ಹಾವೇರಿ: 9 ತಿಂಗಳು ತುಂಬು ಗರ್ಭಿಣಿಯಾದ್ರೂ ಕೊರೋನಾ ಸೇವೆ..!

By Kannadaprabha NewsFirst Published May 18, 2020, 8:33 AM IST
Highlights

ತುಂಬು ಗರ್ಭಿಣಿಯಾದ್ರೂ ರಜೆ ಪಡೆಯದೆ ಶುಶ್ರೂಷಕಿ ಸೇವೆ| ಹೆರಿಗೆ ಮುನ್ನಾ ದಿನದವರೆಗೆ ಸೇವೆ ಸಲ್ಲಿಸಲು ನಿರ್ಧಾರ| ಹೆರಿಗೆಗೆ 10 ದಿನ ಬಾಕಿಯಿದ್ದರೂ ಸೇವೆ, ಪ್ರತಿದಿನ 30 ಕಿಮೀ ಸಂಚಾರ| ಕೊರೋನಾ ವಾರಿಯರ್ಸ್‌ ಪದಕ್ಕೆ ಮತ್ತಷ್ಟು ಗೌರವ ತಂದುಕೊಟ್ಟ ಶುಶ್ರೂಷಕಿ|

ಗೀತಾ ನಾಯಕ

ರಟ್ಟೀಹಳ್ಳಿ(ಮೇ.18): ಕೊರೋನಾ ಮಹಾಮಾರಿಗೆ ಜನರು ತತ್ತರಿಸಿ ಹೋಗಿದ್ದಾರೆ. ಈ ರೋಗಕ್ಕೆ ಹೆದರಿ ರಜೆ ಸಿಕ್ಕರೆ ಸಾಕಪ್ಪ ಎನ್ನುವ ಸಂದರ್ಭದಲ್ಲಿ ತುಂಬು ಗರ್ಭಿಣಿಯಾಗಿದ್ದರೂ, ಹೆರಿಗೆ ರಜೆ ಪಡೆಯುವುದಕ್ಕೆ ಅವಕಾಶವಿದ್ದರೂ ರಜೆ ಪಡೆಯದೆ ಹೆರಿಗೆ ಆಗುವ ಹಿಂದಿನ ದಿನದವರೆಗೆ ಆರೋಗ್ಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ನಿರ್ಧರಿಸಿರುವ ಶುಶ್ರೂಷಕಿಯೊಬ್ಬರು ಕೊರೋನಾ ವಾರಿಯರ್ಸ್‌ ಪದಕ್ಕೆ ಮತ್ತಷ್ಟು ಗೌರವ ತಂದುಕೊಟ್ಟಿದ್ದಾರೆ.

ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮಾಸೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕಿ ಗಾಯತ್ರಿ ಸಾದರ ಅವರೇ ತುಂಬು ಗರ್ಭಿಣಿಯಾದರೂ ಸೇವೆ ಸಲ್ಲಿಸುತ್ತಿರುವ ನರ್ಸ್‌. ಕಳೆದ 10 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದಾರೆ. ಈಗ ತುಂಬು ಗರ್ಭಿಣಿಯಾಗಿರುವ ಅವರು ಪ್ರತಿದಿನ ತಾಲೂಕಿನ ಕುಡುಪಲಿ ಗ್ರಾಮದಿಂದ 15 ಕಿಮೀ ದೂರದಲ್ಲಿರುವ ಮಾಸೂರು ಆಸ್ಪತ್ರೆಗೆ ಸಂಚಾರ ಮಾಡಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೊರೋನಾ ಸಂಕಷ್ಟ: ಕೂಲಿ ಮಾಡಲು ಮುಂದಾದ ಪದವೀಧರೆ..!

ಕೊರೋನಾ ಸೋಂಕು ವಿಶ್ವಕ್ಕೆ ಹೆಮ್ಮಾರಿಯಾಗಿ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿ ಸೇವೆ ಅಮೂಲ್ಯವಾದುದ್ದು. ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಅನೇಕರು ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಹೆರಿಗೆ ರಜೆ ಪಡೆಯದೇ ಕರ್ತವ್ಯ ನಿರ್ವಹಿಸುತ್ತಿರುವ ಶುಶ್ರೂಷಕಿ ಗಾಯಿತ್ರಿ ಅವರು ಇತರರಿಗೆ ಮಾದರಿಯಾಗಿದ್ದಾರೆ. 9 ತಿಂಗಳು ತುಂಬು ಗರ್ಭಿಣಿಯಾಗಿದ್ದರೂ, ಡಿಲೆವರಿ ಸಮಯ ಕೇವಲ 10 ದಿನ ಮಾತ್ರ ಉಳಿದಿದ್ದರೂ ರಜೆ ಪಡೆಯದೇ ಸೇವೆ ಸಲ್ಲಿಸುತ್ತಿದ್ದಾರೆ. ರಜೆ ಪಡೆದು ಆರೋಗ್ಯ ನೋಡಿಕೊಳ್ಳಿ ಎಂದು ವೈದ್ಯಾಧಿಕಾರಿಗಳು ಸಲಹೆ ನೀಡಿದರೂ ಹೆರಿಗೆ ಹಿಂದಿನ ದಿನದವರೆಗೂ ನಾನು ಸೇವೆ ಸಲ್ಲಿಸುತ್ತೇನೆ. ನನಗೆ ಕರ್ತವ್ಯಕ್ಕೆ ಅವಕಾಶ ಮಾಡಿಕೊಡಿ ಎಂದು ವಿನಂತಿಸಿಕೊಂಡು ಸೇವೆ ಮಾಡುತ್ತಿದ್ದಾರೆ. ಯಾವುದೇ ಭಯವಿಲ್ಲದೇ ಕೊರೋನಾ ವಾರಿಯ​ರ್ಸ್‌ ಆಗಿ ಸೇವೆ ಸಲ್ಲಿಸುತ್ತಿರುವ ಗಾಯತ್ರಿ ಅವರ ಸೇವೆ ಎಲ್ಲರಿಗೆ ಮಾದರಿಯಾಗಿದೆ.

