6 ತಿಂಗಳಾದರೂ ಚಿಂಕಾರ ಧಾಮಕ್ಕೆ ಹಣವಿಲ್ಲ..!

By Kannadaprabha NewsFirst Published Feb 15, 2020, 10:24 AM IST
Highlights

ತುಮಕೂರಿನ ಚಿಂಕಾರ ವನ್ಯಜೀವಿ ಧಾಮ ಎಂದು ಘೋಷಿಸಿ ತಿಂಗಳುಗಳೇ ಕಳೆದರೂ ಸರ್ಕಾರ ಒಂದಾಣೆ ಅನುದಾನವನ್ನು ನೀಡಿಲ್ಲ. ರಾಜ್ಯ ಸರ್ಕಾರ ಗಮನ ಹರಿಸಬೇಕಾದ ಸುದ್ದಿ ಇಲ್ಲಿದೆ ನೋಡಿ... 

ರಮೇಶ್ ಬನ್ನಿಕುಪ್ಪೆ, ಕನ್ನಡಪ್ರಭ

ಬೆಂಗಳೂರು(ಫೆ.15): ತುಮಕೂರು ಜಿಲ್ಲೆಯ ಬುಕ್ಕಾಪಟ್ಟಣ ಅರಣ್ಯವನ್ನು ಚಿಂಕಾರ ವನ್ಯಜೀವಿ ಧಾಮ ಎಂದು ಘೋಷಿಸಿ ಆರು ತಿಂಗಳು ಕಳೆದರೂ ಈವರೆಗೂ ಅರಣ್ಯ ಇಲಾಖೆಯಿಂದ ಅನುದಾನ ಬಿಡುಗಡೆಯಾಗದ ಕಾರಣ ಯಾವುದೇ ಅಭಿವೃದ್ಧಿ ಕಾರ್ಯ ನಡೆಯದೇ ಯೋಜನೆ ನೆನಗುದಿಗೆ ಬಿದ್ದಿದೆ.

ಬುಕ್ಕಾಪಟ್ಟಣದ ಅರಣ್ಯ ವ್ಯಾಪ್ತಿಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಕಂಡುಬರುವ ಸಣ್ಣ ಹುಲ್ಲೆ ಅಥವಾ ಇಂಡಿಯನ್‌ ಗೆಜೆಲ್‌ ಎಂದು ಕರೆಯಲಾಗುವ ಚಿಂಕಾರಗಳನ್ನು ಸಂರಕ್ಷಿಸಲು ಕಳೆದ 2016ರಲ್ಲಿ ವನ್ಯಜೀವಿಧಾಮವನ್ನಾಗಿ ಘೋಷಣೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮನವಿ ಪರಿಶೀಲಿಸಿದ ನಂತರ 2019ನೇ ಸಾಲಿನಲ್ಲಿ ವನ್ಯಜೀವಿಧಾಮವನ್ನಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿ ಗೆಜೆಟ್‌ನಲ್ಲಿ ಸಹ ಪ್ರಕಟಿಸಿದೆ. ಈ ವನ್ಯಜೀವಿ ಧಾಮದಲ್ಲಿ ಚಿಂಕಾರಗಳ ಸಂರಕ್ಷಣೆಗೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ಯೋಜನೆಗಳನ್ನು ರೂಪಿಸಿ ಈ ಸಂಬಂಧ 2​019-20ನೇ ಸಾಲಿನಲ್ಲಿ 11 ಕೋಟಿ ರು.ಗಳ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ರಾಜ್ಯ ಸರ್ಕಾರ ಪ್ರಸ್ತಾವನೆಯನ್ನು ಪರಿಗಣಿಸಲೇ ಇಲ್ಲ. ಅಷ್ಟೇ ಅಲ್ಲ ಇದುವರೆಗೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಹತ್ತು ವರ್ಷಗಳ ಯೋಜನೆಗೆ ಸಿದ್ಧತೆ:

