* ಗದಗ ಜಿಲ್ಲೆಯ ರೋಣ ತಾಲೂಕಿನ ಕೊತಬಾಳ ಗ್ರಾಪಂ ನಿರ್ಣಯ
* ಗ್ರಾಪಂ ಅಧ್ಯಕ್ಷ ಯಾಳಗಿ ಹೇಳಿಕೆ ವೈರಲ್
* ಪರ ಮತ್ತು ವಿರೋಧಗಳ ಚರ್ಚೆಯೂ ಜೋರು
ರೋಣ(ಜೂ.06): ಕೊರೋನಾ ತಡೆ, ರೋಗ ನಿರೋಧಕ ವೃದ್ಧಿಸುವಲ್ಲಿ ಸರ್ಕಾರ ಜಾರಿಗೆ ತಂದಿರುವ ವ್ಯಾಕ್ಸಿನ್ ಯಾರು ಹಾಕಿಸಿಕೊಳ್ಳುವುದಿಲ್ಲವೋ, ಅಂತಹ ಕುಟುಂಬಕ್ಕೆ ಪಡಿತರ ಆಹಾರ ಧಾನ್ಯ ಹಂಚಿಕೆ ತಡೆಹಿಡಿಯಲಾಗುವುದು ಎಂದು ತಾಲೂಕಿನ ಕೊತಬಾಳ ಗ್ರಾಪಂ ಅಧ್ಯಕ್ಷ ವೀರಣ್ಣ ಯಾಳಗಿ ಅವರು ಹೇಳಿರುವ ವಿಡಿಯೋ ತುಣುಕೊಂದು ಎಲ್ಲೆಡೆ ವೈರಲ್ ಆಗಿದೆ.
ಕೊತಬಾಳ ಗ್ರಾಪಂ ವ್ಯಾಪ್ತಿಯ ಮುಗಳಿ, ಕೊತಬಾಳ ಮತ್ತು ತಳ್ಳಿಹಾಳ ಗ್ರಾಮದಲ್ಲಿ ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಸ್ವಪ್ರೇರಣೆಯಿಂದ ಮುಂದೆ ಬಂದವರಿಗೆ ಮಾತ್ರ ಪಡಿತರ ಆಹಾರ ಕೊಡಲು ತೀರ್ಮಾನಿಸಿದ್ದು, ಈ ಕುರಿತು ಜೂ. 4ರಂದು ಗ್ರಾಪಂ ಕಾರ್ಯಾಲಯದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಸರ್ವ ಸದಸ್ಯರು ಒಪ್ಪಿಗೆ ಸೂಚಿದ್ದಾರೆ.
‘ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಮಾತ್ರ ರೇಶನ್, ಇಲ್ಲದವರಿಗೆ ಪಡಿತರ ಆಹಾರ ವಿತರಣೆ ತಡೆಹಿಡಿಯಲಾಗುವುದು. ವ್ಯಾಕ್ಸಿನ್ ಪಡೆದಿರುವ ಕುರಿತು ಆರೋಗ್ಯ ಇಲಾಖೆಯಿಂದ ಪ್ರಮಾಣಪತ್ರ ತರಬೇಕು. ಅಂಥವರಿಗೆ ಮಾತ್ರ ರೇಶನ್ ಕೊಡಲಾಗುವುದು. ಇದು ಕಾನೂನಿಗೆ ವಿರುದ್ಧವಾಗಿದ್ದರೂ, ನಮ್ಮ ಗ್ರಾಪಂ ವ್ಯಾಪ್ತಿಯ ಜನತೆಯ ಒಳಿತಿಗಾಗಿ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ವ್ಯಾಕ್ಸಿನ್ ಹಾಕಿಸಿಕೊಳ್ಳದಿದ್ದರೆ ತಮಗೆ ಬರಬೇಕಿದ್ದ ಪಡಿತರ ಆಹಾರದಿಂದ ನಾವು ವಂಚಿತರಾಗುತ್ತೇವೆ ಎಂಬ ಭಯದಿಂದಲಾದರೂ ಜನತೆ ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಾರೆ ಎಂಬುದು ನಮ್ಮ ಉದ್ದೇಶವಾಗಿದೆ. ಈ ಕುರಿತು ಸಭೆಯಲ್ಲಿ ತೀರ್ಮಾನಿಸುತ್ತಿದ್ದಂತೆ ಒಂದೇ ದಿನದಲ್ಲಿ 80ಕ್ಕೂ ಹೆಚ್ಚು ಜನ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಆದ್ದರಿಂದ ನಾನು ಹಾಗೂ ಸರ್ವ ಸದಸ್ಯರು ತೆಗೆದುಕೊಂಡ ನಿರ್ಧಾರ ಫಲಕಾರಿಯಾಗಿದೆ’ ಎಂದು ಹೇಳಿರುವ ಅಧ್ಯಕ್ಷ ವೀರಣ್ಣ ಯಾಳಗಿ ಅವರ ವಿಡಿಯೋ ತುಣಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕೊರೋನಾ ಟೈಮ್‌ನಲ್ಲಿ ರಾಜಕಾರಣ ಮಾಡಿದ್ರೆ ಜನರೇ ಛೀಮಾರಿ ಹಾಕ್ತಾರೆ: ಸುಧಾಕರ್
ಒಬ್ಬರೇ ಹಾಕಿಸಿಕೊಂಡರೆ?
ಇದನ್ನು ವಿರೋಧಿಸಿದ ಕೆಲವರು, ‘ಒಂದು ಪಡಿತರ ಚೀಟಿಯಲ್ಲಿ ನಾಲ್ಕರಿಂದ ಐದು ಜನ ಇರುತ್ತಾರೆ. ಅದರಲ್ಲಿ ಒಬ್ಬರು ಅಥವಾ ಇಬ್ಬರು ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಾರೆ. ಉಳಿದವರು ವಿಳಂಬ ಮಾಡುತ್ತಾರೆ. ಹಾಗಾದರೆ, ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಮಾತ್ರ ರೇಶನ್ ಎಂದಾದಲ್ಲಿ, ರೇಶನ್ ಪಡೆಯಲು ಬಯೋಮೆಟ್ರಿಕ್ ಯಾರು ಕೊಡಬೇಕು?’ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರ ಇಂತಹ ಯಾವುದೇ ನಿರ್ಬಂಧ ಹಾಕಿಲ್ಲ, ಇಷ್ಟೆದಿನದೊಳಗಾಗಿ ಎಲ್ಲರೂ ವ್ಯಾಕ್ಸಿನ್ ಪಡೆಯಬೇಕು ಎಂಬ ಗುರಿಯನ್ನು ಸರ್ಕಾರ ಹೊಂದಿಲ್ಲ. ಆರೋಗ್ಯ ರಕ್ಷಣೆಗಾಗಿ ಜನ ತಾವಾಗಿಯೇ ಬಂದು ಲಸಿಕೆ ಹಾಕಿಸಿಕೊಳ್ಳುತ್ತಾರೆ. ಈ ದಿಶೆಯಲ್ಲಿ ವ್ಯಾಕ್ಸಿನ್ ಸಾಧಕ ಕುರಿತು ಗ್ರಾಪಂ ಜಾಗೃತಿ ಮೂಡಿಸಬೇಕೆ ಹೊರತು, ಬಡವರ ಅನ್ನ ಕಿತ್ತುಕೊಳ್ಳುವದು ಸೂಕ್ತವಲ್ಲ ಎನ್ನುತ್ತಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona