಕ್ತವಾಗಿ ಪೂರೈಕೆ ಮಾಡಲು ಬಿಡುವಂತೆ ಡಿಸಿಎಂ ಲಕ್ಷ್ಮಣ್ ಸವದಿ ಆದೇಶ ನೀಡಿದ್ದಾರೆ.
ಡಿಸಿಎಂ ಸವದಿ ಮಾತಿಗೆ ಒಪ್ಪಿದ ಸಚಿವ ಕದಮ್ ಕೊಲ್ಲಾಪುರ ಜಿಲ್ಲಾಧಿಕಾರಿ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona