ಲಾಕ್‌ಡೌನ್‌: ಹಸಿದರ ಹೊಟ್ಟೆ ತುಂಬಿಸಿದ ಮುನಿರಾಬಾದ್‌ ಪೊಲೀಸ್‌ ಠಾಣೆ, ನಿತ್ಯ ದಾಸೋಹ

By Kannadaprabha NewsFirst Published May 18, 2020, 8:00 AM IST
Highlights

ಜನಮೆಚ್ಚುಗೆ ಪಡೆದ ಮುನಿರಾಬಾದ್‌ ಪೊಲೀಸ್‌ ಠಾಣೆ ದಾಸೋಹ|ಲಾಕ್‌​ಡೌನ್‌ ಆರಂಭ​ದಿಂದ 25 ಸಾವಿರ ಜನ​ರಿಗೆ ನಿಗ​ರ್‍ತಿಕ​ರಿಗೆ ಪೊಟ್ಟ​ಣ​ದಲ್ಲಿ ಆಹಾರ ವಿತ​ರ​ಣೆ|ಒಂದು ದಿನ ಅನ್ನ-ಸಾಂಬರ್‌, ಇನ್ನೊಂದು ದಿನ ಪಲಾವ್‌, ಮತ್ತೊಂದು ದಿನ ಖುಷ್ಕಾ, ಪೊ​ಳಿಯೊಗರೆ, ಚಿತ್ರಾನ್ನ ಹೀಗೆ ಬಗೆಬಗೆಯ ಆಹಾರ ವಿತರಣೆ| ಇದುವರೆಗೆ ಮುನಿರಾಬಾದ್‌ ಠಾಣೆ ವತಿಯಿಂದ 25000ಕ್ಕೂ ಅಧಿಕ ಆಹಾರದ ಪೊಟ್ಟಣವನ್ನು ನಿರ್ಗತಿಕರಿಗೆ, ಬಡವರಿಗೆ ವಿತರಣೆ| 

ಎಸ್‌. ನಾರಾಯಣ್‌

ಮುನಿರಾಬಾದ್‌(ಮೇ.18): ಮಾರ್ಚ್‌ ತಿಂಗಳಲ್ಲಿ ಲಾಕ್‌ಡೌನ್‌ ಪ್ರಾರಂಭವಾದಾಗಿನಿಂದ ಪ್ರತಿನಿತ್ಯ ಮುನಿರಾಬಾದ್‌ ಪೊಲೀಸ್‌ ಠಾಣೆಯ ವತಿಯಿಂದ ದಾಸೋಹವನ್ನು ನಡೆಸಲಾಗುತ್ತಿದ್ದು, ಇದುವರೆಗೆ 25000 ಜನರಿಗೆ ಆಹಾರವನ್ನು ಒದಗಿಸಲಾಗಿದೆ. ಇದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ. ರಾಜ್ಯದಲ್ಲೇ ದಾಸೋಹ ಮಾಡಿದ ಏಕೈಕ ಪೊಲೀಸ್‌ ಠಾಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಲಾಕ್‌ಡೌನ್‌ ಪ್ರಾರಂಭವಾದ ನಂತರ ಬಡವರು ಅದರಲ್ಲಿ ವಿಶೇಷವಾಗಿ ಅಸಹಾಯಕರು ಮತ್ತು ನಿರ್ಗತಿಕರಿಗೆ ಅನ್ನ ನೀರಿಲ್ಲದೆ ತುಂಬಾ ತೊಂದರೆಯಾಯಿತು. ಇದನ್ನು ಗಮನಿಸಿದ ಮುನಿರಾಬಾದ್‌ ಠಾಣಾ ಇನ್‌ಸ್ಪೆಕ್ಟರ್‌ ಸುಪ್ರೀತ್‌ ವಿರೂಪಾಕ್ಷಪ್ಪ ಇವರಿಗಾಗಿ ದಾಸೋಹವನ್ನು ಪ್ರಾರಂಭಿಸಿದರು ಹಾಗೂ ದಾಸೋಹದ ಸಂಪೂರ್ಣ ಉಸ್ತುವಾರಿಯನ್ನು ಪೇದೆ ಶಿವಕುಮಾರ್‌ಗೆ ವಹಿಸಿದರು.

ಮುಂದುವರೆದ ತಿಕ್ಕಾಟ: ಬಿಜೆಪಿ, ಕಾಂಗ್ರೆಸ್‌ನಿಂದ ಕಾನೂನು ಸಮರ

ಕಳೆದ 55 ದಿನಗಳಿಂದ ಮುನಿರಾಬಾದ್‌ ಪೊಲೀಸ್‌ ಠಾಣೆಯಲ್ಲಿ ದಾಸೋಹದ ಕಾರ್ಯಕ್ರಮವು ನಡೆಯುತ್ತಿದ್ದು, ಬೆಳಗ್ಗೆ ತಿಂಡಿ, ಮ​ಧ್ಯಾಹ್ನ ಹಾ​ಗೂ ರಾತ್ರಿ ಊಟವನ್ನು ಸಿದ್ಧಪಡಿಸಿ ಅದನ್ನು ಅಚ್ಚುಕಟ್ಟಾಗಿ ಪೊಟ್ಟಣದಲ್ಲಿ ಕಟ್ಟಿಪ್ರತಿನಿತ್ಯ ಗ್ರಾಮದ 500ಕ್ಕೂ ಅಧಿಕ ಜನ ನಿರ್ಗತಿಕರು, ಬಡವರಿಗೆ ಪೇದೆ ಶಿವಕುಮಾರ್‌ ಖುದ್ದಾಗಿ ಹೋಗಿ ಅವರಿದ್ದ ಸ್ಥಳದಲ್ಲಿ ಆಹಾರ ಪೊಟ್ಟಣವನ್ನು ಹಂಚಿಕೆ ಮಾಡುತ್ತಿದ್ದಾರೆ.

