ಭಿಕ್ಷುಕರ ಟೆನ್ಶನ್‌ನಿಂದ ಕೊಪ್ಪಳಕ್ಕೆ ಬಿಗ್ ರಿಲೀಫ್| ಪ್ರಾಥಮಿಕ ಸಂಪರ್ಕದ ಅಷ್ಟು ವರದಿಯೂ ನೆಗೆಟಿವ್| ಮುಂಬೈ ವ್ಯಕ್ತಿಯೊಂದಿಗೆ ಬಂದ ಹಾಗೂ ಆತನನ್ನು ಕರೆದು ತಂದಿದ್ದ ಟಾಟಾ ಏಸ್ ವಾಹನವೂ ಪತ್ತೆಯಾಗುತ್ತಿಲ್ಲ ಮತ್ತು ಚಾಲಕನ ಸುಳಿವೂ ಸಿಗುತ್ತಿಲ್ಲ|
ಕೊಪ್ಪಳ(ಮೇ.23): ಜಿಲ್ಲೆ ಕೊರೋನಾ ಗಂಡಾಂತರದಿಂದ ಮತ್ತೆ ಮತ್ತೆ ಪಾರಾಗುತ್ತಲೇ ಇದೆ. ಇದುವರೆಗಿನ ಪ್ರಾಥಮಿಕ ಸಂಪರ್ಕದ ವರದಿಗಳು ನೆಗೆಟಿವ್ ಬರುತ್ತಿವೆ. ಅದರಲ್ಲೂ ಕೊಪ್ಪಳ ಜಿಲ್ಲೆಯಲ್ಲಿ ಭಾರಿ ಟೆನ್ಶನ್‌ಗೆ ಕಾರಣವಾಗಿದ್ದ ಅಷ್ಟು ಭಿಕ್ಷುಕರ ವರದಿಗಳು ನೆಗೆಟಿವ್ ಬಂದಿವೆ.
ಪಿ. 1173 ಪ್ರಯಾಣಿಸಿದ ಬಸ್ಸಿನಲ್ಲಿ ಪ್ರಯಾಣಿಸಿದ 9 ಭಿಕ್ಷುಕರು ಸೇರಿದಂತೆ 26 ಜನರ ವರದಿಯೂ ನೆಗೆಟಿವ್ ಬಂದಿದೆ. ಇದುವೇ ಕೊಪ್ಪಳ ಜಿಲ್ಲಾಡಳಿತಕ್ಕೆ ಭಾರಿ ಆತಂಕವನ್ನುಂಟು ಮಾಡಿತ್ತು. ಜಿಲ್ಲೆಯಲ್ಲಿ ಇದುವರೆಗೂ ಮೂರು ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಅದರಲ್ಲೂ ಮುಂಬೈದಿಂದ ಬಂದಿರುವ ಇಬ್ಬರು ಹಾಗೂ ತಮಿಳನಾಡಿನಿಂದ ಬಂದಿರುವ ಒಬ್ಬ ಸೇರಿದಂತೆ 3 ಪಾಸಿಟಿವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಸಂಪರ್ಕದಲ್ಲಿಯೇ ಸುಮಾರು 183 ಜನರು ಬಂದಿದ್ದರು. ಇವರೆಲ್ಲರ ಪ್ರಯೋಗಾಲಯದ ವರದಿಯೂ ನೆಗೆಟಿವ್ ಬಂದಿವೆ.
ಭಿಕ್ಷುಕರಿಂದ ಕೊಪ್ಪಳದಲ್ಲಿ ಕೊರೋನಾ ಮಹಾಸ್ಫೋಟ?
ಗಂಡಾಂತರದಿಂದ ಪಾರು:
ಮುಂಬೈನಿಂದ ಬಂದಿದ್ದ ಮಹಿಳೆಯಿಂದ ಹಿಡಿದು, ನಿಲೋಗಲ್‌ನಲ್ಲಿ ಪಾಸಿಟಿವ್ ವ್ಯಕ್ತಿ ಹೋಗಿ ಬಂದಿರುವುದು ಮತ್ತು ಕಂಪ್ಲಿಯ ಪಾಸಿಟಿವ್ ವ್ಯಕ್ತಿ ಪ್ರಯಾಣಿಸದ ಬಸ್ಸಿನಲ್ಲಿಯೂ ಪ್ರಯಾಣಿಸಿದವರ ವರದಿ ಸೇರಿದಂತೆ ಜಿಲ್ಲೆಯಲ್ಲಿ ಇದುವರೆಗೂ ಪ್ರಾಥಮಿಕ ಸಂಪರ್ಕದ ವರದಿಗಳು ನೆಗೆಟಿವ್ ಬಂದಿರುವುದರಿಂದ ಕೊಪ್ಪಳ ಮತ್ತೆ ಮತ್ತೆ ಗಂಡಾಂತರದಿಂದ ಪಾರಾಗುತ್ತಲೇ ಇದೆ ಎನಿಸುತ್ತದೆ.
