ನಗರದಲ್ಲಿ ‘ಬೈಕ್‌ ಟ್ಯಾಕ್ಸಿ’ಗಿಲ್ಲ ಅನುಮತಿ

By Kannadaprabha NewsFirst Published Dec 25, 2019, 8:42 AM IST
Highlights

ನಗರದಲ್ಲಿ ಅನುಮತಿ ಇಲ್ಲದೇ ಬೈಕ್ ಟ್ಯಾಕ್ಸಿಗಳು ಓಡಾಡುತ್ತಿದ್ದು ಇವುಗಳಿಗೆ ಕಡಿವಾಣ ಹಾಕುವ ಆಲೋಚನೆ ಸರ್ಕಾರದ ಬಳಿ ಇದೆ. 

ಬೆಂಗಳೂರು [ಡಿ.25]:  ನಗರದಲ್ಲಿ ಅನುಮತಿ ಇಲ್ಲದಿದ್ದರೂ ಹಲವು ಬೈಕ್‌ ಟ್ಯಾಕ್ಸಿ ಸಂಸ್ಥೆಗಳು ಅಕ್ರಮವಾಗಿ ಕಾರ್ಯಾಚರಣೆ ನಡೆಸುತ್ತಿವೆ. ಅಂತಹ ಕಂಪನಿಗಳಿಗೆ ಸೇವೆ ಸ್ಥಗಿತಗೊಳಿಸುವಂತೆ ನೋಟಿಸ್‌ ನೀಡಲಾಗಿದೆ. ಬೆಂಗಳೂರಿನಲ್ಲಿ ಬೈಕ್‌ ಟ್ಯಾಕ್ಸಿಗೆ ಅವಕಾಶ ಕಲ್ಪಿಸಬೇಕೋ, ಬೇಡವೋ ಎಂಬ ಬಗ್ಗೆ ಶೀಘ್ರದಲ್ಲೇ ರಾಜ್ಯ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ಎನ್‌.ಶಿವಕುಮಾರ್‌ ತಿಳಿಸಿದ್ದಾರೆ.

ಸದ್ಯಕ್ಕೆ ನಗರದಲ್ಲಿ ಕಾರು, ಆಟೋ ರೀತಿ ಬೈಕ್‌ ಮೂಲಕವೂ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುವ ಹಲವು ಕಂಪನಿಗಳಿವೆ. ರಾರ‍ಯಪಿಡೋ, ವೋಗೋ, ಓಲಾ, ಊಬರ್‌ ಮುಂತಾದ ಸಂಸ್ಥೆಗಳು ಚಾಲಕಸಹಿತ ಬೈಕ್‌ನಲ್ಲಿ ಟ್ಯಾಕ್ಸಿ ಸೇವೆ ಒದಗಿಸುತ್ತಿವೆ. ಸಾರಿಗೆ ಆಯುಕ್ತರ ಪ್ರಕಾರ ಇವೆಲ್ಲವೂ ಅಕ್ರಮ ಸೇವೆಗಳಾಗಿದ್ದು, ಇಲಾಖೆಯ ನೋಟಿಸ್‌ನಂತೆ ಸೇವೆ ಸ್ಥಗಿತಗೊಳಿಸಬೇಕಾಗಿದೆ. ಇದಲ್ಲದೆ, ಗ್ರಾಹಕನೇ ಚಾಲನೆ ಮಾಡಬಹುದಾದಂತಹ ಆ್ಯಪ್‌ ಆಧಾರಿತ ಬಾಡಿಗೆ (ರೆಂಟಲ್‌) ದ್ವಿಚಕ್ರ ವಾಹನ ಸೇವೆಯೂ ನಗರದಲ್ಲಿ ಲಭ್ಯವಿದ್ದು, ಇವು ಅಧಿಕೃತ ಪರವಾನಗಿಯೊಂದಿಗೆ ಕಾರ್ಯಾಚರಿಸುತ್ತಿವೆ. ಬೌನ್ಸ್‌, ಡ್ರೈವ್‌ ಈಜಿ ಮತ್ತಿತರ ಸಂಸ್ಥೆಗಳು ರೆಂಟಲ್‌ ಬೈಕ್‌ ಸೇವೆ ಒದಗಿಸುತ್ತಿವೆ.

