ಬೆಂಗಳೂರು ಸಬರ್ಬನ್‌ ರೈಲು ಸಾಕಾರದತ್ತ ಇನ್ನೊಂದು ಹೆಜ್ಜೆ

Kannadaprabha News   | Asianet News
Published : Nov 13, 2020, 07:15 AM IST
ಬೆಂಗಳೂರು ಸಬರ್ಬನ್‌ ರೈಲು ಸಾಕಾರದತ್ತ ಇನ್ನೊಂದು ಹೆಜ್ಜೆ

ಸಾರಾಂಶ

ಮೊದಲ ಹಂತದ 3 ಮಾರ್ಗ ನಿರ್ಮಾಣಕ್ಕೆ ಸಂಪುಟ ಸಭೆ ಒಪ್ಪಿಗೆ| 7,438 ಕೋಟಿ ರು. ಸಾಲ ಪಡೆಯಲೂ ತೀರ್ಮಾನ| 3 ಮಾರ್ಗ ಇವು, 1. ಬೆಂಗಳೂರು-ದೇವನಹಳ್ಳಿ, 2. ಬೈಯಪ್ಪನಹಳ್ಳಿ-ಚಿಕ್ಕಬಾಣಾವರ, 3. ಕೆಂಗೇರಿ-ವೈಟ್‌ಫೀಲ್ಡ್‌| 

ಬೆಂಗಳೂರು(ನ.13): ಬೆಂಗಳೂರು ಉಪನಗರ ರೈಲು ಯೋಜನೆಗೆ 7,438 ಕೋಟಿ ರು. ಮೊತ್ತವನ್ನು ದೇಶೀಯ ಹಾಗೂ ವಿದೇಶಿ ಅಭಿವೃದ್ಧಿ ಸಂಸ್ಥೆಗಳಿಂದ ಸಾಲದ ರೂಪದಲ್ಲಿ ಪಡೆಯಲು ಹಾಗೂ ಮೊದಲ ಹಂತದ ಮೂರು ಮಾರ್ಗ ನಿರ್ಮಾಣಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಮೊದಲ ಹಂತದಲ್ಲಿ ಬೆಂಗಳೂರು-ದೇವನಹಳ್ಳಿ, ಬೈಯಪ್ಪನಹಳ್ಳಿ - ಚಿಕ್ಕಬಾಣಾವರ ಹಾಗೂ ಕೆಂಗೇರಿ- ವೈಟ್‌ಫೀಲ್ಡ್‌ ಮಾರ್ಗಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.

ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 18,621 ಕೋಟಿ ರು. ವೆಚ್ಚದಲ್ಲಿ ಯೋಜನೆ ಜಾರಿಗೊಳಿಸುವುದಾಗಿ ಪ್ರಕಟಿಸಿದೆ. ಮೊದಲು ಯೋಜನೆಯ ಗಾತ್ರವನ್ನು ಕುಗ್ಗಿಸಲಾಗಿತ್ತು. ಬಳಿಕ ಪಿಪಿಪಿ ಮಾದರಿಯಲ್ಲಿ 3 ಸಾವಿರ ಕೋಟಿ ರು. ಹೂಡಿಕೆ ಮಾಡಲು ಕಂಪೆನಿಗಳು ಮುಂದೆ ಬಂದಿದ್ದರಿಂದ ಡಿಪಿಆರ್‌ನ್ನು ಮತ್ತೊಮ್ಮೆ ಪರಿಷ್ಕರಿಸಲಾಗಿದೆ. ಇನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲಿನ ಒಟ್ಟು ಯೋಜನಾ ವೆಚ್ಚದ ಶೇ.60 ರಷ್ಟುಭಾಗವಾಗಿರುವ 7,438 ಕೋಟಿ ರು.ಗಳನ್ನು ಸಾಲದ ರೂಪದಲ್ಲಿ ಪಡೆಯಲು ಕೇಂದ್ರ ಸರ್ಕಾರ ತಿಳಿಸಿದೆ. ಹೀಗಾಗಿ ಯೋಜನೆ ಸಲುವಾಗಿ ವಿಶೇಷ ಉದ್ದೇಶವಾಹಕವಾಗಿ ಸೂಚಿಸಿರುವ (ಎಸ್‌ಪಿವಿ) ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ದಿ ನಿಗಮ (ಕೆ-ರೈಡ್‌) ಮೂಲಕ 7,438 ಕೋಟಿ ರು. ಸಾಲ ಪಡೆಯಲು ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ದೇವನಹಳ್ಳಿಗೆ 3 ವರ್ಷದಲ್ಲಿ ಸಬ್‌ಅರ್ಬನ್‌ ರೈಲು

