ಕೊರೋನಾ ರೋಗಿ ಆಸ್ಪತ್ರೆ ಸೇರಲು ಬಿಯು ಸಂಖ್ಯೆ ಬೇಕೆ ಬೇಕು..!

By Kannadaprabha News  |  First Published May 3, 2021, 7:26 AM IST

ಸೋಂಕು ಬಂತಾ, ಬಿಯು ಸಂಖ್ಯೆ ಪಡೆದುಕೊಳ್ಳಿ| ಕೊರೋನಾ ಲಕ್ಷಣ ಕಂಡು ಬಂದರೂ ಆರ್‌ಟಿಪಿಸಿಆರ್‌ ಟೆಸ್ಟ್‌ ಮಾಡಿಸಿಕೊಳ್ಳಲು ಬಹುತೇಕರ ನಿರ್ಲಕ್ಷ್ಯ| ಪರಿಸ್ಥಿತಿ ಉಲ್ಬಣಿಸಿದ ಬಳಿಕ ಆಸ್ಪತ್ರೆಗೆ ದಾಖಲಾಗಲು ಪರದಾಟ| ಬಿಯು ಸಂಖ್ಯೆ ಇಲ್ಲದೇ ಬೆಡ್‌ ನೀಡಲು ಆಸ್ಪತ್ರೆಗಳ ಹಿಂದೇಟು| ನಿರ್ಲಕ್ಷ್ಯದಿಂದ ಸಾವಿನ ಸಂಖ್ಯೆ ಹೆಚ್ಚಳ| ಹೋಂ ಐಸೋಲೇಷನ್‌ನಲ್ಲಿದ್ದರೂ ಟೆಸ್ಟ್‌ ಮಾಡಿಸಿಕೊಳ್ಳಿ| 


ಬೆಂಗಳೂರು(ಮೇ.03): ಕೊರೋನಾ ಲಕ್ಷಣಗಳು ಬಾಧಿಸುತ್ತಿವೆಯೇ? ಹಾಗಿದ್ದರೆ ಮೊದಲು ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿಕೊಂಡು ಬಿಬಿಎಂಪಿಯಿಂದ ದೊರೆಯುವ ಬಿಯು ನಂಬರ್‌ ಪಡೆದುಕೊಳ್ಳಿ!!! ಈ ಮುನ್ನೆಚ್ಚರಿಕೆ ವಹಿಸದ ನೂರಾರು ಮಂದಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದು ಆಸ್ಪತ್ರೆ ಸೇರಲು ಸಾಧ್ಯವೇ ಇಲ್ಲವೆನ್ನುವ ಸ್ಥಿತಿ ತಲುಪಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.

ಕೋವಿಡ್‌-19 ಪಾಸಿಟಿವ್‌ ಬಂದಿರುವವರೆಲ್ಲ ಆಸ್ಪತ್ರೆಗೆ ದಾಖಲಾಗಬೇಕಿಲ್ಲ. ಮನೆಗಳಲ್ಲಿಯೇ ಐಸೋಲೇಷನ್‌ ತುರ್ತು ಚಿಕಿತ್ಸೆ ಅಗತ್ಯವಿದ್ದವರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗಲು ಅವಕಾಶ ಮಾಡಿಕೊಡಬೇಕು ಎನ್ನುವ ಮಾತೇ ಈಗ ಶಾಪವಾಗಿ ಪರಿಣಮಿಸಿದೆ. ಬಿಬಿಎಂಪಿ ಮಾಹಿತಿಯಂತೆ ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ ಶೇ.80ಕ್ಕಿಂತ ಹೆಚ್ಚು ಮಂದಿ ಸೋಂಕಿತರು ಹೋಂ ಐಸೋಲೇಟನ್‌ನಲ್ಲಿದ್ದಾರೆ. ಸೋಂಕಿತರಾಗಿದ್ದು ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಗಾಗದೆ, ಬಿಯು ಸಂಖ್ಯೆ ಇಲ್ಲದೆ ಆರೋಗ್ಯ ಸ್ಥಿತಿ ಗಂಭೀರವಾದ ಬಳಿಕ ಹಾಸಿಗೆ, ಐಸಿಯು ಸಿಗದೆ ದಿನಕ್ಕೆ ಏಳೆಂಟು ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Latest Videos

undefined

"