ಬೈಕ್‌ ಟ್ಯಾಕ್ಸಿಗೆ ಅನುಮತಿ ಇಲ್ಲ:

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಆಯುಕ್ತ ಶಿವಕುಮಾರ್‌, ನಗರದಲ್ಲಿ ಮೊಬೈಲ್‌ ಆ್ಯಪ್‌ ಆಧಾರಿತ ಬೈಕ್‌ ಟ್ಯಾಕ್ಸಿ ಸೇವೆಗೆ ಯಾವುದೇ ಕಂಪನಿಗೂ ಪರವಾನಗಿ ಕೊಟ್ಟಿಲ್ಲ. ಆದರೂ ರಾರ‍ಯಪಿಡೋ ಸಂಸ್ಥೆ ಅಕ್ರಮವಾಗಿ ಬೈಕ್‌ ಟ್ಯಾಕ್ಸಿ ಸೇವೆ ನೀಡುತ್ತಿರುವ ಬಗ್ಗೆ ದೂರು ಬಂದಿದೆ. ಈ ಸಂಬಂಧ ಆ್ಯಪ್‌ ಸ್ಥಗಿತಗೊಳಿಸುವಂತೆ ಕಂಪನಿಗೆ ನೋಟಿಸ್‌ ನೀಡಲಾಗಿದೆ. ಬೈಕ್‌ ಟ್ಯಾಕ್ಸಿ ಸೇವೆ ಅನುಮತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಪ್ರಸ್ತುತ ಸರ್ಕಾರ ಮುಖ್ಯ ಕಾರ್ಯದರ್ಶಿ ಹಂತದಲ್ಲಿ ಪರಿಶೀಲನೆಯಲ್ಲಿದೆ. ಶೀಘ್ರದಲ್ಲೇ ಈ ಸಂಬಂಧ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎಂದರು.

ಈಗಾಗಲೇ ಚೆನ್ನೈನಲ್ಲಿ ರಾರ‍ಯಪಿಡೋ ಬೈಕ್‌ ಟ್ಯಾಕ್ಸಿ ಸೇವೆಗೆ ಸರ್ಕಾರ ಅನುಮತಿ ನೀಡಿದೆ. ಆರಂಭದಲ್ಲಿ ಅಲ್ಲಿಯೂ ಬೈಕ್‌ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿರಲಿಲ್ಲ. ಇದರ ವಿರುದ್ಧ ಕಂಪನಿಯೂ ಹೈಕೋರ್ಟ್‌ ಮೊರೆ ಹೋದ ಪರಿಣಾಮ ಬೈಕ್‌ ಟ್ಯಾಕ್ಸಿ ಸೇವೆಗೆ ಅನುಮತಿ ನೀಡುವಂತೆ ಕೋರ್ಟ್‌, ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದೀಗ ಬೆಂಗಳೂರಿನಲ್ಲಿ ಈ ಸೇವೆಗೆ ಅನುಮತಿ ನೀಡುವ ಅಥವಾ ನೀಡದಿರುವ ಬಗ್ಗೆ ರಾಜ್ಯ ಸರ್ಕಾರವೇ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಹೇಳಿದರು.

ಗೊಂಬೆ ಭೂತ ತೆಗೆಯಿರಿ ಎಂದ ವಾಟಾಳ್ ನಾಗರಾಜ್...

ಇನ್ನು ಬಾಡಿಗೆ ಆಧಾರಿತ ಬೈಕ್‌ ಸೇವೆ ನೀಡುವ ಬೌನ್ಸ್‌ ಸೇರಿದಂತೆ ಹಲವು ಕಂಪನಿಗಳು ನಗರದ ಎಲ್ಲೆಂದರಲ್ಲಿ ಬೈಕ್‌ ನಿಲ್ಲಿಸುವ ಬಗ್ಗೆ ದೂರುಗಳು ಬಂದಿವೆ. ಹಾಗಾಗಿ ಈ ಎಲ್ಲ ಕಂಪನಿಗಳಿಗೂ ನೋಟಿಸ್‌ ನೀಡಿ, ಬೈಕ್‌ ನಿಲುಗಡೆಗೆ ಸ್ಥಳ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಬೌನ್ಸ್‌ ಸೇರಿದಂತೆ ವಿವಿಧ ಕಂಪನಿಗಳು 24 ಸಾವಿರ ಬೈಕ್‌ಗಳನ್ನು ನಿಲುಗಡೆ ಮಾಡುವಷ್ಟುಜಾಗ ಗುರುತಿಸಿರುವುದಾಗಿ ಮಾಹಿತಿ ನೀಡಿದ್ದಾರೆ ಎಂದು ಶಿವಕುಮಾರ್‌ ಹೇಳಿದರು.