ಒಂದು ದಿನ ಅನ್ನ-ಸಾಂಬರ್‌, ಇನ್ನೊಂದು ದಿನ ಪಲಾವ್‌, ಮತ್ತೊಂದು ದಿನ ಖುಷ್ಕಾ, ಪೊ​ಳಿಯೊಗರೆ, ಚಿತ್ರಾನ್ನ ಹೀಗೆ ಬಗೆಬಗೆಯ ಆಹಾರವನ್ನು ಜನರಿಗೆ ಹಂಚುತ್ತಿದ್ದಾರೆ. ಇದುವರೆಗೆ ಮುನಿರಾಬಾದ್‌ ಠಾಣೆ ವತಿಯಿಂದ 25000ಕ್ಕೂ ಅಧಿಕ ಆಹಾರದ ಪೊಟ್ಟಣವನ್ನು ನಿರ್ಗತಿಕರಿಗೆ, ಬಡವರಿಗೆ ಹಂಚಲಾಗಿದೆ. ಈ ರೀತಿಯಾಗಿ ಪೇದೆ ಶಿವಕುಮಾರ್‌ ತಮಗೆ ವಹಿಸಿದ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.

ಕೊರೋ​ನಾ ತಡೆದ ಪೊಲೀಸ್‌ ಪೇದೆ

ಮುನಿರಾಬಾದ್‌ ಪಕ್ಕದಲ್ಲಿರುವ ಹೊಸಪೇಟೆ ನಗರದಲ್ಲಿ 14 ಕೊರೋ​ನಾ ಪ್ರಕರಣಗಳು ಸಂಭವಿಸಿ ಇಡೀ ಹೊಸಪೇಟೆಯನ್ನು ಹಾಟ್‌ಸ್ಪಾಟ್‌ ಎಂದು ಘೋಷಿಸಲಾಗಿತ್ತು. ಹೊಸಪೇಟೆಯ ಪಕ್ಕದಲ್ಲಿರುವ ಮುನಿರಾಬಾದ್‌ ಗ್ರಾಮಕ್ಕೆ ಎಲ್ಲಿ ಕೊ​ರೋ​ನಾ ಬರುತ್ತ​ದೆ​ಯೋ ಎಂದು ಗ್ರಾಮಸ್ಥರು ಆತಂಕಗೊಂಡಿದ್ದರು. ಆದರೆ ಮುನಿರಾಬಾದ್‌ ಬೀಟ್‌ ಪೇದೆ ಹನುಮಂತಪ್ಪ ಭಜಂತ್ರಿ ಅವರು ಪರಿಶ್ರಮವಹಿಸಿ ಮುನಿರಾಬಾದ್‌ಗೆ ಕೊರೋ​ನಾ ಕಾಲಿಡದಂತೆ ನೋಡಿಕೊಂಡರು. ಪೇದೆ ಹನುಮಂತಪ್ಪ ಭಜಂತ್ರಿ ಗ್ರಾಮದ ಜನರಲ್ಲಿ ಮಾಸ್ಕ್‌ ಕಲ್ಚರ್‌ (ಪ್ರತಿಯೊಬ್ಬರೂ ಮಾಸ್ಕ್‌ನ್ನು ಹಾಕಿಕೊಳ್ಳುವ) ಅಭ್ಯಾಸವನ್ನು ಜನರಲ್ಲಿ ಮಾಡಿಸಿದರು. ಮಾ​ಸ್ಕ್‌ ಇಲ್ಲದೆ ಓಡಾಡಿದವರ ವಿರುದ್ಧ ದಂಡವನ್ನು ಹಾಕಿದರು. ಇದಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಮಾಡಿದರು. ಬೇರೆ ಊರಿನಿಂದ ಬಂದವರನ್ನು ಹು​ಡುಕಿ ಹು​ಡುಕಿ ಕಡ್ಡಾಯವಾಗಿ ಕ್ವಾರಂಟೈನ್‌ ಮಾಡಿಸಿದರು. ಕೊರೋ​ನಾ ಮಹಾಮಾರಿ ಮುನಿರಾಬಾದ್‌ಗೆ ಕಾಲಿಡದಂತೆ ನೋಡಿಕೊಂಡರು.

ಒಂಡು ಕಡೆ ಪೇದೆ ಶಿವಕುಮಾರ್‌ ಅವರ ದಾಸೋಹ, ಇನ್ನೊಂದೆಡೆ ಪೇದೆ ಹನುಮಂತಪ್ಪ ಭಜಂತ್ರಿ ಅವರ ಕಟ್ಟುನಿಟ್ಟಿನ ಕ್ರಮ ಇವೆರಡೂ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸರ ಕಾರ್ಯವನ್ನು ಮೆಚ್ಚಿ ಗ್ರಾಮಸ್ಥರಾದ ಜಗನ್ನಾಥ ಅವರು ಈ ಇಬ್ಬರು ಪೇದೆಗಳನ್ನು ಸನ್ಮಾನಿಸಿ ಗೌರವಿಸಿದರು. ಪೊಲೀಸರ ಕಾರ್ಯ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಜಗನ್ನಾಥ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
 

click me!