
ಬೆಂಗಳೂರು: ನಗರದ ರಾಜಗೋಪಾಲನಗರ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದ ಘಟನೆ ಬೆಚ್ಚಿ ಬೀಳಿಸುವಂತಿದೆ. ರಾತ್ರಿ ವೇಳೆ ಕುಡುಕರನ್ನ ಪ್ರಶ್ನೆ ಮಾಡಿದ್ದೆ ತಪ್ಪಾಯ್ತಾ..? ಪುಂಡರ ಗ್ಯಾಂಗ್ ಒಂದು ಖಾಕಿ ಮೇಲೆ ಕಾರು ಹತ್ತಿಸೋಕೆ ಮುಂದಾದ ಘಟನೆ ನಡೆದಿದೆ. ಬಾರ್ ಮುಂದೆ ನಿಂತಿದ್ದ ಕಾರಿನ ಬಗ್ಗೆ ಪರಿಶೀಲನೆ ನಡೆಸಲು ಮುಂದಾದ ಪೊಲೀಸ್ ಅಧಿಕಾರಿಯನ್ನು ಕಾರು ಹತ್ತಿಸಿ ಕೊಲ್ಲಲು ಯತ್ನಿಸಿದ್ದಾರೆ. ಇದೀಗ ಈ ಘಟನೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಆಗಸ್ಟ್ 28ರ ರಾತ್ರಿ ರಾಜಗೋಪಾಲನಗರ ಪ್ರದೇಶದಲ್ಲಿ ಸಬ್ ಇನ್ಸ್ಪೆಕ್ಟರ್ ಮುರಳಿ ನೈಟ್ ರೌಂಡ್ಸ್ ಮಾಡುತ್ತಿದ್ದರು. ಈ ವೇಳೆ ಬಾರ್ ಒಂದರ ಮುಂದೆ ನಿಂತಿದ್ದ ಸ್ಕಾರ್ಪಿಯೋ ಕಾರನ್ನು ಗಮನಿಸಿದರು. ಆ ವಾಹನದೊಳಗೆ ನಾಲ್ಕೈದು ಮಂದಿ ಕುಡಿಯುತ್ತಾ ಪಾರ್ಟಿಯಲ್ಲಿ ತೊಡಗಿಕೊಂಡಿದ್ದರು. ಕಾರಿನಲ್ಲಿ ಟಿಂಟ್ ಗ್ಲಾಸ್ ಇರೋದರಿಂದ ಅಧಿಕಾರಿಗಳು ಪರಿಶೀಲನೆ ನಡೆಸಲು ಮುಂದಾದರು.
ಪಿಎಸ್‌ಐ ಮುರಳಿ ಕಾರಿನ ಬಳಿ ತೆರಳಿ ಪರಿಶೀಲನೆ ನಡೆಸಲು ಯತ್ನಿಸಿದಾಗ, ಕುಡಿದವರಲ್ಲಿ ಕೆಲವರು ಕೈಯಲ್ಲಿದ್ದ ಮದ್ಯದ ಬಾಟಲ್ ಸಹಿತ ಕಾರಿನೊಳಗೆ ನುಗ್ಗಿದರು. ಅವರು ತಕ್ಷಣವೇ ಕಾರು ಸ್ಟಾರ್ಟ್ ಮಾಡಿ ರಿವರ್ಸ್ ತೆಗೆದರು. ಆ ಸಂದರ್ಭದಲ್ಲಿ ಕಾರನ್ನು ನಿಲ್ಲಿಸಲು ಯತ್ನಿಸಿದ ಪಿಎಸ್‌ಐ ಬಾಗಿಲಿಗೆ ಬಡಿದು ತಡೆಯಲು ಪ್ರಯತ್ನಿಸಿದರು. ಆದರೆ, ಪುಂಡರು ಏಕಾಏಕಿ ಕಾರನ್ನು ವೇಗವಾಗಿ ಓಡಿಸಿ ಪರಾರಿಯಾದರು.
ಈ ಘಟನೆ ವೇಳೆ ಪಿಎಸ್‌ಐ ಮುರಳಿಯ ಕೈಗೆ ಗಂಭೀರ ಗಾಯವಾಗಿ ರಕ್ತ ಹರಿದಿದೆ. ತಕ್ಷಣವೇ ಸಹೋದ್ಯೋಗಿಗಳು ಅವರಿಗೆ ಚಿಕಿತ್ಸೆ ನೀಡಿದರು. ಘಟನೆಯು ಪೊಲೀಸರ ಕಾರ್ಯಕ್ಕೆ ಅಡ್ಡಿಯಾದ ಪ್ರಕರಣವೆಂದು ಪರಿಗಣಿಸಲಾಗುತ್ತಿದ್ದು, ಹಿರಿಯ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ. ಘಟನೆಯಲ್ಲಿ ಬಳಸಿದ ಸ್ಕಾರ್ಪಿಯೋ ಕಾರಿನ ಮೇಲೆ "ಜಯಕರ್ನಾಟಕ" ಸಂಘಟನೆಯ ಹೆಸರು ಅಚ್ಚಾಗಿದ್ದು, ಸ್ಥಳೀಯರಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಕಾರು ಜಾನ್ಸನ್ ಎಂಬ ವ್ಯಕ್ತಿಗೆ ಸೇರಿರುವುದು ಬಹಿರಂಗವಾಗಿದೆ.
ಪ್ರಸ್ತುತ ಈ ವಿಷಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆರೋಪಿಗಳ ಪತ್ತೆಗೆ ಸಿಸಿಟಿವಿ ದೃಶ್ಯಾವಳಿ ಹಾಗೂ ಸ್ಥಳೀಯ ಮಾಹಿತಿಗಳನ್ನು ಆಧಾರ ಮಾಡಿಕೊಂಡು ತನಿಖೆ ಮುಂದುವರಿಸಲಾಗಿದೆ. ಖಾಕಿ ಮೇಲೆ ಕೈ ಹಾಕುವ ಧೈರ್ಯ ಮಾಡಿದ ಪುಂಡರನ್ನು ಕಾನೂನು ಬಲೆಗೆ ಸೆಳೆಯುವ ಕಾರ್ಯ ಜೋರಾಗಿದೆ.