ರಾಜ್ಯದಲ್ಲಿ ಮಳೆ ಅಬ್ಬರ: ರಾಯಚೂರಿನಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು, ವಿಜಯನಗರದಲ್ಲಿ ಪಪ್ಪಾಯಿ ಬೆಳೆ ನಾಶ!

Published : May 17, 2026, 06:23 PM IST
Karnataka Rain

ಸಾರಾಂಶ

ರಾಜ್ಯದ ಹಲವೆಡೆ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಯು ತೀವ್ರ ಹಾನಿಯನ್ನುಂಟುಮಾಡಿದೆ. ರಾಯಚೂರು ಜಿಲ್ಲೆಯಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟರೆ, ವಿಜಯನಗರ ಜಿಲ್ಲೆಯಲ್ಲಿ ಬಿರುಗಾಳಿ ಮಳೆಗೆ ರೈತ ದಂಪತಿಯ ಮೂರು ಎಕರೆ ಪಪ್ಪಾಯಿ ಬೆಳೆ ಸಂಪೂರ್ಣ ನಾಶವಾಗಿದೆ.

ರಾಯಚೂರು/ವಿಜಯನಗರ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ವರುಣನ ಆರ್ಭಟ ಜೋರಾಗಿದ್ದು, ಮಳೆ ಅನಾಹುತಗಳಿಗೆ ಓರ್ವ ಬಲಿಯಾಗಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರೆ, ವಿಜಯನಗರ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ರೈತರ ವರ್ಷದ ಶ್ರಮವೆಲ್ಲಾ ಮಣ್ಣು ಪಾಲಾಗಿದೆ.

ರಾಯಚೂರು: ಸಿಡಿಲು ಬಡಿತಕ್ಕೆ ಕರಿಯಪ್ಪ ಸಾವು

ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಕೋಮಲಾಪುರ್ ಗ್ರಾಮದಲ್ಲಿ ಸಿಡಿಲು ಬಡಿದು 45 ವರ್ಷದ ಕರಿಯಪ್ಪ ಗೆನ್ನಾಕಿಹಾಳ್ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗ್ರಾಮದ ಜಮೀನಿನಲ್ಲಿ ಟ್ರಾಕ್ಟರ್‌ಗೆ ಗೊಬ್ಬರ ತುಂಬುವ ಕೆಲಸದಲ್ಲಿ ನಿರತರಾಗಿದ್ದಾಗ ಈ ದುರಂತ ಸಂಭವಿಸಿದೆ. ಕರಿಯಪ್ಪ ಅವರೊಂದಿಗೆ ಕೆಲಸ ಮಾಡುತ್ತಿದ್ದ ಬಸವರಾಜ್ ಎಂಬುವವರಿಗೂ ಸಿಡಿಲು ಬಡಿದಿದ್ದು, ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮುದುಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರೈತ ದಂಪತಿಯ ಬಾಳಲ್ಲಿ ಬಿರುಗಾಳಿ

ಮತ್ತೊಂದೆಡೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲಿ ಮಳೆ ಹಾನಿ ತೀವ್ರವಾಗಿದೆ. ತಾಲ್ಲೂಕಿನ ಕೆಂಗಲಹಟ್ಟಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಪಪ್ಪಾಯಿ ಬೆಳೆ ಸಂಪೂರ್ಣ ನೆಲಸಮವಾಗಿದೆ. ರೈತ ದಂಪತಿಗಳಾದ ಸೀತಮ್ಮ ಮತ್ತು ಜಿ.ಎಸ್. ದೊಡ್ಡಪ್ಪ ಅವರಿಗೆ ಸೇರಿದ ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ 200ಕ್ಕೂ ಹೆಚ್ಚು ಪಪ್ಪಾಯಿ ಗಿಡಗಳು ಧರೆಗುರುಳಿವೆ.

ಈ ರೈತ ದಂಪತಿ ಸುಮಾರು 6 ತಿಂಗಳ ಹಿಂದೆ 3 ಲಕ್ಷ ರೂಪಾಯಿ ಸಾಲ-ಸೋಲ ಮಾಡಿ ಪಪ್ಪಾಯಿ ಬೆಳೆ ಹಾಕಿದ್ದರು. ಇನ್ನೇನು ಮೂರು ತಿಂಗಳಲ್ಲಿ ಬೆಳೆ ಕೈಗೆ ಬರಬೇಕಿತ್ತು, ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಪ್ರಕೃತಿ ಮುನಿಸು ಭಾರಿ ಆಘಾತ ನೀಡಿದೆ. 'ಬೆಳೆದಿದ್ದ ಗಿಡಗಳು ಮಣ್ಣು ಪಾಲಾಗಿರುವುದನ್ನು ಕಂಡು ನಮಗೆ ದಿಕ್ಕು ತೋಚದಂತಾಗಿದೆ ಎಂದು ದಂಪತಿ ಅಳಲು ತೋಡಿಕೊಂಡಿದ್ದಾರೆ.

ಪರಿಹಾರಕ್ಕೆ ಸಾರ್ವಜನಿಕರ ಆಗ್ರಹ:

ಸಿಡಿಲು ಬಡಿತಕ್ಕೆ ಬಲಿಯಾದ ಕರಿಯಪ್ಪ ಅವರ ಕುಟುಂಬಕ್ಕೆ ಹಾಗೂ ಬೆಳೆ ಕಳೆದುಕೊಂಡು ಕಂಗಾಲಾಗಿರುವ ವಿಜಯನಗರದ ರೈತ ದಂಪತಿಗೆ ಸರ್ಕಾರ ಕೂಡಲೇ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮುಂಗಾರು ಪೂರ್ವ ಮಳೆ (Pre-monsoon rain) ತೀವ್ರಗೊಳ್ಳುತ್ತಿರುವುದರಿಂದ ರೈತರು ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ ಹವಾಮಾನದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Read more Articles on
click me!

Recommended Stories

ಬೆಳಗಾವಿ ವಿಮಾನ ನಿಲ್ದಾಣ ಜುಲೈಗೆ ಪೂರ್ಣ, ನೂತನ ಟರ್ಮಿನಲ್ ಪಿಎಂ ಮೋದಿಯಿಂದ ಉದ್ಘಾಟನೆ
ಬೆಂಗಳೂರನ್ನೇ ಬೆಚ್ಚಿಬೀಳಿಸುವ ಘಟನೆ: ಹಸುವಿನ ಮೇಲೆ ಅತ್ಯಾ*ಚಾರವೆಸಗಿ ವಿಕೃತಿ ಮೆರೆದ ಕಾಮುಕ; ಸಿಸಿಟಿವಿಯಲ್ಲಿ ಸೆರೆ!