ಕಾರು ಶೇರಿಂಗ್‌, ಪೂಲಿಂಗ್‌ ಕೇಸ್‌ ಕೋರ್ಟಲ್ಲಿದೆ

ಕರ್ನಾಟಕ ಆನ್‌ ಡಿಮ್ಯಾಂಡ್‌ ಟ್ರಾನ್ಸ್‌ಪೋಟೇಷನ್‌ ಟೆಕ್ನಾಲಜಿ ಅಗ್ರಿಗೇಟರ್‌ ರೂಲ್‌ನಲ್ಲಿ ‘ಶೇರಿಂಗ್‌’ ಮತ್ತು ‘ಪೂಲಿಂಗ್‌’ ಸೇವೆಗೆ ಅವಕಾಶವಿಲ್ಲ. ಆದರೂ ಆ್ಯಪ್‌ ಆಧಾರಿತ ಓಲಾ ಮತ್ತು ಊಬರ್‌ ಕಂಪನಿಗಳು ಅಕ್ರಮವಾಗಿ ಈ ಸೇವೆ ನೀಡುತ್ತಿವೆ. ಈ ಸಂಬಂಧ ಎರಡೂ ಕಂಪನಿಗಳು ಹೈಕೋರ್ಟ್‌ನಲ್ಲಿ ದಾವೆ ಹೂಡಿವೆ. ಹಾಗಾಗಿ ಈ ಕಂಪನಿಗಳು ಅಗ್ರಿಗೇಟರ್‌ ನಿಯಮ ಉಲ್ಲಂಘಿಸಿದರೂ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಶಿವಕುಮಾರ್‌ ಅಸಹಾಯಕತೆ ವ್ಯಕ್ತಪಡಿಸಿದರು.

ಎಂ-ಪರಿವಾಹನ ಆ್ಯಪ್‌

‘ಡಿಜಿ ಲಾಕರ್‌’ ಆ್ಯಪ್‌ನಲ್ಲಿ ಡಿಎಲ್‌, ಆರ್‌ಸಿ ಲಭ್ಯವಾಗುತ್ತಿದೆ. ಪೊಲೀಸ್‌ ತಪಾಸಣೆ ವೇಳೆ ಈ ಡಿಜಿಟೆಲ್‌ ದಾಖಲೆ ತೋರಿಸಲು ಅವಕಾಶವಿದೆ. ಇದೀಗ ‘ಎಂ-ಪರಿವಾಹನ’ ಎಂಬ ಆ್ಯಪ್‌ನಲ್ಲೂ ಸಹ ವಾಹನದ ಆರ್‌ಸಿ, ಡಿಎಲ್‌ ಲಭ್ಯವಾಗುತ್ತಿದೆ. ವಾಹನದ ನೋಂದಣಿ ಸಂಖ್ಯೆ ನಮೂದಿಸಿದರೆ ವಾಹನದ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಇನ್‌ಶ್ಯೂರೆನ್ಸ್‌ ಮಾಹಿತಿಯೂ ಸಿಗಲಿದೆ. ಹಾಗಾಗಿ ವಾಹನ ಮಾಲಿಕರು ಪೊಲೀಸ್‌ ತಪಾಸಣೆ ವೇಳೆ ಈ ಆ್ಯಪ್‌ ಮೂಲಕವೂ ದಾಖಲೆ ತೋರಿಸಬಹುದು ಎಂದು ಸಾರಿಗೆ ಇಲಾಖೆ ಆಯುಕ್ತ ಎನ್‌.ಶಿವಕುಮಾರ್‌ ತಿಳಿಸಿದರು.

ಬೇರು ಬಿಟ್ಟವರ ಎತ್ತಂಗಡಿ

ಆರ್‌ಟಿಓ ಕಚೇರಿಗಳ ಕಾರ್ಯ ನಿರ್ವಹಣೆಯಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕೆಲವೊಂದು ಆಡಳಿತಾತ್ಮಕ ಬದಲಾವಣೆಗಳು ಅನಿವಾರ್ಯ. ಹೀಗಾಗಿ ರಾಜ್ಯದ ಆರ್‌ಟಿಓ ಕಚೇರಿಗಳಲ್ಲಿ ಒಂದೇ ವಿಭಾಗದಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ವರ್ಗಾವಣೆಗೆ ತೀರ್ಮಾನಿಸಲಾಗಿದೆ ಎಂದು ಎನ್‌.ಶಿವಕುಮಾರ್‌ ಹೇಳಿದರು.

click me!