ಚಿಂಕಾರ ವನ್ಯಜೀವಿ ಧಾಮದ ಅಭಿವೃದ್ಧಿಗೆ ಹತ್ತು ವರ್ಷಗಳ ಯೋಜನೆಯನ್ನು ರೂಪಿಸಲಾಗಿದೆ. ಪ್ರಾಥಮಿಕ ಹಂತದಲ್ಲಿ ವ್ಯಾಪ್ತಿ ನಿಗದಿ ಮಾಡುವುದು. ಚಿಂಕಾರಗಳಿಗೆ ಸೂಕ್ತ ವಾಸ ಸ್ಥಾನಗಳ ನಿರ್ಮಾಣ ಮಾಡುವುದು ಮತ್ತು ವನ್ಯ ಜೀವಿಧಾಮದ ಸುತ್ತಲಿನ ಗ್ರಾಮಗಳಲ್ಲಿ ಜಾಗೃತಿ ಮೂಡಿಸುವುದಾಗಿದೆ. ಈ ಸಂಬಂಧ ವಿಸ್ತೃತ ವರದಿಯನ್ನು ಸಿದ್ದಪಡಿಸಲಾಗಿದ್ದು ಸರ್ಕಾರಕ್ಕೆ ರವಾನೆ ಮಾಡಲಾಗಿದೆ. ಆದರೆ, ಸರ್ಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

ಹಣ ಬಿಡುಗಡೆಗೆ ಆಗ್ರಹ:

ಬುಕ್ಕಾಪಟ್ಟಣ, ಮಂಚಲದೊರೆ ಅರಣ್ಯ ಪ್ರದೇಶದಲ್ಲಿ ಚಿಂಕಾರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಭಾಗದಲ್ಲಿ ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆ, ಮರಗಳ ಕಳ್ಳ ಸಾಗಣೆ ಮತ್ತು ಚಿಂಕಾರ, ಕಾಡುಕುರಿ, ಕೃಷ್ಣಮೃಗ, ಕಡವೆಗಳ ಅನಿಯಂತ್ರಿತ ಬೇಟೆಯೂ ನಡೆಯುತ್ತಿದೆ. ಇವುಗಳನ್ನು ತಡೆಯಲು ಸರ್ಕಾರ ಮುಂದಾಗಬೇಕು, ಇದಕ್ಕಾಗಿ ತಕ್ಷಣ ವನ್ಯಜೀವಿಧಾಮ ಮಾಡಲು ಅಗತ್ಯ ಅನುದಾನ ನೀಡಬೇಕು ಎಂದು ಸ್ಥಳೀಯ ವನ್ಯಜೀವಿ ಪ್ರೇಮಿಗಳು ಆಗ್ರಹಿಸಿದ್ದಾರೆ.

ಚಿರತೆ ಅಧ್ಯಯನದ ವೇಳೆ ಕಂಡ ಚಿಂಕಾರ:

ಮೈಸೂರಿನ ನೇಚರ್‌ ಕನ್ಸರ್ವೇಷನ್‌ ಫೌಂಡೇಷನ್‌ ಸಂಸ್ಥೆಯ ವನ್ಯಜೀವಿ ವಿಜ್ಞಾನಿ ಸಂಜಯ್‌ ಗುಬ್ಬಿ ಅವರು ಚಿಕ್ಕನಾಯಕನಹಳ್ಳಿ ಮತ್ತು ಶಿರಾ ತಾಲೂಕಿನಲ್ಲಿ ಹರಡಿರುವ ಬುಕ್ಕಾಪಟ್ಟಣ, ಮುತ್ತುಗದಹಳ್ಳಿ ಕಾಡುಗಳಲ್ಲಿ ಚಿರತೆಗಳ ಇರುವಿಕೆ ಬಗ್ಗೆ ಅಧ್ಯಯನ ನಡೆಸಿದ್ದರು. ಈ ಸಂದರ್ಭದಲ್ಲಿ ಚಿಂಕಾರಗಳು ಪತ್ತೆಯಾಗಿದ್ದವು. ಇದೇ ಆಧಾರದಲ್ಲಿ ಸುಮಾರು 190 ಚದರ ಕಿಲೋಮೀಟರ್‌ ಕಾಡನ್ನು ಚಿಂಕಾರ ವನ್ಯಜೀವಿಧಾಮವಾಗಿ ಘೋಷಿಸಬೇಕು ಎಂದು 2016ರ ಡಿಸೆಂಬರ್‌ನಲ್ಲಿ ಅರಣ್ಯ ಇಲಾಖೆಯು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ನೀಡಿತ್ತು.

ಬುಕ್ಕಾಪಟ್ಟಣ ವನ್ಯಜೀವಿ ಧಾಮವನ್ನು ಅಭಿವೃದ್ಧಿಪಡಿಸಲು ವನ್ಯಜೀವಿ ಆವಾಸ ಸ್ಥಾನಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದ ತಕ್ಷಣ ಹಣ ಬಿಡುಗಡೆ ಮಾಡಲಾಗುವುದು.

- ಸುಭಾಷ್‌ ಮಾಲ್ಖಡೆ, ವನ್ಯಜೀವಿ ವಿಭಾಗದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

click me!