
ರಾಮಮೂರ್ತಿ ನವಲಿ
ಗಂಗಾವತಿ(ಸೆ.17): ಭಾರತವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದಿದ್ದರೂ ಹೈದ್ರಾಬಾದ್ ಕರ್ನಾಟಕ ಪ್ರದೇಶ ನಿಜಾಮರಿಂದ ಮುಕ್ತವಾಗಿರಲಿಲ್ಲ. 1948ರಲ್ಲಿ ಇಲ್ಲಿಯ ರೈತರು ನಿಜಾಮರ ಆಡಳಿತದ ವಿರುದ್ಧ ದಂಗೆ ಎದ್ದರು. ಆಗ ಕನಕಗಿರಿ ತಾಲೂಕಿನ ನವಲಿ ಗ್ರಾಮದ ರೈತ ಸಮೂಹವೇ ಹೋರಾಟದ ಮುಂಚೂಣಿಯಲ್ಲಿತ್ತು. ರೈತರು ತಮ್ಮ ಹೊಲಗದ್ದೆಗಳಲ್ಲಿ ಬೆಳೆದಿರುವ ಬೆಳೆಯ ತೆರಿಗೆ(ಲೇವಿ) ಕಟ್ಟಬಾರದೆಂದು ನಿರ್ಣಯ ಕೈಗೊಂಡು ನಿಜಾಮರ ವಿರುದ್ಧ ಸಮರ ಸಾರಿದ್ದರು. ಏನೇ ತೊಂದರೆಯಾದರೂ ನಿಜಾಮರಿಗೆ ತಲೆಬಾಗಬಾರದೆಂದು ಜಿದ್ದು ಹಿಡಿದಿದ್ದ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಗುಂಡಿಗೆ ಬಲಿಯಾದ ಕಂಬಳಿ:
ನವಲಿ ಗ್ರಾಮದಲ್ಲಿ ರೈತರು ಮತ್ತು ನಿಜಾಮರ ಮಧ್ಯೆ ಘರ್ಷಣೆ ತೀವ್ರವಾಗಿತ್ತು. ಯಾವುದೇ ಕಾರಣಕ್ಕೂ ಲೇವಿ ಕಟ್ಟುವುದಿಲ್ಲ ಮತ್ತು ಸಹಕಾರ ನೀಡುವುದಿಲ್ಲ ಎಂದು ರೈತರು ಬಂಡಾಯ ಎದ್ದರು. ರೈತರು ಪ್ರಾಣತ್ಯಾಗಕ್ಕೂ ಸಿದ್ಧ ಎಂದು ಸವಾಲೆಸೆದಿದ್ದರು. ಹೋರಾಟದ ಮುಖಂಡತ್ವ ವಹಿಸಿದ್ದ ವಿರೂಪಾಕ್ಷಗೌಡ, ಗುರುರಾಜರಾವ ಬೆಳ್ಳುಬ್ಬಿ, ನವಲಿ ಪಂಚಾಕ್ಷರಯ್ಯಸ್ವಾಮಿ, ರಾಘವೇಂದ್ರರಾವ ಚೆಳ್ಳೂರು, ಲಮಾಣಿ ಕೃಷ್ಣಪ್ಪ, ಹಿರೇಕುರಬರ ಲಕ್ಷ ್ಮಣ, ನರಸಿಂಹಚಾರ ನವಲಿ ಸೇರಿದಂತೆ 10 ಜನರನ್ನು ಪೊಲೀಸರು ಬಂಧಿಸಿದರು.
Bidar: ಕಲ್ಯಾಣ ಕರ್ನಾಟಕ ಉತ್ಸವ: ಬೀದರ್‌ನಲ್ಲಿ ಆಕ್ಷೇಪ
ಚಳ್ಳೂರು ರಾಘವೇದ್ರರಾವ್ ಅವರನ್ನು ಎತ್ತಿನ ಬಂಡಿಗೆ ಕಟ್ಟಿಕನಕಗಿರಿಯವರಿಗೆ ಎಳೆದುಕೊಂಡು ಹೋಗಿ ದೈಹಿಕ ಹಿಂಸೆ ನೀಡಲಾಗಿತ್ತು. ನಿಜಾಮರ ಕೃತ್ಯವನ್ನು ಖಂಡಿಸಿ ರೈತರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಗೋಲಿಬಾರ್ ನಡೆಸಿದಾಗ ರೈತ ಮುಖಂಡ ಮಾಕಣ್ಣ ಕಂಬಳಿ ಪ್ರಾಣತ್ಯಾಗ ಮಾಡಿದರು. ಅನೇಕ ಹೋರಾಟಗಾರರು ಸೆರೆಮನೆವಾಸ ಅನುಭವಿಸಿದರು.
ನಿಜಾಮರು ಕಾರಟಗಿ ಸಮೀಪದ ಮರ್ಲಾನಹಳ್ಳಿಯಲ್ಲಿ ರೈತ ಯಂಕಪ್ಪನನ್ನು ಬಂಡಿ ಹಿಂದೆ ಕಟ್ಟಿಎಳೆದಾಡಿದರು. ಇದರಿಂದ ಎಚ್ಚೆತ್ತ ಕಾರಟಗಿ ರೈತರು ಗ್ರಾಮ ಸೈನ್ಯ ರಚಿಸಿ ನಿಜಾಮರ ವಿರುದ್ಧ ಸಮರ ಸಾರಿ ಅವರನ್ನು ಓಡಿಸಿದರು. ಆಗ ನಡೆದ ಗುಂಡಿನ ದಾಳಿಯಲ್ಲಿ ಹಲವರು ಗಾಯಗೊಂಡಿದ್ದರು. ನಿಜಾಮರ ವಿರುದ್ಧ ಹೋರಾಟ ನಡೆಸಿ ವೀರಮರಣ ಹೊಂದಿದ್ದ ರೈತ ಮುಖಂಡ ಮಾಕಣ್ಣ ಕಂಬಳಿ ಅವರ ಸ್ಮರಣಾರ್ಥ ಗ್ರಾಮದಲ್ಲಿ ವೀರಸ್ತಂಭ ಸ್ಥಾಪಿಸಲಾಗಿದೆ.