ಕ್ಯೂಆರ್‌ ಕೋಡ್‌ನಿಂದ 200 ಜನರಿಗೆ ನಾಮ ಹಾಕಿದ ಸೈಬರ್ ಕಳ್ಳರು

By Kannadaprabha NewsFirst Published Feb 15, 2020, 10:19 AM IST
Highlights

ಬೇಕಾಬಿಟ್ಟಿ ಸಿಕ್ಕಲ್ಲೆಲ್ಲಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡ್ತೀರಾ..? ಸ್ಕ್ಯಾನ್ ಮಾಡೋಕೆ ನಿಮ್ಮ ಕ್ಯೂಆರ್‌ ಕೋಡ್‌ಗಳನ್ನು ಬೇರೆಯವರಿಗೆ ಕೊಡ್ತೀರಾ..? ಸುರಕ್ಷಾ ಕ್ರಮಗಳಿಲ್ಲದೆ ಸುಮ್‌ಸುಮ್ನೆ ಕೋಡ್‌ ಸ್ಕ್ಯಾನ್ ಮಾಡಿ ನಾಮ ಹಾಕಿಕೊಳ್ಬೇಕಾಗುತ್ತೆ. ಹುಷಾರ್..!

ಬೆಂಗಳೂರು(ಫೆ.15): ಒಎಲ್‌ಎಕ್ಸ್‌ನಲ್ಲಿ ವಸ್ತುಗಳನ್ನು ಮಾರಾಟ ಮಾಡುವ ನೆಪದಲ್ಲಿ ಗ್ರಾಹಕರಿಗೆ ಕ್ಯೂಆರ್‌ ಕೋಡ್‌ ಕಳುಹಿಸಿ ವಂಚಿಸುತ್ತಿದ್ದ ಚಾಲಾಕಿ ಸೈಬರ್‌ ಖದೀಮರ ತಂಡ ಸಿಸಿಬಿ ಬಲೆಗೆ ಬಿದ್ದಿದ್ದು, ಆಯುಕ್ತರು ಸೇರಿದಂತೆ ಪೊಲೀಸರ ಹೆಸರಿನಲ್ಲೇ ಜನರಿಗೆ ಆರೋಪಿಗಳು ಟೋಪಿ ಹಾಕಿರುವ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.

ರಾಜಸ್ಥಾನ ಮೂಲದ ಕರಣ್‌ ಸಿಂಗ್‌, ಅಕ್ರಂ ಖಾನ್‌, ಹ್ಯಾರಿಸ್‌, ಜಮೀಲ್‌ ಹಾಗೂ ಮೆಹಜರ್‌ ಬಂಧಿತರಾಗಿದ್ದು, ಆರೋಪಿಗಳಿಂದ ಆರು ಮೊಬೈಲ್‌ ಜಪ್ತಿ ಮಾಡಲಾಗಿದೆ. ಕೆಲ ದಿನಗಳಿಂದ ನಗರದಲ್ಲಿ ಸೈಬರ್‌ ಕ್ರೈಂ ಠಾಣೆಗೆ ಒಎಲ್‌ಎಕ್ಸ್‌ನಲ್ಲಿ ವ್ಯವಹರಿಸುವಾಗ ಕ್ಯೂಆರ್‌ ಕೋಡ್‌ ಬಳಸಿ ಹಣ ಕಳೆದುಕೊಂಡ ನೂರಾರು ಜನರು ದೂರು ನೀಡಿದ್ದರು. ಈ ಕೃತ್ಯಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ರಾಜಸ್ಥಾನದಲ್ಲಿ ವಂಚಕರ ತಂಡವನ್ನು ಬಂಧಿಸಿದ್ದಾರೆ.

ವಂಚನೆ:

