
ಉಡುಪಿ (ಡಿ.28): ಜೋಡೆತ್ತುಗಳಂತೆ ಕಷ್ಟ ಸುಖಗಳನ್ನು ಉಂಡು ಜೊತೆಯಾಗಿ ಕಳೆದವರು, ಸಾವಿನಲ್ಲೂ ಜೊತೆಯಾಗಿ ಇಹಲೋಕ ಪ್ರಯಾಣ ಮುಗಿಸಿದ ಅಪರೂಪದ ಪ್ರಸಂಗ ಉಡುಪಿ ಜಿಲ್ಲೆಯ ಬೈಂದೂರು ಸಮೀಪದ ಉಪ್ಪಂದದಲ್ಲಿ ನಡೆದಿದೆ! ಅನೇಕರ ದಾಂಪತ್ಯ ಜೊತೆಯಾಗಿ ತಿಂಗಳು, ವರ್ಷದ ಅವಧಿಯಲ್ಲೇ ಮುರಿದು ಬೀಳುತ್ತಿರುವುದನ್ನು ಕಾಣಬಹುದು. ಜಂಜಾಟಗಳಲ್ಲೇ ದಿನ ಕಳೆಯುತ್ತಿರುವ ಅದೆಷ್ಟೋ ಜೋಡಿಗಳನ್ನೂ ಕಾಣಬಹುದು. ಆದರೆ ಸಂಸಾರದ ನೊಗ ಹೊತ್ತವರು ಸಾವಿನಲ್ಲೂ ಒಂದಾಗಿ, ಒಂದೇ ಚಿತೆಯೇರುವುದು ಅಪರೂಪದಲ್ಲಿ ಅಪರೂಪ.
ಈ ಸನ್ನಿವೇಶಕ್ಕೆ ಉಪ್ಪುಂದದ ಜನತೆ ಸಾಕ್ಷಿಯಾದರು. ಈ ದಂಪತಿಗಳ ಪ್ರೀತಿ ಅದೆಷ್ಟಿರಬಹುದು ಎಂಬುದನ್ನು ಊಹಿಸುವುದೂ ಅಸಾಧ್ಯ ಎಂದು ಗ್ರಾಮದ ಜನರು ಆಡಿಕೊಳ್ಳುತ್ತಿದ್ದಾರೆ. ಇಲ್ಲೊಂದು ವೃದ್ಧ ಜೋಡಿ ಸಾವಿನಲ್ಲೂ ಒಂದಾಗಿ, ಜೊತೆಯಾಗಿ ಚಿತೆಯೇರಿದ್ದಾರೆ. ಉಪ್ಪುಂದ ಗ್ರಾಮದ ಸಣ್ಣ ಬೆಸ್ಕೂರು ಮನೆ ನಿವಾಸಿ ಮುಡೂರ ದೇವಾಡಿಗರಿಗೆ 85 ವರ್ಷ ಪ್ರಾಯ. 1937ರಲ್ಲಿ ಜನಿಸಿದ್ದವರು, ವಯೋಸಹಜ ಅನಾರೋಗ್ಯ ಅವರನ್ನು ಕಾಡಿತ್ತು. ಭಾನುವಾರ ರಾತ್ರಿ ಅವರ ಪತ್ನಿ ಮನೆಯಾದ ಬಿಜೂರಿನಲ್ಲಿ ಸಾವನ್ನಪ್ಪಿದ್ದರು.
Udupi: ಕೋಡಿಯಲ್ಲಿ ಕಡಲಾಮೆಯ ಮೊಟ್ಟೆಗಳ ರಕ್ಷಣೆಗೆ ವ್ಯಾಪಕ ಪ್ರಶಂಸೆ
ಇವರ ಸಾವಿನ ಸುದ್ದಿ ಕೇಳಿ ಬಂಧುಗಳು, ಮಿತ್ರರು ಬಂದು ಸೇರಿದರು. ಅಂತ್ಯ ಸಂಸ್ಕಾರಕ್ಕೆ ಬೇಕಾದ ತಯಾರಿ ನಡೆಸಿದರು. ಇನ್ನೇನು ಅಂತ್ಯ ಸಂಸ್ಕಾರ ನಡೆಸಬೇಕು ಅನ್ನುವುದಕ್ಕೆ ಮೊದಲು, ಪತಿಯ ಅಂತಿಮ ದರ್ಶನಕ್ಕೆ ಪತ್ನಿಯನ್ನು ಕರೆಸಲಾಯಿತು. ಮನೆಯೊಳಗೆ ದೇವಾಡಿಗರ ಮೃತದೇಹವನ್ನಿಡಲಾಗಿತ್ತು. ಇದ್ದಕ್ಕಿದ್ದಂತೆ ಅವರ ಪತ್ನಿ 77 ವರ್ಷ ಪ್ರಾಯದ ಕೃಷ್ಣಿ ದೇವಾಡಿಗ ಪತಿಯ ಪಾರ್ಥಿವ ಶರೀರದ ಎದುರೇ ಕುಳಿತಿದ್ದವರು, ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದರು.
ಉಡುಪಿ: ಕರಾವಳಿಯಲ್ಲಿ ಪಕ್ಷಿಗಳ ಕಲರವ- ಪಕ್ಷಿ ವೀಕ್ಷಣೆಗೆ ಇದು ಸಕಾಲ
ಮನೆ ಆವರಣದಲ್ಲಿ ಸೇರಿದವರಿಗೆಲ್ಲ ಆಶ್ಚರ್ಯ! ಅಲ್ಲಿ ಏನಾಗ್ತಿದೆ ಅನ್ನೋದು ಅರಿವಿಗೆ ಬರುವ ಮೊದಲು ದಂಪತಿಗಳಿಬ್ಬರು ಸಾವಿನಲ್ಲಿ ಒಂದಾಗಿದ್ದರು. ಕೃಷ್ಣಿ ದೇವಾಡಿಗ ಪತಿ ಮಡೂರ ದೇವಾಡಿಗರ ಹಾದಿ ತುಳಿದಾಗಿತ್ತು!. ಪತಿಯ ಸಾವಿನ ಆಘಾತವನ್ನು ಅರಗಿಸಿಕೊಳ್ಳಲಾಗದೆ ಪತ್ನಿಯು ಅದೇ ಹಾದಿ ತುಳಿದ ಈ ಅಪರೂಪದ ಪ್ರಸಂಗ ಅಲ್ಲಿ ನೆರೆದಿದ್ದವರಿಗೆಲ್ಲ. ಕೊನೆಗೆ ಇಬ್ಬರನ್ನು ಒಂದೇ ಚಿತೆಯಲ್ಲಿ ಸಂಸ್ಕಾರ ಮಾಡಲಾಯಿತು. ಐವರು ಗಂಡು ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಇವರ ಸಾವನ್ನು ಗ್ರಾಮದ ಜನ ಯಾವತ್ತೂ ಮರೆಯುವಂತಿಲ್ಲ!