Namma Metro ಪಿಲ್ಲರ್‌ ದುರಂತಕ್ಕೆ ನಿರ್ಲಕ್ಷ್ಯ ಕಾರಣ?: ಐಐಎಸ್‌ಸಿಯಿಂದ ವರದಿ ಸಲ್ಲಿಕೆ ನಿರೀಕ್ಷೆ

By Kannadaprabha News  |  First Published Jan 21, 2023, 1:26 PM IST

ಮೆಟ್ರೋ ನಿರ್ಮಾಣ ಹಂತದ ಪಿಲ್ಲರ್‌ ಕುಸಿಯಲು ‘ನಿರ್ಮಾಣ ಕಾಮಗಾರಿಯಲ್ಲಿ ಯಾವುದೇ ಕಳಪೆಯಾಗಿಲ್ಲ. ಆದರೆ ಕಾಮಗಾರಿ ಕೈಗೊಳ್ಳುವಾಗಿನ ಸಂದರ್ಭದ ನಿರ್ಲಕ್ಷ್ಯದಿಂದ ದುರಂತವಾಗಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆ ಬಿಎಂಆರ್‌ಸಿಎಲ್‌ಗೆ ಶನಿವಾರ ವರದಿ ಸಲ್ಲಿಸುವ ಸಾಧ್ಯತೆ ಇದೆ. 


ಬೆಂಗಳೂರು (ಜ.21): ಮೆಟ್ರೋ ನಿರ್ಮಾಣ ಹಂತದ ಪಿಲ್ಲರ್‌ ಕುಸಿಯಲು ‘ನಿರ್ಮಾಣ ಕಾಮಗಾರಿಯಲ್ಲಿ ಯಾವುದೇ ಕಳಪೆಯಾಗಿಲ್ಲ. ಆದರೆ ಕಾಮಗಾರಿ ಕೈಗೊಳ್ಳುವಾಗಿನ ಸಂದರ್ಭದ ನಿರ್ಲಕ್ಷ್ಯದಿಂದ ದುರಂತವಾಗಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆ ಬಿಎಂಆರ್‌ಸಿಎಲ್‌ಗೆ ಶನಿವಾರ ವರದಿ ಸಲ್ಲಿಸುವ ಸಾಧ್ಯತೆ ಇದೆ. ನಾಗವಾರದ ಹೆಣ್ಣೂರು ರಸ್ತೆಯ ಬಳಿ ಜ.10ರಂದು 218ನೇ ಪಿಲ್ಲರ್‌ ಕುಸಿದು ತಾಯಿ, ಮಗು ದಾರುಣವಾಗಿ ಮೃತಪಟ್ಟಿದ್ದರು. ಸ್ಟ್ರಕ್ಚರ್‌ ಉರುಳಲು ತಾಂತ್ರಿಕ ಕಾರಣವೇನು ಎಂಬುದರ ಕುರಿತು ಇಂದು (ಶನಿವಾರ) ‘ಭಾರತೀಯ ವಿಜ್ಞಾನ ಸಂಸ್ಥೆ’ ಬೆಂಗಳೂರು ಮೆಟ್ರೋ ರೇಲ್ವೆ ಕಾರ್ಪೋರೇಶನ್‌ಗೆ ವರದಿ ಸಲ್ಲಿಸುವ ನಿರೀಕ್ಷೆಯಿದೆ. 