ಒಎಲ್‌ಎಕ್ಸ್‌ನಲ್ಲಿ ಪಿಠೋಪಕರಣ ಹಾಗೂ ವಾಹನ ಸೇರಿ ಇನ್ನಿತರ ವಸ್ತುಗಳ ಮಾರಾಟದ ಬಗ್ಗೆ ಕರಣ್‌ ಸಿಂಗ್‌ ತಂಡ ಮಾಹಿತಿ ಸಂಗ್ರಹಿಸುತ್ತಿತ್ತು. ಬಳಿಕ ಆ ವಸ್ತುಗಳ ವಾರಸುದಾರರಿಗೆ ಬೇರೆ ಬೇರೆ ಹೆಸರಿನಲ್ಲಿ ಕರೆ ಮಾಡಿ ಪರಿಚಯಿಸಿ ಕೊಳ್ಳುತ್ತಿದ್ದರು. ಬಳಿಕ ಜಾಹೀರಾತಿನಲ್ಲಿ ನೀಡಿರುವ ವಸ್ತುಗಳನ್ನು ಕೊಳ್ಳುವುದಾಗಿ ಆರೋಪಿಗಳು ನಂಬಿಸುತ್ತಿದ್ದರು. ನಂತರ ಮುಂಗಡ ಹಣವನ್ನು ಆನ್‌ಲೈನ್‌ ಮೂಲಕ ಪಾವತಿಸುವುದಾಗಿ ಹೇಳುತ್ತಿದ್ದ ಅವರು, ಇದಕ್ಕಾಗಿ ಕ್ಯೂಆರ್‌ ಕೋಡ್‌ ಬಳಸುವಂತೆ ತಿಳಿಸುತ್ತಿದ್ದರು.

ಇನ್ನೂ ನಿಂತಿಲ್ಲ ವರದಕ್ಷಿಣೆ ಭೂತ: ಗೃಹಿಣಿ ಆತ್ಮಹತ್ಯೆ

ಕೆಲವು ಬಾರಿ ಖರೀದಿಸಿದ ವಸ್ತುಗಳ ಸ್ವೀಕಾರಕ್ಕೆ ಅವಕಾಶ ಕೋರುತ್ತಿದ್ದರು. ಮುಂಗಡ ಹಣ ಪಾವತಿಸುತ್ತೇವೆ. ಸಮಯ ಮಾಡಿಕೊಂಡು ತಾವು ಇರುವ ಸ್ಥಳಕ್ಕೆ ಬಂದು ವಸ್ತುವನ್ನು ತೆಗೆದುಕೊಳ್ಳುವುದಾಗಿ ಹೇಳುತ್ತಿದ್ದರು. ಪೇಟಿಎಂ ಮೂಲಕ ಹಣ ಹಾಕುತ್ತೇವೆ. ನಿಮ್ಮ ಮೊಬೈಲ್‌ಗೆ ಕ್ಯೂಆರ್‌ ಕೋಡ್‌ ಬರುತ್ತದೆ. ಅದನ್ನು ಸ್ಕಾ್ಯನ್‌ ಮಾಡಿದರೆ ಬ್ಯಾಂಕ್‌ ಖಾತೆಗೆ ಹಣ ಸಂದಾಯವಾಗುತ್ತದೆ ಎನ್ನುತ್ತಿದ್ದರು. ಇದನ್ನು ನಂಬಿದ ಗ್ರಾಹಕರು, ಆರೋಪಿಗಳು ಕಳುಹಿಸಿದ ಕ್ಯೂಆರ್‌ ಕೋಡನ್ನು ಸ್ಕಾ್ಯನ್‌ ಮಾಡುತ್ತಿದ್ದರು. ಹೀಗೆ ಸ್ಕಾ್ಯನ್‌ ಮಾಡುತ್ತಿದ್ದಂತೆ ಗ್ರಾಹಕರ ಬ್ಯಾಂಕ್‌ ಖಾತೆಗೆ ಕಳ್ಳರು ಕನ್ನ ಹಾಕುತ್ತಿದ್ದರು. ಇದೇ ರೀತಿ ದೇಶದಲ್ಲೆಡೆ ಕೃತ್ಯ ಎಸಗಿದ್ದಾರೆ ಎಂದು ನಗರ ಆಯುಕ್ತ ಭಾಸ್ಕರ್‌ ರಾವ್‌ ಸುದ್ದಿಗಾರರಿಗೆ ತಿಳಿಸಿದರು.

ಕಾರ್ಯಾಚರಣೆ:

