
ಬೆಂಗಳೂರು ದಕ್ಷಿಣ/ರಾಮನಗರ (ಜು.07): ಜಿಲ್ಲೆಯ ಚನ್ನಪಟ್ಟಣ ತಹಶೀಲ್ದಾರ್ ಬಿ.ಎನ್.ಗಿರೀಶ್ ಅವರು ಲೈಂಗಿಕ ಕಿರುಕುಳ, ದರೋಡೆ ಹಾಗೂ ಕೊಲೆ ಯತ್ನಕ್ಕೆ ಒಳಗಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದ ವ್ಯಕ್ತಿಯೊಬ್ಬ ತನ್ನ ಸ್ನೇಹಿತರೊಂದಿಗೆ ಸೇರಿ ತಹಶೀಲ್ದಾರ್ ಅವರ ಸರ್ಕಾರಿ ನಿವಾಸದಲ್ಲೇ ಈ ವಿಕೃತಿ ಎಸೆಗಿದ್ದಾನೆ. ಈ ಸಂಬಂಧ ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೈಸೂರು ಮೂಲದ ಅನುಶ್ ಎಂಬಾತನಿಗೆ ತಹಶೀಲ್ದಾರ್ ಗಿರೀಶ್ ಅವರ ಪರಿಚಯ ಫೇಸ್‌ಬುಕ್ ಮೂಲಕವಾಗಿತ್ತು. ಇದೇ ಸ್ನೇಹವನ್ನು ಬಳಸಿಕೊಂಡ ಅನುಶ್, ಕಳೆದ ಜೂನ್ 28ರಂದು ತನ್ನ ಸ್ನೇಹಿತರಾದ ಶೋಭರಾಜನ್ ಮತ್ತು ನವೀನ್ ಎಂಬುವವರ ಜೊತೆ ಚನ್ನಪಟ್ಟಣದಲ್ಲಿರುವ ತಹಶೀಲ್ದಾರ್ ಅವರ ಸರ್ಕಾರಿ ನಿವಾಸಕ್ಕೆ ಬಂದಿದ್ದನು.
ದೂರಿನ ಪ್ರಕಾರ, ಅಂದು ರಾತ್ರಿ ತಹಶೀಲ್ದಾರ್ ನಿವಾಸದಲ್ಲೇ ಮದ್ಯಪಾನ ಮಾಡಿದ್ದ ಆರೋಪಿಗಳು, ನಂತರ ಗಿರೀಶ್ ಅವರಿಗೆ ನೀಡಿದ್ದ ಜೂಸ್‌ನಲ್ಲಿ ಮಂಕುಬೂದಿ ಅಥವಾ ಪ್ರಜ್ಞೆ ತಪ್ಪಿಸುವ ಮಾತ್ರೆಗಳನ್ನು ಬೆರೆಸಿದ್ದರು. ಜೂಸ್ ಕುಡಿದು ಗಿರೀಶ್ ಪ್ರಜ್ಞೆ ತಪ್ಪುತ್ತಿದ್ದಂತೆಯೇ, ಆರೋಪಿಗಳು ತಮ್ಮ ಅಸಲಿ ರೂಪ ತೋರಿಸಿದ್ದಾರೆ. ಗಿರೀಶ್ ಮೈಮೇಲಿದ್ದ ಬಟ್ಟೆಗಳನ್ನು ಬಿಚ್ಚಿ ವಿಕೃತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಅಸಹಜ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಕಿಡಿಗೇಡಿಗಳು ತಹಶೀಲ್ದಾರ್ ಮೈಮೇಲಿದ್ದ ಚಿನ್ನದ ಸರ ಮತ್ತು ಉಂಗುರಗಳನ್ನು ಕಸಿದುಕೊಂಡಿದ್ದಾರೆ. ಅಷ್ಟಕ್ಕೇ ನಿಲ್ಲದ ಅವರು, 10 ಲಕ್ಷ ರೂಪಾಯಿ ಹಣ ನೀಡುವಂತೆ ತಹಶೀಲ್ದಾರ್ ಅವರಿಗೆ ಬೆದರಿಕೆ ಹಾಕಿದ್ದಾರೆ. ಗಿರೀಶ್ ಹಣ ನೀಡಲು ನಿರಾಕರಿಸಿದಾಗ ಅವರನ್ನು ಕೊಲ್ಲಲು ಯತ್ನಿಸಿದ್ದಾರೆ ಎನ್ನಲಾಗಿದೆ. ಜೂನ್ 29ರಂದು ನಡೆದ ಈ ಕೃತ್ಯದಿಂದ ತಹಶೀಲ್ದಾರ್ ದೈಹಿಕವಾಗಿ ಹಾಗೂ ಮಾನಸಿಕವಾಗಿ ಜರ್ಜರಿತರಾಗಿದ್ದಾರೆ.
ಈ ಭೀಕರ ಘಟನೆಗೆ ಸಂಬಂಧಿಸಿದಂತೆ ತಹಶೀಲ್ದಾರ್ ಬಿ.ಎನ್.ಗಿರೀಶ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ಎ1 ಆರೋಪಿ ಅನುಶ್‌ನನ್ನು ಈಗಾಗಲೇ ಬಂಧಿಸಿ ಜೈಲಿಗಟ್ಟಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಅವರ ನಿವಾಸದಲ್ಲೇ ಇಂತಹ ದೌರ್ಜನ್ಯ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.