ರಾಜಕೀಯ ಮಾಡುವುದು ನನ್ನ ಗುರಿ ಅಲ್ಲ. ದೇಶ ಕಟ್ಟುವುದೊಂದೆ ನನ್ನ ಗುರಿ ಎಂದು ಗೌರಿ ಗದ್ದೆಯ ಅವಧೂತ ವಿನಯ್ ಗುರೂಜಿ ಹೇಳಿದರು.
ಬಾಳೆಹೊನ್ನೂರು (ಜ.26): ಸಂಘಟನೆ ಇಲ್ಲದಿದ್ದರೆ ದೇಶ ಉದ್ಧಾರವಾಗಲು ಸಾಧ್ಯವಿಲ್ಲ. ಸಂಘಟನೆ ಮೂಲಕ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ. ಸಮಾಜದಲ್ಲಿ ರಾಜಕೀಯ ಮಾಡುವುದು ನನ್ನ ಉದ್ದೇಶವಲ್ಲ. ದೇಶ ಕಟ್ಟುವುದೇ ನಮ್ಮ ಉದ್ದೇಶ ಎಂದು ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಸಂಸ್ಥಾಪಕರೂ ಆದ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ನುಡಿದರು.
ಇಲ್ಲಿಗೆ ಸಮೀಪದ ಸೀಗೋಡು-ದೇವಗೋಡು ಗ್ರಾಮದ 2.20 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
undefined
ಡಿಸಿಎಂ ಗೋವಿಂದ ಕಾರಜೋಳ ಅವರ ಸಹಕಾರದಿಂದ ಸೀಗೋಡು ದೇವಗೋಡು ರಸ್ತೆಗೆ 1.5 ಕೋಟಿ ರು. ಹಾಗೂ ಶಾಸಕ ರಾಜೇಗೌಡ ಅನುದಾದಲ್ಲಿ 70 ಲಕ್ಷ ರು. ಅಭಿವೃದ್ಧಿ ಕಾಮಗಾರಿಗಾಗಿ ಮಂಜೂರಾಗಿರುವುದು ಶ್ಲಾಘನೀಯ ಎಂದರು.
ವಿನಯ್ ಗುರೂಜಿ ಯಾವ ಪಕ್ಷ? ಸಂದರ್ಶನದಲ್ಲಿ ಅವರೇ ಕೊಟ್ಟ ಉತ್ತರ!
ಮಾನವ ಸೇವೆಯೇ ಮಾಧವ ಸೇವೆಯಾಗಿದೆ. ಜಾತಿ, ಧರ್ಮ, ತತ್ವ ಎಲ್ಲವನ್ನೂ ಮೀರಿದ್ದೆ ಮನುಷ್ಯತ್ವ. ಮನುಷ್ಯತ್ವವೇ ದೇವರಾಗಿದ್ದು, ದೇವರನ್ನು ಮೀರಿರುವುದು ಸತ್ಯ ಮತ್ತು ಪ್ರೀತಿಯಾಗಿದೆ. ಹಳ್ಳಿಗಳ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಬೇಕಿದೆ. ಈ ನಿಟ್ಟಿನಲ್ಲಿ ತಮ್ಮ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಸಹ ಕಾರ್ಯನಿರ್ವಹಿಸುತ್ತಿದೆ. ರೈತ ನಿಧಿ ಆರಂಭಿಸಲಾಗಿದೆ ಎಂದು ಹೇಳಿದರು.
