Crop Loss : ಕಣದಲ್ಲೇ ಕೊಳೆತ ಬೆಳೆಗಳಿಗೆ ಸಿಗಲ್ಲ ಸರ್ಕಾರದ ಪರಿಹಾರ!

By Kannadaprabha News  |  First Published Nov 24, 2021, 1:26 PM IST
  •  ಕಣದಲ್ಲೇ ಕೊಳೆತ ಬೆಳೆಗಳಿಗೆ ಸಿಗಲ್ಲ ಸರ್ಕಾರದ ಪರಿಹಾರ!
  • ಹೊಲದಲ್ಲಿ ಹಾನಿಯಾದ ಬೆಳೆಗಳಷ್ಟೆ ಪರಿಹಾರಕ್ಕೆ ಪರಿಗಣನೆ
  • ಕಟಾವು ಮಾಡಿ ಕಣದಲ್ಲಿಟ್ಟು ಬೆಳೆ ಕಳೆದುಕೊಂಡವರಿಗೆ ನಷ್ಟ
     

ವರದಿ :  ಸೋಮರಡ್ಡಿ ಅಳವಂಡಿ

 ಕೊಪ್ಪಳ (ನ.24):  ಕಳೆದೊಂದು ವಾರ ನಿರಂತರವಾಗಿ ಸುರಿದ ಅಕಾಲಿಕ ಮಳೆಯ (Rain)  ಪರಿಣಾಮ ಕಟಾವಿಗೆ ಬಂದಿರುವ, ರಾಶಿ ಮಾಡಿರುವ ಬೆಳೆ ನಾಶಗೊಂಡು ಈಗಾಗಲೇ ಕಂಗಾಲಾಗಿರುವ ರೈತರಿಗೆ (Farmers) ಮತ್ತೊಂದು ಆಘಾತ ಎದುರಾಗಿದೆ. ಕಣದಲ್ಲಿಯೇ ಕೊಳೆತ (Rotten) ಬೆಳೆಗೆ ಪರಿಹಾರ ಪಡೆಯಲು ವಿಪತ್ತು ಪರಿಹಾರ ನಿಯಮದಲ್ಲಿ ಅವಕಾಶ ಇಲ್ಲದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.  ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF) ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿ (SDRF) ನಿಯಮಾನುಸಾರ ಕೇವಲ ಹೊಲದಲ್ಲಿ ಬೆಳೆ ಹಾನಿಯಾಗಿರುವುದನ್ನು ಸಮೀಕ್ಷೆ ಮಾಡಲಾಗುತ್ತದೆ. ಆದರೆ, ಕಣದಲ್ಲಿ ಕೊಳೆತಿರುವ ಬೆಳೆ ಹಾನಿಯ ಲೆಕ್ಕಾಚಾರ ಮಾಡುವುದಕ್ಕೆ ಮತ್ತು ಪರಿಹಾರ ನೀಡುವುದಕ್ಕೆ ನಿಯಮದಲ್ಲಿ ಅವಕಾಶವೇ ಇಲ್ಲ. ವಿಪತ್ತು ಪರಿಹಾರ ನಿಯಮದಲ್ಲಿ ಇದರ ಪ್ರಸ್ತಾಪವೇ ಇಲ್ಲ. ಹೀಗಾಗಿ ಕಣದಲ್ಲಿ ಕೊಳೆತಿರುವ ಬೆಳೆಗೆ ಪರಿಹಾರ ದೊರೆಯುವುದಿಲ್ಲ ಎಂಬುದು ರೈತರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.

Latest Videos

undefined

ನವೆಂಬರ್‌ ತಿಂಗಳು ಕಟಾವು ಮತ್ತು ರಾಶಿ ಮಾಡುವ ಸಮಯ. ಈ ಸಮಯದಲ್ಲಿ ಎಡೆ ಬಿಡದೆ ಸುರಿದ ಮಳೆಯಿಂದ ರಾಜ್ಯದ ವಿವಿಧೆಡೆ ಭತ್ತ (Paddy), ಮೆಕ್ಕೆಜೋಳ, ಈರುಳ್ಳಿ (Onion), ಮೆಣಸಿನ ಕಾಯಿ ಸೇರಿದಂತೆ ಬಹುತೇಕ ಬೆಳೆಗಳು ಕಣದಲ್ಲಿಯೇ ಮೊಳಕೆಯೊಡೆದಿವೆ ಅಥವಾ ಕೊಳೆತು ಹೋಗಿವೆ. ಬೆಳೆ ಬೆಳೆಯಲು ಮಾತ್ರವಲ್ಲದೆ ಕಟಾವಿಗೂ ಖರ್ಚು ಮಾಡಲಾಗಿದ್ದು, ಇಂಥ ರೈತರ ಹಾನಿಗೆ ಪರಿಹಾರ ಕೊಡುವರಾರು ಎಂದು ಅನ್ನದಾತರು ಕಣ್ಣೀರಿಡುತ್ತಿದ್ದಾರೆ.

