ರಾಜಕುಮಾರ ಟಾಕಳೆ ಬಂಧನಕ್ಕೆ ನವ್ಯಶ್ರೀ ಆಗ್ರಹ

By Kannadaprabha NewsFirst Published Aug 6, 2022, 11:08 AM IST
Highlights

ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆ ಸಲ್ಲಿಸಿದ ನಿರೀಕ್ಷಣಾ ಜಾಮೀನು ತಿರಸ್ಕಾರವಾಗಿದ್ದು, ಪೊಲೀಸರು ಕೂಡಲೇ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್‌ನ ಯುವ ನಾಯಕಿ ನವ್ಯಶ್ರೀ ಆಗ್ರಹಿಸಿದರು.

 ಬೆಳಗಾವಿ (ಆ.6) :ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆ ಸಲ್ಲಿಸಿದ ನಿರೀಕ್ಷಣಾ ಜಾಮೀನು ತಿರಸ್ಕಾರವಾಗಿದ್ದು, ಪೊಲೀಸರು ಕೂಡಲೇ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್‌ನ ಯುವ ನಾಯಕಿ ನವ್ಯಶ್ರೀ ಆಗ್ರಹಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆ(Rajakumar Takale) ಅವರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿರುವುದು ನ್ಯಾಯಾಲಯ ತಿರಸ್ಕರಿಸಿದೆ. ಇದು ನನ್ನ ಹೋರಾಟಕ್ಕೆ ಶಕ್ತಿ ನೀಡಿದೆ. ನನ್ನ ಹೋರಾಟಕ್ಕೂ ಸಣ್ಣ ಜಯ ಸಿಕ್ಕಿದೆ. ನನ್ನ ವಿರುದ್ಧ ಹನಿಟ್ರ್ಯಾಪ್‌(Honey trap) ಪ್ರಕರಣ ದಾಖಲಿಸಿದ್ದರು. ನಾನು ಹನಿಟ್ರ್ಯಾಪ್‌ ಮಾಡಿಲ್ಲ. ಸಾವಿರ ಟೀಕೆ ಬಂದರೂ ಅದನ್ನು ಎದುರಿಸಲು ನಾನು ಸಿದ್ಧ. ಹನಿಟ್ರ್ಯಾಪ್‌ ಆರೋಪ ಬಂದರೂ ನಾನು ಎಲ್ಲಿಯೂ ಓಡಿ ಹೋಗಿಲ್ಲ. ವಿದೇಶದಿಂದ ನೇರವಾಗಿ ಬೆಳಗಾವಿ(Belagavi)ಗೆ ಬಂದು 20 ದಿನಗಳಿಂದ ಇಲ್ಲಿಯೇ ಇದ್ದೇನೆ. ಪೊಲೀಸರ ತನಿಖೆಗೂ ನಾನು ಸಹಕಾರ ಕೊಟ್ಟಿದ್ದೇನೆ ಎಂದು ಹೇಳಿದರು.

ಟಾಕಳೆ ಬಂಧನಕ್ಕೆ ನವ್ಯಶ್ರೀ ಆಗ್ರಹ: BIGG BOSSಗೂ ಹೋಗುವಾಸೆ ಬಿಚ್ಚಿಟ್ಟ ಕಾಂಗ್ರೆಸ್‌ ಕಾರ್ಯಕರ್ತೆ

ಟಾಕಳೆ ಹೆಣ್ಣು ಬಾಕ:

ಅಲ್ಲದೇ ಟಾಕಳೆ ನನ್ನ ವಿರುದ್ಧ ಮಹಿಳಾ ಪೊಲೀಸ್‌ ಠಾಣೆಯಲ್ಲಿ ನೀಡಿರುವ ದೂರಿನ ಕಾಪಿಯನ್ನು ನಾನು ತೆಗೆದುಕೊಂಡು ಬಂದಿದ್ದೇವೆ. ಈ ಹಿಂದೆ ನನಗೆ ಟಾಕಳೆ ಸಾಲದ ರೂಪದಲ್ಲಿ ಎರಡು ಲಕ್ಷ ರುಪಾಯಿ ಡಿಡಿ ಮೂಲಕ ಕೊಟ್ಟಿದ್ದರು. ಆದರೆ ಈಗ ಪ್ರಕರಣದಲ್ಲಿ ಅದನ್ನು ತಿರುಚಿ ಹೇಳಿಕೆಯನ್ನು ನೀಡಿ ತಾನು ತೆಗೆದ ಹಳ್ಳಕ್ಕೆ ತಾನೇ ಬಿದ್ದಿದ್ದಾನೆ. ರಾಜಕುಮಾರ ಕುಮಾರ ಟಾಕಳೆ ಒಬ್ಬ ಹೆಣ್ಣು ಬಾಕ. ಅವನಿಗೆ ತನ್ನದೇ ಇಲಾಖೆಯ ಬೇರೆ ಬೇರೆ ಹೆಣ್ಣು ಮಕ್ಕಳೊಂದಿಗೆ ಸಂಬಂಧವಿದೆ ಎಂದು ಅವರ ಹೆಂಡತಿಯೇ ಹೇಳಿದ್ದಾಳೆ. ಅವನಿಗೆ ಹೆಣ್ಣುಮಕ್ಕಳೊಂದಿಗೆ ಇರುವ ಸಮಯದಲ್ಲಿ ವೀಡಿಯೋ ಮಾಡುವ ಚಟವಿದೆ. ಈತನ ಮೊಬೈಲ್‌ ಅನ್ನು ವಶಕ್ಕೆ ಪಡೆದುಕೊಂಡರೆ ಇನ್ನಷ್ಟುಹೆಣ್ಣುಮಕ್ಕಳ ಜೀವನ ಹಾಳಾಗುವುದು ತಪ್ಪುತ್ತದೆ. ಈತನನ್ನು ಕೂಡಲೇ ಪೊಲೀಸರು ವಶಕ್ಕೆ ಪಡೆಯಬೇಕು. ಅಂದಾಗ ಮಾತ್ರ ಹೆಚ್ಚಿನ ವಿಷಯವನ್ನು ಅವನಿಂದಲೇ ಪಡೆಯಲು ಸಾಧ್ಯವಾಗುತ್ತದೆ ಎಂದರು.

15 ದಿನವಾದರೂ ಬಂಧನವಾಗಿಲ್ಲ:

ಎಪಿಎಂಸಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿ 15 ದಿನವಾದರೂ ರಾಜಕುಮಾರ ಟಾಕಳೆ ಬಂಧನವಾಗಿಲ್ಲ. ಕೂಡಲೇ ಅವರನ್ನು ಬಂಧಿಸಬೇಕು. ನನಗೆ ನ್ಯಾಯ ಕೊಡಿಸಬೇಕು. ಪೊಲೀಸ್‌ ಇಲಾಖೆ ಮೇಲೆ ಅಪಾರ ನಂಬಿಕೆ ಇದೆ. ರಾಜಕುಮಾರ ಟಾಕಳೆ ನನ್ನ ಮೇಲೆ ಹಲ್ಲೆ ಮಾಡಿ ಅವಮಾನ ಮಾಡಿದರೂ ಸಹಿಸಿಕೊಂಡು ಹೋರಾಟ ನಡೆಸಿದ್ದೇನೆ. ನನ್ನ ಮೇಲೆ ರಾಜಕುಮಾರ ಟಾಕಳೆ ಹನಿಟ್ರ್ಯಾಪ್‌ ದೂರು ದಾಖಲಿಸಿದ್ದಾರೆ. ಆದರೆ ಅವರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ಬರೆದುಕೊಟ್ಟಿದ್ದು ಬೇರೆ ಇದೆ. ನಮ್ಮಿಬ್ಬರ ನಡುವೆ ಹಣಕಾಸಿನ ವ್ಯವಹಾರ ಇತ್ತು. ಆಗ .2 ಲಕ್ಷ ಹಣವನ್ನು ಡಿಡಿ ಮೂಲಕ ನನಗೆ ತಲುಪಿಸಿದ್ದರು. ಪೊಲೀಸರ ಮಧ್ಯಸ್ಥಿಕೆಯಲ್ಲೇ ಇತ್ಯರ್ಥಗೊಳಿಸಲಾಗಿತ್ತು. ನಮ್ಮ ಕಾನೂನು ತಗಾದೆಯನ್ನು ಮುಂದುವರಿಸುವುದಿಲ್ಲ. ನನ್ನ ವಿಚಾರಕ್ಕೆ ಹೋಗುವುದಿಲ್ಲ ಎಂದು ಟಾಕಳೆ ಬರೆದುಕೊಟ್ಟಿದ್ದಾರೆ ಎಂದು ಹೇಳಿದರು.