ಡಿಸೆಂಬರ್‌ ತಿಂಗಳಲ್ಲಿ ಕ್ಯೂಆರ್‌ ಕೋಡ್‌ ಕಳುಹಿಸಿ ವಂಚಿಸಿದ ಬಗ್ಗೆ 200ಕ್ಕೂ ಹೆಚ್ಚುಗಳು ಪ್ರಕರಣಗಳು ಸೈಬರ್‌ ಠಾಣೆಯಲ್ಲಿ ದಾಖಲಾಗಿದ್ದವು. ಈ ಕೃತ್ಯಗಳಿಂದ ಎಚ್ಚೆತ್ತ ಪೊಲೀಸರು, ಮೊಬೈಲ್‌ ಕರೆಗಳು ಹಾಗೂ ಹಣ ವರ್ಗಾವಣೆ ಬ್ಯಾಂಕ್‌ ಖಾತೆಗಳ ಬೆನ್ನಹತ್ತಿ ಕಾರ್ಯಾಚರಣೆ ನಡೆಸಿದರು. ಹೀಗೆ ಒಂದು ತಿಂಗಳ ಸತತ ಪ್ರಯತ್ನದ ಬಳಿಕ ರಾಜಸ್ಥಾನದ ಗ್ಯಾಂಗ್‌ ಕುರಿತು ಸುಳಿವು ಸಿಕ್ಕಿತು. ಮೊದಲ ಕರಣ್‌ ಸಿಂಗ್‌ನನ್ನು ಬಂಧಿಸಲಾಯಿತು. ಬಳಿಕ ಇನ್ನುಳಿದವರು ಸೆರೆಯಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಜಿ ಬ್ಯಾಂಕ್‌ ನೌಕರ ಮಾಸ್ಟರ್‌ ಮೈಂಡ್‌

ಈ ಕ್ಯೂಆರ್‌ ಕೋಡ್‌ ಗ್ಯಾಂಗ್‌ಗೆ ಮಾಜಿ ಬ್ಯಾಂಕ್‌ ನೌಕರ ಹ್ಯಾರಿಸ್‌ ಮಾಸ್ಟರ್‌ ಮೈಂಡ್‌. ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಪೇಟಿಎಂ ಕಂಪನಿಯಲ್ಲಿ ಕೆಲಸ ಮಾಡಿದ್ದ ಆತನಿಗೆ, ಪೇಟಿಎಂ ವ್ಯಾಲೆಟ್‌ ಬಗ್ಗೆ ಮಾಹಿತಿ ಇತ್ತು. ಬಳಿಕ ಹಣ ದೋಚಲು ಇನ್ನುಳಿದ ನಾಲ್ವರ ಜತೆ ಸೇರಿ ತಂಡ ರಚಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಆರೋಪಿಗಳ ಪೈಕಿ ಜಮೀಲ್‌ ವೃತ್ತಿಪರ ವಾಹನ ಕಳ್ಳನಾಗಿದ್ದು, ಆತನ ವಿರುದ್ಧ ಎಂಟು ಪ್ರಕರಣಗಳು ದಾಖಲಾಗಿವೆ. ಈ ವಂಚನೆಗೆ 100ಕ್ಕೂ ಹೆಚ್ಚು ಬ್ಯಾಂಕ್‌ ಖಾತೆಗಳನ್ನು ಕರಣ್‌ ನಿರ್ವಹಿಸುತ್ತಿದ್ದ. ಇನ್ನುಳಿದ ಮೆಹಜರ್‌ ಹಾಗೂ ಅಕ್ರಂ, ಸಾರ್ವಜನಿಕರಿಗೆ ಗ್ರಾಹಕರ ಸೋಗಿನಲ್ಲಿ ಕರೆ ಮಾಡಿ ತಮ್ಮ ಮೋಸದ ಜಾಲಕ್ಕೆ ಬೀಳಿಸುತ್ತಿದ್ದರು. ಯೋಧರಂತೆ ದಿರಿಸು ಧರಿಸಿ ಸಹ ಅವರು ಜನರಿಗೆ ಟೋಪಿ ಹಾಕಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

ಕ್ಯಾಪ್ಟನ್‌ ಬಂಧಿಸಿದಕ್ಕೆ ಪೊಲೀಸರ ವಿರುದ್ಧ ಸಿಟ್ಟು!

ರಾಜಸ್ಥಾನದ ಕಿಸಾನ್‌ಪುರದಲ್ಲಿ ಕರಣ್‌ ಸಿಂಗ್‌ನನ್ನು ಬಂಧಿಸಿದ ಇನ್‌ಸ್ಪೆಕ್ಟರ್‌ ಪ್ರಶಾಂತ್‌ ಬಾಬು, ಆತನ ಕುಟುಂಬ ಸದಸ್ಯರಿಗೆ ತಮ್ಮ ಮೊಬೈಲ್‌ ನಂಬರ್‌ ಕೊಟ್ಟಿದ್ದರು. ಈ ನಂಬರ್‌ ಪಡೆದ ಕರಣ್‌ ಸಹಚರರು, ತಮ್ಮ ನಾಯಕನ ಬಂಧಿಸಿದ್ದಕ್ಕೆ ಪೊಲೀಸರು ವಿರುದ್ಧ ಹಗೆತನ ತೀರಿಸಲು ಮುಂದಾದರು.

