ಕೋವಿಡ್ ಸೋಂಕು ನಿಯಂತ್ರಣದ ಹೆಸರಿನಲ್ಲಿ ರಾಜ್ಯದಲ್ಲಿ ಆರ್ಥಿಕ ಪುನಶ್ಚೇತನಕ್ಕೆ ಹಾಗೂ ಯಾವುದೇ ಚಟುವಟಿಕೆಗೆ ನಿರ್ಬಂಧ ಹೇರುವ ವಿಚಾರ ಸರ್ಕಾರದ ಮುಂದಿಲ್ಲ. ಜೀವದ ಜತೆಗೆ ಜೀವನವೂ ಮುಖ್ಯ. ಒಂದೆಡೆ ಜೀವ ಉಳಿಸಿ ನಿರ್ಬಂಧವಿಲ್ಲದೇ ಸುಗಮವಾಗಿ ಜೀವನ ನಡೆಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಧಾರವಾಡ (ಡಿ.28): ಕೋವಿಡ್ ಸೋಂಕು ನಿಯಂತ್ರಣದ ಹೆಸರಿನಲ್ಲಿ ರಾಜ್ಯದಲ್ಲಿ ಆರ್ಥಿಕ ಪುನಶ್ಚೇತನಕ್ಕೆ ಹಾಗೂ ಯಾವುದೇ ಚಟುವಟಿಕೆಗೆ ನಿರ್ಬಂಧ ಹೇರುವ ವಿಚಾರ ಸರ್ಕಾರದ ಮುಂದಿಲ್ಲ. ಜೀವದ ಜತೆಗೆ ಜೀವನವೂ ಮುಖ್ಯ. ಒಂದೆಡೆ ಜೀವ ಉಳಿಸಿ ನಿರ್ಬಂಧವಿಲ್ಲದೇ ಸುಗಮವಾಗಿ ಜೀವನ ನಡೆಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರ ಇಲ್ಲಿಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಅವರು, ಈ ವಿಷಯದಲ್ಲಿ ರಾಜ್ಯದ ಜನತೆಗೆ ಗೊಂದಲ ಬೇಡ. ಈಗತಾನೆ ರಾಜ್ಯದಲ್ಲಿ ಆರ್ಥಿಕ ಪುನಶ್ಚೇತನವಾಗುತ್ತಿದೆ.
ಈಗಾಗಲೇ ಎರಡು ವರ್ಷಗಳ ಕಾಲ ಕೋವಿಡ್ ಹಿನ್ನೆಲೆಯಲ್ಲಿ ಎಲ್ಲ ವೃತ್ತಿಗಳ ಜನರು ತುಂಬ ಆರ್ಥಿಕ ಸಂಕಷ್ಟಅನುಭವಿಸುತ್ತಿದ್ದಾರೆ. ಈಗ ಮತ್ತೆ ಅವರನ್ನು ಕಷ್ಟಕ್ಕೆ ದೂಡುವ ಆಲೋಚನೆ ಸರ್ಕಾರದ ಮುಂದಿಲ್ಲ. ಹಾವೇರಿಯಲ್ಲಾಗುವ ಸಾಹಿತ್ಯ ಸಮ್ಮೇಳನವಾಗಲಿ ಅಥವಾ ಧಾರವಾಡದಲ್ಲಾಗುವ ಯುವ ಸಮ್ಮೇಳನ ಸಹ ಹೊರತಾಗಿಲ್ಲ. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, 3ನೇ ಡೋಸ್ ಲಸಿಕೆ ಪಡೆಯುವುದು ಹಾಗೂ ಒಳಾಂಗಣದಲ್ಲಿ ಅಂತರ ಕಾಯ್ದುಕೊಳ್ಳುವ ಕೆಲಸವಾಗಬೇಕು ಎಂದರು.
ಮುಂಬೈಯಲ್ಲಿ ಮರಾಠಿ ಭಾಷಿಗರು ಎಷ್ಟಿದ್ದಾರೆ?: ಸಚಿವ ಅಶ್ವತ್ಥನಾರಾಯಣ ಪ್ರಶ್ನೆ
ಬೇರೆ ಬೇರೆ ದೇಶಗಳಲ್ಲಿ ಕೋವಿಡ್ ಬಿಎಫ್-7 ಸೋಂಕಿನ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದ ಎಲ್ಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಅಣಕು ಭೇಟಿಯನ್ನು ಇಟ್ಟುಕೊಳ್ಳಲಾಗಿದೆ. ಅದರ ಭಾಗವಾಗಿ ಧಾರವಾಡದ ಜಿಲ್ಲಾಸ್ಪತ್ರೆಗೂ ಭೇಟಿ ನೀಡಿದ್ದೇನೆ. ಇಲ್ಲಿಯ ಆಕ್ಸಿಜನ್ ಪ್ಲಾಂಟ್, ಕೋವಿಡ್ ವಾರ್ಡ್ ಸಿದ್ಧತೆಗಳು, ವೈದ್ಯರು, ಸಿಬ್ಬಂದಿ ಹಾಗೂ ಔಷಧಿ ಸಿದ್ಧತೆಯನ್ನು ಪರಾಮರ್ಶೆ ಮಾಡಿದ್ದೇನೆ. ಯಾವುದೇ ಸಂದರ್ಭದಲ್ಲಿ ಸೋಂಕು ಹೆಚ್ಚಾದರೆ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡಿ ಶೀಘ್ರ ಗುಣಮುಖರಾಗುವ ಕೆಲಸ ಆಗಬೇಕು. ಅದರೊಂದಿಗೆ ವೈದ್ಯರು, ಸಿಬ್ಬಂದಿ ಸಹ ಮಾನಸಿಕವಾಗಿಯೂ ಸಿದ್ಧರಾಗಬೇಕು ಎಂದರು.