ಆದರೆ, ಯಾರು ಜವಾಬ್ದಾರರು ಎಂಬುದನ್ನು ನಿರ್ಧರಿಸಲು ಬಿಎಂಆರ್‌ಸಿಎಲ್‌ಗೆ ಬಿಡಲಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ಹತ್ತು ದಿನಗಳ ಬಳಿಕ ಪಿಲ್ಲರ್‌ ಕುಸಿತಕ್ಕೆ ಕಾರಣವೇನು ಎಂಬ ಅಧಿಕೃತ ಮಾಹಿತಿಯನ್ನು ಬಿಎಂಆರ್‌ಸಿಎಲ್‌ ಪಡೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಸ್ಥಳ ಪರಿಶೀಲನೆ, ಘಟನೆಯ ಹತ್ತು ದಿನಗಳ ಮೊದಲಿನ ದಾಖಲೆ ಮಾಹಿತಿ ಪಡೆದಿರುವ ಐಐಎಸ್‌ಸಿ ಕಬ್ಬಿಣ, ಸ್ಟೀಲ್‌, ಸಿಮೆಂಟ್‌, ತುಂಡಾದ ಗೈರ್‌ ವೈರ್‌ ಸೇರಿ ಕಚ್ಚಾವಸ್ತುಗಳನ್ನು ತಪಾಸಣೆ ಮಾಡಿದೆ. ಈ ವೇಳೆ ವಸ್ತುಗಳಲ್ಲಿ ಕಳಪೆ ಗುಣಮಟ್ಟಕಂಡು ಬಂದಿಲ್ಲ ಎಂದು ಪ್ರೊ.ಚಂದ್ರಕಿಶನ್‌ ತಿಳಿಸಿದ್ದಾರೆ. ಹೀಗಾಗಿ ಎತ್ತರದ ಸ್ಟ್ರಕ್ಚರ್‌ ಬಲವರ್ಧನೆಗೆ ಸುತ್ತ ಕಂಬಿಗಳನ್ನು ನಿಲ್ಲಿಸದಿರುವುದು ಕಾರಣ ಹಾಗೂ ಸ್ಟೇಜಿಂಗ್‌ ಮಾಡಿಕೊಳ್ಳದಿರುವುದು.

Tap to resize

Latest Videos

Namma Metro ಪಿಲ್ಲರ್‌ ದುರಂತಕ್ಕೆ ಕೊನೆಗೂ ಕಾರಣ ಪತ್ತೆ!

ಗೈರ್‌ ವೈರ್‌ ಕಟ್ಟುವಲ್ಲಿ ನಿರ್ಲಕ್ಷ್ಯ, ವಿನ್ಯಾಸ ಲೋಪ ಎಂಬ ತೀರ್ಮಾನಕ್ಕೆ ಐಐಎಸ್‌ಸಿ ಬಂದಿದ್ದು, ಈ ರೀತಿಯ ವರದಿ ಸಲ್ಲಿಕೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಹೊಣೆ ಯಾರು ಎಂಬುದನ್ನು ಬಿಎಂಆರ್‌ಸಿಎಲ್‌ ನಿರ್ಧರಿಸಬೇಕಿದೆ. ಅಂತಿಮವಾಗಿ ಐಐಎಸ್‌ಸಿ, ರೈಟ್ಸ್‌, ಆಂತರಿಕ ತನಿಖಾ ವರದಿ ಪಡೆದ ಬಳಿಕವೇ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವುದಾಗಿ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದರು. ಹೀಗಾಗಿ ಕಾಯಂ ಅಧಿಕಾರಿಗಳ ತಲೆದಂಡವಾಗಲಿದೆಯೇ? ಗುತ್ತಿಗೆದಾರ ನಾಗಾರ್ಜುನ ಕನ್‌ಸ್ೊ್ರಕ್ಷನ್‌ ಕಂಪನಿ ಯಾವ ಕಾನೂನು ಕ್ರಮ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮೆಟ್ರೋ ಎಂಡಿಗೆ ಪೊಲೀಸರ ನೋಟಿಸ್‌: ಇತ್ತೀಚೆಗೆ ಹೆಣ್ಣೂರು ಕ್ರಾಸ್‌ ಬಳಿ ಎಚ್‌ಬಿಆರ್‌ ಲೇಔಟ್‌ನಲ್ಲಿ ಮೆಟ್ರೋ ಯೋಜನೆಯ ಪಿಲ್ಲರ್‌ ಕುಸಿದು ತಾಯಿ-ಮಗ ಸಾವು ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ 10 ಅಧಿಕಾರಿಗಳಿಗೆ ಪೊಲೀಸರು ನೋಟಿಸ್‌ ಜಾರಿಗೊಳಿಸಿದ್ದಾರೆ.

