ಬೆಂಗಳೂರು: ಚಂದಾಪುರದಲ್ಲಿ ನವಜಾತ ಶಿಶು ಪತ್ತೆ, ಬಟ್ಟೆಯಲ್ಲಿ ಸುತ್ತಿ ಬ್ಯಾಗ್ ನಲ್ಲಿಟ್ಟ ಕಟುಕರು!

Published : Sep 08, 2025, 01:11 PM IST
Newborn Baby Abandoned in bengaluru

ಸಾರಾಂಶ

ಚಂದಾಪುರ ಚೋಳರ ಕೆರೆಯ ಬಳಿ ಪೊದೆಯೊಳಗೆ ಬ್ಯಾಗ್‌ನಲ್ಲಿ ಬಿಟ್ಟುಹೋಗಿದ್ದ ನವಜಾತ ಶಿಶುವನ್ನು ಸ್ಥಳೀಯರು ಪತ್ತೆ ಹಚ್ಚಿದ್ದಾರೆ. ಶಿಶುವಿಗೆ ಚಿಕಿತ್ಸೆ ನೀಡಿ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಸುಪರ್ದಿಗೆ ಒಪ್ಪಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರ ಚೋಳರ ಕೆರೆ ಏರಿಯ ಬಳಿ ಕರುಳು ಹಿಂಡುವ ಘಟನೆ ಬೆಳಕಿಗೆ ಬಂದಿದೆ. ಪೊದೆಯೊಳಗೆ ಬಟ್ಟೆಯಲ್ಲಿ ಸುತ್ತಿ, ಬ್ಯಾಗ್‌ನಲ್ಲಿ ಬಿಟ್ಟುಹೋಗಲಾದ ನವಜಾತ ಶಿಶು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ. ಶನಿವಾರ ರಾತ್ರಿ ಸ್ಥಳೀಯ ನಿವಾಸಿಗಳು ಪೊದೆ ಬಳಿ ಮಗುವಿನ ಅಳುವ ಶಬ್ದವನ್ನು ಕೇಳಿ ಶಂಕೆಗೊಂಡರು. ಶಬ್ದದ ದಿಕ್ಕಿನಲ್ಲಿ ಪರಿಶೀಲನೆ ನಡೆಸಿದಾಗ, ಬಟ್ಟೆಯಲ್ಲಿ ಸುತ್ತಿ ಬ್ಯಾಗ್‌ನೊಳಗೆ ಇಟ್ಟು ಬಿಟ್ಟುಹೋಗಿದ್ದ ನವಜಾತ ಶಿಶುವನ್ನು ಕಂಡು ಬೆಚ್ಚಿಬಿದ್ದರು. ಕೂಡಲೇ ಶಿಶುವನ್ನು ಹತ್ತಿರದ ಚಂದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಲಾಯಿತು.

ವೈದ್ಯಕೀಯ ಸ್ಥಿತಿ ಮತ್ತು ಚಿಕಿತ್ಸೆ

ಆರೋಗ್ಯ ಕೇಂದ್ರದ ಸಿಬ್ಬಂದಿಗಳು ತಕ್ಷಣ ಶಿಶುವಿಗೆ ಅಗತ್ಯ ಆರೈಕೆ ನೀಡಿದರು. ವೈದ್ಯರ ಪ್ರಕಾರ, ಶಿಶುವಿಗೆ ಮೆಕೋನಿಯಮ್ ಸ್ಟೈನ್ (Meconium Stain) ಸಮಸ್ಯೆ ಇತ್ತು. ಅಂದರೆ, ಶಿಶು ಜನನದ ಸಮಯದಲ್ಲಿ ತನ್ನದೇ ಮಲವನ್ನು ಸೇವಿಸಿದ್ದರಿಂದ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ತಕ್ಷಣದ ಚಿಕಿತ್ಸೆಯ ನಂತರ ಶಿಶುವಿನ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಪ್ರಸ್ತುತ ಮಗು ಹಾಲು ಸೇವನೆ ಮಾಡುತ್ತಿದೆ ಹಾಗೂ ಸ್ಥಿತಿ ಸ್ಥಿರವಾಗಿದೆ. ಹೆಚ್ಚಿನ ತಜ್ಞರ ಚಿಕಿತ್ಸೆಗೆ ಶಿಶುವನ್ನು ಬೆಂಗಳೂರು ನಗರದ ವಾಣಿ ವಿಲಾಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಶಿಶುವಿನ ಭವಿಷ್ಯದ ಪೋಷಣೆ

ಸದ್ಯ ಶಿಶುವನ್ನು ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಜವಾಬ್ದಾರಿಯಲ್ಲಿ ಇರಿಸಲಾಗಿದ್ದು, ಸುರಕ್ಷಿತ ಆರೈಕೆ ವ್ಯವಸ್ಥೆ ಮಾಡಲಾಗಿದೆ.

ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಶಿಶುವನ್ನು ವಿವಾಹಪೂರ್ವ ಸಂಬಂಧದಿಂದ ಜನಿಸಿದ ಮಗು ಎಂದು ಅಥವಾ ಹೆಣ್ಣು ಮಗು ಆಗಿರುವ ಕಾರಣ ಬಿಟ್ಟು ಹೋಗಿರುವ ಸಾಧ್ಯತೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಸೂರ್ಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಿಶುವನ್ನು ಬಿಟ್ಟುಹೋದವರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಸಮೀಪದ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ, ಸ್ಥಳೀಯರಿಂದ ಮಾಹಿತಿ ಸಂಗ್ರಹಣೆ ನಡೆಯುತ್ತಿದೆ.

 

PREV
Read more Articles on
click me!

Recommended Stories

ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