ಬಹುತೇಕ ಕಣದಲ್ಲಿ:  ಭತ್ತ ಶೇ.10-20ರಷ್ಟುರಾಶಿ ಮಾಡಿದ್ದರೆ ಶೇಂಗಾ, ಮೆಕ್ಕೆಜೋಳ, ಒಣ ಮೆಣಸಿನಕಾಯಿ (Chilly) ಸೇರಿದಂತೆ ಬಹುತೇಕ ಬೆಳೆಗಳು ಕಣದಲ್ಲಿ ಕೊಳೆತಿವೆ. ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದ ನಿವಾಸಿ ವೆಂಕಣ್ಣ ಗೋವಿಂದಗೌಡ್ರ ಸುಮಾರು 9 ಎಕರೆಯಲ್ಲಿ ಮೆಕ್ಕಜೋಳ ಹಾಕಿದ್ದಾರೆ. ಭರ್ಜರಿಯಾಗಿಯೇ ಬೆಳೆ ಬಂದಿದೆ. ಕಟಾವು ಮಾಡಿ, ರಾಶಿ ಮಾಡುವ ವೇಳೆಯಲ್ಲಿ ಕಾಡಿದ ಮಳೆಯಿಂದ ಅರ್ಧ ಕೊಳೆತು ಹೋಗಿದ್ದರೆ ಇನ್ನರ್ಧ ಕಣದಲ್ಲಿ ರಾಶಿ ಮಾಡಿದ್ದರೂ ಮೊಳಕೆಯೊಡೆದು ಹೋಗಿದೆ.

ಮೆಕ್ಕೆಜೋಳ ತೆನೆ ಮುರಿದು ಹಾಕಿದ ಮೇಲೆ ಹೊಲದಲ್ಲಿ (Farm Land) ಅದನ್ನು ರಾಶಿ ಮಾಡುವುದಕ್ಕೂ ಅವಕಾಶ ಸಿಗದೆ ಇರುವುದರಿಂದ ಹೊಲದಲ್ಲಿಯೇ ಕೊಳೆತು ಹೋಗಿದೆ. ಕೊಪ್ಪಳ ಬೈಪಾಸ್‌ ರಸ್ತೆಯಲ್ಲಿ ಹಾಗೆ ಸುಮ್ಮನೆ ಸಂಚಾರ ಮಾಡಿದರೆ ಸಾಕು ದಾರಿಯುದ್ದಕ್ಕೂ ಮೆಕ್ಕೆಜೋಳದ ರಾಶಿಗಳು ಇವೆ. ಇವುಗಳಲ್ಲಿ ಶೇ.80-90ರಷ್ಟು ಮೊಳಕೆಯೊಡೆದಿವೆ. ಕೊಪ್ಪಳ (Koppal) ಜಿಲ್ಲೆಯೊಂದರಲ್ಲಿಯೇ ಸುಮಾರು 60-70 ಸಾವಿರ ಎಕರೆ ಪ್ರದೇಶದಲ್ಲಿನ ಮೆಕ್ಕೆಜೋಳ ಕಟಾವು ಆದ ಮೇಲೆ ಹಾಳಾಗಿದೆ. ಇನ್ನು 300 ಎಕರೆ ಪ್ರದೇಶದಲ್ಲಿನ ಈರುಳ್ಳಿ (Onion) ಕಟಾವು ಮಾಡಿ, ಕಣದಲ್ಲಿ ಹಾಕಿದ ಮೇಲೆ ಕೊಳೆತು ಹೋಗಿದೆ.

