ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಭಾರತೀಯ ಜನತಾ ಪಕ್ಷ ಚಿತ್ರದುರ್ಗದಲ್ಲಿ ಬೈಕ್ ರ್ಯಾಲಿ ಮೂಲಕ ದೇಶಪ್ರೇಮದ ಕೂಗಿಗೆ ದನಿಗೂಡಿಸಿದೆ. ಚಂದ್ರವಳ್ಳಿ ಮೈದಾನದಿಂದ ಸಹಸ್ರಾರು ಸಂಖ್ಯೆಯ ಬೈಕ್‌ಗಳಲ್ಲಿ ಆಗಮಿಸಿದ ಕಾರ್ಯಕರ್ತರು ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿ ನೋಡುಗರ ಗಮನ ಸೆಳೆದರು.
ಚಿತ್ರದುರ್ಗ (ಆ.13): ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಭಾರತೀಯ ಜನತಾ ಪಕ್ಷ ಚಿತ್ರದುರ್ಗದಲ್ಲಿ ಬೈಕ್ ರ್ಯಾಲಿ ಮೂಲಕ ದೇಶಪ್ರೇಮದ ಕೂಗಿಗೆ ದನಿಗೂಡಿಸಿದೆ. ಚಂದ್ರವಳ್ಳಿ ಮೈದಾನದಿಂದ ಸಹಸ್ರಾರು ಸಂಖ್ಯೆಯ ಬೈಕ್‌ಗಳಲ್ಲಿ ಆಗಮಿಸಿದ ಕಾರ್ಯಕರ್ತರು ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿ ನೋಡುಗರ ಗಮನ ಸೆಳೆದರು. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ವಿಪ ಸದಸ್ಯ ನವೀನ್ ಬೈಕ್ ಏರಿದ್ದು ವಿಶೇಷವಾಗಿತ್ತು. ಕಾಲು ನೋವು ಮಾಡಿಕೊಂಡಿರುವ ಶಾಸಕ ತಿಪ್ಪಾರೆಡ್ಡಿ ತೆರೆದ ವಾಹನದಲ್ಲಿ ರ್ಯಾಲಿಗೆ ದಿಕ್ಸೂಚಿಯಾಗಿ ಸಾಗಿದರು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾಗಿದೆ. ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯಕ್ಕಾಗಿ ಮಡಿದವರನ್ನು ಸ್ಮರಿಸಬೇಕು. ಸ್ವಾತಂತ್ರ್ಯದ ಸಂಭ್ರಮದಲ್ಲಿದ್ದಾಗ ದೇಶ ಇಬ್ಭಾಗವಾಗಿ ಅನೇಕ ಮಾರಣ ಹೋಮಗಳು ನಡೆದಿದ್ದನ್ನು ಯಾರೂ ಮರೆಯುವಂತಿಲ್ಲ. ಕೆಲವು ಕಿಡಿಗೇಡಿಗಳು ಜಮ್ಮು-ಕಾಶ್ಮೀರ ಭಾರತಕ್ಕೆ ಸೇರಿದ್ದಲ್ಲ ಎಂದು ಹೇಳಿದ್ದಾರೆ. ಅನೇಕ ಪ್ರಧಾನಿಗಳು ದೇಶವನ್ನು ಆಳಿದ್ದಾರೆ. ಅವರ್ಯಾರಿಗೂ ಜಮ್ಮು-ಕಾಶ್ಮೀರ ಭಾರತಕ್ಕೆ ಸೇರಿದ್ದು ಎನ್ನುವ ಪರಿಕಲ್ಪನೆ ಕೂಡ ಇರಲಿಲ್ಲ. ಆದರೆ ನರೇಂದ್ರ ಮೋದಿರವರು ಜಮ್ಮು-ಕಾಶ್ಮೀರಕ್ಕೆ ಕಾಂಗ್ರೆಸ್‌ನವರು ನೀಡಿದ್ದ ವಿಶೇಷ ಸವಲತ್ತನ್ನು ರದ್ದುಪಡಿಸಿ ಇಡಿ ವಿಶ್ವವೇ ಭಾರತದತ್ತ ತಿರುಗಿ ನೋಡಿವಂತೆ ಮಾಡಿದ್ದಾರೆ ಎಂದರು.
