
ಕಾರ್ಕಳ (ಜು.8): ಕರ್ನಾಟಕದ ಪಶ್ಚಿಮ ಘಟ್ಟದ ಜೀವವೈವಿಧ್ಯಕ್ಕೆ ಮತ್ತೊಂದು ಮಹತ್ವದ ಪ್ರಾಣಿ ಸೇರ್ಪಡೆಯಾದೆ. ಭಾರತದ ಏಕೈಕ ನೈಜ ಮರವಾಸಿ ಸಿಹಿನೀರಿನ ಏಡಿ ‘ಕನಿ ಮರನಂಡು’ ಎಂಬ ಅಪರೂಪದ ಪ್ರಾಣಿ ಮೊದಲ ಬಾರಿಗೆ ಆಗುಂಬೆಯಲ್ಲಿ ಪತ್ತೆಯಾಗಿದೆ.
ಕೇರಳದ ಆಗಸ್ತ್ಯಮಲೆ ಜೈವಿಕ ವಲಯದಲ್ಲಷ್ಟೇ ದಾಖಲಾಗಿದ್ದ ಈ ಪ್ರಭೇದವು ಇದೀಗ ಕರ್ನಾಟಕದಲ್ಲಿ ಕಂಡುಬಂದಿದ್ದು, ಜೋಯೆಲ್ ಕೊರೆಯ, ಪವನ್ ಚಿಕ್ಕನಾರಾಯಣಸ್ವಾಮಿ ಹಾಗೂ ವಿಜಯ್ ಕುಮಾರ್ ನಡೆಸಿದ ಸಂಶೋಧನಾ ಅಧ್ಯಯನದಲ್ಲಿ ದೃಢಪಟ್ಟಿದೆ.
‘ಗೆಕಾರ್ಸಿನುಸಿಡೆ’ ಕುಟುಂಬದ ಅಪರೂಪದ ಸಿಹಿನೀರಿನ ಮರವಾಸಿ ಏಡಿ’ ಭಾರತದಲ್ಲಿ ಸಂಪೂರ್ಣವಾಗಿ ಮರಗಳಲ್ಲೇ ವಾಸಿಸುವ ಏಕೈಕ ಏಡಿ ಎಂಬ ವಿಶೇಷತೆ ಹೊಂದಿದೆ. ಈ ಏಡಿಯ ಉದ್ದವಾದ ಕಾಲುಗಳು, ಅಂಡಾಕಾರದ ಕವಚ, ಹಳದಿ-ಕಿತ್ತಳೆ ಬಣ್ಣದ ಕೊಕ್ಕುಗಳು ಹಾಗೂ ನೀಲಿಕಪ್ಪು ದೇಹವು ಪ್ರಮುಖ ಗುರುತಿಸುವ ಲಕ್ಷಣಗಳಾಗಿವೆ. ಇದುವರೆಗೆ ಈ ಪ್ರಭೇದ ಸಂಪೂರ್ಣವಾಗಿ ಮರವಾಸಿಯೆಂದು ಪರಿಗಣಿಸಲಾಗಿತ್ತು. ಆದರೆ ಆಗುಂಬೆಯಲ್ಲಿ ನೆಲದ ಮೇಲೂ ಸಂಚರಿಸುತ್ತಿದ್ದು, ಹೊಸ ಕುತೂಹಲಕಾರಿ ಪ್ರಶ್ನೆಗಳನ್ನು ಎತ್ತಿದೆ. ಸಂಗಾತಿಯನ್ನು ಹುಡುಕುವುದು ಅಥವಾ ಹೊಸ ವಾಸಸ್ಥಳವನ್ನು ಅನ್ವೇಷಿಸುವ ಉದ್ದೇಶದಿಂದ ಇದು ನೆಲಕ್ಕಿಳಿಯುವ ಸಾಧ್ಯತೆ ಇದೆ. ವಿಶೇಷವಾಗಿ ಮಳೆಗಾಲದಲ್ಲಿ ಈ ಚಟುವಟಿಕೆ ಹೆಚ್ಚಾಗುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಸಂಶೋಧಕರ ಪ್ರಕಾರ, ಈ ಅಪರೂಪದ ಏಡಿಯು ನಿತ್ಯಹರಿದ್ವರ್ಣ ಹಾಗೂ ಅರೆ ನಿತ್ಯಹರಿದ್ವರ್ಣ ಕಾಡಿನ ಮರಗಳ ಕಾಂಡದಲ್ಲಿರುವ ನೀರು ತುಂಬಿದ ಕುಳಿಗಳಲ್ಲಿ ವಾಸಿಸುತ್ತದೆ. ಎಲೆಗಳು, ಬೀಜಗಳು, ಕೀಟಗಳು ಹಾಗೂ ಸ್ಲಗ್‌ಗಳು ಇದರ ಪ್ರಮುಖ ಆಹಾರವಾಗಿವೆ. ಆಗುಂಬೆಯಲ್ಲಿ ಇದು ಮೈರಿಸ್ಟಿಕಾ ಜೌಗು ಪ್ರದೇಶ ಸಮೀಪ ಕಂಡುಬಂದಿರುವುದು, ನೀರಿನ ಮೂಲಗಳ ಸಮೀಪದ ಪರಿಸರವನ್ನು ಇದು ಹೆಚ್ಚಾಗಿ ಇಷ್ಟಪಡುತ್ತದೆ.
ಈ ಹೊಸ ದಾಖಲೆಯು ಪಶ್ಚಿಮ ಘಟ್ಟದ ಜೀವವೈವಿಧ್ಯದ ಅಧ್ಯಯನಕ್ಕೆ ಮಹತ್ವದ ಕೊಡುಗೆಯಾಗಿದೆ. ಮರಗಳಲ್ಲಿ ಗುಪ್ತವಾಗಿ ವಾಸಿಸುವ ಸ್ವಭಾವದಿಂದಾಗಿ ಈ ಅಪರೂಪದ ಏಡಿ ಇದುವರೆಗೆ ಗಮನಕ್ಕೆ ಬಂದಿರದ ಸಾಧ್ಯತೆ ಇದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದು, ಪಶ್ಚಿಮ ಘಟ್ಟದಾದ್ಯಂತ ಸಮಗ್ರ ಸಮೀಕ್ಷೆ ನಡೆಸಿ ಇದರ ವಿತರಣಾ ಪ್ರದೇಶ, ಪರಿಸರಶಾಸ್ತ್ರ, ವರ್ತನೆ ಹಾಗೂ ಸಂರಕ್ಷಣಾ ಸ್ಥಿತಿಯ ಕುರಿತು ಹೆಚ್ಚಿನ ವೈಜ್ಞಾನಿಕ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ಶಿಫಾರಸು ಮಾಡಿದ್ದಾರೆ.