ನಿಯಮ ತಿದ್ದುಪಡಿಯಾಗಲಿ: ಈಗಿರುವ ಎನ್‌ಡಿಆರ್‌ಎಫ್‌ (NDRF) ಮತ್ತು ಎಸ್‌ಡಿಆರ್‌ಎಫ್‌ ನಿಯಮ ತಿದ್ದುಪಡಿಯಾಗಬೇಕು ಎನ್ನುವುದು ರೈತರ ಕೂಗು. ಬೆಳೆ ಕಟಾವು ಆದ ಮೇಲೆ ಕಣದಲ್ಲಿ ಹಾನಿಯಾಗಿದ್ದರೂ ಪರಿಹಾರಕ್ಕೆ ಪರಿಗಣಿಸಬೇಕು ಎನ್ನುವ ಆಗ್ರಹವೂ ಕೇಳಿ ಬರುತ್ತಿದೆ. ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯಸರ್ಕಾರ ಈ ನಿಯಮಗಳಲ್ಲಿ ತಿದ್ದುಪಡಿ ಮಾಡಬೇಕು ಎಂಬುದು ರೈತರ ಬೇಡಿಕೆಯಾಗಿದೆ.

ಪರಿಹಾರಕ್ಕೆ ಅವಕಾಶವಿಲ್ಲ :  ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ನಿಯಮಾನುಸಾರ ಹೊಲದಲ್ಲಿ ಹಾನಿಯಾಗಿರುವ ಬೆಳೆಗೆ ಮಾತ್ರ ಪರಿಹಾರ ನೀಡಲು ಅವಕಾಶ ಇದೆ. ಹೀಗಾಗಿ ಹೊಲದಲ್ಲಿ ಆಗಿರುವ ಹಾನಿಯ ಸರ್ವೇ ಮಾಡಲಾಗುತ್ತದೆ. ಆದರೆ ರಾಶಿ ಮಾಡುವ ವೇಳೆಯಲ್ಲಿ ಕಣದಲ್ಲಿ ಆಗಿರುವ ಹಾನಿಗೆ ಪರಿಹಾರ ನೀಡುವುದಕ್ಕೆ ನಿಯಮದಲ್ಲಿ ಅವಕಾಶ ಇಲ್ಲ.

-ಸದಾಶಿವ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಕೊಪ್ಪಳ

ಖರ್ಚು ಮೈಮೇಲೆ ಬಿದ್ದಿದೆ

ಕಟಾವು ಮಾಡಿದ ಮೇಲೆ ಬೆಳೆ ಕೊಳೆತು ಹೋಗಿದೆ. ರಾಶಿ ಮಾಡಿದ್ದು ಮೊಳಕೆಯೊಡೆದಿದೆ. ಬೆಳೆಗೆ ಮಾಡಿದ ಖರ್ಚು ಮತ್ತು ಕಟಾವು ಮಾಡಿದ ಖರ್ಚು ಮೈಮೇಲೆ ಎನ್ನುವಂತೆ ಆಗಿದೆ.

ಏಕೆ ಸಿಗಲ್ಲ ಪರಿಹಾರ?

- ಪ್ರಕೃತಿ ವಿಕೋಪದಿಂದ ಬೆಳೆ ಕಳೆದುಕೊಂಡವರಿಗೆ ಸರ್ಕಾರ ಪರಿಹಾರ ನೀಡುತ್ತದೆ

- ಎಸ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ನಿಯಮಾನುಸಾರ ಪರಿಹಾರ ಕೊಡಲಾಗುತ್ತದೆ

- ಹೊಲದಲ್ಲಿ ಬೆಳೆ ಹಾನಿಯಾಗಿದ್ದರೆ ಸಮೀಕ್ಷೆ ನಡೆಸಿ ಪರಿಹಾರ ನೀಡಿ ಎನ್ನುತ್ತದೆ ನಿಯಮ

- ಆದರೆ ಕಣದಲ್ಲಿ ಕೊಳೆತಿರುವ ಬೆಳೆಯ ಹಾನಿ ಲೆಕ್ಕಾಚಾರ, ಪರಿಹಾರಕ್ಕೆ ಅವಕಾಶವಿಲ್ಲ

- ಇದು ಕಟಾವಿನ ತಿಂಗಳು. ಸಾಕಷ್ಟುರೈತರು ಬೆಳೆ ಕೊಯ್ಲು ಮಾಡಿ ಕಣದಲ್ಲಿಟ್ಟಿದ್ದಾರೆ

- ಅಷ್ಟರಲ್ಲಿ ಸತತ ಮಳೆ ಸುರಿದ ಕಾರಣ ಬೆಳೆಗಳು ಮೊಳಕೆಯೊಡೆದಿವೆ, ಕೊಳೆತಿವೆ

- ಬೆಳೆ ಬೆಳೆಯಲು, ಕಟಾವು ಮಾಡಲು ಹಣ ವ್ಯಯಿಸಿದ ರೈತರಿಗೆ ಪರಿಹಾರ ಸಿಗುತ್ತಿಲ್ಲ

click me!