ಬೆಂಗಳೂರು: ಬಿಬಿಎಂಪಿ ಮೀಸಲು ವಿರುದ್ಧ ಕಾಂಗ್ರೆಸ್‌ ಹೈಡ್ರಾಮಾ..!

By Kannadaprabha NewsFirst Published Aug 6, 2022, 5:00 AM IST
Highlights

ನಗರಾಭಿವೃದ್ಧಿ ಇಲಾಖೆ ಕಚೇರಿ ಫಲಕವನ್ನು ‘ಆರ್‌ಎಸ್‌ಎಸ್‌-ಬಿಜೆಪಿ ಕಚೇರಿ’ ಎಂದು ಬದಲಿಸಲು ಯತ್ನ

ಬೆಂಗಳೂರು(ಆ.06):  ರಾಜ್ಯ ಸರ್ಕಾರ ಪ್ರಕಟಿಸಿರುವ ಬಿಬಿಎಂಪಿ ವಾರ್ಡ್‌ ಮೀಸಲಾತಿ ಪಟ್ಟಿ ವಿರೋಧಿಸಿ ಕಾಂಗ್ರೆಸ್‌ ನಾಯಕರು ಶುಕ್ರವಾರ ವಿಕಾಸಸೌಧದಲ್ಲಿರುವ ನಗರಾಭಿವೃದ್ಧಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದ್ದು, ‘ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ’ ಎಂಬ ಫಲಕವನ್ನು ‘ಆರ್‌ಎಸ್‌ಎಸ್‌ ಕಚೇರಿ-ಬಿಜೆಪಿ ಕಚೇರಿ’ ಎಂದು ಬದಲಿಸಲು ಯತ್ನಿಸುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್‌ ನಾಯಕರು ಶುಕ್ರವಾರ ಸಂಜೆ ವಿಕಾಸಸೌಧದ 4ನೇ ಮಹಡಿಯಲ್ಲಿರುವ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್‌ ಕಚೇರಿಗೆ ಮತ್ತಿಗೆ ಹಾಕಿದರು.

ಈ ವೇಳೆ ನಗರಾಭಿವೃದ್ಧಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ‘ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರು ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯ ಕೈಗೊಂಬೆಯಾಗಿ ಮೀಸಲಾತಿ ಪಟ್ಟಿ ಪ್ರಕಟಿಸಿದ್ದಾರೆ. ಹೀಗಾಗಿ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕಚೇರಿ ಹೆಸರಿನ ನಾಮಫಲಕದ ಬದಲಿಗೆ ‘ಆರ್‌ಎಸ್‌ಎಸ್‌-ಬಿಜೆಪಿ ಕಚೇರಿ’ ಎಂದು ಬದಲಿಸುತ್ತೇವೆ’ ಎಂದು ಬ್ಯಾನರನ್ನು ನಾಮಫಲಕಕ್ಕೆ ಅಂಟಿಸಲು ಯತ್ನಿಸಿದರು.

News Hour: ಲಕ್ಷ್ಮೀ ಪೂಜೆ ದಿನವೇ ‘ಕೈ’ ಬ್ಲ್ಯಾಕ್ ಫ್ರೈಡೇ: ರಣಭೂಮಿಯಾದ ರಾಷ್ಟ್ರ ರಾಜಧಾನಿ ದೆಹಲಿ

ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ನಾಮಫಲಕಕ್ಕೆ ಹಾನಿಯಾಗದಂತೆ ಹಾಗೂ ನಾಮಫಲಕದ ಮೇಲೆ ಅಂಟಿಸಲು ಹಿಡಿದಿದ್ದ ಬದಲಿ ಬ್ಯಾನರ್‌ ತೆಗೆಸಿದರು. ಈ ವೇಳೆ ಪೊಲೀಸರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾ ನಿರತ ನಾಯಕರು ‘ಆರ್‌ಎಸ್‌ಎಸ್‌ ಕೈಗೊಂಬೆಯಾಗಿರುವ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ’ ಎಂದು ಧಿಕ್ಕಾರ ಕೂಗುತ್ತಾ ಕಚೇರಿ ಎದುರೇ ಧರಣಿಗೆ ಕುಳಿತರು. ಈ ವೇಳೆ ಹೈಡ್ರಾಮಾ ಸೃಷ್ಟಿಯಾಯಿತು.

ರಾಮಲಿಂಗಾರೆಡ್ಡಿ ನೇತೃತ್ವದ ಪ್ರತಿಭಟನೆಯಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌, ಸಂಸದ ಡಿ.ಕೆ.ಸುರೇಶ್‌, ಮಾಜಿ ಸಚಿವರಾದ ಜಮೀರ್‌ ಅಹಮದ್‌ ಖಾನ್‌, ಕೃಷ್ಣ ಬೈರೇಗೌಡ, ಎಚ್‌.ಎಂ.ರೇವಣ್ಣ, ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಸೇರಿದಂತೆ ಹಲವರು ನಾಯಕರು ಭಾಗವಹಿಸಿದ್ದರು.

ನಾಡಿದ್ದು ಸಿಎಂ ಮನೆಗೆ ಮುತ್ತಿಗೆ: ಎಚ್ಚರಿಕೆ

ಪ್ರತಿಭಟನೆ ಬಳಿಕ ವಿಕಾಸಸೌಧದ ಮುಂಭಾಗ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಬಿಜೆಪಿಯವರು ನಗರಾಭಿವೃದ್ಧಿ ಇಲಾಖೆ ಕಚೇರಿಯನ್ನು ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಕಚೇರಿ ಮಾಡಿದ್ದಾರೆ. ಆರ್‌ಎಸ್‌ಎಸ್‌ ಹೇಳಿದಂತೆ ಮೀಸಲಾತಿ ಪ್ರಕಟಿಸಿದ್ದು, ಕೂಡಲೇ ಇದನ್ನು ಸರಿಪಡಿಸದಿದ್ದರೆ ಸೋಮವಾರ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ. ಬಳಿಕವೂ ಸರಿಪಡಿಸಿದ್ದರೆ ಕಾನೂನು ಹೋರಾಟ ಮಾಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದರು.
 

click me!