ಈ ಬಾರಿಯೂ ಮೂರು ಪಾಸಿಟಿವ್ ಪ್ರಕರಣದಲ್ಲಿಯೂ ಪ್ರಾಥಮಿಕ ಸಂಪರ್ಕ ಹೊಂದಿದ ಅಷ್ಟುಜನರ ವರದಿಯೂ ನೆಗೆಟಿವ್ ಬಂದಿರುವುದನ್ನು ನೋಡಿದರೇ ಕೊಪ್ಪಳ ಈ ಬಾರಿ ಬಹುದೊಡ್ಡ ಗಂಡಾಂತರದಿಂದಲೇ ಪಾರಾದಂತಾಗಿದೆ. ಇದರಿಂದ ಕೊಪ್ಪಳಕ್ಕೆ ಬಿಗ್ ರಿಲೀಫ್ ಸಿಕ್ಕಿದೆ.
ಆಗಿದ್ದೇನು?:
ಮುಂಬೈದಿಂದ ಬಂದಿದ್ದ ವ್ಯಕ್ತಿ ಕೊಪ್ಪಳದಿಂದ ಕುಷ್ಟಗಿಗೆ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದ್ದರು. ಇದೇ ಬಸ್ಸಿನಲ್ಲಿ ಕೊಪ್ಪಳದಿಂದ ಕುಷ್ಟಗಿಗೆ 9 ಭಿಕ್ಷುಕರು ಪ್ರಯಾಣ ಬೆಳೆಸಿದ್ದರು. ಹೀಗಾಗಿ, ದೊಡ್ಡ ಟೆನ್ಶನ್ ಆಗಿತ್ತು. ಅಷ್ಟುಭಿಕ್ಷುಕರು ಕುಷ್ಟಗಿಯಲ್ಲಿ ಸುತ್ತಾಡಿ ಭಿಕ್ಷೆ ಬೇಡಿದ್ದರು. ಹೀಗಾಗಿ, ಭಿಕ್ಷುಕರ ಸ್ವಾಬ್ ವರದಿಯನ್ನು ಜಿಲ್ಲಾಡಳಿತ ತುದಿಗಾಲ ಮೇಲೆ ನಿಂತು ಕಾಯುತ್ತಿತ್ತು. ಆದರೆ, ಈಗ ನೆಗೆಟಿವ್ ಬಂದಿದ್ದರಿಂದ ನಿರಾಳಭಾವ ಮೂಡಿದೆ.
ಪತ್ತೆಯಾಗಿಲ್ಲ:
ಮುಂಬೈ ವ್ಯಕ್ತಿಯೊಂದಿಗೆ ಬಂದ ಹಾಗೂ ಆತನನ್ನು ಕರೆದು ತಂದಿದ್ದ ಟಾಟಾ ಏಸ್ ವಾಹನವೂ ಪತ್ತೆಯಾಗುತ್ತಿಲ್ಲ ಮತ್ತು ಚಾಲಕನ ಸುಳಿವೂ ಸಿಗುತ್ತಿಲ್ಲ. ಇದು ಸಹ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ. ಇವರು ಪತ್ತೆಯಾಗಿ, ಇವರ ಸ್ವಾಬ್ ಟೆಸ್ಟ್ ಆದರೆ ಮತ್ತಷ್ಟುನಿರಾಳವಾಗುತ್ತದೆ. ಆದರೆ, ಅವರು ಸ್ಥಳೀಯರೋ ಅಥವಾ ಇನ್ನೆಲ್ಲಿಯವರೋ ಎನ್ನುವುದನ್ನು ಪತ್ತೆ ಮಾಡಬೇಕಾಗಿದೆ.
ಭಿಕ್ಷುಕರು ಸೇರಿದಂತೆ ಪ್ರಾಥಮಿಕ ಸಂಪರ್ಕ ಹೊಂದಿದವರ ವರದಿಯೂ ಬಂದಿದ್ದು, ಎಲ್ಲವೂ ನೆಗೆಟಿವ್ ಬಂದಿವೆ. ಆದರೆ, ವಾಹನ ಚಾಲಕ ಮತ್ತು ಸಹಪ್ರಯಾಣಿಕ ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಅವರು ಹೇಳಿದ್ದಾರೆ.