
ಹುಬ್ಬಳ್ಳಿ: ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಲೋಕಮಾನ್ಯ ತಿಲಕ್ ಟರ್ಮಿನಲ್, ಮುಂಬೈ ನಡುವೆ ಹುಬ್ಬಳ್ಳಿ ಮುಖಾಂತರ ಸಂಚರಿಸುವ ನೂತನ ವಿಶೇಷ ರೈಲಿಗೆ (06557) ಮೇ 17ರಂದು ಸಂಜೆ ನಗರದ ಶ್ರೀಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಸಿರು ನಿಶಾನೆ ತೋರಿದರು.
ಬೆಂಗಳೂರಿನಿಂದ ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಮಾರ್ಗದ ಮೂಲಕ ಮುಂಬೈಗೆ ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲು ಸಂಚರಿಸುವಂತೆ ಜೋಶಿ ಮನವಿ ಮೇರೆಗೆ ಈ ರೈಲಿಗೆ ಅನುಮೋದನೆ ನೀಡಲಾಗಿತ್ತು. ಈ ಹೊಸ ದ್ವಿಸಪ್ತಾಹಿಕ ಎಕ್ಸ್‌ಪ್ರೆಸ್ ರೈಲು ರೈಲು ಮಾರ್ಗದ (16553/16554) ಮೇ 23ರಿಂದ ಬೆಂಗಳೂರು ಮತ್ತು ಮೇ 24ರಿಂದ ಮುಂಬೈನಿಂದ ಪ್ರಾರಂಭವಾಗಲಿದೆ.
ಪ್ರತಿ ಶನಿವಾರ ಮತ್ತು ಮಂಗಳವಾರ ಬೆಂಗಳೂರಿನಿಂದ ಪ್ರತಿ ಭಾನುವಾರ ಮತ್ತು ಬುಧವಾರ ಮುಂಬೈನಿಂದ ರೈಲು ಸಂಚರಿಸಲಿದೆ. ಈ ಹೊಸ ರೈಲು ಸೇವೆಯು ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ದಾವಣಗೆರೆ ಭಾಗದ ಪ್ರಯಾಣಿಕರಿಗೆ, ಅದರಲ್ಲೂ ವಿಶೇಷವಾಗಿ ಉದ್ಯೋಗ, ಶಿಕ್ಷಣ ಮತ್ತು ಪ್ರವಾಸೋದ್ಯಮಕ್ಕಾಗಿ ಮುಂಬೈ ಹಾಗೂ ಪುಣೆಗೆ ಪ್ರಯಾಣಿಸುವವರಿಗೆ ವರದಾನವಾಗಲಿದೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಚಿವ ಪ್ರಹ್ಲಾದ ಜೋಶಿ ಅವರು, ಪ್ರಧಾನಮಂತ್ರಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತೀಯ ರೈಲ್ವೆ ವ್ಯವಸ್ಥೆ ದೇಶದ ಅಭಿವೃದ್ಧಿಗೆ ಮತ್ತಷ್ಟು ವೇಗ ತುಂಬುತ್ತಿದ್ದು, ನೂತನ ರೈಲು ಸೇವೆಗಳ ಮೂಲಕ ಸಾಮಾನ್ಯ ಜನರ ಪ್ರಯಾಣ ಸುಗಮ, ಸುರಕ್ಷಿತ ಹಾಗೂ ವೇಗದಾಯಕವಾಗುತ್ತಿದೆ. ಕರ್ನಾಟಕದ ರೈಲ್ವೆ ಮೂಲಸೌಕರ್ಯವನ್ನು ಬಲಪಡಿಸಲು ನಮ್ಮಕೇಂದ್ರ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದ್ದು ರಾಜ್ಯದ ಪ್ರತಿಯೊಂದು ಯೋಜನೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ,ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ ,ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ.ಸೋಮಣ್ಣ ಅವರಿಗೆ ಸಮಸ್ತ ಕರ್ನಾಟಕದ ಜನತೆಯ ಪರವಾಗಿ ಅನಂತ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.