ಘೋಷಾ ಆಸ್ಪತ್ರೆ 34 ದಿನದಲ್ಲಿ 106 ಸೋಂಕಿತೆಯರಿಗೆ ಹೆರಿಗೆ

ಅನೇಕರು ಕೋವಿಡ್‌ ರೋಗ ಲಕ್ಷಣ ಕಂಡುಬಂದ ಕೂಡಲೇ ಸ್ವಯಂ ಹೋಂ ಐಸೋಲೇಷನ್‌ ಆಗುತ್ತಿದ್ದಾರೆ. ಸೋಂಕಿನ ಲಕ್ಷಣ ಇದ್ದರೂ ಕೆಲವರು ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಗಾಗುತ್ತಿಲ್ಲ. ಮನೆಗಳಲ್ಲಿಯೇ ತಮಗೆ ಪರಿಚಯದ ವೈದ್ಯರಿಂದಲೋ ಅಥವಾ ಕುಟುಂಬಸ್ಥರ ಸಲಹೆ ಮೇರೆಗೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುತ್ತಿದ್ದಾರೆ. ಈ ಪರಿಣಾಮ ಕೆಲವರು ಸೋಂಕಿನಿಂದ ಗುಣಮುಖರಾದರೆ, ಇನ್ನು ಹಲವರಲ್ಲಿ ಸೋಂಕು ಉಲ್ಬಣಗೊಂಡು ಪರಿಸ್ಥಿತಿ ಬಿಗಡಾಯಿಸುತ್ತಿದೆ. ಸೋಂಕು ಹೆಚ್ಚಾದಾಗ ಆಸ್ಪತ್ರೆಗೆ ಹೋದವರಿಗೆ ಬಿಯು ಸಂಖ್ಯೆ ಇಲ್ಲದ ಕಾರಣ ಹಾಸಿಗೆಯೇ ಸಿಗುತ್ತಿಲ್ಲ. ಹಾಗಾಗಿ ರಸ್ತೆಯಲ್ಲೆ ಜೀವ ಬಿಡುವಂತ ಪರಿಸ್ಥಿತಿ ಹೆಚ್ಚುತ್ತಿದೆ.

ಬಿಯು ಸಂಖ್ಯೆ ಮುಖ್ಯ

ರೋಗ ಲಕ್ಷಣ ಕಂಡು ಬಂದ ಕೂಡಲೇ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿಕೊಂಡಿದ್ದರೆ ಕೋವಿಡ್‌ ಪಾಸಿಟಿವ್‌ ವರದಿ ಬರುತ್ತಲೇ ಬಿಯು ಸಂಖ್ಯೆ ಕೂಡ ಸಿಗುತ್ತದೆ. ಇದರಿಂದ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿದಾಗ ಸಹಾಯವಾಣಿ(1912) ಮೂಲಕ ಐಸಿಯು ಅಥವಾ ಐಸಿಯು ವೆಂಟಿಲೇಟರ್‌ ಹಾಸಿಗೆ ಪಡೆಯಲು ಅನುಕೂಲವಾಗುತ್ತದೆ.

