ಕೃಷಿ ಕ್ಷೇತ್ರವನ್ನು ಕೈಗಾರಿಕಾ ಮಾದರಿಯಲ್ಲಿ ಪರಿಗಣಿಸಿದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.
ಶಿವಮೊಗ್ಗ (ಅ.20): ಕೃಷಿ ಕ್ಷೇತ್ರವನ್ನು ಕೈಗಾರಿಕಾ ಮಾದರಿಯಲ್ಲಿ ಪರಿಗಣಿಸಿದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು. ನಗರದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಶಿವಮೊಗ್ಗ ಹಾಗೂ ಕೃಷಿ ಮತ್ತು ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ನವುಲೆ ಕೃಷಿ ಕಾಲೇಜು ಆವರಣದಲ್ಲಿ ‘ಪೌಷ್ಟಿಕ ಆಹಾರಕ್ಕಾಗಿ ವಿಕಸಿತ ಕೃಷಿ ಧ್ಯೇಯ’ ವಾಕ್ಯದೊಂದಿಗೆ ಆಯೋಜಿಸಲಾಗಿದ್ದ ಕೃಷಿ-ತೋಟಗಾರಿಕ ಮೇಳದಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದರು.
ಕೃಷಿ ಮೇಳದಲ್ಲಿ ಹಲವು ಜಿಲ್ಲೆಗಳ ರೈತರು ಪಾಲ್ಗೊಂಡಿದ್ದಾರೆ. ಕೃಷಿಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವುದರ ಜೊತೆಗೆ ಸಂಶೋಧನೆಯನ್ನು ಇನ್ನಷ್ಟೂ ವಿಸ್ತಾರಗೊಳಿಸಿ ರೈತರಿಗೆ ತಲುಪಿಸಿದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ರೈತರಿಗೆ ವೈಜ್ಞಾನಿಕ ಕೃಷಿ ಮಾಹಿತಿಯ ಕೊರತೆ ಇದೆ. ರೈತರ ಸಮಸ್ಯೆಗಳ ಪರಿಹಾರ ಮೊದಲ ಆದ್ಯತೆಯಾಗಬೇಕು. ಮಲೆನಾಡಿನಲ್ಲಿ ಅಡಕೆಯ ಎಲೆಚುಕ್ಕಿ, ಕೊಳೆರೋಗ ನಿವಾರಣೆಗೆ ಕ್ರಮ ವಹಿಸಿ ರೋಗ ತಡೆಗೆ ವ್ಯವಸ್ಥೆ ಮಾಡಬೇಕು. ಈ ಕುರಿತು ಸರ್ಕಾರದ ಹಂತದಲ್ಲಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಇರುವಕ್ಕಿಯ ಕೃಷಿ ವಿವಿಯಲ್ಲಿ ರಾಜ್ಯ ಮಟ್ಟದ ಕೃಷಿ ಮೇಳ ಆಯೋಜಿಸುವುದರ ಮೂಲಕ ಭವಿಷ್ಯದ ಕೃಷಿಗೆ ಒಳ್ಳೆಯ ಸಂದೇಶ ಇಲ್ಲಿಂದ ಹೋಗಬೇಕು. ಇತ್ತೀಚೆಗೆ ಯುವಜನತೆ ಕೃಷಿಯಲ್ಲಿ ಆಸಕ್ತಿ ತೋರುತ್ತಿದ್ದು, ಅವರಿಗೆ ಪ್ರೋತ್ಸಾಹ ಹಾಗೂ ಸಹಕಾರ ನೀಡಬೇಕು ಎಂದು ಹೇಳಿದರು. ಬಸವ ಕೇಂದ್ರದ ಶ್ರೀ ಮರುಳ ಸಿದ್ದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರು, ರೈತ ಮಹಿಳೆಯರಿಗೆ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ತಾಂತ್ರಿಕ ಕೈಪಿಡಿಗಳು, ಸುಧಾರಿತ ಶೇಂಗಾ, ರಾಗಿ ತಳಿಗಳನ್ನು ಬಿಡುಗಡೆಗೊಳಿಸಲಾಯಿತು.
ಅರ್ಧ ವರ್ಷ ಕಳೆದರೂ ಬಿಬಿಎಂಪಿಯ ಮಕ್ಕಳಿಗೆ ಶೂ, ಸಾಕ್ಸ್ ಸಿಕ್ಕಿಲ್ಲ!
ತರೀಕೆರೆ ಕ್ಷೇತ್ರದ ಶಾಸಕ ಶ್ರೀನಿವಾಸ್, ವಿಪ ಶಾಸಕಿ ಬಲ್ಕೀಶ್ ಬಾನು, ರಾಜ್ಯ ಭೋವಿ ನಿಗಮದ ಅಧ್ಯಕ್ಷರಾದ ರವಿಕುಮಾರ್, ಕಾಡಾ ಅಧ್ಯಕ್ಷರಾದ ಡಾ.ಅಂಶುಮಂತ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಚಂದ್ರ ಭೂಪಾಲ್, ಕೃಷಿ ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ್ , ಡಾ.ರಾಜೇಂದ್ರ ಹೆಗಡೆ, ಅಧಿಕಾರಿಗಳು, ರೈತರು ಪಾಲ್ಗೊಂಡಿದ್ದರು.