ಮೈಸೂರಿನ 35 ಗ್ರಾಮಗಳನ್ನು ಮುಟ್ಟದ ಕೊರೋನಾ : ಮುನ್ನೆಚ್ಚರಿಕೆಯೇ ಕಾರಣ

By Kannadaprabha NewsFirst Published May 25, 2021, 4:02 PM IST
Highlights
  • ಎಲ್ಲೆಡೆ ಹಬ್ಬಿ ಆತಂಕ ಸೃಷ್ಟಿಸಿದ ಕೊರೋನಾ ಮಹಾಮಾರಿ
  • ಮೈಸೂರಿನ 35 ಗ್ರಾಮಗಳತ್ತ ಸುಳಿಯದ ಕೋವಿಡ್ ಸೋಂಕು
  • ಜನರ ಮುನ್ನೆಚ್ಚರಿಕಾ ಕ್ರಮಗಳೇ ಕೋವಿಡ್ ರಕ್ಷಣಾ ಸೂತ್ರಗಳು

ವರದಿ :  ಬೆಕ್ಕರೆ ಸತೀಶ್‌ ಆರಾಧ್ಯ

 ಪಿರಿಯಾಪಟ್ಟಣ (ಮೇ.25):  ಕೊರೋನಾ ಸೋಂಕಿನ 2ನೇ ಅಲೆ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಹಬ್ಬಿ ಹಳ್ಳಿಗರಿಗೆ ತಲೆನೋವಾಗುತ್ತಿರುವ ಸಂದರ್ಭದಲ್ಲಿ ತಾಲೂಕಿನ 14 ಗ್ರಾಪಂ ವ್ಯಾಪ್ತಿಗೆ ಬರುವ 35 ಗ್ರಾಮಗಳಲ್ಲಿ ಸ್ವಯಂಪ್ರೆರಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರಿಂದ ಈವರೆಗೆ ಕೊರೋನಾ ಸೋಂಕು ಕಾಲಿಡದಂತೆ ಎಚ್ಚರಿಕೆ ವಹಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಅತ್ತಿಗೋಡು ಗ್ರಾಪಂನ ತಂದ್ರೆಗುಡಿಕೊಪ್ಪಲು, ಹುಚ್ಚೇಗೌಡನಕೊಪ್ಪಲು, ಬೈಲುಕುಪ್ಪೆ ಗ್ರಾಪಂನ ಲಕ್ಷ್ಮೀಪುರ, ಹಂದಿಗುಡ್ಡ ಕಾವಲು, ಚಿಕ್ಕಹೊನ್ನೂರು, ಚಿಕ್ಕನೇರಳೆ ಗ್ರಾಪಂನ ಬ್ಯಾಡರಬಿಳಗುಲಿ, ಮಂಟಿಬಿಳಗುಲಿ, ರಾಗಿ ಆಲದಮರ, ಕುಳ್ಳಯ್ಯನಕೊಪ್ಪಲು, ದೊಡ್ಡಬೇಲಾಳು ಗ್ರಾಪಂನ ಚಿಕ್ಕಬೇಲಾಳು, ಹಂಡಿತವಳ್ಳಿ ಗ್ರಾಪಂನ ಕಾಳೇಗೌಡನಕೊಪ್ಪಲು, ಎಚ್‌. ಮಠದ ಕೊಪ್ಪಲು, ಎಚ್‌. ಬೋರೆ ಕೊಪ್ಪಲು, ಕೋಡಿಹಳ್ಳಿ, ಹರದೂರು ಗ್ರಾಪಂನ ನವಿಲುಕೋಡಿ ಕಾವಲು, ಹುಣಸವಾಡಿ ಗ್ರಾಪಂನ ಆಲನಹಳ್ಳಿ, ಕಣಗಾಲು ಗ್ರಾಪಂನ ಗುಡಿಭದ್ರನ ಹೊಸಹಳ್ಳಿ, ಕೊಟ್ಟಯನ ಕೊಪ್ಪಲು, ಗೊಬ್ಬಳಿಕಾವಲು, ಹೆಗ್ಗತ್ತೂರು, ಕಿತ್ತೂರು ಗ್ರಾಪಂನ ದಾಸೇಗೌಡನ ಕೊಪ್ಪಲು, ರಾಮಭದ್ರಯನ ಕೊಪ್ಪಲು, ಬಳ್ಳಾರಿಗೌಡನ ಕೊಪ್ಪಲು, ಮರಿಗೌಡನ ಕೊಪ್ಪಲು, ಕಿತ್ತೂರು ಮೂಡಲಕೊಪ್ಪಲು, ಕೋಮಲಾಪುರ ಗ್ರಾಪಂನ ತೆಲಗಿನಕುಪ್ಪೆ, ನೇರಳೆಕುಪ್ಪೆ, ಕೊಪ್ಪ ಗ್ರಾಪಂನ ಮರೂರು, ಲಿಂಗಾಪುರ, ರಾಣಿಗೇಚ್‌, ಮಾಕೋಡು ಗ್ರಾಪಂನ ಗಂಗೂರು, ಹೆಗ್ಗಡಿಕೊಪ್ಪಲು, ರಾಮನಾಥ ತುಂಗ ಗ್ರಾಪಂನ ಚಿಕ್ಕವಡ್ಡರ ಕೇರಿ, ದೊಡ್ಡವಡ್ಡರ ಕೇರಿ, ನವಿಲೂರು ಗ್ರಾಪಂನ ಕೋರಲಹೊಸಳ್ಳಿ ಗ್ರಾಮಗಳಲ್ಲಿನ ಗ್ರಾಮಸ್ಥರ ಜವಾಬ್ದಾರಿಯುತ ನಡವಳಿಕೆ ಹಾಗೂ ಅಧಿಕಾರಿಗಳ ಮುತುವರ್ಜಿಯಿಂದ ಈವರೆಗೆ ಒಂದೇ ಒಂದು ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗದಿರುವುದು ವಿಶೇಷ.

