ಆರೋಪಿಗಳ ಹೇಳಿಕೆಗಳಲ್ಲಿ ಫೋನ್ ಪೇ ಮೂಲಕ ಅಧಿಕಾರಿಗಳಿಗೆ ಲಂಚ ಪಾವತಿಸುತ್ತಿದ್ದುದು ಕಂಡು ಬಂದಿದೆ. ಆಹಾರ ಇಲಾಖೆಯ ಉಪ ನಿರ್ದೇಶಕರೊಬ್ಬರಿಗೆ ಪ್ರತಿ ತಿಂಗಳು 50 ಸಾವಿರ ರು. ಹಾಗೂ ಇಲಾಖೆಯ ಇನ್ನುಳಿದವರಿಗೆ ಲಂಚದ ಹಣವನ್ನು ಮಧ್ಯವರ್ತಿಗಳ ಮೂಲಕ ನೀಡಲಾಗುತ್ತಿತ್ತು ಎಂದು ಹೇಳಿಕೆಗಳಲ್ಲಿ ತಿಳಿಸಲಾಗಿದೆ.
ಯಾದಗಿರಿ(ಅ.20): ಕಳೆದ ವರ್ಷ ನವೆಂಬರ್‌ನಲ್ಲಿ ಜಿಲ್ಲೆಯ ಶಹಾಪುರದ ಟಿಎಪಿಸಿಎಂಎಸ್ ಗೋದಾಮಿನಿಂದ ಸುಮಾರು 2 ಕೋಟಿ ರು. ಗಳಿಗೂ ಹೆಚ್ಚು ಮೌಲ್ಯದ, 6077 ಕ್ವಿಂಟಲ್ ಪಡಿತರ ಅಕ್ಕಿ ನಾಪತ್ತೆ ಪ್ರಕರಣ ಕುರಿತು ಪೊಲೀಸರು ಇತ್ತೀಚೆಗೆ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಆದರೆ, ಈ ಕುರಿತು ದಾಖಲಾದ ದೂರಿನಲ್ಲಿನ ಅಂಶ ಹಾಗೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನೀಡಿದ ವರದಿಗೂ ಭಾರಿ ವ್ಯತ್ಯಾಸ ಕಂಡು ಬಂದಿದ್ದು, ಸುಮಾರು 1700 ಕ್ವಿಂ. ನಷ್ಟು ಅಕ್ಕಿ ಕೊರತೆ ಬಗ್ಗೆ ದೂರಿನಲ್ಲಿ ಮಾಹಿತಿಯೇ ಇಲ್ಲದಿರುವುದು ಅಚ್ಚರಿ ಮೂಡಿಸಿದೆ.
ಅಂದರೆ, ಆಹಾರ ಇಲಾಖೆಯ ಆಯುಕ್ತರಿಗೆ ಜಿಲ್ಲಾಧಿಕಾರಿ ಕಳೆದ ಮಾ.15 ರಂದು ನೀಡಿದ ವರದಿಯಂತೆ, "ಶಹಾಪುರ ಮತ್ತು ವಡಗೇರಾ ಗೋದಾಮುಗಳಲ್ಲಿ ಒಟ್ಟು 9157.20 ಕ್ವಿಂ. ಪಡಿತರ ಅಕ್ಕಿ ಕೊರತೆಯಲ್ಲಿ 1300 ಕ್ವಿಂ. ಪಡಿತರ ಅಕ್ಕಿ ಮಾನವ ಉಪಯೋಗಕ್ಕೆ ಯೋಗ್ಯವಾಗಿಲ್ಲ ಎಂದು ಪ್ರಯೋಗಾಲಯ ವರದಿ ನೀಡಿದೆ. ಇನ್ನುಳಿದ, 7857 ಕ್ವಿಂ. ಪಡಿತರ ಅಕ್ಕಿ ದಾಸ್ತಾನು ಭೌತಿಕ ಕೊರತೆ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.
undefined
ಯಾದಗಿರಿ ನಗರದ ರಸ್ತೆಗಳ ದುರಸ್ತಿಗೆ ದತ್ತು ಚಿಂತನೆ ಶುರು!
