
ಬೆಂಗಳೂರು: ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಹೀನಾಯ ಘಟನೆಯೊಂದು ಬೆಂಗಳೂರಿನ ಹೃದಯಭಾಗದಲ್ಲಿ ನಡೆದಿದೆ. ಕಾಮದ ಅಮಲೇರಿದ ವಿಕೃತ ಕಾಮಿಯೊಬ್ಬ ಮೂಕ ಪ್ರಾಣಿ ಹಸುವಿನ ಮೇಲೆ ಅತ್ಯಾ*ಚಾರವೆಸಗಿ ಅಮಾನವೀಯತೆ ಮೆರೆದಿದ್ದಾನೆ. ಈ ಆಘಾತಕಾರಿ ದೃಶ್ಯಗಳು ಸಮೀಪದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಈ ಘೋರ ಕೃತ್ಯವು ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಡರಾತ್ರಿಯ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ, ರಸ್ತೆಯ ಬದಿಯಲ್ಲಿ ಕಟ್ಟಿದ್ದ ಹಸುವಿನ ಬಳಿ ಹೋಗಿದ್ದಾನೆ. ಜನಸಂದಣಿ ಇಲ್ಲದ ಸಮಯವನ್ನು ನೋಡಿ, ಆತ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇಡೀ ಕೃತ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದು, ವಿಕೃತ ಕಾಮಿಯ ಮುಖ ಮತ್ತು ಆತ ಬಂದ ವಾಹನದ ವಿವರಗಳು ಪೊಲೀಸರಿಗೆ ಲಭ್ಯವಾಗಿವೆ ಎನ್ನಲಾಗಿದೆ.
ಸಿಸಿಟಿವಿ ದೃಶ್ಯಾವಳಿಗಳು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದಂತೆ ಸಾರ್ವಜನಿಕರು ಆಘಾತ ವ್ಯಕ್ತಪಡಿಸಿದ್ದಾರೆ. 'ಮನುಷ್ಯ ಇಷ್ಟೊಂದು ಕೆಳಮಟ್ಟಕ್ಕೆ ಇಳಿಯಲು ಹೇಗೆ ಸಾಧ್ಯ?' ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಪ್ರಾಣಿ ಪ್ರೇಮಿಗಳು ಮತ್ತು ಸ್ಥಳೀಯ ನಿವಾಸಿಗಳು ಕೂಡಲೇ ಈ ದುಷ್ಕರ್ಮಿಯನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ. ಹಸುವನ್ನು ಪೂಜಿಸುವ ನಾಡಿನಲ್ಲಿ ಇಂತಹ ಘಟನೆ ನಡೆದಿರುವುದು ಭಕ್ತರ ಮನಸ್ಸಿಗೂ ನೋವುಂಟು ಮಾಡಿದೆ.
ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಸಿಗುತ್ತಿದ್ದಂತೆಯೇ ಎಚ್ಚೆತ್ತ ಕಾಟನ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಆಧಾರದ ಮೇಲೆ ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ. ಬೆಂಗಳೂರಿನಂತಹ ಮೆಟ್ರೋ ನಗರದಲ್ಲಿ ಇಂತಹ ವಿಕೃತ ಘಟನೆಗಳು ಸಂಭವಿಸುತ್ತಿರುವುದು ಸಾರ್ವಜನಿಕರ ಸುರಕ್ಷತೆ ಮತ್ತು ನೈತಿಕತೆಯ ಬಗ್ಗೆ ಆತಂಕ ಮೂಡಿಸಿದೆ.
ಸದ್ಯ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದು, ಆರೋಪಿ ಸದ್ಯದಲ್ಲೇ ಬಲೆಗೆ ಬೀಳುವ ನಿರೀಕ್ಷೆಯಿದೆ. ಈ ಕೃತ್ಯ ಎಸಗಿದ ವ್ಯಕ್ತಿಯನ್ನು ಪತ್ತೆಹಚ್ಚಲು ಸಾರ್ವಜನಿಕರ ಸಹಕಾರವನ್ನೂ ಪೊಲೀಸರು ಕೋರಿದ್ದಾರೆ.