ನಿಖಿಲ್ ವಿವಾಹ ಸಮಾರಂಭಕ್ಕೆ ರಾಮನಗರ-ಚನ್ನಪಟ್ಟಣ ನಡುವಿನ ಅರ್ಚಕರಹಳ್ಳಿ ಸಮೀಪದ ಜಾಗವನ್ನು ಗುರುತಿಸಲಾಗಿದ್ದು ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಂದು ಬಾರಿ ಪರಿಶೀಲಿಸಿದ್ದಾರೆ. ವಿಶಾಲವಾದ ಪ್ರದೇಶದಲ್ಲಿ ವಾಸ್ತುಪ್ರಕಾರವೇ ಮಂಟಪವನ್ನು ನಿರ್ಮಿಸಲು ನಿರ್ಧರಿಸಲಾಗಿದೆ.
ರಾಮನಗರ(ಫೆ.13): ಪುತ್ರ ನಿಖಿಲ್ ವಿವಾಹಕ್ಕೆಂದು ನಿಗದಿಪಡಿಸಿರುವ ರಾಮನಗರ-ಚನ್ನಪಟ್ಟಣ ನಡುವಿನ ಅರ್ಚಕರಹಳ್ಳಿ ಸಮೀಪದ ಜಾಗವನ್ನು ಈಗಾಗಲೇ ಒಂದು ಬಾರಿ ಪರಿಶೀಲಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬುಧವಾರದಂದು ತಮ್ಮ ಬೀಗರಾದ ಮಂಜುನಾಥ್ ಅವರೊಂದಿಗೆ ಮತ್ತೊಮ್ಮೆ ನೋಡಿದ್ದಾರೆ.
ಈ ಸ್ಥಳವನ್ನು ಕುಮಾರಸ್ವಾಮಿ ಕುಟುಂಬದವರು ಮೊದಲೇ ಒಪ್ಪಿಕೊಂಡಿದ್ದರು. ಬೀಗರಿಗೆ ಸ್ಥಳ ತೋರಿಸಬೇಕೆಂಬ ಉದ್ದೇಶದಿಂದ ಎರಡನೇ ಬಾರಿಗೆ ಕುಮಾರಸ್ವಾಮಿ ಭೇಟಿ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಇದು ನಮ್ಮ ಮನೆಯ ಮೊದಲ ಹಾಗೂ ಕೊನೆಯ ವಿವಾಹ ಕಾರ್ಯಕ್ರಮ.
ನಿಖಿಲ್ ನಿಶ್ಚಿತಾರ್ಥ; ಥೈಲ್ಯಾಂಡ್ ಹೂವು, ಶ್ವೇತ ವರ್ಣದ ಮಂಟಪ ರೆಡಿ!
ಹೀಗಾಗಿ ಶಾಸ್ತ್ರೋಕ್ತವಾಗಿ ಹಾಗೂ ವಾಸ್ತು ಪ್ರಕಾರವಾಗಿ ನೆರವೇರಿಸಲಾಗುವುದು. ಈ ಜಾಗಕ್ಕೆ ಶಕ್ತಿ ತುಂಬಲು ನಮ್ಮ ಜ್ಯೋತಿಷಿಗಳು, ಅರ್ಚಕರು ಇನ್ನೆರೆಡು ದಿನದಲ್ಲಿ ಪೂಜೆ ಸಲ್ಲಿಸುವರು. ಎಲ್ಲಿ ಕಲ್ಯಾಣ ಮಂಟಪ ಬರಬೇಕು, ಎಲ್ಲೆಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸಬೇಕು ಎಂಬುದನ್ನು ವಾಸ್ತುಪ್ರಕಾರವಾಗಿ ಗುರುತಿಸಲಿದ್ದಾರೆ ಎಂದು ಹೇಳಿದರು.
ನಿಖಿಲ್ ಕುಮಾರಸ್ವಾಮಿ ಬಾಳಲ್ಲಿ ಇನ್ನು ರೇವತಿ ನಕ್ಷತ್ರದ್ದೇ ಮೆರಗು
ಏ.17ರಂದು ಬೆಳಗ್ಗೆ 9:15ರಿಂದ 9:30ರ ಶುಭಲಗ್ನದಲ್ಲಿ ನಿಖಿಲ್ ಮತ್ತು ರೇವತಿ ವಿವಾಹ ಕಾರ್ಯ ನೆರವೇರಲಿದೆ. ಮದುವೆಗೆ 5 ರಿಂದ 6 ಲಕ್ಷ ಜನ ಬರುವ ನಿರೀಕ್ಷೆ ಇದೆ. ಇದು ಅದ್ಧೂರಿ ಮದುವೆ ಅಲ್ಲ. ಆದರೆ ಗಣ್ಯರು ಆಗಮಿಸುವುದರಿಂದ ವಿಶಾಲವಾದ ಪ್ರದೇಶ ಆಯ್ಕೆ ಮಾಡಿಕೊಂಡಿದ್ದೇವೆ. ನನ್ನೆಲ್ಲ ಜನರಿಗೆ ಆಮಂತ್ರಣ ಪತ್ರಿಕೆ ನೀಡಲಾಗುವುದು. ಪತ್ರಿಕೆಯು ಸಹ ಸರಳವಾಗಿಯೇ ಇರಲಿದೆ ಎಂದು ಹೇಳಿದರು.