ಆದರೆ, ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ನ.25, 2023 ರಂದು ದಾಖಲಾದ ದೂರಿನಲ್ಲಿ (247/2023) 6077 ಕ್ವಿಂ. ಅಕ್ಕಿ ದಾಸ್ತಾನಿನ ನಾಪತ್ತೆ ಬಗ್ಗೆ ತಿಳಿಸಲಾಗಿದೆಯೇ ಹೊರತು, ಇನ್ನೂ 1700 ಕ್ವಿಂ. ಅಕ್ಕಿ ಕೊರತೆ ಬಗ್ಗೆ ಮಾಹಿತಿ ಇರದಿರುವುದು ಅಚ್ಚರಿ ಮೂಡಿಸಿದೆ. ಸುಮಾರು 57.80 ಲಕ್ಷ ರು.ಗಳಷ್ಟು ಮೌಲ್ಯದ ಅಕ್ಕಿ ವ್ಯತ್ಯಾಸದ ವರದಿ ಜಿಲ್ಲಾಧಿಕಾರಿ ವರದಿ ನೀಡಿದ್ದರಾದರೂ, ಎಫ್‌ಐಆರ್‌ನಲ್ಲಿ 6077 ಕ್ವಿಂ. ಅಕ್ಕಿ ದಾಸ್ತಾನು ನಾಪತ್ತೆ ಬಗ್ಗೆ ಮಾತ್ರ ತಿಳಿಸಿರುವುದು ಶಂಕೆ ಮೂಡಿಸಿದೆ. 7852 ಕ್ವಿಂ. ಅಕ್ಕಿ ದಾಸ್ತಾನು ಭೌತಿಕ ಕೊರತೆ ಕಂಡುಬರುತ್ತದೆ ಎಂದು ಡಿಸಿ ಅವರು ಇಲಾಖೆಯ ಆಯುಕ್ತರಿಗೆ ಆಗಲೇ ವರದಿ ನೀಡಿದ್ದರೂ, ಎಫ್ಐಆರ್‌ನಲ್ಲಿ 6077 ಕ್ವಿಂ. ಅಕ್ಕಿ ದಾಸ್ತಾನು ಕೊರತೆ ಎಂದು ಮಾತ್ರ ನಮೂದಿಸಿರುವುದು ಹಲವು ಶಂಕೆಗಳ ಮೂಡಿಸಿದೆ.
ಫೋನ್ ಪೇ ಮೂಲಕ ಅಧಿಕಾರಿಗಳಿಗೆ ಲಂಚ !
ಇನ್ನು, ಆರೋಪಿಗಳ ಹೇಳಿಕೆಗಳಲ್ಲಿ ಫೋನ್ ಪೇ ಮೂಲಕ ಅಧಿಕಾರಿಗಳಿಗೆ ಲಂಚ ಪಾವತಿಸುತ್ತಿದ್ದುದು ಕಂಡು ಬಂದಿದೆ. ಆಹಾರ ಇಲಾಖೆಯ ಉಪ ನಿರ್ದೇಶಕರೊಬ್ಬರಿಗೆ ಪ್ರತಿ ತಿಂಗಳು 50 ಸಾವಿರ ರು. ಹಾಗೂ ಇಲಾಖೆಯ ಇನ್ನುಳಿದವರಿಗೆ ಲಂಚದ ಹಣವನ್ನು ಮಧ್ಯವರ್ತಿಗಳ ಮೂಲಕ ನೀಡಲಾಗುತ್ತಿತ್ತು ಎಂದು ಹೇಳಿಕೆಗಳಲ್ಲಿ ತಿಳಿಸಲಾಗಿದೆ.