ಸಿಎಂ ಯಡಿಯೂರಪ್ಪ ನಮ್ಮ ಆಶ್ರಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗೋ ಹತ್ಯೆ ನಿಷೇಧವಾಗಬೇಕು. ರೈತರ ಸಾಲ ಮನ್ನಾ ಆಗಬೇಕು ಎಂದು ಕೋರಿದ್ದೆವು. ಯಡಿಯೂರಪ್ಪ ಅವರು ಅದನ್ನು ನೆರವೇರಿಸಿದ್ದಾರೆ. ರೈತರ ಸಾಲ ಮನ್ನಾ ಮಾಡಿದರೆ ಅದೇ ನನಗೆ ನೀಡುವ ಗುರುದಕ್ಷಿಣೆ ಎಂದು ನಾನು ಹೇಳಿದ್ದೆ. ರಾಸಾಯನಿಕ ಗೊಬ್ಬರ ಬಳಕೆಯನ್ನು ನಾವು ನಿಲ್ಲಿಸಬೇಕಿದೆ. ಮನುಷ್ಯ ದುರಾಸೆಯಿಂದ ಬೇಗ ಹಣ ಮಾಡಬೇಕು ಎಂಬ ಉದ್ದೇಶದಿಂದ ತಮ್ಮ ಜಮೀನಿಗೆ ರಾಸಾಯನಿಕ ಗೊಬ್ಬರವನ್ನು ಹಾಕುತ್ತಿದ್ದಾನೆ. ಇದರಿಂದಾಗಿ 100 ವರ್ಷ ಬಾಳುವ ಮರಗಳು 10 ವರ್ಷಕ್ಕೆ ಕೊನೆಗಾಣುತ್ತಿವೆ. ರಾಸಾಯನಿಕದಿಂದ ಕ್ಯಾನ್ಸರ್ ಇಂದು ನಮ್ಮನ್ನು ಆವರಿಸುತ್ತಿದೆ. ಭಾರತ ಸಂಸ್ಕಾರದಿಂದ ದೊಡ್ಡದಾದ ದೇಶ. ಇದು ದುಡ್ಡಿನಿಂದ ದೊಡ್ಡದಾದಲ್ಲ. ಸಾಧನೆ, ಶೋಧನೆಯಿಂದ ನಾವು ಮುಂದೆ ಸಾಗೋಣ. ದೇವಸ್ಥಾನ ಕೇವಲ ದೇವರಿಗೆ ಸೀಮಿತವಲ್ಲ. ಪುರಾತನ ದೇವಸ್ಥಾನದಲ್ಲಿರುವ ಇರುವ ವಿಜ್ಞಾನವನ್ನು ನಮ್ಮ ಜನ ಅರಿತಿಲ್ಲ ಎಂದರು.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಮಾತನಾಡಿ, ಅವಧೂತ ವಿನಯ್ ಗುರೂಜಿ ಅವರು ಸರ್ಕಾರ ಮತ್ತು ಜನರ ನಡುವೆ ಸಂಪರ್ಕದ ಕೊಂಡಿಯಾಗಿ ಯೋಜನೆಗಳನ್ನು ತಂದು ಜನಪರ ಕಾರ್ಯಕ್ಕೆ ಇಳಿದಿರುವುದು ಶ್ಲಾಘನೀಯವಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ನಾನು ಸದಾ ಕೈ ಜೋಡಿಸಲಿದ್ದೇನೆ. ಇದಕ್ಕೆ ಪೂರಕವಾಗಿ ಕೊಪ್ಪಕ್ಕೆ ಆಗಮಿಸಿದ್ದ ಕಂದಾಯ ಸಚಿವರ ಬಳಿ ಮಲೆನಾಡಿನ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಟ್ಟಿದ್ದೇನೆ. ಪ್ರಮುಖವಾಗಿ 192‘ಎ’ ಭೂ ಕಬಳಿಕೆ ಕಾಯ್ದೆಗೆ ತಿದ್ದುಪಡಿಯಾಗಬೇಕು. ಇದರಿಂದ ರೈತರನ್ನು ಕೈಬಿಡಬೇಕು. ರೈತರು ಒತ್ತುವರಿ ಮಾಡಿಕೊಂಡಿರುವ ಜಮೀನುಗಳನ್ನು ಲೀಸ್ ಆಧಾರದ ಮೇಲೆ ಸಾಗುವಳಿಗೆ ಅವಕಾಶ ಮಾಡಿಕೊಡಬೇಕು. ರೈತರಿಗೆ ಕಳೆದ 3 ವರ್ಷಗಳ ಹಿಂದೆ ನೀಡಿರುವ ಹಕ್ಕುಪತ್ರಗಳಿಗೆ ಪಹಣಿ ಹಾಕಿಸಿಕೊಡಬೇಕು. 