
ರಾಮನಗರ [ಫೆ.08]: ರಾಮನಗರ ಮತ್ತು ಚನ್ನಪಟ್ಟಣ ಜನರ ನಡುವೆ ಪುತ್ರ ನಿಖಿಲ್ ಮದುವೆ ಮಾಡಬೇಕೆಂಬುದು ನನ್ನ ಮತ್ತು ಕುಮಾರಸ್ವಾಮಿ ಅವರ ಆಸೆಯಾಗಿತ್ತು. ಅದರಂತೆ ಏಪ್ರಿಲ್ನಲ್ಲಿ ವಿವಾಹ ನೆರವೇರಲಿದೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ತಿಳಿಸಿದರು.
ನಗರದ ಹಳೇ ಮೈಸೂರು ರಸ್ತೆಯಲ್ಲಿರುವ ಪ್ರವಾಸಿ ಮಂದಿರದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪುರೋಹಿತರು ಏಪ್ರಿಲ್ನಲ್ಲಿ ಮೂರು ದಿನಾಂಕಗಳನ್ನು ಮದುವೆ ಮುಹೂರ್ತಕ್ಕಾಗಿ ನೀಡಿದ್ದಾರೆ. ಅದರಲ್ಲಿ ಶುಭದಿನ ನೋಡಿಕೊಂಡು ಸಮಾರಂಭ ನಿಶ್ಚಯಿಸುತ್ತೇವೆ ಎಂದರು.
ನಾವು ಮದುವೆ ಮುಹೂರ್ತ ನೆರವೇರಿಸುತ್ತೇವೆ. ಬೀಗರ ಔತಣಕೂಟವನ್ನು ಬೀಗರು ಮಾಡುತ್ತಾರೆ. ನಿಖಿಲ್ ಮದುವೆಗಾಗಿ ಕುಮಾರಸ್ವಾಮಿ ರಾಮನಗರದಲ್ಲಿ ವಿಶಾಲವಾದ ಜಾಗ ವೀಕ್ಷಿಸಿದ್ದಾರೆ. ಅವರು ನೋಡಿದ ನಂತರ ನಾನು ನೋಡುವ ಅಗತ್ಯವಿಲ್ಲ ಎಂದು ಅನಿತಾ ಹೇಳಿದರು.
ಫಿಯಾನ್ಸಿ ಜೊತೆ ಮೊದಲ ಫೋಟೋ ಶೇರ್ ಮಾಡಿದ ನಿಖಿಲ್
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಮನಗರ ಕ್ಷೇತ್ರಕ್ಕೆ ಸಾಕಷ್ಟುಯೋಜನೆಗಳನ್ನು ರೂಪಿಸಿ ಅನುದಾನ ನೀಡಿದ್ದರು. ಅವುಗಳನ್ನು ಬಿಜೆಪಿ ಸರ್ಕಾರ ತಡೆ ಹಿಡಿದಿತ್ತು. ಇದರಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ತೊಡಕುಂಟಾಗಿತ್ತು. ಯೋಜನೆಗಳ ಸಂಬಂಧ ಚರ್ಚೆ ನಡೆಸಿದ ನಂತರ ಸರ್ಕಾರ ತಡೆ ಹಿಡಿದಿದ್ದ ಅನುದಾನಗಳನ್ನು ಮತ್ತೆ ಬಿಡುಗಡೆ ಮಾಡುತ್ತಿದೆ ಎಂದು ಅನಿತಾ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿಶೇಷ ವಾಹನಗಳಿಗೆ ಹಸಿರು ನಿಶಾನೆ:
ಲೋಕೋಪಯೋಗಿ ಇಲಾಖೆಯಿಂದ 2.50 ಕೋಟಿ ರುಪಾಯಿ ವೆಚ್ಚದಲ್ಲಿ ಪ್ರವಾಸಿ ಮಂದಿರದ ನೂತನ ಕಟ್ಟಡ ನಿರ್ಮಾಣಕ್ಕೆ ಅನಿತಾರವರು ಗುದ್ದಲಿ ಪೂಜೆ ನೆರವೇರಿಸಿದ ತರುವಾಯ ಗೆಜ್ಜಲುಗುಡ್ಡೆಯಲ್ಲಿ ನೆಲ ಹಂತದ ನೀರು ಸಂಗ್ರಹಣಾ ಟ್ಯಾಂಕ್ಗೆ ಶಂಕುಸ್ಥಾಪನೆ ನೆರವೇರಿಸಿದರು.
ಬೆಂಗಳೂರಿಗರಿಗೆ ತೊಂದರೆಯಾಗದಂತೆ ನಿಖಿಲ್ ಮದುವೆ...
ಆನಂತರ ರಾಮನಗರದಲ್ಲಿ ಮನೆಯ ಬಳಿಗೇ ಬಂದು ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ನಗರಸಭೆ ಖರೀದಿ ಮಾಡಿರುವ ವಿಶೇಷ ವಾಹನಗಳ ಸಂಚಾರಕ್ಕೆ ಶಾಸಕರು ಹಸಿರು ನಿಶಾನೆ ತೋರಿಸಿದರು. ಹಸಿ ಮತ್ತು ಒಣ ಕಸದ ಸಂಗ್ರಹಕ್ಕೆಂದೇ ಆಫೆ ಆಟೋಗಳನ್ನು ಆಟೋ ಟಿಪ್ಪರ್ಗಳನ್ನಾಗಿ ವಿನ್ಯಾಸಗೊಳಿಸಲಾಗಿದೆ. ಪ್ರತಿನಿತ್ಯ ಕಸ ಸಂಗ್ರಹಿಸುವ ಕಾರ್ಯ ನಡೆಯುತ್ತಿದ್ದು, ಅವುಗಳ ಜತೆಗೆ ಹೊಸ ವಾಹನಗಳ ಸೇರ್ಪಡೆಯಿಂದ ನಗರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.
ನಗರಸಭೆ ಆಯುಕ್ತೆ ಬಿ.ಶುಭಾ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಶ್ವತ್, ತಾಪಂ ಸದಸ್ಯ ಲಕ್ಷ್ಮೀಕಾಂತ್, ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್ , ಪ್ರಚಾರ ಸಮಿತಿ ಅಧ್ಯಕ್ಷ ಬಿ.ಉಮೇಶ್ , ಮುಖಂಡರಾದ ಸುಹೇಲ್, ಜಯಕುಮಾರ್, ಜಕೀ ಉಲ್ಲಾ, ಗೂಳಿಗೌಡ (ಕುಮಾರ್ ) ಮತ್ತಿತರರು ಹಾಜರಿದ್ದರು.