ಕೊರೋನಾ ಸಂದರ್ಭದಲ್ಲಿ ರಾಜ್ಯದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ತುಂಬು ಗರ್ಭಿಣಿಯಾಗಿದ್ದರೂ ರಜೆ ಪಡೆಯದೇ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕಿ ಗಾಯತ್ರಿ ಅವರು ನಮ್ಮ ಆಸ್ಪತ್ರೆಯಲ್ಲಿ ಇದ್ದಾರೆಂದರೆ ನಮಗೆ ಹೆಮ್ಮೆ ಎನುಸುತ್ತದೆ ಎಂದು ಹಿರಿಯ ವೈದ್ಯಾಧಿಕಾರಿ ನೀಲಕಂಠಸ್ವಾಮಿ ಅವರು ಹೇಳಿದ್ದಾರೆ. 

ಗಂಡನ ಮನೆಯಲ್ಲಿಯೂ ಮೊದಲು ರಜೆ ಮಾಡು ಎಂದರು. ಇಲ್ಲ ನಾನು ಜನರ ಸೇವೆ ಮಾಡಬೇಕೆಂದು ಹೇಳಿದೆ. ಆಗ ಆಯ್ತು ನಿನಗೆ ಖುಷಿ ಎನಿಸಿದರೆ ಮಾಡು ಎಂದರು. ರಜೆ ಪಡೆದುಕೊಂಡರೆ ಇವರ ಸಿಬ್ಬಂದಿಗೆ ಹೆಚ್ಚಿನ ಭಾರ ಬೀಳುತ್ತದೆ ಎಂದು ಸೇವೆ ಸಲ್ಲಿಸುವುದಕ್ಕೆ ಮುಂದಾಗಿದ್ದೇನೆ. ನಾನು ಹೆರಿಗೆಯಾಗುವರಿಗೂ ಸೇವೆ ಸಲ್ಲಿಸುತ್ತೇನೆ, ಹೆರಿಗೆ ಆದ ಬಳಿಕ ರಜೆ ಪಡೆದುಕೊಳ್ಳುತ್ತೇನೆ ಎಂದು ಶುಶ್ರೂಷಕಿ ಗಾಯತ್ರಿ ಸಾದರ ಅವರು ಹೇಳಿದ್ದಾರೆ.

ಮೃತ ವೃದ್ಧನ ಸ್ವ್ಯಾಬ್ ತೆಗೆಯಲು ಶವದ ಗುಂಡಿಗೆ ಇಳಿದ ಶೋಭಾ; ಶಶಿಕಲಾ ಜೊಲ್ಲೆ ಮೆಚ್ಚುಗೆ

ತುಂಬು ಗರ್ಭಿಣಿಯಾಗಿದ್ದರೂ ರಜೆ ಪಡೆಯದೇ ಕೊರೋನಾ ಸಂದರ್ಭದಲ್ಲಿ ನಮ್ಮ ಪತ್ನಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಒಂದು ವಾರದಲ್ಲಿ ಅವರಿಗೆ ಹೆರಿಗೆ ಆಗುತ್ತದೆ. ಜನರಿಗೆ ತೊಂದರೆಯಾಗಬಾರದೆಂದು ಸೇವೆ ಸಲ್ಲಿಸುವುದಕ್ಕೆ ಮುಂದಾಗಿದ್ದಾರೆ. ಅವರಿಗೆ ನಾವೆಲ್ಲರೂ ಬೆಂಬಲವಾಗಿ ನಿಂತಿದ್ದೇವೆ ಎಂದು ಗಾಯತ್ರಿ ಪತಿ ಗಿರೀಶ ಚಿಂದಿ ಅವರು ತಿಳಿಸಿದ್ದಾರೆ. 

click me!