ನಿರ್ಮಾಣದ ಹಂತದಲ್ಲಿ ಎಸಗಿದ ಲೋಪದಿಂದಲೇ ಮೆಟ್ರೋ ಪಿಲ್ಲರ್‌ ಕುಸಿಯಲು ಮುಖ್ಯ ಕಾರಣವಾಗಿದೆ ಎಂದು ಪೊಲೀಸರಿಗೆ ಹೈದರಾಬಾದ್‌ನ ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ತಜ್ಞರು ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದ್ದರು. ಅದೇ ರೀತಿ ಪಿಲ್ಲರ್‌ಗೆ ಸಪೋರ್ಟ್‌ಗೆ ಸರಿಯಾಗಿ ವ್ಯವಸ್ಥೆ ಕಲ್ಪಿಸದ ಕಾರಣ ಅದು ಉರುಳಿ ಬಿದ್ದಿದೆ ಎಂದು ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆ (ಐಐಎಸ್‌ಸಿ)ಯ ತಜ್ಞರು ಕೂಡಾ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಮೆಟ್ರೋ ಅಧಿಕಾರಿಗಳಿಂದ ಯೋಜನೆ ವಿವರಣೆ ಪಡೆಯಲು ಮುಂದಾಗಿರುವ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜುಂ ಪರ್ವೇಜ್‌ ಹಾಗೂ 10 ಅಧಿಕಾರಿಗಳಿಗೆ ನೋಟಿಸ್‌ ನೀಡಿದ್ದಾರೆ. 

Namma Metro ಪಿಲ್ಲರ್‌ ದುರಂತದ ಕಾರಣ ಇನ್ನೂ ನಿಗೂಢ!

ಆದರೆ ಈ ನೋಟಿಸ್‌ಗೆ ಮೆಟ್ರೋ ಅಧಿಕಾರಿಗಳು ಸೂಕ್ತ ಉತ್ತರ ನೀಡಿಲ್ಲ. ಆರೋಗ್ಯ ಸಮಸ್ಯೆ ಕಾರಣ ವಿಚಾರಣೆಗೆ ಹಾಜರಾಗಲು ಎಂಡಿ ಅಜುಂ ಪರ್ವೇಜ್‌ ಕಾಲಾವಕಾಶ ಕೋರಿದ್ದಾರೆ ಎಂದು ತಿಳಿದು ಬಂದಿದೆ. ಇದೇ ತಿಂಗಳ 10ರಂದು ಮೆಟ್ರೋ ರೈಲು ಯೋಜನೆಯ ನಿರ್ಮಾಣ ಹಂತದ ಕಬ್ಬಿಣದ ಪಿಲ್ಲರ್‌ ದಿಢೀರ್‌ ಕುಸಿದು ಹೊರಮಾವು ಕಲ್ಕೆರೆಯ ಡಿಮ್ಯಾಕ್ಸ್‌ ಅಪಾರ್ಟ್‌ಮೆಂಟ್‌ ನಿವಾಸಿ ತೇಜಸ್ವಿನಿ ಸುಲಾಖೆ ಹಾಗೂ ಅವರ ಪುತ್ರ ವಿಹಾನ್‌ ಮೃತಪಟ್ಟಿದ್ದರು. ಈ ಘಟನೆಯಲ್ಲಿ ಮೃತರ ಪತಿ ಲೋಹಿತ್‌ ಹಾಗೂ ಮಗಳು ವಿಸ್ಮಿತಾ ಪಾರಾಗಿದ್ದರು.

click me!