ಆರೋಗ್ಯ ಸಚಿವರ ಕ್ಷೇತ್ರದಲ್ಲೇ ಇಲ್ಲ ವೈದ್ಯರು : ನಿತ್ಯ ಜನರ ಗೋಳು

By Kannadaprabha NewsFirst Published Jan 11, 2020, 1:07 PM IST
Highlights

ಆರೋಗ್ಯ ಸಚಿವ ಶ್ರೀರಾಮುಲು ಕ್ಷೇತ್ರದಲ್ಲಿಯೇ ವೈದ್ಯರ ಕೊರತೆ ಇದೆ. ಇಲ್ಲಿನ ಜನರು ನಿತ್ಯ ಗೋಳು ಅನುಭವಿಸುವಂತಾಗಿದೆ ಎಂದು ಮಾಜಿ ಶಾಸಕ ತಿಪ್ಪೇಸ್ವಾಮಿ ಆರೋಪಿಸಿದ್ದಾರೆ.

ಚಳ್ಳಕೆರೆ [ಜ.11] : ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತ ಗೊಂಡಿದ್ದು, ಕ್ಷೇತ್ರದ ಶಾಸಕ ಬಿ.ಶ್ರೀರಾಮುಲು ಅವರೇ ರಾಜ್ಯದ ಆರೋಗ್ಯ ಸಚಿವರಾಗಿದ್ದರೂ, ಮೊಳಕಾಲ್ಮುರು ಸರ್ಕಾರಿ ಆಸ್ಪತ್ರೆಗೆ ವೈದ್ಯರೇ ಇಲ್ಲ. ವೈದ್ಯರ ಕೊರತೆ ನಡುವೆ  ಜನರ ಗೋಳು ಕೇಳುವರೇ ಇಲ್ಲದಂತಾಗಿದೆ ಎಂದು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಶಾಸಕನಾಗಿದ್ದಾಗ ಗ್ರಾಮೀಣ ಭಾಗದ ರಸ್ತೆ, ನೀರು, ವಿದ್ಯುತ್ ಸಂಪರ್ಕಕ್ಕೆ ಯಾವುದೇ ಕೊರತೆ ಇಲ್ಲದಂತೆ ಕಾರ್ಯ ನಿರ್ವ ಹಿಸಿದ್ದೇನೆ. ಕ್ಷೇತ್ರದಲ್ಲಿ ಶಿಕ್ಷಣದ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. 5 ಮುರಾರ್ಜಿ, 1 ಕಿತ್ತೂರು ರಾಣಿ ಚನ್ನಮ್ಮ, 1 ಐಟಿಐ ಕಾಲೇಜು ಅನ್ನು ಪ್ರಾರಂಭಿಸಿದ್ದೆ. ತುಂಗಾ ಹಿನ್ನೀರು ಯೋಜನೆಯಡಿ ಕ್ಷೇತ್ರದ ಬಹುತೇಕ ಗ್ರಾಮಗಳ ಕೆರೆ ಗಳನ್ನು ತುಂಬಿಸಲು ಪ್ರಯತ್ನಿಸಿದ್ದೆ. 

ಕ್ಷೇತ್ರದ ಅಭಿವೃದ್ಧಿಗೆ ಸದಾಕಾಲ ಜನರೊಂದಿಗೆ ಸಂಪರ್ಕ ಇಟ್ಟುಕೊಂಡು ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೆ. ಯಾವುದೇ ಗ್ರಾಮಕ್ಕೆ ಹೋದರೂ ಅಲ್ಲಿ ಜನರ ಸಮಸ್ಯೆಗೆ ಮೊದಲ ಆದ್ಯತೆ ನೀಡುತ್ತಿದ್ದೆ. ಆದರೆ, ಈಗ ಸಚಿವ ಶ್ರೀರಾಮುಲು ನಾನು ಈ ಹಿಂದೆ ಕೈಗೊಂಡಿರುವ ಕೆಲವು ಕಾಮಗಾರಿಗಳ ಉದ್ಘಾಟನೆಗೆ ಮಾತ್ರ ಕ್ಷೇತ್ರಕ್ಕೆ ಆಗಮಿಸುತ್ತಾರೆ ಎಂದು ದೂರಿದರು.

'ಶ್ರೀರಾಮುಲುದ್ದು ಬಿಲ್ಡಪ್ ಮಾತ್ರ, ಮಂತ್ರಿಗಿರಿ ನಿಭಾಯಿಸಲು ಬರಲ್ಲ'..

ವಿಶೇಷವಾಗಿ ಸರ್ಕಾರ ಆಸ್ಪತ್ರೆಗಳ ಸಮಸ್ಯೆಗಳ ನಿವಾರಣೆಗೂ ಪ್ರಯತ್ನಿಸಿದ್ದೆ. ಆದರೆ, ಕ್ಷೇತ್ರದ ಜನರ ದುರ್ದೈವ ಎನ್ನುವಂತೆ ಕ್ಷೇತ್ರದ ಶಾಸಕರೇ ಆರೋಗ್ಯ ಸಚಿವರಾಗಿದ್ದರೂ ಮೊಳಕಾಲ್ಮೂರು ಆಸ್ಪತ್ರೆಗೆ ವೈದ್ಯರಿಲ್ಲ. ಸ್ವಚ್ಛತೆ ಇಲ್ಲ. ಅದೇ ರೀತಿ ಜಿಲ್ಲೆಯ ಬಹುದೊಡ್ಡ ತಾಲೂಕು ಕೇಂದ್ರವಾದ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲೂ ಸೂಕ್ತ ಸೌಲಭ್ಯಗಳಿಲ್ಲ. ಕೇವಲ ಆರೋಗ್ಯ ಸಚಿವರೆಂಬ ಅಧಿಕಾರವನ್ನು ಹೊಂದಿದ್ದರೂ ಕ್ಷೇತ್ರದ ಜನ ಸಮಸ್ಯೆ ನಿವಾರಿಸಲು ಅವರಿಂದ ಸಾಧ್ಯವಾಗಿಲ್ಲ. ಕ್ಷೇತ್ರಕ್ಕೆ ಭೇಟಿ ನೀಡುವುದು, ಜನರ ಕೈಗೆ ಸಿಗುವುದೇ ಅಪರೂಪವಾಗಿದ್ದು, ಆಕಸ್ಮಿಕವಾಗಿ ಬಂದಲ್ಲಿ ನೂರಾರು ಜನರೊಂದಿಗೆ ಆಗಮಿಸಿ ಕೆಲವೇ ನಿಮಿಷವಿದ್ದು, ಹೊರಟು ಹೋಗುತ್ತಾರೆ.

ಆದ್ದರಿಂದ ಕೇವಲ ಅಧಿಕಾರದ ಆಸೆಗಾಗಿ ಸಚಿವ ಸ್ಥಾನ ಪಡೆದಂತೆ ಕಾಣುತ್ತದೆ. ಜನಸೇವೆಯನ್ನು ಮರೆತ ಇಂತಹ ಜನಪ್ರತಿನಿಧಿಗೆ ಜನರು ಮುಂದಿನ ದಿನಗಳಲ್ಲಿ ಬುದ್ಧಿ ಕಲಿಸುತ್ತಾರೆ ಎಂದು ತಿಳಿಸಿದರು

click me!