ಸಾರಾ ಮಹೇಶ್ ಇತರೆ ಶಾಸಕರಿಗೆ ಮಾದರಿ : ಹೊಗಳಿದ ಸಚಿವ ಸೋಮಶೇಖರ್ .

ಸ್ವಯಂಪ್ರೇರಿತ ಬಿಗಿ ನಿಯಮ ಅಳವಡಿಕೆ:

ಸದರಿ ಗ್ರಾಮಗಳಲ್ಲಿ ಗ್ರಾಪಂ ಕಾರ್ಯಪಡೆ ವತಿಯಿಂದ ಸ್ಯಾನಿಟೈಸರ್‌ ಬಳಕೆ, ಕಡ್ಡಾಯ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಪಾಡುವುದರ ಬಗ್ಗೆ ಧ್ವನಿವರ್ಧಕಗಳ ಮೂಲಕ ಬೀದಿ ಬೀದಿಗಳಲ್ಲಿ ಪ್ರಚಾರ ಮಾಡುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ. ಕೃಷಿಕರೇ ಹೆಚ್ಚಿರುವುದರಿಂದ ತಮ್ಮ ದೈನಂದಿನ ಬದುಕಿನಲ್ಲಿ ಬೇರಾವ ಗೋಜಿಗೆ ಹೋಗದೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು, ನಗರ ಪ್ರದೇಶಗಳಿಂದ ಗ್ರಾಮಕ್ಕೆ ಆಗಮಿಸುವ ವ್ಯಕ್ತಿಗಳಿಗೆ ಕಟ್ಟುನಿಟ್ಟಿನ ನಿರ್ಬಂಧ ಹಾಗೂ ಈ ಗ್ರಾಮಗಳಿಂದ ಯಾವುದೇ ವ್ಯಕ್ತಿ ನಗರ ಪ್ರದೇಶಗಳಿಗೆ ಭೇಟಿ ನೀಡದಿರುವುದು, ಧಾರ್ಮಿಕ ಹಬ್ಬ ಸೇರಿದಂತೆ ಸಾಮೂಹಿಕ ಕಾರ್ಯಕ್ರಮಗಳ ರದ್ದು ಸಹ ಸೋಂಕು ಹರಡದಂತೆ ತಡೆಗಟ್ಟಲು ಪ್ರಮುಖ ಕಾರಣವಾಗಿದೆ. ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿಯಂತೆ ಗ್ರಾಮಿಣ ಪ್ರದೇಶದ ಸಾರ್ವಜನಿಕರು ಲಸಿಕೆಗೆ ಮಹತ್ವ ನೀಡಿ ನಿಗದಿತ ಸಮಯದಲ್ಲಿ ಪಡೆದುಕೊಂಡಿದ್ದು ಸಹ ಸೋಂಕು ತಡೆಗಟ್ಟಲು ತೆಗೆದುಕೊಂಡ ಕ್ರಮಗಳಲ್ಲಿ ಮತ್ತೊಂದು ವಿಶೇಷ ಕಾರಣ.

ಮೈಸೂರು : ಕೋವಿಡ್‌ ಮುಕ್ತ ಗ್ರಾಮಕ್ಕೆ ಪುರಸ್ಕಾರ ..

ಮಾರ್ಗಸೂಚಿ ಕಡ್ಡಾಯ ಪಾಲನೆ:

ಕೊರೊನಾ ಸೋಂಕು ತಡೆಗಟ್ಟಲು ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಗ್ರಾಪಂ ಸಿಬ್ಬಂದಿ ಚಾಚೂ ತಪ್ಪದೆ ಪಾಲಿಸಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಪ್ರತಿ ಮನೆ ಮನೆಗೆ ಭೇಟಿ ನೀಡಿ ಅನಾರೋಗ್ಯ ಪೀಡಿತರ ಮಾಹಿತಿ ಕಲೆಹಾಕಿ ಅವರಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಸೂಕ್ತ ಔಷಧ ಹಾಗೂ ಮಾತ್ರೆಗಳು ವಿತರಿಸಿ ಪ್ರತಿಯೊಬ್ಬರೂ ಸಹ ತಮಗೆ ವಹಿಸಿದ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರಿಂದಲೇ ಸೋಂಕು ಹರಡದಂತೆ ತಡೆಗಟ್ಟಲು ಕಾರಣವಾಗಿದೆ.

ಒಟ್ಟಾರೆ ಮುಂದಿನ ದಿನಗಳಲ್ಲಾದರೂ ಗ್ರಾಮಾಂತರ ಪ್ರದೇಶದ ಸಾರ್ವಜನಿಕರು ಎಚ್ಚೆತ್ತು ಸರ್ಕಾರದ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿ ತಮ್ಮ ಗ್ರಾಮಗಳನ್ನು ಕೊರೋನಾ ಮುಕ್ತ ಹಳ್ಳಿಗಳಾಗಿ ಮಾರ್ಪಡಿಸುವಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಜಾಗರೂಕತೆಯಿಂದ ಇರಬೇಕು ಎಂದು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಆಶಯ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!