
ಹೊಸಕೋಟೆ: ಬಹುನಿರೀಕ್ಷಿತ ಹೊಸಕೋಟೆ ಜನರ ಕನಸಾದ ಮೆಟ್ರೋ ಯೋಜನೆ ಸಾಕಾರಗೊಳ್ಳುವ ಹಂತಕ್ಕೆ ಬಂದಿದೆ. ಕೆ.ಆರ್.ಪುರಂನಿಂದ ಹೊಸಕೋಟೆಯವರೆಗೆ ಮೆಟ್ರೋ ರೈಲು ವಿಸ್ತರಿಸುವ ಯೋಜನೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿದ್ದು, ಯೋಜನೆಯ ಕಾರ್ಯಸಾಧ್ಯತೆ ಮತ್ತು ತಾಂತ್ರಿಕ ಅಧ್ಯಯನಕ್ಕಾಗಿ ದೆಹಲಿ ಮೂಲದ ಪ್ರತಿಷ್ಠಿತ ಸಂಸ್ಥೆಯೊಂದಕ್ಕೆ ಅಧ್ಯಯನ ನಡೆಸುವಂತೆ ನಿರ್ದೇಶನ ನೀಡಲಾಗಿದೆ.
ಕ್ಷೇತ್ರದ ಜನರಿಗೆ ಚುನಾವಣಾ ಪ್ರಚಾರದ ವೇಳೆ ಹೊಸಕೋಟೆಗೆ ಮೆಟ್ರೋ ತರಲಾಗುವುದು ಎಂದು ಭರವಸೆ ನೀಡಿದ್ದ ಶಾಸಕ ಶರತ್ ಬಚ್ಚೇಗೌಡರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಆ ಭರವಸೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಕೆ.ಆರ್.ಪುರಂನಿಂದ ಹೊಸಕೋಟೆಯವರೆಗೆ ಒಟ್ಟು 16.3 ಕಿಲೋಮೀಟರ್ ಉದ್ದದ ಮೆಟ್ರೋ ಮಾರ್ಗವನ್ನು ನಿರ್ಮಿಸುವ ಪ್ರಸ್ತಾವನೆ ರೂಪುಗೊಂಡಿದ್ದು, ಈ ಮಾರ್ಗದಲ್ಲಿ 11 ನಿಲ್ದಾಣಗಳನ್ನು ಸ್ಥಾಪಿಸುವ ಯೋಜನೆ ಇದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಇದೀಗ ಅಧ್ಯಯನ ಕಾರ್ಯವನ್ನು ಆರಂಭಿಸಿದೆ.
ಬೆಂಗಳೂರು ನಗರಕ್ಕೆ ಸಮೀಪದಲ್ಲಿರುವ ಹೊಸಕೋಟೆ ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿದ್ದು, ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರತಿದಿನವೂ ಹೊಸಕೋಟೆ–ಬೆಂಗಳೂರು ಮಾರ್ಗದಲ್ಲಿ ಸಾವಿರಾರು ಜನರು ಬಸ್ ಹಾಗೂ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಅಲ್ಲದೆ ಕೋಲಾರ, ಮಾಲೂರು, ಚಿಂತಾಮಣಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ಹೊಸಕೋಟೆಗೆ ಬಂದು ಅಲ್ಲಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದೆ.
ಈ ಹಿನ್ನಲೆಯಲ್ಲಿ, ಹೊಸಕೋಟೆ ಭಾಗದ ಜನರ ಸಂಚಾರ ಸುಗಮಗೊಳಿಸುವುದು ಹಾಗೂ ಬೆಂಗಳೂರಿಗೆ ಉದ್ಯೋಗ, ಶಿಕ್ಷಣ ಮತ್ತು ಇತರೆ ಕೆಲಸಗಳಿಗೆ ತೆರಳುವವರಿಗೆ ಅನುಕೂಲವಾಗಲೆಂದು ಮೆಟ್ರೋ ರೈಲು ಸೇವೆಯನ್ನು ಹೊಸಕೋಟೆಯವರೆಗೆ ವಿಸ್ತರಿಸುವ ಅಗತ್ಯ ಬಹುಕಾಲದಿಂದಲೂ ಕೇಳಿಬರುತ್ತಿತ್ತು. ಈ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಶಾಸಕ ಶರತ್ ಬಚ್ಚೇಗೌಡರು ಚುನಾವಣಾ ಸಮಯದಲ್ಲೇ ಮೆಟ್ರೋ ಯೋಜನೆಯ ಭರವಸೆ ನೀಡಿದ್ದರು.
ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರವೂ ತಮ್ಮ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಶರತ್ ಬಚ್ಚೇಗೌಡರು ನಿರಂತರ ಪ್ರಯತ್ನ ನಡೆಸಿದರು. ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ತಂದು ಯೋಜನೆ ಜಾರಿಗೆ ತರುವಂತೆ ಆಗ್ರಹಿಸುತ್ತಲೇ ಬಂದ ಅವರು, ಹೊಸಕೋಟೆಯವರೆಗೆ ಮೆಟ್ರೋ ವಿಸ್ತರಣೆ ಅಗತ್ಯವಿದೆ ಎಂದು ವಿಧಾನಸಭೆಯಲ್ಲಿಯೂ ವಿಷಯವನ್ನು ಪ್ರಸ್ತಾಪಿಸಿದ್ದರು. ಅವರ ಸತತ ಪ್ರಯತ್ನದ ಫಲವಾಗಿ ಇದೀಗ ಮೆಟ್ರೋ ವಿಸ್ತರಣಾ ಯೋಜನೆ ಅಧ್ಯಯನ ಹಂತಕ್ಕೆ ತಲುಪಿದ್ದು, ಹೊಸಕೋಟೆ ಜನರಲ್ಲಿ ಹೊಸ ನಿರೀಕ್ಷೆ ಮತ್ತು ಸಂತಸ ಮೂಡಿಸಿದೆ. ಈ ಯೋಜನೆ ಜಾರಿಗೆ ಬಂದರೆ ಹೊಸಕೋಟೆ ಮಾತ್ರವಲ್ಲದೆ ಸುತ್ತಮುತ್ತಲಿನ ಹಲವು ತಾಲ್ಲೂಕುಗಳ ಜನರಿಗೆ ಸುಗಮ ಹಾಗೂ ವೇಗವಾದ ಸಂಚಾರ ಸೌಲಭ್ಯ ದೊರೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.