ಮತ್ತಿಬ್ಬರು ನೆದರ್‌ಲ್ಯಾಂಡ್‌ ದಂಧೆಕೋರರ ಅರೆಸ್ಟ್

By Kannadaprabha NewsFirst Published Dec 25, 2019, 8:54 AM IST
Highlights

 ಹೊಸ ವರ್ಷಾಚರಣೆ ಪಾರ್ಟಿಗಳಿಗೆ ವಿದೇಶದ ಮಾದಕ ವಸ್ತುಗಳ ಮಾರಾಟಕ್ಕೆ ಸಿದ್ಧತೆ ನಡೆಸಿದ್ದ ಮತ್ತಿಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ. 

ಬೆಂಗಳೂರು [ಡಿ.25]:  ರಾಜಧಾನಿಯಲ್ಲಿ ನೆದರ್‌ಲ್ಯಾಂಡ್‌ ಗಾಂಜಾ ದಂಧೆಕೋರರ ವಿರುದ್ಧ ಸಿಸಿಬಿ ಕಾರ್ಯಾಚರಣೆ ಮುಂದುವರೆಸಿದ್ದು, ಹೊಸ ವರ್ಷಾಚರಣೆ ಪಾರ್ಟಿಗಳಿಗೆ ವಿದೇಶಿ ಗಾಂಜಾ ಮಾರಾಟಕ್ಕೆ ಸಿದ್ಧತೆ ನಡೆಸಿದ್ದ ಮತ್ತಿಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬಸಪ್ಪ ಲೇಔಟ್‌ ನಿವಾಸಿ ತುಷಾರ್‌ ಜೈನ್‌ ಹಾಗೂ ವಿಜಯನಗರದ ಶಾಕೀಬ್‌ ಖಾನ್‌ ಬಂಧಿತರು. ಆರೋಪಿಗಳಿಂದ 80 ಗ್ರಾಂ ಎಡಿಎಂಎ, 43 ಸ್ಟ್ರೀಫ್ಸ್‌ ಎಲ್‌ಎಸ್‌ಡಿ, 150 ಎಕ್ಸ್‌ಟೆಸಿ ಮಾತ್ರೆಗಳು, ಮೊಬೈಲ್‌ ಹಾಗೂ 26 ಸಾವಿರ ರು. ನಗದು ಸೇರಿದಂತೆ 10 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಮಾದಕ ವಸ್ತು ವ್ಯಸನಿಯಾಗಿದ್ದ ವಿದ್ಯಾರ್ಥಿ ನೀಡಿದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು, ಟ್ಯಾನರಿ ರಸ್ತೆಯಲ್ಲಿರುವ ತುಷಾರ್‌ ಕುಟುಂಬಕ್ಕೆ ಸೇರಿದ ಗೋಡೌನ್‌ ಮೇಲೆ ದಾಳಿ ನಡೆಸಿ ವಿದೇಶಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.

ವಿದ್ಯಾರ್ಥಿಗಳಾದರೂ ದಂಧೆಕೋರರು :  ಶಾಕೀಬ್‌ ಹಾಗೂ ತುಷಾರ್‌ ಪಿಯುಸಿಯಲ್ಲಿ ಸಹಪಾಠಿಗಳಾಗಿದ್ದು, ಕಾಲೇಜಿನಲ್ಲಿ ಓದುವಾಗಲೇ ಇಬ್ಬರು ಮಾದಕ ವಸ್ತು ಚಟಕ್ಕೆ ಬಿದ್ದಿದ್ದರು. ಅದೇ ದಂಧೆಕೋರರ ಮೂಲಕ ವಿದೇಶಿ ಗಾಂಜಾ ದಂಧೆ ನಡೆಸುತ್ತಿದ್ದರು. ಆರು ತಿಂಗಳಿಂದ ಅವರು ಗಾಂಜಾ ದಂಧೆ ನಡೆಸಿರುವುದಾಗಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ.

ವ್ಯಾಟ್ಸಾಪ್‌ ಮುಖಾಂತರ ಬಿಸಿನೆಸ್‌

ಟಾರ್‌ ಎಂಬ ಬ್ರೌಜ್ಸರ್‌ ಮೂಲಕ ಡ್ರೀಮ್‌ ಮಾರ್ಕೆಟ್‌ ಎಂಬ ಡಾರ್ಕ್ ವೆಬ್‌ನಿಂದ ನೆದರ್‌ಲ್ಯಾಂಡ್‌ ಗಾಂಜಾ ಖರೀದಿಸಿ ಆರೋಪಿಗಳು, ಅದನ್ನು ನಗರಕ್ಕೆ ತರಿಸಿ ಮಾರಾಟ ಮಾಡುತ್ತಿದ್ದರು. ತಲಾ ಗ್ರಾಂಗೆ 4 ರಿಂದ 5 ಸಾವಿರಕ್ಕೆ ಮಾರುತ್ತಿದ್ದರು. ವ್ಯಾಟ್ಸಾಪ್‌ನಲ್ಲಿ ತಮ್ಮ ಗ್ರಾಹಕರ ಗ್ರೂಪ್‌ ಮಾಡಿಕೊಂಡಿದ್ದ ತುಷಾರ್‌ ಹಾಗೂ ಶಾಕೀಬ್‌, ವಿದೇಶದಿಂದ ಕೊರಿಯರ್‌ ಮೂಲಕ ಬರುತ್ತಿದ್ದ ಗಾಂಜಾವನ್ನು ಗ್ರೂಪ್‌ ಸದಸ್ಯರಿಗೆ ತಲುಪಿಸುತ್ತಿದ್ದರು. ಈ ಗ್ರಾಹಕರಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ-ಬಿಟಿ ಉದ್ಯೋಗಿಗಳೇ ಹೆಚ್ಚಿದ್ದಾರೆ.

ಸ್ವಂತ ಅಪಾರ್ಟ್‌ಮೆಂಟ್, ಖಾತೆಯಲ್ಲಿ ಲಕ್ಷ ಲಕ್ಷ ಹಣ : ವಿದ್ಯಾರ್ಥಿಗೆ ಇದೆಲ್ಲಾ ಬಂದಿದ್ದೆಲ್ಲಿಂದ?..

ಕೆಲ ದಿನಗಳ ಹಿಂದೆ ನೆದರ್‌ಲ್ಯಾಂಡ್‌ ಗಾಂಜಾ ದಂಧೆ ನಡೆಸುತ್ತಿದ್ದ ಮೂವರು ಸಿಸಿಬಿ ಬಲೆಗೆ ಬಿದ್ದಿದ್ದರು. ಈ ಕೃತ್ಯದ ತನಿಖೆ ನಡೆಸುವಾಗ ಪೊಲೀಸರಿಗೆ ಮಾದಕ ವ್ಯಸನಿಯಾಗಿದ್ದ ವಿದ್ಯಾರ್ಥಿ, ಸಿಸಿಬಿ ತಂಡಕ್ಕೆ ತುಷಾರ್‌ ತಂಡದ ಬಗ್ಗೆ ಮಾಹಿತಿ ನೀಡಿದ್ದ. ಈ ಸುಳಿವು ಸಿಕ್ಕಿದ್ದ ಕೂಡಲೇ ಎಚ್ಚೆತ್ತ ಪೊಲೀಸರು, ಡಿ.ಜೆ.ಹಳ್ಳಿಯ ಟ್ಯಾನರಿ ರಸ್ತೆಯಲ್ಲಿ ತುಷಾರ್‌ಗೆ ಸೇರಿದ ಗೋಡೌನ್‌ ಮೇಲೆ ದಾಳಿ ನಡೆಸಿ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!