ಸಂವಿಧಾನ ತಿದ್ದುಪಡಿ ಬಗ್ಗೆ ಅಂಬೇಡ್ಕರ್ ಅಂದೇ ಪ್ರಸ್ತಾಪಿಸಿದ್ರು: ಕೇಂದ್ರ ಸಚಿವ ನಾರಾಯಣಸ್ವಾಮಿ
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಪ್ರಧಾನಿ ಮೋದಿ ಹರ್‌ಘರ್ ತಿರಂಗಾ ಎನ್ನುವ ಸಂದೇಶ ನೀಡಿರುವುದರಿಂದ ಪ್ರತಿಯೊಬ್ಬರು ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ರಾಷ್ಟ್ರ ಪ್ರೇಮವನ್ನು ಪ್ರದರ್ಶಿಸಬೇಕು. ಬೈಕ್‌ರ್ಯಾಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನತೆಯಲ್ಲಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಜಾಗೃತಿ ಮೂಡಿಸಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನತೆಗೆ ನೀಡಿರುವ ಕೊಡುಗೆ ಹಾಗೂ ಯೋಜನೆಗಳನ್ನು ಈ ಸಂದರ್ಭದಲ್ಲಿ ಮನೆ ಮನೆಗೆ ಮುಟ್ಟಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದರು.
ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ ದೇಶದ ಪ್ರತಿ ರಾಜ್ಯ, ಜಿಲ್ಲೆ, ಗಲ್ಲಿಗಲ್ಲಿಗಳಲ್ಲಿ 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಡಗರ ಸಂಭ್ರಮಗಳಿಂದ ನಡೆಯುತ್ತಿರುವುದು ನೋಡಿ ವಿರೋಧಿಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಪ್ರಧಾನಿ ಮೋದಿ ಹರ್‌ಘರ್ ತಿರಂಗಾ ಎನ್ನುವ ಸೂಚನೆ ನೀಡಿರುವುದರ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ರಾಷ್ಟ್ರಧ್ವಜ ಹಾರಿಸುವಂತೆ ಜನತೆಯಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
88 ವರ್ಷಗಳ ಬಳಿಕ ಪ್ರಥಮ ಬಾರಿಗೆ ಭರ್ತಿಯಾದ ಕೋಟೆನಾಡಿನ ಅಕ್ಷಯಪಾತ್ರೆ ವಾಣಿ ವಿಲಾಸ ಜಲಾಶಯ
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೈಪಾಲ್, ಉಪಾಧ್ಯಕ್ಷ ಕಲ್ಲೇಶಯ್ಯ, ಚಂದ್ರಿಕಾ ಲೋಕನಾಥ್, ಖಜಾಂಚಿ ಮಾಧುರಿ ಗಿರೀಶ್, ಯುವ ಮುಖಂಡ ಡಾ.ಸಿದ್ದಾರ್ಥ, ರಘುಚಂದನ್, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ ಸುರೇಶ್‌ಸಿದ್ದಾಪುರ, ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್‌ಯಾದವ್, ಕೆ. ಮಲ್ಲಿಕಾರ್ಜುನ್, ನಗರಾಧ್ಯಕ್ಷ ನವೀನ್ ಚಾಲುಕ್ಯ, ಗ್ರಾಮಾಂತರ ಮಂಡಲ ಅಧ್ಯಕ್ಷ ನಂದಿ ನಾಗರಾಜ್, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ಕಾರ್ಯದರ್ಶಿ ರೇಖ, ಮಹಿಳಾ ಮೊರ್ಚಾ ಜಿಲ್ಲಾಧ್ಯಕ್ಷೆ ಶೈಲಜಾ ರೆಡ್ಡಿ, ನಗರಸಭೆ ಉಪಾಧ್ಯಕ್ಷೆ ಮಂಜುಳ ವೇದಮೂರ್ತಿ, ನಗರಸಭಾ ಸದಸ್ಯರಾದ ಹರೀಶ್, ಸುರೇಶ್, ತಾರಕೇಶ್ವರಿ ಸೇರಿದಂತೆ ಹಲವರು ಬೈಕ್‌ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.