ಆಗ ಇನ್‌ಸ್ಪೆಕ್ಟರ್‌ ಅವರು ವಾಟ್ಸಪ್‌ ಡಿಪಿಗೆ ಹಾಕಿದ್ದ ಫೋಟೋ ಕದ್ದ ಆರೋಪಿಗಳು, ಬಳಿಕ ಅವರ ಹೆಸರು ಬಳಸಿ ನೋಯ್ಡಾದ ವ್ಯಕ್ತಿಯೊಬ್ಬರಿಗೆ ವಂಚಿಸಿದ್ದರು. ಅಲ್ಲದೆ, ಗೂಗಲ್‌ನಲ್ಲಿ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಫೋಟೋ ತೆಗೆದುಕೊಂಡ ವಂಚಕರು, ತಮ್ಮ ವಾಟ್ಸಪ್‌ ಡಿಪಿಗೆ ಆಯುಕ್ತರ ಫೋಟೋ ಹಾಕಿದ್ದರು. ಕೆಲ ದಿನಗಳ ಹಿಂದೆ ಟ್ರೇಡ್‌ಮಿಲ್‌ ಯಂತ್ರ ಮಾರಾಟಕ್ಕೆ ಇಟ್ಟಿದ್ದ ನಿವೃತ್ತ ಅಧಿಕಾರಿಯೊಬ್ಬರಿಗೆ ಕರೆ ಮಾಡಿದ್ದ ಆರೋಪಿ, ತನ್ನನ್ನು ಆಯುಕ್ತ ಭಾಸ್ಕರ್‌ ರಾವ್‌ ಎಂದೂ ಪರಿಚಯಿಸಿಕೊಂಡಿದ್ದ. ಅಲ್ಲದೆ, ಟ್ರೂ ಕಾಲರ್‌ನಲ್ಲಿ ಆ ನಂಬರ್‌ ಪರಿಶೀಲಿಸಿದಾಗ ‘ಭಾಸ್ಕರ್‌ ರಾವ್‌ ಐಪಿಎಸ್‌’ ಎಂದು ಬಂದಿತ್ತು. ಹೀಗಾಗಿ ಆಯುಕ್ತರೇ ಎಂದು ನಂಬಿದ ನಿವೃತ್ತ ಅಧಿಕಾರಿ, ಆರೋಪಿಗಳ ಮಾಡಿದ ಮೋಸದಿಂದ .50 ಸಾವಿರ ಕಳೆದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರನ್ನೇ ಬೆದರಿಸಿ ಓಡಿಸಿದ್ರು!

ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಕಾಮ ಮತ್ತು ದೌಲ್‌ಬಾಸ್‌ ಹಳ್ಳಿಗಳಲ್ಲಿ ಸೈಬರ್‌ ವಂಚಕರನ್ನು ಬಂಧಿಸಲು ತೆರಲಿದ್ದ ಪೊಲೀಸರನ್ನು ಸ್ಥಳೀಯರು ಬೆದರಿಸಿ ಕಳುಹಿಸಿರುವ ಘಟನೆ ನಡೆದಿದೆ. ಬಳಿಕ ಸ್ಥಳೀಯ ಪೊಲೀಸರ ನೆರವು ಪಡೆದು ಕೊನೆಗೆ ಆರೋಪಿಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇಶ ವ್ಯಾಪ್ತಿ ಆರೋಪಿಗಳು 200ಕ್ಕೂ ಹೆಚ್ಚು ವಂಚನೆ ಕೃತ್ಯ ಎಸಗಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಈ ಬಗ್ಗೆ ಗುಜರಾತ್‌, ದೆಹಲಿ ಹಾಗೂ ಮಧ್ಯಪ್ರದೇಶ ಸೇರಿದಂತೆ ಇನ್ನಿತರ ರಾಜ್ಯಗಳ ಪೊಲೀಸರಿಗೆ ಸಹ ಮಾಹಿತಿ ನೀಡಲಾಗುತ್ತದೆ. ಆನ್‌ಲೈನ್‌ನಲ್ಲಿ ವಹಿವಾಟು ನಡೆಸುವಾಗ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಎಸ್‌.ಭಾಸ್ಕರ್‌ ರಾವ್‌ ಹೇಳಿದ್ದಾರೆ.

click me!