10 ಎಚ್‌ಪಿ ಒಳಗಿನ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್‌ಗೆ ಅವಕಾಶ ಕಲ್ಪಿಸಬೇಕು ಎಂದು ಕೋರಲಾಗಿದೆ. ಸಚಿವರು ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭ ಪಿಎಂಜಿಎಸ್‌ವೈ ಯೋಜನೆಯಲ್ಲಿ ರಾಜ್ಯಕ್ಕೆ ಹಣ ಬಿಡುಗಡೆ ಆಗಿರಲಿಲ್ಲ. ಪ್ರಸ್ತುತ ಬಿಡುಗಡೆಯಾಗಿದೆ. ಈ ಯೋಜನೆಯು ಸಂಸದರ ವ್ಯಾಪ್ತಿಗೆ ಒಳಪಡಲಿದ್ದು, ಅದನ್ನು ಅವರು ಅಗತ್ಯಕ್ಕೆ ಅನುಗುಣವಾಗಿ ಎಲ್ಲಿಗೆ ಬೇಕು ಅಲ್ಲಿಗೆ ನೀಡಲಿದ್ದಾರೆ ಎಂದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಶೃಂಗೇರಿ ಕ್ಷೇತ್ರದಲ್ಲಿ ಈ ಹಿಂದೆ ಜೀವರಾಜ್ ಅವರು ಅಭಿವೃದ್ಧಿ ಕಾರ್ಯ ಮಾಡಿದಂತೆಯೇ ಅದಕ್ಕೆ ಪೂರಕವಾಗಿ ನಾನು ಸಹ ನಾಗಾಲೋಟದಿಂದ ಅಭಿವೃದ್ಧಿ ಕಾಮಗಾರಿ ಮಾಡಿಸುತ್ತಿದ್ದೇನೆ. ಅಭಿವೃದ್ಧಿ ಕಾರ್ಯಕ್ಕೆ ಯಾವುದೇ ತೊಂದರೆಯಾಗಿಲ್ಲ. ಕೊರೋನಾ ಕಾರಣದಿಂದ ಕ್ಷೇತ್ರದಲ್ಲಿ ಕೆಲವು ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಆರ್ಥಿಕ ವ್ಯವಸ್ಥೆಗೆ ಹೊಡೆತ ಬಿದ್ದ ಕಾರಣ ಸರ್ಕಾರದ ಸೂಚನೆ ಮೇರೆಗೆ ಕೆಲವು ಕಾಮಗಾರಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಇದಕ್ಕೆ ಬೇರೆ ಯಾವುದೇ ಕಾರಣಗಳಿಲ್ಲ ಎಂದರು.
ಸಿಎಂ ರಾಜಕೀಯ ಕಾರ್ಯದರ್ಶಿ ಆಗಿರುವ ಜೀವರಾಜ್ ಅವರು ಕ್ಷೇತ್ರಕ್ಕೆ ಇನ್ನುಮುಂದೆ ಯಾವುದೇ ಅನುದಾನವನ್ನು ಹೆಚ್ಚುವರಿಯಾಗಿ ಮಂಜೂರು ಮಾಡಿಸಿಕೊಂಡು ಬಂದರೆ ಅವರನ್ನು ಕರೆದುಕೊಂಡು ಬಂದು ಶಂಕುಸ್ಥಾಪನೆಯನ್ನು ಅವರ ಕೈಯಿಂದಲೇ ಮಾಡಿಸಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ ಸದಾ ನಾವು ಕೈ ಜೋಡಿಸಲಿದ್ದು, ಅದಕ್ಕೆ ಯಾವುದೇ ಅಡ್ಡಗಾಲು ಹಾಕುವುದಿಲ್ಲ ಎಂದರು.
ಕ್ಷೇತ್ರದಲ್ಲಿ ಗಂಭೀರ ಸಮಸ್ಯೆಗಳಾದ ಸೆಕ್ಷನ್ 4/1 ನೋಟಿಫಿಕೇಶನ್, ಹುಲಿಯೋಜನೆ, ಬಫರ್ ಝೋನ್ ಮುಂತಾದವುಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿದೆ. ಅತಿವೃಷ್ಠಿ ಬಗ್ಗೆ ಸರ್ಕಾರದ ಗಮನ ಸೆಳೆದು ರೈತರಿಗೆ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ವಿನಯ್ ಗುರೂಜಿ ಅವರು ಸೀಗೋಡು ಗ್ರಾಮದ ಕೆಫೆ ಕಾಫಿ ಡೇ ಮಾಲೀಕ ದಿ.ಸಿದ್ಧಾಥ್‌ರ್ ಹೆಗ್ಡೆ ಅವರ ವೃತ್ತದ ಸಮೀಪದಲ್ಲಿ ಸಿದ್ಧಾಥ್‌ರ್ ಮಹಾದ್ವಾರ ನಿರ್ಮಾಣ ಕಾರ್ಯಕ್ಕೂ ಸಹ ಗುದ್ದಲಿ ಪೂಜೆ ನೆರವೇರಿಸಿದರು.