ನವ್ಯಶ್ರೀ ಜತೆ ಮದುವೆ ಆದ ಫೋಟೋ ಡಿಲಿಟ್ ಮಾಡಿದ್ನಾ ರಾಜಕುಮಾರ?: ಕಾಂಗ್ರೆಸ್ ಕಾರ್ಯಕರ್ತೆ ನೀಡಿದ ದೂರಿನಲ್ಲೇನಿದೆ?

ಬೆಂಗಳೂರಿನಲ್ಲಿ ನನ್ನ ವಕೀಲರನ್ನೆಲ್ಲ ಭೇಟಿಯಾಗಿ ವೀಡಿಯೋ ಹರಿದಾಡಿದ ಕುರಿತಂತೆ ನಾನು ಮೊದಲು ಪ್ರಕರಣ ದಾಖಲಿಸಿದೆ. ಈ ಎಲ್ಲಾ ಘಟನೆಗಳು ನಡೆದಿದ್ದು ಬೆಳಗಾವಿ ಸುತ್ತಮುತ್ತಲು. ಆದ್ದರಿಂದ ನಾನು ಮೊದಲು ಎಪಿಎಂಸಿ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದೇನೆ. ಪೊಲೀಸರ ಮೇಲೆ ನನಗೆ ವಿಶ್ವಾಸವಿದೆ. ಅವರು ನ್ಯಾಯ ಕೊಟ್ಟೇ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.

ಇದೇ ವೇಳೆ ಅಶ್ಲೀಲ ವಿಡಿಯೋದ ಚಿತ್ರ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕರೊಂದಿಗಿನ ಸಂಪರ್ಕ ಕುರಿತಂತೆ ಮಾತನಾಡಿದ ನವ್ಯಶ್ರೀ, ಈಗಾಗಲೇ ಈ ಘಟನೆ ನಡೆದಾಗ ಅಲ್ಲಿ ನಾನು ರಾಜಕುಮಾರ ಟಾಕಳೆ ಬಿಟ್ಟರೆ ಅಲ್ಲಿ ಯಾರೂ ಇರಲಿಲ್ಲ. ಇನ್ನು ಕಾಂಗ್ರೆಸ್‌ ಹಿರಿಯ ನಾಯಕರ ಜತೆಗಿನ ಫೋಟೊಗಳನ್ನು ಕೂಡ ವೈರಲ್‌ ಮಾಡಿದ್ದಾರೆ. ಆದರೆ ಇದೆಲ್ಲ ಯಾವುದೇ ಸಂಬಂಧವಿಲ್ಲದ ವಿಚಾರ. ಆ ವಿಡಿಯೋದಲ್ಲಿರುವ ವ್ಯಕ್ತಿ ರಾಜಕುಮಾರ ಟಾಕಳೆ. ಇದು ಅವನಿಗೆ ಗೊತ್ತು ಹಾಗೂ ನನಗೆ ಗೊತ್ತು ಎಂದರು.