ಈ ಭೇಟಿಯಲ್ಲಿ ಜಿಲ್ಲಾಸ್ಪತ್ರೆಗಳಲ್ಲಿ ಏನೇನು ಸುಧಾರಣೆ ತರಬೇಕು ಎಂಬುದನ್ನು ಗಮನಿಸಿ ಸುಧಾರಣೆ ಮಾಡಲಾಗುವುದು ಎಂದ ಅವರು, ಎರಡು ವರ್ಷಗಳಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ತೆಗೆದುಕೊಳ್ಳಲಾಗಿದೆ. ಬರುವ ದಿನಗಳಲ್ಲಿ ಕೋವಿಡ್ ಸೋಂಕಿತರು ಹೆಚ್ಚಾದರೆ ತಾತ್ಕಾಲಿಕವಾಗಿ ಸಿಬ್ಬಂದಿ ನೇಮಕ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಅಲ್ಲದೇ, ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದರೆ ಅವರನ್ನು ಕಾಯಂ ಮಾಡಿಕೊಳ್ಳಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ವಿಚಾರವಾಗಿ ಇರುವ ಸೌಲಭ್ಯಗಳ ಕುರಿತು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಕುಮಾರ ಮಾನಕರ ಸಚಿವರಿಗೆ ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಹಾಗೂ ಇಲಾಖೆ ಅಧಿಕಾರಿಗಳು ಇದ್ದರು. ಇದಕ್ಕೂ ಮುಂಚೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಸಹ ಜಿಲ್ಲಾಸ್ಪತ್ರೆಯ ಕೋವಿಡ್ ಸೌಲಭ್ಯಗಳ ಮಾಹಿತಿ ಪಡೆದರು.
ಬಿಎಫ್-7 ನಿಯಂತ್ರಣಕ್ಕೆ ಸಕಲ ಸಿದ್ಧತೆ: ಕೋವಿಡ್ ಹೊಸ ತಳಿ ಬಿಎಫ್- 7ನ್ನು ನಿಯಂತ್ರಣ ಮಾಡಲು ರಾಜ್ಯ ಸರ್ಕಾರ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ. ಅದಾಗ್ಯೂ ಸೋಂಕಿನಿಂದ ತೊಂದರೆ ಉಂಟಾದರೆ ಅದಕ್ಕೆ ಬೇಕಾದ ರಕ್ಷಣೆ, ಚಿಕಿತ್ಸೆ ನೀಡುವ ಜವಾಬ್ದಾರಿ ಸರ್ಕಾರ ತೆಗೆದುಕೊಳ್ಳಲಿದೆ. ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದರು. ಕೊರೋನಾ ಹಿನ್ನೆಲೆ ನಗರದ ಕಿಮ್ಸ್ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಮುನ್ನೆಚ್ಚರಿಕಾ ಕ್ರಮ ಪರಿಶೀಲನೆ ನಡೆಸಿ ಕಿಮ್ಸ್ ನಿರ್ದೇಶಕರಿಂದ ಮಾಹಿತಿ ಪಡೆದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಜೆಡಿಎಸ್, ಕಾಂಗ್ರೆಸ್ ಯಾತ್ರೆಗೆ ತೊಂದರೆ ಮಾಡಲ್ಲ: ಸಚಿವ ಸುಧಾಕರ್
ಮಂಗಳವಾರ ರಾಜ್ಯಾದ್ಯಂತ ಆರೋಗ್ಯ ವ್ಯವಸ್ಥೆ ತಿಳಿದುಕೊಳ್ಳುವ ಹಿನ್ನೆಲೆ ಎಲ್ಲ ಜಿಲ್ಲೆ, ತಾಲೂಕು ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ನಡೆಯುತ್ತಿದೆ. ಅದರಂತೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವೈದ್ಯರೊಂದಿಗೆ ಸಭೆ ನಡೆಸಿದ್ದೇನೆ. ಈಗಾಗಲೇ ಹುಬ್ಬಳ್ಳಿಯ ಕಿಮ್ಸ್ ಕೋವಿಡ್ ವೇಳೆ ಆರೋಗ್ಯ ಸಂಜೀವಿನಿ ಆಗಿ ಕೆಲಸ ಮಾಡಿದೆ. ಹೊಸ ಸೋಂಕು ಎದುರಿಸಲು ಕಿಮ್ಸ್ ಸರ್ವ ಸನ್ನದ್ಧವಾಗಿದೆ ಎಂದರು. ಕೋವಿಡ್‌ಗಾಗಿ ಪ್ರತ್ಯೇಕ 50-60 ಹಾಸಿಗೆ, 200 ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ. ಔಷಧಿ ದಾಸ್ತಾನು ಇದೆ. 40 ಕೆಎಲ್ ಸಾಮರ್ಥ್ಯದ ಆಕ್ಸಿಜನ್ ಪ್ಲಾಂಟ್ ಅಳವಡಿಕೆ ಮಾಡಲಾಗಿದೆ. ಈಗಾಗಲೇ ಕಿಮ್ಸ್ ವೈದ್ಯರು ಮೂರು ಅಲೆಗಳಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಮುಂದೆಯೂ ವೈದ್ಯರು ಇನ್ನಷ್ಟುಕ್ರಿಯಾಶೀಲವಾಗಿ ಜನರಿಗೆ ಸ್ಪಂದಿಸುವ ಕೆಲಸ ಮಾಡಲಿದ್ದಾರೆ ಎಂದು ಸುಧಾಕರ ತಿಳಿಸಿದರು.