ಮಾವಳ್ಳಿಪುರದಲ್ಲಿ ಕಸದ ಘಟಕ:

ಬಿಬಿಎಂಪಿ ವತಿಯಿಂದ ಮಾವಳ್ಳಿಪುರದಲ್ಲಿ ತ್ಯಾಜ್ಯದಿಂದ ಸಿಎನ್‌ಜಿ ಅನಿಲ ತಯಾರಿಸುವ 1 ಸಾವಿರ ಟನ್‌ ತ್ಯಾಜ್ಯ ಸಂಸ್ಕರಣೆ ಸಾಮರ್ಥ್ಯದ ಘಟಕ ಸ್ಥಾಪನೆಗೆ ಸಂಪುಟ ಅನುಮೋದನೆ ನೀಡಿದೆ. ಒಟ್ಟು 13 ಎಕರೆ ಪ್ರದೇಶದಲ್ಲಿ ಸ್ಥಾಪಿಸುವ ಘಟಕವನ್ನು ಸ್ಪಮ್‌ರ್‍ ಗ್ರೀನಿಂಗ್‌ ಎಂಬ ಖಾಸಗಿ ಸಂಸ್ಥೆಯೇ ನಿರ್ಮಿಸಿ, ನಿರ್ವಹಿಸುವ ರೀತಿಯಲ್ಲಿ 25 ವರ್ಷಕ್ಕೆ ಗುತ್ತಿಗೆಗೆ ನೀಡಲಾಗಿದೆ. ಮೊದಲ 16 ತಿಂಗಳ ಅವಧಿಯಲ್ಲಿ ಕಂಪೆನಿಯ ಕಾರ್ಯನಿರ್ವಹಣೆ ನೋಡಿ ಬಳಿಕ ಗುತ್ತಿಗೆ ಮುಂದುವರೆಸಲಾಗುವುದು ಎಂದು ಮಾಧುಸ್ವಾಮಿ ಮಾಹಿತಿ ನೀಡಿದರು.

ಶೇ.50ರಷ್ಟು ಬಡ್ಡಿ ರಿಯಾಯಿತಿ:

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ನಾಗರಿಕ ಸೌಲಭ್ಯ ನಿವೇಶನ (ಸಿ.ಎ) ಮಂಜೂರಾತಿ ಪಡೆದಿರುವವರು ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಶೇ.50 ರಷ್ಟು ಬಡ್ಡಿ ರಿಯಾಯಿತಿಯೊಂದಿಗೆ ಪಾವತಿಸಲು ಅವಕಾಶ ಮಾಡಿಕೊಟ್ಟು ಸಂಪುಟ ಒಪ್ಪಿಗೆ ನೀಡಿದೆ. ಇನ್ನು ಚರ್ಚ್‌ಸ್ಟ್ರೀಟ್‌ನಲ್ಲಿ ನಿರ್ಮಿಸಿರುವ ಟೆಂಡರ್‌ಶ್ಯೂರ್‌ ರಸ್ತೆಯ ಮೊತ್ತವನ್ನು ಪರಿಷ್ಕರಣೆ ಮಾಡಿ ಹಿಂದೆ ನಿಗದಿಯಾಗಿದ್ದ ಮೊತ್ತಕ್ಕಿಂತ ಹೆಚ್ಚಿನ ಮೊತ್ತ (18.75 ಕೋಟಿ ರು.) ನೀಡಲು ಒಪ್ಪಿಗೆ ಕೊಡಲಾಗಿದೆ.

ಜ್ಞಾನಭಾರತಿಯಲ್ಲಿ ಕಾಲೇಜು ನಿರ್ಮಾಣಕ್ಕೆ ಅಸ್ತು

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ವಿಶ್ವೇಶ್ವರಯ್ಯ ಇಂಜಿನಿಯರಿಂಗ್‌ ಕಾಲೇಜು ಹಾಗೂ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯ ಸ್ಥಾಪಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಜ್ಞಾನಭಾರತಿ ಆವರಣದಲ್ಲಿ ಮರ ಕಡಿದು ಕಾಲೇಜುಗಳ ನಿರ್ಮಾಣಕ್ಕೆ ಅಲ್ಲಿನ ನಡಿಗೆದಾರರ ಸಂಘದವರು ಹಾಗೂ ಸಾರ್ವಜನಿಕರು ಇತ್ತೀಚೆಗೆ ವಿರೋಧಿಸಿದ್ದು ಇಲ್ಲಿ ಗಮನಾರ್ಹ

PREV
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