
ಬೆಂಗಳೂರು (ಆ.29): ಧರ್ಮಸ್ಥಳದ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳ ಕುರಿತ ಚರ್ಚೆಗಳು ರಾಜ್ಯ ಮತ್ತು ದೇಶಾದ್ಯಂತ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ, ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಅವರು ಧರ್ಮಸ್ಥಳದ ಪರ ನಿಂತಿದ್ದಾರೆ. ತಾವು ನೆಲೆಸಿರುವ 'ಕೈಲಾಸ'ದಿಂದಲೇ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಬೆಂಬಲ ಸೂಚಿಸಿದ್ದಾರೆ.
ನಿತ್ಯಾನಂದನ 'ಕೈಲಾಸ' ರಾಷ್ಟ್ರದ ಪ್ರತಿನಿಧಿಗಳು ಧರ್ಮಸ್ಥಳದ ಮೇಲೆ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆಗಳು ನಡೆಯುತ್ತಿರುವಾಗ, ಧರ್ಮಸ್ಥಳಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಗೌರವದ ಸಂಕೇತವಾಗಿ 'ಪವಿತ್ರ ಕೈಲಾಸ ರಾಷ್ಟ್ರ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ' ಎಂಬ ಪುಸ್ತಕವನ್ನು ನೀಡಿರುವುದಾಗಿಯೂ ಹೇಳಿದ್ದಾರೆ. ನಿತ್ಯಾನಂದ ಮತ್ತು ಅವರ ಸಂಸ್ಥೆ ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆಯವರೊಂದಿಗೆ ದೀರ್ಘಕಾಲದಿಂದ ಗೌರವದ ಸಂಬಂಧ ಹೊಂದಿದ್ದು, ಎಲ್ಲಾ ಆರೋಪಗಳಿಂದ ಮುಕ್ತಿ ಸಿಗಲೆಂದು ಹಾರೈಸಿದ್ದಾರೆ.
ಇತ್ತೀಚೆಗೆ 'ಮಾಸ್ಕ್ ಮ್ಯಾನ್' ಚಿನ್ನಯ್ಯ ಎಂಬ ವ್ಯಕ್ತಿ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವ ಆರೋಪ ಮಾಡಿದ್ದ. 1995ರಿಂದ 2014ರ ಅವಧಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಕೊಲೆಯಾದ ಮಹಿಳೆಯರು ಮತ್ತು ಮಕ್ಕಳ ಶವಗಳನ್ನು ತಾನೇ ಹೂತು ಹಾಕಿದ್ದೇನೆ ಎಂದು ಆರೋಪಿಸಿದ್ದ. ಈ ಆರೋಪದ ಗಂಭೀರತೆಯನ್ನು ಪರಿಗಣಿಸಿ ಸರ್ಕಾರವು ತನಿಖೆಗೆ ವಿಶೇಷ ತಂಡ (SIT) ರಚಿಸಿದ್ದು, ಸತ್ಯಾಸತ್ಯತೆಗಳನ್ನು ಪತ್ತೆ ಹಚ್ಚಲು ತೀವ್ರ ತನಿಖೆ ನಡೆಸುತ್ತಿದೆ.
ಭಾರತದಿಂದ ಹೋದ ನಂತರ ನಿತ್ಯಾನಂದ ಆಸ್ಟ್ರೇಲಿಯಾ ಬಳಿ 'ಯುಎಸ್‌ಕೆ' ಎಂಬ ಸ್ವಯಂಘೋಷಿತ ರಾಷ್ಟ್ರದಲ್ಲಿ ವಾಸಿಸುತ್ತಿದ್ದಾರೆ. 'ಕೈಲಾಸ'ವನ್ನು ಹಿಂದೂಗಳಿಗೆ ಸುರಕ್ಷಿತ ಆಶ್ರಯ ಎಂದು ಕರೆದಿರುವ ಅವರು, ತಮ್ಮದೇ ಆದ ಧ್ವಜ, ಪಾಸ್‌ಪೋರ್ಟ್ ಮತ್ತು ಕರೆನ್ಸಿಯನ್ನು ಸಹ ರಚಿಸಿಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಯಾವುದೇ ಅಂತರರಾಷ್ಟ್ರೀಯ ಸಂಸ್ಥೆ ಅಥವಾ ದೇಶವು 'ಕೈಲಾಸ'ವನ್ನು ಸಾರ್ವಭೌಮ ರಾಷ್ಟ್ರವೆಂದು ಗುರುತಿಸಿಲ್ಲ.