ದೂರಿನಲ್ಲಿ ಮಹಾನಾಯಕ ಹೆಸರು ಉಲ್ಲೇಖಿಸಿದ್ದೇನೆ:

ಈ ವಿಡಿಯೋ ಹಿಂದಿರುವ ಮಹಾನ್‌ ನಾಯಕ ಯಾರು ಎಂಬ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮಹಾನಾಯಕನ ಹೆಸರು ಹೇಳಲು ನನಗೇನೂ ಹೆದರಿಕೆಯಿಲ್ಲ. ಕಾನೂನು ರೀತಿಯಲ್ಲಿ ಹೋರಾಟಕ್ಕೆ ಮುಖಾಮುಖಿಯಾಗಿ ನಿಂತಿದ್ದೇನೆ. ಈಗಾಗಲೇ ಅವರ ಹೆಸರನ್ನು ನಾನು ಪೊಲೀಸ್‌ ಇಲಾಖೆಗೆ ನೀಡಿದ ದೂರಿನಲ್ಲಿ ನೀಡಿದ್ದೇನೆ. ಇನ್ನು ಹೆಣ್ಣು ಮಕ್ಕಳ ವಿಡಿಯೋ ಇಟ್ಟುಕೊಂಡು ರಾಜಕೀಯ ಮಾಡುವ ನಾಯಕ ಯಾರು ಎಂದು ನೀವೇ ನೋಡಿ ಎಂದರು.

ರಾಜಕುಮಾರನ ರಾಣಿ ಹೇಗಾಗಬೇಕೆಂದು ನನಗೆ ಗೊತ್ತು:

ಇನ್ನು ರಾಜಕುಮಾರ ಟಾಕಳೆ ನನ್ನನ್ನು ಹೆಂಡತಿ ಎಂದು ಒಪ್ಪಿಕೊಳ್ಳದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವನು ನನ್ನನ್ನು ಹೆಂಡತಿ ಎಂದು ಒಪ್ಪಿಕೊಳ್ಳಲಿ ಅಥವಾ ಬಿಡಲಿ. ನಾನು ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತಿದ್ದೇನೆ. ಗಂಡನೊಂದಿಗೆ ಹೆಂಡತಿ ಖಾಸಗಿಯಾಗಿ ಇರೋದು ಬೇಡವಾ ಎಂದು ಪ್ರಶ್ನೆ ಮಾಡಿದರು. ಹೆಂಡತಿಯಾದ ತಕ್ಷಣ ಗಂಡ ಈ ರೀತಿ ಹೆಂಡತಿಯ ಖಾಸಗಿ ವಿಡಿಯೋ ಪ್ರಸಾರ ಮಾಡಬಹುದಾ..? ಗಂಡ ಮಾಡುವುದನ್ನು ಎಲ್ಲಾ ಸಹಿಸಿಕೊಂಡು ಇರಬೇಕೆಂಬ ನಿಯಮವಿಲ್ಲ. ಟಾಕಳೆ ನನಗೆ ತಾನೇ ತಾಳಿಯನ್ನು ತಂದು ಕೊಟ್ಟಿದ್ದಾನೆ. ಅದರ ರಸೀದಿ ನನ್ನ ಬಳಿಯಿದೆ. ಆತ ನನ್ನನ್ನು ಒಪ್ಪಿಕೊಳ್ಳದಿದ್ದರೂ ರಾಜಕುಮಾರನ ರಾಣಿ ಹೇಗಾಗಬೇಕೆಂದು ನನಗೆ ಗೊತ್ತು. ನಾನು ಕಾನೂನು ರೀತಿಯ ಹೋರಾಟವನ್ನು ಮುಂದುವರೆಸುತ್ತೇನೆ. ನಾನು ಯಾವುದಕ್ಕೂ ಹೆದರುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದರು.

click me!