ಆದರೆ ರೋಗ ಲಕ್ಷಣ ಇದ್ದರೂ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳದೇ ಸೋಂಕನ್ನು ಮುಚ್ಚಿಟ್ಟು ಮನೆಯಲ್ಲೇ ಸ್ವಯಂ ಐಸೋಲೇಟ್‌ ಆಗುತ್ತಿರುವುದರಿಂದ ಬಿಯು ಸಂಖ್ಯೆ ಲಭಿಸುವುದಿಲ್ಲ. ಆರೋಗ್ಯ ಸಂಪೂರ್ಣ ಹದಗೆಟ್ಟು ಆಸ್ಪತ್ರೆ ಸೇರುವಂತ ಪರಿಸ್ಥಿತಿ ಬಂದಾಗ ಆಸ್ಪತ್ರೆಗಳಲ್ಲಿ ಹಾಸಿಗೆ ಪಡೆಯಲು ಬಿಯು ಸಂಖ್ಯೆ ಹೊರತುಪಡಿಸಿ ಯಾರು ಕೂಡಾ ನಿಮ್ಮ ನೆರವಿಗೆ ಬರುವುದಿಲ್ಲ ಎಂಬ ಸತ್ಯ ಅರಿತುಕೊಳ್ಳುವ ಅಗತ್ಯವಿದೆ. ಸಮಯಕ್ಕೆ ಸರಿಯಾಗಿ ಹಾಸಿಗೆ, ಐಸಿಯು ವೆಂಟಿಲೇಟರ್‌ ಸಿಗದೆ ಸಾಯುವಂತ ಪರಿಸ್ಥಿತಿ ಬಂದರೆ ಅದಕ್ಕೆ ನಾವೇ ಕಾರಣ ಹೊರತು ಆಡಳಿತ ವ್ಯವಸ್ಥೆಯಲ್ಲ.

ಕೋವಿಡ್‌ ಸೇವೆಗೆ ಎಂಬಿಬಿಎಸ್‌ ವಿದ್ಯಾರ್ಥಿಗಳು: ಕೆಲಸಕ್ಕೆ ಬಂದ್ರೆ ಸಿಗುತ್ತೆ ಈ ಲಾಭ!

ಚಿಕಿತ್ಸೆಗೆ ನೆರವು

ಕೋವಿಡ್‌ ಪಾಸಿಟಿವ್‌ ವರದಿ ಪಡೆದವರಲ್ಲಿ ಶೇ.80ರಷ್ಟುಮಂದಿ ಮನೆಯಲ್ಲೇ ಐಸೋಲೇಷನ್‌ ಅಗಿದ್ದಾರೆ. ಹೀಗೆ ಹೋಂ ಐಸೋಲೇಟ್‌ ಆಗಿದ್ದವರಿಗೆ ಬಿಬಿಎಂಪಿ ಆರೋಗ್ಯ ವಿಭಾಗದಿಂದ ವೈದ್ಯ ಸಿಬ್ಬಂದಿ ಚಿಕಿತ್ಸೆಯ ನೆರವು ನೀಡುತ್ತಿದ್ದಾರೆ. ರೋಗಿಯ ಆರೋಗ್ಯ ಪರಿಸ್ಥಿತಿ ಹದಗೆಡುತ್ತಿದೆ ಎಂಬುದು ಗಮನಕ್ಕೆ ಬರುತ್ತಲೇ ಬಿಯು ಸಂಖ್ಯೆ ನೆರವಿನಿಂದ ಅವರನ್ನು ಆಸ್ಪತ್ರೆಗೆ ದಾಖಲಾಗುವಂತೆ ಸೂಚನೆ ನೀಡುತ್ತಾರೆ. ಆದರೆ, ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿಕೊಳ್ಳದೇ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವುದು ಒಳ್ಳೆಯದಲ್ಲ. ವೈದ್ಯರ ನೆರವು ಪಡೆದು ಚಿಕಿತ್ಸೆ ಮಾಡಿಕೊಳ್ಳಬೇಕು ಎನ್ನುತ್ತಾರೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು.

ಸೋಂಕಿನ ಲಕ್ಷಣ ಕಂಡ ಬಂದರೆ ಹೋಂ ಐಸೋಲೇಷನ್‌ ಆಗುವುದು ಒಳ್ಳೆಯದು. ಅದಕ್ಕೂ ಮುನ್ನ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಗಾಗಬೇಕು. ಎಸಿಮ್ಟಮ್ಯಾಟಿಕ್‌ ಇದ್ದವರು ಮನೆಯಲ್ಲಿ ಪ್ರತ್ಯೇಕವಾಗಿ ಐಸೋಲೇಟ್‌ ಆಗಬೇಕು. ಬಿಯು ಸಂಖ್ಯೆ ಇಟ್ಟುಕೊಂಡು ಆರೋಗ್ಯ ಏರುಪೇರಾದರೆ ಸಹಾಯವಾಣಿ ಮೂಲಕ ಹಾಸಿಗೆ ಕಾಯ್ದಿರಿಸಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!