KAS ಅಧಿಕಾರಿ ಸುಧಾ ಆಸ್ತಿ ಮಾಹಿತಿ ಸಂಗ್ರಹ ಮಾಡಲು ಇನ್ನೂ 3 ದಿನ ಬೇಕು..!

By Kannadaprabha NewsFirst Published Nov 13, 2020, 7:39 AM IST
Highlights

ತನಿಖೆ ಚುರುಕು| 50 ಕೋಟಿಗಿಂತ ಹೆಚ್ಚು ಇರುವ ಸಾಧ್ಯತೆ| ತನಿಖೆಗೆ ಇ.ಡಿ, ಐಟಿ ಕೂಡ ಪ್ರವೇಶ| ಸುಧಾ ಮತ್ತು ಅವರಿಗೆ ಸಂಬಂಧಪಟ್ಟ ವ್ಯಕ್ತಿಗಳ ಮನೆಯಲ್ಲಿ 3.7 ಕೆಜಿ ಚಿನ್ನಾಭರಣ, 10.5 ಕೆಜಿ ಬೆಳ್ಳಿಯ ವಸ್ತುಗಳು ಪತ್ತೆ| ಸುಧಾ ಬೆಂಗಳೂರಿನಲ್ಲಿಯೇ ಹೆಚ್ಚು ಪ್ರಮಾಣ ಆಸ್ತಿ ಹೊಂದಿದ್ದಾರೆ| 

ಬೆಂಗಳೂರು(ನ.13): ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೊಳಗಾಗಿರುವ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಆಡಳಿತಾಧಿಕಾರಿ ಡಾ.ಬಿ.ಸುಧಾ ಮತ್ತವರ ಕುಟುಂಬ ಸದಸ್ಯರ ಆಸ್ತಿಯ ವಿವರದ ದಾಖಲೆಯನ್ನು ಕಳೆದ ಒಂದು ವಾರದಿಂದಲೂ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ನಿಖರ ಆಸ್ತಿ ವಿವರ ಮಾಹಿತಿ ಸಂಗ್ರಹಕ್ಕೆ ಇನ್ನೂ 2-3 ದಿನ ಬೇಕಾಗುವ ಸಾಧ್ಯತೆ ಇದೆ.

ಸುಧಾ ಮತ್ತವರ ಕುಟುಂಬ ಸದಸ್ಯರ ಸ್ಥಳಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ ವೇಳೆ 200ಕ್ಕೂ ಹೆಚ್ಚು ಆಸ್ತಿಗೆ ಸಂಬಂಧಪಟ್ಟ ದಾಖಲೆಗಳು, ಸುಮಾರು 50 ಬ್ಯಾಂಕ್‌ ಖಾತೆಗಳು ಪತ್ತೆಯಾಗಿವೆ. ಪ್ರಾಥಮಿಕ ಪರಿಶೀಲನೆಯಲ್ಲಿ ಮೌಲ್ಯ ಅಂದಾಜು 50 ಕೋಟಿ ರು.ಕ್ಕಿಂತ ಹೆಚ್ಚು ಇರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಲೆಕ್ಕ ಹಾಕಿದ್ದಾರೆ.

ಆಸ್ತಿಗಳ ಕ್ರಯಪತ್ರ, ಜಿಪಿಎ ಪತ್ರಗಳು, ಕೆಲವು ಒಪ್ಪಂದದ ಕರಾರು ಪತ್ರಗಳು ಮತ್ತು ಇತರೆ ದಾಖಲಾತಿಗಳ ಪರಿಶೀಲನೆ ನಡೆಸಲಾಗುತ್ತಿದೆ. ಎಲ್ಲ ದಾಖಲೆಗಳನ್ನು ವಶಕ್ಕೆ ಪಡೆದು ಕೂಲಂಕಷವಾಗಿ ಪರಿಶೀಲನೆ ನಡೆಸಿದ ಬಳಿಕವಷ್ಟೇ ನಿಖರವಾದ ಆಸ್ತಿ ವಿವರ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಬೇನಾಮಿ ಆಸ್ತಿ ಕೋಟ್ಯಂತರ ರು. ಮೌಲ್ಯ ಇರುವ ಕಾರಣ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ಸಹ ತನಿಖೆ ನಡೆಸುವ ಸಾಧ್ಯತೆ ಇದೆ. ಎಸಿಬಿ ಅಧಿಕಾರಿಗಳು ಆಸ್ತಿಯ ಮೌಲ್ಯದ ಮಾಹಿತಿ ಕಲೆ ಹಾಕಿದ ಬಳಿಕ ಇಡಿ ಮತ್ತು ಐಟಿ ಪ್ರವೇಶಿಸಲಿದೆ. ನಂತರ ಎರಡು ಇಲಾಖೆಗಳು ಪ್ರತ್ಯೇಕವಾಗಿ ತನಿಖೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಇವರು ಕೆಎಎಸ್ ಅಧಿಕಾರಿಯಲ್ಲ, ಬಿಡಿಎ ಬಂಗಾರಮ್ಮ; ಮಾಡಿದ್ದೆಲ್ಲಾ ಕೋಟಿ ಮೌಲ್ಯದ ಅಕ್ರಮ ಆಸ್ತಿಗಳು

ಆರೋಪಿ ಸುಧಾ ಮತ್ತು ಬೇರೆ ವ್ಯಕ್ತಿಗಳ ಹೆಸರಲ್ಲಿ ವಿವಿಧ ಬ್ಯಾಂಕ್‌ನಲ್ಲಿ ಸುಮಾರು 50 ಬ್ಯಾಂಕ್‌ ಖಾತೆಗಳ ವಿವರ, 50ಕ್ಕೂ ಹೆಚ್ಚು ಚೆಕ್‌ಲೀಫ್‌ಗಳು ಎಸಿಬಿ ಅಧಿಕಾರಿಗಳಿಗೆ ಲಭ್ಯವಾಗಿವೆ. ಸುಧಾ ಅವರು ಇತರೆ ವ್ಯಕ್ತಿಗಳ ಬ್ಯಾಂಕ್‌ ಖಾತೆಯಲ್ಲಿ ಸುಮಾರು 3.5 ಕೋಟಿ ರು. ಠೇವಣಿ ಇಟ್ಟಿರುವುದು ಗೊತ್ತಾಗಿದೆ. 

ಸುಧಾ ಮತ್ತು ಅವರಿಗೆ ಸಂಬಂಧಪಟ್ಟ ವ್ಯಕ್ತಿಗಳ ಮನೆಯಲ್ಲಿ 3.7 ಕೆಜಿ ಚಿನ್ನಾಭರಣ, 10.5 ಕೆಜಿ ಬೆಳ್ಳಿಯ ವಸ್ತುಗಳು ಪತ್ತೆಯಾಗಿದೆ. ಆಸ್ತಿ ಖರೀದಿಸಲು ಸುಧಾ, ಆಕೆಯ ಆಪ್ತೆ ರೇಣುಕಾ ಮತ್ತು ಇತರರ ನಡುವೆ ಕೋಟ್ಯಂತರ ರು. ವರ್ಗಾವಣೆಯಾಗಿರುವುದು ಗೊತ್ತಾಗಿದೆ. ಸುಧಾ ಬೆಂಗಳೂರಿನಲ್ಲಿಯೇ ಹೆಚ್ಚು ಪ್ರಮಾಣ ಆಸ್ತಿ ಹೊಂದಿದ್ದಾರೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ.

click me!